ಪಥ್ಯವಾಗದ ಸತ್ಯ (ಚಿತ್ರ: ಇಂದಿನ ಸತ್ಯ )

7

ಪಥ್ಯವಾಗದ ಸತ್ಯ (ಚಿತ್ರ: ಇಂದಿನ ಸತ್ಯ )

Published:
Updated:
ಪಥ್ಯವಾಗದ ಸತ್ಯ (ಚಿತ್ರ: ಇಂದಿನ ಸತ್ಯ )

ನಿರ್ಮಾಪಕ : ಕಾಳಯ್ಯ ಎಂ. ಮತ್ತು ವಿ.ಆರ್.ವಾಲಿ

ನಿರ್ದೇಶಕ : ಆದಿತ್ಯ ಚಿಕ್ಕಣ್ಣ

ತಾರಾಗಣ : ಭರತ್, ಎನ್.ಆರ್.ಕೆ. ವಿಶ್ವನಾಥ್ ಸುಧಾರಾಣಿ, ಪದ್ಮಾವಾಸಂತಿ, ಅರವಿಂದ್, ಕಿಲ್ಲರ್ ವೆಂಕಟೇಶ್ ಮತ್ತಿತರರು.ಅಡುಗೆಗೆ ಬೇಕಾದ ಎಲ್ಲ ಸಾಮಗ್ರಿಗಳೂ ಇವೆ ಎಂದಿಟ್ಟುಕೊಳ್ಳೋಣ. ಒಲೆಯ ಮೇಲೆ ರಸಗವಳ ತಯಾರಾಗುತ್ತಿದೆ ಎಂದೂ ಭಾವಿಸೋಣ. ಆದರೆ ಹಾಗೆ ತಯಾರಾಗಿರುವುದನ್ನು ಬಡಿಸುವುದು ಗೊತ್ತಿಲ್ಲ ಎಂದಾದರೆ? ಒಂದು ಕತೆಯಿದೆ. ಅದಕ್ಕೊಂದು ಗಾಂಭೀರ್ಯವೂ ಇದೆ. ಆದರೆ ಅದನ್ನು ಹೇಳುವ ರೀತಿಯೇ ತಿಳಿದಿಲ್ಲ ಎಂದಾದರೆ? `ಇಂದಿನ ಸತ್ಯ~ದಲ್ಲಿ ಆಗಿರುವುದು ಕೂಡ ಇದೇ.ಇಲ್ಲಿ ಪ್ರೇಕ್ಷಕನಿಗೆ ಎದುರಾಗುವ ಮುಖ್ಯ ಸಮಸ್ಯೆ ಎಂದರೆ ಕತೆಯಲ್ಲಿ ನೂರಾರು ಎಳೆಗಳಿರುವುದು. ಹಾಗೂ ಆ ಎಳೆಗಳಾವುವೂ ಒಂದಕ್ಕೊಂದು ಹೆಣೆದುಕೊಳ್ಳದೇ ಇರುವುದು. ಹಳ್ಳಿಯನ್ನು ಇಂಚಿಂಚೇ ಮುಕ್ಕುವ ರಾಜಕಾರಣ, ಬಡವರನ್ನು ಕಿತ್ತು ತಿನ್ನುವ ಭ್ರಷ್ಟಾಚಾರ, ಕುಟುಂಬಗಳನ್ನೂ ಒಡೆಯುವ ಪುಡಾರಿಗಳ ತಂತ್ರ, ಸುಖಲೋಲುಪರಾದ ಜನ, ಬೀಳು ಬೀಳುತ್ತಿರುವ ಭೂಮಿ ಹೀಗೆ ಜಗತ್ತಿನ ಸಮಸ್ಯೆಗಳನ್ನೆಲ್ಲಾ ಒಳಗೊಂಡಿದೆ ಚಿತ್ರ. ಆದರೆ ಅವೆಲ್ಲವೂ ಕತೆಯನ್ನು ಬೆಳೆಸುವುದಿಲ್ಲ. ಪರಿಣಾಮ ಟೀವಿಗಳಲ್ಲಿ ದಿನವಿಡೀ ಬಿತ್ತರವಾಗುವ ಸುದ್ದಿಗೂ, ಚಿತ್ರಕ್ಕೂ ಹೆಚ್ಚೇನೂ ವ್ಯತ್ಯಾಸ ಇದ್ದಂತೆ ತೋರದು.ಮೊದಲೇ ಗೊಂದಲದ ಗೂಡಾಗಿರುವ ಕತೆಗೆ (ಎಸ್.ವಿ.ಪಾಟೀಲ್ ಗುಂಡೂರು) ನಿರ್ದೇಶಕರು ಬರೆದಿರುವ ಚಿತ್ರಕತೆ ಇನ್ನಷ್ಟು ಗೊಂದಲಗಳನ್ನು ಬೆರೆಸುತ್ತದೆ. ಇದರಿಂದ ಚಿತ್ರ ಓತಪ್ರೋತವಾಗಿ ಓಡತೊಡಗುತ್ತದೆ. ನಾಟಕೀಯ ಪರಿಣಾಮಗಳು ಇಲ್ಲದಿರುವುದರಿಂದ ಆ ಓಟವೂ ನೀರಸ. ಆಡಿದ್ದನ್ನೇ ಆಡುವ ಅನೇಕ ಪ್ರಸಂಗಗಳು ಹಳಸಲಾಗಿ ತೋರುತ್ತವೆ. ಪರಿಣಾಮಕಾರಿಯಲ್ಲದ ಛಾಯಾಗ್ರಹಣ (ಬಿ.ಎಸ್.ಬಸವರಾಜ್) ಹಾಗೂ ಚುರುಕಿಲ್ಲದ ಸಂಕಲನ (ಟಿ.ಶಶಿಕುಮಾರ್) ಕೂಡ ಚಿತ್ರದ ನ್ಯೂನತೆಗಳಿಗೆ ಕಿರೀಟ ಇಟ್ಟಂತಿವೆ.ಪೋಷಕ ಪಾತ್ರಗಳೇ ಕತೆಯನ್ನು ಆವರಿಸಿರುವುದರಿಂದ ಭರತ್ ಹಾಗೂ ಎನ್.ಆರ್.ಕೆ. ವಿಶ್ವನಾಥ್ ಹೆಸರಿಗೆ ಮಾತ್ರ ನಾಯಕರು. ಹೀಗಾಗಿ ಇದು ನಾಯಕ ಪ್ರಧಾನ ಚಿತ್ರವಲ್ಲ ಎಂದು ನಿಸ್ಸಂಶಯವಾಗಿ ಹೇಳಬಹುದು. ಇದ್ದೂ ಇಲ್ಲದಂತಿರುವ ನಾಯಕರಿಗೆ ನಾಯಕಿಯ ಅಗತ್ಯವೇಕೆ?  ನಾಯಕಿ ಇಲ್ಲದ ಕೊರತೆಯನ್ನು ತುಂಬಲು ತುಂಡುಬಟ್ಟೆಯ ಐಟಂ ಲಲನೆಯರು ಇದ್ದಾರೆ! ಐಟಂ ಗೀತೆಗಳಲ್ಲಿ ಬರುವುದು ಕೂಡ ಹಿಂದಿ ಹಾಗೂ ಕನ್ನಡ ಚಿತ್ರಗಳ ಹಾಡಾಗಿರುವುದರಿಂದ ಇವುಗಳನ್ನು ಚಿತ್ರದ ಸೃಜನಶೀಲತೆಯ ಭಾಗ ಎಂದು ಭಾವಿಸಬೇಕಿಲ್ಲ.ಇಷ್ಟಾದರೂ ಕೆಲವು ಸಮಾಧಾನಕರ ಅಂಶಗಳು ಚಿತ್ರದಲ್ಲಿವೆ. ಮಕ್ಕಳನ್ನೂ ರಾಜಕಾರಣ ಹೇಗೆ ಕಾಡುತ್ತದೆ ಎಂದು ಹೇಳಲು ಹೊರಡುವ ನಿರ್ದೇಶಕರ ಯತ್ನವನ್ನು ಮೆಚ್ಚಬೇಕು. ಸಾವಯವ ಕೃಷಿಯ ಕುರಿತು ಚರ್ಚೆ ನಡೆಯುವಾಗಲೇ ಊರಿನ ಜನರು ಆಮೋದ ಪ್ರಮೋದಗಳಲ್ಲಿ ಮುಳುಗಿರುವ ದೃಶ್ಯ ಉತ್ತಮವಾಗಿದೆ.ನೆಗೆಟಿವ್ ಛಾಯೆಯಿರುವ ಪಾತ್ರದಲ್ಲಿ ಸುಧಾರಾಣಿ ಅವರದು ತೃಪ್ತಿಕರ ಅಭಿನಯ. ತಾಯಿಯಾಗಿ ಕಾಣಿಸಿಕೊಂಡಿರುವ ಪದ್ಮಾವಾಸಂತಿ ಕೆಲವು ದೃಶ್ಯಗಳನ್ನು ಭಾವುಕ ನೆಲೆಗೆ ಕೊಂಡೊಯ್ಯುತ್ತಾರೆ. ವೃದ್ಧನ ಪಾತ್ರಕ್ಕೆ ಹಾ.ಸ.ಕೃ ನ್ಯಾಯ ಒದಗಿಸಿದ್ದಾರೆ. ಕಿಲ್ಲರ್ ವೆಂಟಕೇಶ್, ಅರವಿಂದ್ ತಮಗೊಪ್ಪಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry