ಗುರುವಾರ , ಮೇ 13, 2021
24 °C
ಜಯದೇವ ಹೃದ್ರೋಗ ಆಸ್ಪತ್ರೆ ಬಳಿ ಮೆಟ್ರೊ ಎರಡನೇ ಹಂತ

ಪಥ ಬದಲಾವಣೆ, ನಿಲ್ದಾಣ ಸ್ಥಳಾಂತರಕ್ಕೆ ಸಮ್ಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಪ್ರತಿಷ್ಠಿತ `ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ'ಯ ಹಿತ ದೃಷ್ಟಿಯಿಂದ `ನಮ್ಮ ಮೆಟ್ರೊ' ಎರಡನೇ ಹಂತದ ಎರಡು ಮಾರ್ಗಗಳ ಪಥವನ್ನು ಬದಲಾಯಿಸಲು ಮತ್ತು ಸಂಸ್ಥೆಯ ಒಳ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ನಿಲ್ದಾಣವನ್ನು ಹೊರ ಭಾಗಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ನೇತೃತ್ವದ ಉನ್ನತಾಧಿಕಾರ ಸಮಿತಿ (ಎಚ್‌ಪಿಸಿ) ಸಭೆಯಲ್ಲಿ ತೀರ್ಮಾನಿಸಲಾಗಿದೆ.ಮೆಟ್ರೊ ಎರಡನೇ ಹಂತದ ವಿವರವಾದ ಯೋಜನಾ ವರದಿಯಲ್ಲಿ (ಡಿಪಿಆರ್) ಆರ್.ವಿ ರಸ್ತೆ- ಬೊಮ್ಮಸಂದ್ರ (ರೀಚ್- 5) ಹಾಗೂ ಗೊಟ್ಟಿಗೆರೆ- ನಾಗವಾರ (ರೀಚ್- 6) ಮಾರ್ಗಗಳು ಜಯದೇವ ಹೃದ್ರೋಗ ಸಂಸ್ಥೆಯ ಒಳ ಆವರಣದಲ್ಲಿ ಸಂಧಿಸುವಂತೆ ನಕ್ಷೆಯನ್ನು ತಯಾರಿಸಲಾಗಿತ್ತು.`ಉದ್ದೇಶಿತ ಮೆಟ್ರೊ ಮಾರ್ಗ ಮತ್ತು ನಿಲ್ದಾಣ ನಿರ್ಮಾಣದಿಂದ ಆಸ್ಪತ್ರೆಯ ದೈನಂದಿನ ಕಾರ್ಯನಿರ್ವಹಣೆಗೆ ಅಡ್ಡಿಯಾಗಲಿದೆ. ಲಕ್ಷಾಂತರ ಹೃದ್ರೋಗಿಗಳಿಗೆ ತೊಂದರೆಯಾಗಲಿದೆ. ಹೀಗಾಗಿ ಮಾರ್ಗವನ್ನು ಬದಲಾಯಿಸಿ, ನಿಲ್ದಾಣವನ್ನು ಸ್ಥಳಾಂತರಿಸಬೇಕು' ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮನವಿ ಸಲ್ಲಿಸಿದ್ದರು.ಇದಕ್ಕೆ ಪೂರಕವಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯವರೂ ಪತ್ರ ಬರೆದಿದ್ದರು.

ಈ ಮನವಿ ಸಂಬಂಧ ಮಾರ್ಚ್ 7ರಂದು ನಡೆದ ಎಚ್‌ಪಿಸಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.

ಆ ಸಭೆಯಲ್ಲಿ ಮಾತನಾಡಿದ ಬೆಂಗಳೂರು ಮೆಟ್ರೊ ರೈಲು ನಿಗಮ'ದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ, `ಸ್ವಾಧೀನ ಪಡಿಸಿಕೊಳ್ಳಬೇಕಾದ ಜಮೀನು ಮತ್ತು ಕಟ್ಟಡಗಳ ವೆಚ್ಚವನ್ನು ಲೆಕ್ಕ ಹಾಕಿದರೆ ಜಯದೇವ ಆಸ್ಪತ್ರೆಯ ಒಳ ಆವರಣದಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸುವುದು ಸೂಕ್ತ' ಎಂದು ವಾದಿಸಿದ್ದರು.`ಆಸ್ಪತ್ರೆಯ ಹೊರ ಭಾಗದಲ್ಲಿ ನಿಲ್ದಾಣ ನಿರ್ಮಾಣ ಮತ್ತು ಪಥ ಬದಲಾವಣೆ ಮಾಡಿದರೆ ರೂ145 ಕೋಟಿಯಷ್ಟು ಹೆಚ್ಚುವರಿಯಾಗಿ ವೆಚ್ಚವಾಗುತ್ತದೆ' ಎಂದು ಹೇಳಿದ್ದರು.ರಂಗನಾಥ್ ಅವರು ಮಾತನಾಡಿ, `ಜಯದೇವ ಆಸ್ಪತ್ರೆ ಕರ್ನಾಟಕದ ನವರತ್ನಗಳಲ್ಲಿ ಒಂದು. ಆಸ್ಪತ್ರೆಯ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು' ಎಂದು ಅಭಿಪ್ರಾಯಪಟ್ಟಿದ್ದರು.ಅಂತಿಮವಾಗಿ ಆಸ್ಪತ್ರೆಯ ಒಳ ಆವರಣದ ಬದಲು ಹೊರ ಭಾಗದಲ್ಲಿ ಮೆಟ್ರೊ ಮಾರ್ಗವನ್ನು ನಿರ್ಮಿಸಲು ಮತ್ತು ನಿಲ್ದಾಣ ಸ್ಥಳಾಂತರ ಮಾಡಲು ತೀರ್ಮಾನ ತೆಗೆದುಕೊಳ್ಳಲಾಯಿತು.ಜಯದೇವ ಆಸ್ಪತ್ರೆ `ಹೃದಯ' ಸುರಕ್ಷಿತಆಸ್ಪತ್ರೆ ಲಕ್ಷಾಂತರ ಹೃದ್ರೋಗಿಗಳಿಗೆ ಸಂಜೀವಿನಿ ಆಗಿದೆ. ಪ್ರತಿವರ್ಷ 2.5 ಲಕ್ಷ ಹೊರರೋಗಿಗಳು ಹಾಗೂ 25 ಸಾವಿರ ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿದಿನ 15 ತೆರೆದ ಹೃದಯ ಶಸ್ತ್ರಚಿಕಿತ್ಸೆ, 70 ಆಂಜಿಯೋಪ್ಲಾಸ್ಟಿ ಹಾಗೂ ಆಂಜಿಯೋಗ್ರಾಮ್ ನಡೆಸಲಾಗುತ್ತಿದೆ. ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ರೋಗಿಗಳು ಇಲ್ಲಿಗೆ ಆಗಮಿಸುತ್ತಿದ್ದಾರೆ.ಬೆಂಗಳೂರು: ಜಯದೇವ ವೃತ್ತದ ಬಳಿ ನಮ್ಮ ಮೆಟ್ರೊ ಕಾಮಗಾರಿ ಸ್ಥಳಾಂತರಕ್ಕೆ ಕೈಗೊಂಡ ತೀರ್ಮಾನದಿಂದಾಗಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ `ಹೃದಯ' ಭಾಗ ಸುರಕ್ಷಿತವಾಗಿ ಉಳಿದಿದೆ.ಆಸ್ಪತ್ರೆಯ ಆವರಣದೊಳಗೆ ಮೆಟ್ರೊ ನಿಲ್ದಾಣ ನಿರ್ಮಾಣವಾಗಲಿದೆ ಎಂಬ ಸುಳಿವು ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರಿಗೆ ನವೆಂಬರ್‌ನಲ್ಲಿ ಸಿಕ್ಕಿತ್ತು. ಬಳಿಕ ಮೆಟ್ರೊ ನಿಗಮದ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಆಸ್ಪತ್ರೆಯ `ಹೃದಯ' ಭಾಗಕ್ಕೆ ಕನ್ನ ಹಾಕುವ ವಿಷಯ ಬಹಿರಂಗಗೊಂಡಿತು.ಲಕ್ಷಾಂತರ ರೋಗಿಗಳ ಹಿತದೃಷ್ಟಿಯಿಂದ ಕಾಮಗಾರಿಯನ್ನು ಸ್ಥಳಾಂತರ ಮಾಡುವಂತೆ ಮನವಿ ಸಲ್ಲಿಸಿದರು. ಮುಖ್ಯಮಂತ್ರಿ, ಸಚಿವರಿಗೆ ಅಹವಾಲು ಸಲ್ಲಿಸಿ ಮನವರಿಕೆ ಮಾಡಿಕೊಡಲಾಯಿತು. ಉನ್ನತ ಅಧಿಕಾರ ಸಮಿತಿ ಸದಸ್ಯರ ಗಮನವನ್ನೂ ಸೆಳೆದರು. ಸಮಿತಿಯು ಮಾರ್ಚ್‌ನಲ್ಲಿ ಕಾಮಗಾರಿ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿತು.ಆಸ್ಪತ್ರೆಯ ಆವರಣದೊಳಗೆ ಮೆಟ್ರೊ ನಿಲ್ದಾಣ ಸ್ಥಾಪಿಸಲು ನಿಗಮ ಮುಂದಾಗಿತ್ತು. ದಕ್ಷಿಣ ಭಾಗದಲ್ಲಿ ಆಸ್ಪತ್ರೆಗೆ ಸೇರಿದ 130 ಅಡಿ ಜಾಗವನ್ನು ನಿಲ್ದಾಣಕ್ಕಾಗಿ ವಶಕ್ಕೆ ಪಡೆಯಲು ನಿರ್ಧರಿಸಿತ್ತು. ಹೊರರೋಗಿಗಳ ವಿಭಾಗದ ಗೋಡೆ ಅಂಚಿನಲ್ಲೇ ಕಾಮಗಾರಿ ನಡೆಯಲಿತ್ತು. ಇದರಿಂದಾಗಿ ಹೊರರೋಗಿಗಳ ವಿಭಾಗವನ್ನೇ ಮುಚ್ಚಬೇಕಾದ ಪ್ರಮೇಯ ಎದುರಾಗುತ್ತಿತ್ತು. ಆಸ್ಪತ್ರೆಯ ಗ್ರಂಥಾಲಯಕ್ಕೂ ಹಾನಿ ಆಗುತ್ತಿತ್ತು. ಪೂರ್ವ ಭಾಗದಲ್ಲಿ ನಡೆಯಲಿದ್ದ ಕಾಮಗಾರಿಯಿಂದಾಗಿ ಒಳರೋಗಿಗಳ ವಿಭಾಗದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿತ್ತು.ಅಗ್ನಿ ಸುರಕ್ಷತಾ ಕ್ರಮಗಳಿಗೂ ಜಾಗ ಇಲ್ಲದಂತೆ ಆಗುತ್ತಿತ್ತು. ಈಗ ಎಲ್ಲ ಆತಂಕದ ಕಾರ್ಮೋಡಗಳು ದೂರ ಸರಿದಿವೆ. `ಆಸ್ಪತ್ರೆ ಈಗ ಹಂತಕ್ಕೆ ಬರಲು 30 ವರ್ಷಗಳು ಬೇಕಾದವು. ಲಕ್ಷಾಂತರ ಹೃದಯ ರೋಗಿಗಳಿಗೆ ಆಸ್ಪತ್ರೆ ಜೀವದಾನ ನೀಡಿದೆ. ಕಾಮಗಾರಿ ಸ್ಥಳಾಂತರ ಮಾಡದಿದ್ದರೆ ಆಸ್ಪತ್ರೆಗೆ ಮರಣಶಾಸನ ವಿಧಿಸಿದಂತೆ ಆಗುತ್ತಿತ್ತು. ನಿಲ್ದಾಣ ಸ್ಥಾಪಿಸಿದ್ದರೆ ಆಸ್ಪತ್ರೆಯನ್ನೇ ಮುಚ್ಚಬೇಕಾಗಿತ್ತು. ಸರ್ಕಾರದ ಉನ್ನತ ಅಧಿಕಾರ ಸಮಿತಿಯು ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದೆ' ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.`ಕೆ.ಆರ್.ಮಾರುಕಟ್ಟೆಯ ಬಳಿ ಮೆಟ್ರೊ ಕಾಮಗಾರಿ ಸ್ಥಳದಿಂದ ವಾಣಿವಿಲಾಸ ಆಸ್ಪತ್ರೆ 800 ಅಡಿ ದೂರದಲ್ಲಿದೆ. ಕಾಮಗಾರಿಯಿಂದಾಗಿ ಆಸ್ಪತ್ರೆಯ ಗೋಡೆಗಳು ಬಿರುಕು ಬಿಟ್ಟಿವೆ. ಕಾಮಗಾರಿಯಿಂದಾಗಿ ಆಸ್ಪತ್ರೆ ಹಲವು ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಲ್ಲಿನ ರೋಗಿಗಳನ್ನು ಸ್ಥಳಾಂತರ ಮಾಡಲು ಪೊಲೀಸರು ಯತ್ನಿಸಿದ್ದು ಉಂಟು. ಆಸ್ಪತ್ರೆ ಆವರಣದಲ್ಲಿ ವೆುಟ್ರೊ ನಿಲ್ದಾಣ ಸ್ಥಾಪಿಸಿದ್ದರೆ ಅದಕ್ಕಿಂತ ಮಿಗಿಲಾದ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೆವು. ಮನುಷ್ಯ ಕೈ ಹಾಗೂ ಕಾಲುಗಳನ್ನು ಕತ್ತರಿಸಿದಂತೆ ಆಗುತ್ತಿತ್ತು' ಎಂದು ಅವರು ವಿಶ್ಲೇಷಿಸಿದರು.`ಕಾಮಗಾರಿ ಪೂರ್ಣಗೊಳ್ಳಲು 2-3 ವರ್ಷ ಬೇಕಾಗುತ್ತದೆ. ಕಾಮಗಾರಿ ವೇಳೆ ವ್ಯಾಪಕ ಪ್ರಮಾಣದ ಧೂಳು ಏಳುತ್ತದೆ. ಕಾಮಗಾರಿಯಿಂದಾಗಿ ಕಟ್ಟಡದಲ್ಲೂ ಬಿರುಕು ಕಾಣಿಸಿಕೊಳ್ಳುತ್ತಿತ್ತು. ಹೃದಯ ಚಿಕಿತ್ಸೆ ಸೂಕ್ಷ್ಮವಾದುದು. ಸದ್ದುಗದ್ದಲ ಹಾಗೂ ಧೂಳಿನಿಂದಾಗಿ ಚಿಕಿತ್ಸೆ ವೇಳೆ ಹೃದ್ರೋಗಿಗಳು ಮೃತಪಡುವ ಸಾಧ್ಯತೆಯೂ ಇತ್ತು' ಎಂದು ಅವರು ಅಭಿಪ್ರಾಯಪಟ್ಟರು.`ಸಾರ್ವಜನಿಕ ಹಿತದೃಷ್ಟಿಯ ಉದ್ದೇಶದಿಂದ ವೆುಟ್ರೊ ಕಾಮಗಾರಿಗಾಗಿ ಆಸ್ಪತ್ರೆಯ ಪೂರ್ವಭಾಗದಲ್ಲಿ 40 ಗುಂಟೆ (ಒಂದು ಎಕರೆ) ಜಾಗವನ್ನು ಬಿಟ್ಟುಕೊಡಲಾಗಿದೆ. ಇಲ್ಲಿ ಕಾಮಗಾರಿ ನಡೆಯುವುದರಿಂದ ಸ್ವಲ್ಪ ಮಟ್ಟಿಗೆ ತೊಂದರೆಯಾಗಲಿದೆ. ಅಭಿವೃದ್ಧಿ ದೃಷ್ಟಿಯಿಂದ ನಾವು ಕೆಲವು ತೊಂದರೆಗಳನ್ನು ಸಹಿಸಿಕೊಳ್ಳಬೇಕು' ಎಂದು ಅವರು ತಿಳಿಸಿದರು.ಸುರಂಗ ಮಾರ್ಗ ನಿರ್ಮಿಸಲು ಒತ್ತಾಯ

ಬೆಂಗಳೂರು: `ಜಯದೇವ ಹೃದ್ರೋಗ ಆಸ್ಪತ್ರೆಯ ಬಳಿ ನಡೆಸಲು ಉದ್ದೇಶಿಸಿರುವ `ನಮ್ಮ ಮೆಟ್ರೊ'ದ ಎತ್ತರಿಸಿದ ಮಾರ್ಗದ ಬದಲು ಸುರಂಗ ಮಾರ್ಗ ನಿರ್ಮಿಸಬೇಕು' ಎಂದು `ಜಯದೇವ ಇಂಟರ್‌ಚೇಂಜ್ ಮೆಟ್ರೊ ವಿಕ್ಟಿಮ್ಸ ಫೋರಂ' ಒತ್ತಾಯಿಸಿದೆ.ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸಂಚಾಲಕ ಕೆ.ರಮೇಶ್, `ಈ ಕಾಮಗಾರಿಯಿಂದ ಜಯದೇವ ಸಂಸ್ಥೆ ಹಾಗೂ ಇಲ್ಲಿಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೆಲದಡಿ ಕಾಮಗಾರಿ ನಡೆಸಲು ಸಂಬಂಧಪಟ್ಟ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಬೇಕು' ಎಂದು ಒತ್ತಾಯಿಸಿದರು.`ಎರಡನೇ ಹಂತದ ಕಾಮಗಾರಿ ಕೈಗೊಳ್ಳಲು 2011 ರಲ್ಲಿಯೇ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ನಕ್ಷೆಯನ್ನು ಸಿದ್ಧಪಡಿಸಲಾಗಿತ್ತು. ಜಯದೇವ ಆಸ್ಪತ್ರೆಯ ಒಳಗಿನ ವಾಹನ ನಿಲುಗಡೆ ಜಾಗದಲ್ಲಿ ಮೆಟ್ರೊ ನಿಲ್ದಾಣವನ್ನು ಸ್ಥಾಪಿಸುವ ಯೋಜಿಸಲಾಗಿತ್ತು. ಯಾವುದೇ ಸೂಚನೆ ನೀಡದೆ, ಅಲ್ಲಿನ ನಿವಾಸಿಗಳ ಅಭಿಪ್ರಾಯವನ್ನು ಪಡೆಯದೆ ಏಪ್ರಿಲ್ 2013 ರಲ್ಲಿ ಕಾಮಗಾರಿ ನಕ್ಷೆಯನ್ನು ಬದಲಿಸಲಾಗಿದೆ' ಎಂದು ಅವರು ದೂರಿದರು.`ಕಾಮಗಾರಿ ಸ್ಥಳಾಂತರ ಮಾಡಿರುವುದರಿಂದ ಸುಮಾರು 98 ಕಟ್ಟಡಗಳು ನೆಲಸಮವಾಗಲಿವೆ. ಇದರಲ್ಲಿ ಸುಮಾರು 54 ಹಿರಿಯ ನಾಗರಿಕರ ಮನೆಗಳು ಹಾಗೂ ಇನ್ನಿತರ ವಾಣಿಜ್ಯ ಕಟ್ಟಡಗಳು ಸೇರಿವೆ. ಯೋಜನೆ ಸ್ಥಳಾಂತರದಿಂದ  ರೂ1,000 ಕೋಟಿ ಹೆಚ್ಚುವರಿ ವೆಚ್ಚ ಮಾಡಬೇಕಾಗಿದೆ. ಸುಮಾರು 3,000 ನೌಕರರು ಸ್ಥಳಾಂತರಗೊಳ್ಳಬೇಕಾಗುತ್ತದೆ. ಇದರಿಂದ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕ್ರಮವನ್ನು ಕೈಗೊಳ್ಳಬೇಕು' ಎಂದು ಅವರು ಒತ್ತಾಯಿಸಿದರು.`ಈ ಪ್ರದೇಶದಲ್ಲಿ ಸಿಗ್ನಲ್ ಫ್ರೀ ಕಾರಿಡಾರ್, ಅಂಡರ್‌ಪಾಸ್, ಇತರ ಕಾಮಗಾರಿಗಳನ್ನು ನಡೆಸಲು ಯೋಜನೆ ರೂಪಿಸಲಾಗಿದ್ದು, ಸರ್ಕಾರದ ಇಲಾಖೆಗಳ ನಡುವೆ ಸಮನ್ವಯತೆ ಎದ್ದು ಕಾಣುತ್ತಿದೆ. ಎಲ್ಲ ಇಲಾಖೆಗಳ ಸಮನ್ವಯದಲ್ಲಿ ಜನರಿಗೆ ತೊಂದರೆಯಾಗದಂತೆ ಸಮಗ್ರ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಬೇಕು' ಎಂದು ಅವರು ಆಗ್ರಹಿಸಿದರು.ನೆಲಸಮವಾಗಲಿರುವ ಕಟ್ಟಡಗಳು

ಇನ್ಫೋಸಿಸ್ ಕಟ್ಟಡ, ಗೋಪಾಲನ್ ಮಾಲ್, ವಾಲ್‌ಟೆಕ್ ಕಂಪೆನಿ, ರಾಜ ಗೆಲಾಕ್ಸಿ, ವಾಸವಿ ರೆಸಿಡೆನ್ಸಿ, ಹಿಮಗಿರಿ ರೆಸಿಡೆನ್ಸಿ, ಬೆಸ್ಕಾಂ, ಆನ್ ಮೊಬೈಲ್, ಕಲ್ಯಾಣ ಮಂಟಪ, ಕಾಸ ಅನ್ಸಾಲ್ ಅಪಾರ್ಟ್‌ಮೆಂಟ್ ಹಾಗೂ ಸಣ್ಣ ವಾಣಿಜ್ಯ ಉದ್ಯಮಗಳು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.