ಸೋಮವಾರ, ಜನವರಿ 27, 2020
25 °C
ಇಂದಿನಿಂದ 29ನೇ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌

ಪದಕದ ಭರವಸೆಯಲ್ಲಿ ಆತಿಥೇಯರು

ಮಹಮ್ಮದ್‌ ನೂಮಾನ್‌ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯುವ ಸ್ಪರ್ಧಿಗಳಿಗೆ ತಮ್ಮ ಸಾಮರ್ಥ್ಯ ತೋರಿಸಲು ವೇದಿಕೆ ಎನಿಸಿರುವ 29ನೇ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ ಮಂಗಳವಾರ ಚಾಲನೆ ಲಭಿಸಲಿದೆಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಐದು ದಿನಗಳ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ಕರ್ನಾಟಕ ಒಳಗೊಂಡಂತೆ ವಿವಿಧ ರಾಜ್ಯಗಳ 1,800 ಕ್ಕೂ ಅಧಿಕ ಅಥ್ಲೀಟ್‌ಗಳು ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ಕರ್ನಾಟಕ 147 ಸದಸ್ಯರ ದೊಡ್ಡ ತಂಡವನ್ನೇ ಕಣಕ್ಕಿಳಿಸಿದೆ. ಆದರೆ ಅತಿಥೇಯ ಅಥ್ಲೀಟ್‌ಗಳು ಕೇರಳ ಹಾಗೂ ಇತರ ರಾಜ್ಯಗಳ ಸ್ಪರ್ಧಿಗಳು ಒಡ್ಡುವ ಸವಾಲನ್ನು ಎಷ್ಟರಮಟ್ಟಿಗೆ ಎದುರಿಸಿ ನಿಲ್ಲುವರು ಎಂಬುದನ್ನು ನೋಡಬೇಕು.ಈ ಬಾರಿ ಕರ್ನಾಟಕ ಬಾಲಕಿಯರ ವಿಭಾಗದಲ್ಲಿ ಕೆಲವು ಪದಕಗಳನ್ನು ನಿರೀಕ್ಷಿಸುತ್ತಿದೆ. ಎಸ್‌. ಪ್ರಣೀತಾ ಪ್ರದೀಪ್‌, ಮೇಘನಾ ಶೆಟ್ಟಿ ಮತ್ತು ಟಾಮಿ ವೈಷ್ಣವಿ ಮೇಲೆ ಭರವಸೆ ಇಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರದರ್ಶನದಲ್ಲಿ  ಸ್ಥಿರತೆ ಕಾಪಾಡಿಕೊಂಡಿರುವ ಟಾಮಿ ಬಾಲಕಿಯರ 14 ವರ್ಷ ವಯಸ್ಸಿನೊಳಗಿನ ವಿಭಾಗದ ಲಾಂಗ್‌ಜಂಪ್‌ ಮತ್ತು ಟ್ರಯಥ್ಲಾನ್‌ನಲ್ಲಿ ಸ್ಪರ್ಧಿಸಲಿದ್ದಾರೆ.ಮೇಘನಾ ಶೆಟ್ಟಿ ಬಾಲಕಿಯರ 20 ವರ್ಷ ವಯಸ್ಸಿನೊಳಗಿನವರ 100 ಮೀ. ಹರ್ಡಲ್ಸ್‌ನಲ್ಲಿ ಪದಕದ ಭರವಸೆ ಮೂಡಿಸಿದ್ದಾರೆ. ‘ಶ್ರೇಷ್ಠ ಪ್ರದರ್ಶನ ತೋರಿ ಪದಕ ಗೆಲ್ಲುವ ವಿಶ್ವಾಸ ನನ್ನದು’ ಎಂದು ಮೇಘನಾ ನುಡಿದರು. ಕೇರಳದ ಸ್ಪರ್ಧಿಗಳ ಪ್ರಭುತ್ವ ಸಾಧ್ಯತೆ: ಭಾರತದ ಅಥ್ಲೆಟಿಕ್ಸ್‌ನ ‘ಶಕ್ತಿ ಕೇಂದ್ರ’ ಎನಿಸಿರುವ ಕೇರಳ ಈ ಬಾರಿಯೂ ತನ್ನ ಪ್ರಭುತ್ವ ಮುಂದುವರಿಸುವ ಸಾಧ್ಯತೆಯಿದೆ.ಸ್ಯಾಫ್‌ ಕ್ರೀಡಾಕೂಟ ಮತ್ತು ಏಷ್ಯನ್‌ ಸ್ಕೂಲ್‌ ಅಥ್ಲೆಟಿಕ್ಸ್‌ನಲ್ಲಿ ಪದಕ ಜಯಿಸಿದ್ದ ಕೆಲವು ಸ್ಪರ್ಧಿಗಳು ಕೇರಳ ತಂಡದಲ್ಲಿದ್ದು, ಈ ಬಾರಿಯೂ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಳ್ಳುವ ವಿಶ್ವಾಸ ಹೊಂದಿದೆ. ಈ ಹಿಂದಿನ 17 ಚಾಂಪಿಯನ್‌ಷಿಪ್‌ಗಳಲ್ಲಿ 16 ರಲ್ಲೂ ಕೇರಳ ಸಮಗ್ರ ಪ್ರಶಸ್ತಿ ಜಯಿಸಿತ್ತು. 2011 ರಲ್ಲಿ ಹರಿಯಾಣ ತಂಡ ಸಮಗ್ರ ಚಾಂಪಿಯನ್‌ ಆಗುವ ಮೂಲಕ ಕೇರಳದ ಓಟಕ್ಕೆ ತಡೆಯೊಡ್ಡಿತ್ತು. ಆದರೆ ಹೋದ ವರ್ಷ ಲಖನೌದಲ್ಲಿ ನಡೆದ ಕೂಟದಲ್ಲಿ ಕೇರಳ ಈ ಗೌರವವನ್ನು ಮರಳಿ ಪಡೆದುಕೊಂಡಿತ್ತು.ಪಿ.ಯು. ಚಿತ್ರಾ, ಅಲ್ಬಿನ್‌ ಸನ್ನಿ, ಆದಿರ ಸುರೇಂದ್ರನ್‌, ಜೆನಿಮೋಳ್‌ ಜಾಯ್‌ ಮತ್ತು ಜೆಸ್ಸಿ ಜೋಸೆಫ್‌ ಈಗಾಗಲೇ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದುಕೊಂಡಿರುವ ಅಥ್ಲೀಟ್‌ಗಳು. ಹೈಜಂಪ್‌ನಲ್ಲಿ ಗಾಯತ್ರಿ ಶಿವಕುಮಾರ್‌ ಮತ್ತು ಕೆ.ಎಸ್‌. ಅನಂತು ಅವರ ಮೇಲೆ ಕೇರಳ ನಿರೀಕ್ಷೆ ಇಟ್ಟುಕೊಂಡಿದೆ.‘ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಅನುಭವ ಹೊಂದಿರುವ ಹಲವು ಅಥ್ಲೀಟ್‌ಗಳು ತಂಡಲ್ಲಿದ್ದಾರೆ. ಈ ಬಾರಿಯೂ ಸಮಗ್ರ ಚಾಂಪಿ ಯನ್‌ಷಿಪ್‌ ಗೆಲ್ಲುವುದು ನಮ್ಮ ಗುರಿ’ ಎಂದು ಕೇರಳ ತಂಡದ ಮ್ಯಾನೇಜರ್‌ ವಿ.ಸಿ. ಅಲೆಕ್ಸ್‌ ಹೇಳಿದರು.ಕೇರಳದ ಅಥ್ಲೀಟ್‌ಗಳಿಗೆ ಹರಿಯಾಣ, ಉತ್ತರ ಪ್ರದೇಶ ಮತ್ತು ತಮಿಳುನಾಡಿನ ಸ್ಪರ್ಧಿಗಳು ಪ್ರಬಲ ಪೈಪೋಟಿ ನೀಡುವುದು ಖಚಿತ. ಎಸೆತದ ಸ್ಪರ್ಧೆಯಲ್ಲಿ ಹರಿಯಾಣ ಹೆಚ್ಚಿನ ಪದಕಗಳನ್ನು ತನ್ನದಾಗಿಸಿಕೊಳ್ಳುವ ವಿಶ್ವಾಸದಲ್ಲಿದೆ.ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ನಾಲ್ಕು ವಯೋವರ್ಗಗಳಲ್ಲಿ (20, 18, 16, 14 ವರ್ಷ ವಯಸ್ಸಿನೊಳಗಿನವರು) ಸ್ಪರ್ಧೆಗಳು ನಡೆಯಲಿವೆ. ಐದು ದಿನಗಳ ಕಾಲ 125 ವಿಭಾಗಗಳಲ್ಲಿ ಪದಕಕ್ಕಾಗಿ ಪೈಪೋಟಿ ನಡೆಯಲಿವೆ. ಮೊದಲ ದಿನವಾದ ಮಂಗಳವಾರ ಒಟ್ಟು 17 ಸ್ಪರ್ಧೆಗಳಲ್ಲಿ ಚಿನ್ನದ ಪದಕವನ್ನು ನಿರ್ಧರಿಸಲಾಗುತ್ತದೆ.ಈ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವ ಅಥ್ಲೀ ಟ್‌ಗಳಿಗೆ ಮುಂದಿನ ವರ್ಷ ನಡೆಯಲಿರುವ ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಷಿಪ್‌ ಹಾಗೂ  ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಅವಕಾಶವಿದೆ. ಕೊನೆಯ ಕ್ಷಣದ ಸಿದ್ಧತೆ: ಈ ಪ್ರಮುಖ ಕೂಟಕ್ಕೆ ಸಿದ್ಧತೆ ಪೂರ್ಣ ರೀತಿಯಲ್ಲಿ ನಡೆಯದೇ ಇರುವುದು ಅಥ್ಲೀಟ್‌ಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಮವಾರ ಕೂಡಾ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ಧತೆ ಭರದಿಂದ ನಡೆಯುತ್ತಿತ್ತು.ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ತೇಪೆ ಹಚ್ಚುವ ಕೆಲಸ ನಡೆದಿದೆ. ತಮ್ಮ ಸ್ಪರ್ಧೆಗಳು ಯಾವಾಗ ನಡೆಯಲಿದೆ ಎಂಬುದನ್ನು ಸ್ಪಷ್ಟವಾಗಿ ಅರಿಯದ ಹಲವು ಅಥ್ಲೀಟ್‌ಗಳು ಗೊಂದಲದಲ್ಲಿ ಸಿಲುಕಿದ್ದರು. ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕದ ತಂಡ ಮಂಗಳವಾರ ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ.

ಪ್ರತಿಕ್ರಿಯಿಸಿ (+)