ಪದಕ ಗೆಲ್ಲಲು ನನಗೂ ಅವಕಾಶವಿದೆ

ಗುರುವಾರ , ಜೂಲೈ 18, 2019
24 °C

ಪದಕ ಗೆಲ್ಲಲು ನನಗೂ ಅವಕಾಶವಿದೆ

Published:
Updated:

ಹೈದರಾಬಾದ್ (ಪಿಟಿಐ): `ಈ ವರ್ಷ ನಾನು ಉತ್ತಮ ಪ್ರದರ್ಶನ ತೋರುತ್ತಿದ್ದೇನೆ. ಪ್ರಮುಖ ಆಟಗಾರರನ್ನು ಸೋಲಿಸಿದ್ದೇನೆ. ಟೂರ್ನಿಯಿಂದ ಟೂರ್ನಿಗೆ ಸುಧಾರಣೆ ಕಾಣುತ್ತಿದ್ದೇನೆ. ಹಾಗಾಗಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ನನಗೂ ಅವಕಾಶವಿದೆ~ ಎಂದು ಭಾರತದ ಬ್ಯಾಡ್ಮಿಂಟನ್ ಆಟಗಾರ ಪಿ.ಕಶ್ಯಪ್ ನುಡಿದಿದ್ದಾರೆ.ಕಶ್ಯಪ್ ಈಗ 22ನೇ ರ್‍ಯಾಂಕ್ ಹೊಂದಿದ್ದಾರೆ. ಇತ್ತೀಚಿನ ಟೂರ್ನಿಗಳಲ್ಲಿ ಪ್ರಮುಖ ಆಟಗಾರರಿಗೆ ಆಘಾತ ನೀಡಿ ಅಚ್ಚರಿ ಫಲಿತಾಂಶಕ್ಕೆ ಕಾರಣರಾಗಿದ್ದಾರೆ. ಜೂನ್‌ನಲ್ಲಿ ಜಕಾರ್ತದಲ್ಲಿ ನಡೆದ ಇಂಡೊನೇಷ್ಯಾ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಶ್ವದ ಮೂರನೇ ರ್‍ಯಾಂಕ್ ನ ಆಟಗಾರ ಚೀನಾದ ಚೆನ್ ಲಂಗ್‌ಗೆ ಆಘಾತ ನೀಡಿದ್ದು ಅದಕ್ಕೊಂದು ಸಾಕ್ಷಿ. ಈ ಟೂರ್ನಿಯಲ್ಲಿ ಅವರು ಸೆಮಿಫೈನಲ್ ಪ್ರವೇಶಿಸಿದ್ದರು. ಇದು ಕಶ್ಯಪ್ ಮೇಲೆ ಎಲ್ಲರೂ ವಿಶ್ವಾಸವಿಡಲು ಪ್ರಮುಖ ಕಾರಣ.`10 ರ್‍ಯಾಂಕ್ ನೊಳಗೆ ಸ್ಥಾನ ಪಡೆಯುವುದು ನನ್ನ ಮುಖ್ಯ ಗುರಿ. ಆದರೆ ಅದಕ್ಕಾಗಿ ನಾನು ಸಮಯ ನಿಗದಿಪಡಿಸಿಲ್ಲ. ಈ ವರ್ಷದ ಅಂತ್ಯದೊಳಗೆ ಆ ಸಾಧನೆ ಮಾಡುವ ವಿಶ್ವಾಸದಲ್ಲಿದ್ದೇನೆ. ಈ ವರ್ಷ ಎರಡು ಸೂಪರ್ ಸರಣಿಗಳಲ್ಲಿ ನಾನು ಸೆಮಿಫೈನಲ್ ತಲುಪಿದ್ದೆ. ಇದೇ ರೀತಿಯ ಪ್ರದರ್ಶನ ಮುಂದುವರಿಸಿದರೆ ನನ್ನ   ರ‌್ಯಾಂಕ್‌ನಲ್ಲಿ ಸುಧಾರಣೆ   ಆಗಲಿದೆ~ ಎಂದೂ ಅವರು ವಿವರಿಸಿದರು.`ಈ ಸಾಧನೆಗೆ ಕೋಚ್ ಪುಲ್ಲೇಲಾ ಗೋಪಿಚಂದ್ ಕಾರಣ. ಅವರನ್ನು ಕೋಚ್ ಆಗಿ ಪಡೆದಿರುವ ನಾನೇ ಧನ್ಯ. ನನ್ನ ಆಟದ ಸುಧಾರಣೆಗೆ ಅವರು ತುಂಬಾ ಪ್ರಯತ್ನ ಹಾಕುತ್ತಿದ್ದಾರೆ. ನನ್ನ ಶಕ್ತಿ ಎಂದರೆ ಆಕ್ರಮಣಕಾರಿ ಆಟ ಆಡುವುದು. ಇಂತಹ ಸಂದರ್ಭಗಳಲ್ಲಿ ತಪ್ಪುಗಳಾಗುತ್ತವೆ. ಆ ತಪ್ಪುಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಜೊತೆಗೆ ಫಿಟ್‌ನೆಸ್ ಕಡೆಗೂ ಗಮನ ಹರಿಸುತ್ತಿದ್ದೇನೆ~ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry