ಸೋಮವಾರ, ಮೇ 10, 2021
26 °C

ಪದಕ ಗೆಲ್ಲುವ ತಾಕತ್ತಿದೆ...

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

`ಒಂದು ಮರ ಕತ್ತರಿಸಲು ನನಗೆ ಎಂಟು ಗಂಟೆ ಸಮಯಾವಕಾಶ ನೀಡಿದರೆ ಅದರಲ್ಲಿ ಆರು ಗಂಟೆಯನ್ನು ಕೊಡಲಿ ಚೂಪು ಮಾಡಲು ಬಳಸುತ್ತೇನೆ...~

-ಇದು ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್ ಹೇಳಿದ ಮಾತು.ಈ ಮಾತನ್ನು ಅದಮ್ಯ ಭರವಸೆಗಳು ಎನಿಸಿರುವ ಸೈನಾ ನೆಹ್ವಾಲ್ ಹಾಗೂ ಮೇರಿ ಕೋಮ್ ಅವರ ಕ್ರೀಡಾ ಬದುಕಿಗೆ ಅನ್ವಯಿಸಬಹುದೇನೊ? ಏಕೆಂದರೆ ಕ್ರೀಡೆಗಾಗಿ ಇವರಿಬ್ಬರು ತಮ್ಮ ಜೀವನ ಶೈಲಿಯಲ್ಲಿ ಮಾಡಿಕೊಂಡಿರುವ ಬದಲಾವಣೆ ಹಾಗೂ ತ್ಯಾಗ ಅಚ್ಚರಿ ಮೂಡಿಸುವಂಥದ್ದು.ಸ್ಪರ್ಧೆ ವೇಳೆ ವಿಶ್ವದ ಶ್ರೇಷ್ಠ ಆಟಗಾರ್ತಿಯರನ್ನು ಎದುರಿಸುವಾಗ ಇರುವ ಏಕಾಗ್ರತೆಗಿಂತ ಹೆಚ್ಚಾಗಿ ಅಭ್ಯಾಸ ನಡೆಸುವಾಗಿನ ಇವರ ತದೇಕಚಿತ್ತತೆ ಅದ್ಭುತ. ಈ ವಿಷಯದಲ್ಲಿ ಅವರು ಯಾವತ್ತೂ ರಾಜಿ ಆಗಿಲ್ಲ. ಇದೇ ಅವರ ಈಗಿನ ಸಾಧನೆಯ ಗುಟ್ಟು. ಕ್ರಿಕೆಟ್‌ನಲ್ಲಿ ಸಚಿನ್ ಯಶಸ್ವಿಯಾಗಲು ಕಾರಣವಾಗಿದ್ದು ಕೂಡ ಇದೇ ವಿಷಯ.`ನನ್ನ ದೈನಂದಿನ ಚಟುವಟಿಕೆಗಳಲ್ಲಿ ಬ್ಯಾಡ್ಮಿಂಟನ್ ಬಿಟ್ಟರೆ ಮತ್ತೊಂದಕ್ಕೆ ಸ್ಥಾನವಿಲ್ಲ. ಈ ಕ್ರೀಡೆ ಬಿಟ್ಟು ಬೇರೆ ವಿಷಯದ ಬಗ್ಗೆ ನಾನ್ಯಾವತ್ತೂ ಯೋಚನೆ ಮಾಡಿಲ್ಲ. ಅದಕ್ಕೆ ನನಗೆ ಸಮಯವೂ ಇಲ್ಲ~ ಎನ್ನುತ್ತಾರೆ ನೆಹ್ವಾಲ್.`ಇಬ್ಬರು ಮಕ್ಕಳನ್ನು ಬಿಟ್ಟು ತರಬೇತಿ ಅಥವಾ ಸ್ಪರ್ಧೆಗೆ ತೆರಳಲು ತುಂಬಾ ಕಷ್ಟವಾಗುತ್ತದೆ. ಆದರೆ ಜೀವನವೆಂಬುದು ಇದಷ್ಟೇ ಅಲ್ಲ. ನನ್ನ ಗುರಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕು ಎಂಬುದು. ಅದಕ್ಕಾಗಿ ನಾನು ಯಾವುದೇ ವಿಷಯದಲ್ಲಿ ರಾಜಿ ಆಗಲು ಸಿದ್ಧ~ ಎಂದು ಮೇರಿ ಹೇಳುತ್ತಾರೆ.ಸೈನಾ ಹಾಗೂ ಮೇರಿ ಅವರ ಸಾಧನೆಗಳ ಪಟ್ಟಿಗೆ ಕಳೆದ ವಾರ ಮತ್ತೊಂದು ಗರಿ ಸೇರಿಕೊಂಡಿತು. ಹೈದರಾಬಾದ್‌ನ ನೆಹ್ವಾಲ್ ಬಾಸೆಲ್‌ನಲ್ಲಿ ನಡೆದ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆದರು.ಅವರು ಮಣಿಸಿದ್ದು ಬ್ಯಾಡ್ಮಿಂಟನ್ ಲೋಕದಲ್ಲಿ ಸಂಚಲನ ಮೂಡಿಸುತ್ತಿರುವ ಎರಡನೇ ರ‌್ಯಾಂಕ್‌ನ ಆಟಗಾರ್ತಿ ಚೀನಾದ ಶಿಕ್ಸಿಯನ್ ವಾಂಗ್ ಅವರನ್ನು. 22ನೇ ಜನ್ಮದಿನ ಆಚರಿಸಿಕೊಂಡ ಮಾರನೇ ದಿನವೇ ಈ ಸಾಧನೆ ಮೂಡಿಬಂತು. ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಪಾರಮ್ಯ ಮೆರೆಯುತ್ತಿರುವ ಚೀನಾದ ಆಟಗಾರ್ತಿಯರಿಗೆ ಈ ಮೂಲಕ ಮತ್ತೊಮ್ಮೆ ಎಚ್ಚರಿಕೆ ರವಾನಿಸಿದರು.ಮಣಿಪುರದ ಮೇರಿ ಮಂಗೋಲಿಯದ ಉಲಾಬಾತರ್‌ನಲ್ಲಿ ನಡೆದ ಆರನೇ ಏಷ್ಯನ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದರು. ಅವರು ಸೋಲಿಸಿದ್ದು ಹಾಲಿ ಚಾಂಪಿಯನ್ ಚೀನಾದ ರೆನ್ ಕಾನ್‌ಕಾನ್ ಅವರನ್ನು. ಇವರಿಬ್ಬರೂ ಲಂಡನ್ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಈ ಮಹಾಕೂಟಕ್ಕೆ ಅವರಿನ್ನೂ ಅರ್ಹತೆ ಪಡೆಯಬೇಕಾಗಿದೆ.* * * * * *


ಸೈನಾ ಸಾಧನೆ ಝಲಕ್...

1980ರಲ್ಲಿ ಕನ್ನಡದವರೇ ಆದ ಪ್ರಕಾಶ್ ಪಡುಕೋಣೆ ಆಲ್ ಇಂಗ್ಲೆಂಡ್ ಚಾಂಪಿಯನ್ ಆಗಿ ಭಾರತದ ಬ್ಯಾಡ್ಮಿಂಟನ್ ತಾಕತ್ತನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದರು. ಸೈಯದ್ ಮೋದಿ 1982ರಲ್ಲಿ ಕಾಮನ್‌ವೆಲ್ತ್ ಚಾಂಪಿಯನ್ ಆಗಿದ್ದರು. 2001ರಲ್ಲಿ ನೆರೆಯ ಹೈದರಾಬಾದ್‌ನ ಪುಲ್ಲೇಲಾ ಗೋಪಿಚಂದ್ ಆಲ್ ಇಂಗ್ಲೆಂಡ್ ಚಾಂಪಿಯನ್ ಆಗಿದ್ದರು.ಇವರು ಈ ಅಪೂರ್ವ ಸಾಧನೆ ಮಾಡಿದ್ದರೂ ಭಾರತದಲ್ಲಿ ಬ್ಯಾಡ್ಮಿಂಟನ್ ಅಷ್ಟೇನು ಕ್ರೇಜ್ ಸೃಷ್ಟಿಸಿರಲಿಲ್ಲ. ಆದರೆ ಸೈನಾ ಅವರ ಸಾಧನೆ ಬ್ಯಾಡ್ಮಿಂಟನ್ ಬಗ್ಗೆ ಮಕ್ಕಳು ಗಮನ ಹರಿಸುವಂತಹ ಟ್ರೆಂಡ್ ಸೃಷ್ಟಿಯಾಗಲು ಕಾರಣವಾಗಿದೆ.2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾಗಲೇ ನೆಹ್ವಾಲ್ ಪ್ರತಿಭೆ ಏನೆಂಬುದು ಗೊತ್ತಾಗಿತ್ತು. ಏಕೆಂದರೆ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಮತ್ತೊಬ್ಬರು ಈ ಸಾಧನೆ ಮಾಡಿರಲಿಲ್ಲ. ಅದು ಅವರ ಮೊದಲ ಒಲಿಂಪಿಕ್ಸ್. ಕೇವಲ ಚೀನಾ ಹಾಗೂ ಇಂಡೋನೇಷ್ಯಾದ ಆಟಗಾರ್ತಿಯರ ಪಾರಮ್ಯ ಕಂಡು ಜಿಡ್ಡು ಗಟ್ಟಿದ್ದ ವಿಶ್ವ ಮಹಿಳಾ ಬ್ಯಾಡ್ಮಿಂಟನ್ ರಂಗದಲ್ಲಿ ಹೊಸ ಹುರುಪು ಮೂಡಿಸ್ದ್ದಿದೇ ನೆಹ್ವಾಲ್.`ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದು ನನ್ನ ಮನಸ್ಸಿನಲ್ಲಿ ಇನ್ನೂ ತಾಜಾವಾಗಿ ಉಳಿದುಕೊಂಡಿದೆ. ನಾನು ಕ್ವಾರ್ಟರ್ ಫೈನಲ್‌ನಲ್ಲಿ ಸೋತಾಗ ಭಾರತದ ಅದೆಷ್ಟೊ ಮಂದಿ ತುಂಬಾ ನಿರಾಶರಾಗಿದ್ದರು. ಆದರೆ ಈ ಬಾರಿ ಲಂಡನ್‌ನಲ್ಲಿ ಅದಕ್ಕಿಂತ ಹೆಚ್ಚಿನ ಸಾಧನೆ ಮಾಡುವ ಭರವಸೆ ಇದೆ~ ಎನ್ನುತ್ತಾರೆ ಸೈನಾ.`ಕಳೆದ ಒಂಬತ್ತು ವರ್ಷಗಳಿಂದ ಪಾರ್ಟಿಗೆ ಹೋಗಿಲ್ಲ. ಸಿನಿಮಾ ನೋಡಿಲ್ಲ~ ಎಂದು ಅವರು ನುಡಿಯುತ್ತಾರೆ.ಕೋಮ್ ಕಮಾಲ್...

28 ವರ್ಷ ವಯಸ್ಸಿನ ಮೇರಿ ಅವಳಿ ಮಕ್ಕಳ ತಾಯಿ. ಅವರದ್ದು ಮಣಿಪುರದ ರಾಜಧಾನಿ ಇಂಫಾಲ್ ಬಳಿಯ ಗುಡ್ಡುಗಾಡು ಪ್ರದೇಶ. ಬುಡಕಟ್ಟು ಜನಾಂಗದ ನಡುವೆ ಕನಸುಗಳನ್ನು ಕಟ್ಟಿಕೊಂಡು ಬೆಳೆದವರು.ಜಗತ್ತು ಕಂಡ ಶ್ರೇಷ್ಠ ಮಹಿಳಾ ಅಮೆಚೂರ್ ಬಾಕ್ಸರ್ ಎನಿಸಿರುವ ಮೇರಿ ದೇಶದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುವ ಅತ್ಯುನ್ನತ ಪ್ರಶಸ್ತಿ `ರಾಜೀವ್ ಗಾಂಧಿ ಖೇಲ್ ರತ್ನ~ ಪುರಸ್ಕೃತೆ ಕೂಡ.ಬಡ ಕುಟುಂಬದ ಹಣಕಾಸು ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳಲು ಕೋಮ್ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಅದು ಅವರ ಜೀವಾಳವಾಗಿಯೇ ಪರಿವರ್ತನೆಯಾಯಿತು. ಆದರೆ ಪುಟ್ಟ ಮಕ್ಕಳನ್ನು ಬಿಟ್ಟು ತರಬೇತಿ ಹಾಗೂ ಸ್ಪರ್ಧೆಗಾಗಿ ಹೇಗೆ ತೆರಳುವುದು ಎಂಬುದು ಅವರ ಚಿಂತೆ.

 

ಚಾಂಪಿಯನ್‌ಷಿಪ್‌ಗೆ ತೆರಳಿದಾಗ ಅವರು ತಿಂಗಳಗಟ್ಟಲೆ ಮನೆಯಿಂದ ದೂರ ಇರಬೇಕಾಗುತ್ತದೆ. ಇಷ್ಟೆಲ್ಲಾ ಕಷ್ಟಗಳ ನಡುವೆ ಅವರು ಚಾಂಪಿಯನ್ ಆಗುತ್ತಿದ್ದಾರೆ. ಎಲ್ಲಾ ತಾಯಂದರಿಗೆ ಮೇರಿ ಮಾದರಿಯಾಗಿದ್ದಾರೆ.

ಮೇರಿ ಈ ಹಿಂದೆ 48 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಆದರೆ ಒಲಿಂಪಿಕ್ಸ್‌ನಲ್ಲಿ 51 ಕೆ.ಜಿ ಇರುವ ಕಾರಣ ಈಗ ಈ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. 

ಅದೇನೇ ಇರಲಿ, ಸೈನಾ ಹಾಗೂ ಮೇರಿ ಖಂಡಿತ ಮತ್ತಷ್ಟು ಅಚ್ಚರಿಗೆ ಕಾರಣರಾಗುತ್ತಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ಅವರಲ್ಲಿದೆ. ಆ ಕ್ಷಣಕ್ಕೆ ದಿನಗಣನೆ ಶುರುವಾಗಿದೆ...!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.