ಗುರುವಾರ , ಜನವರಿ 23, 2020
28 °C
ವಸತಿ ನಿಲಯಕ್ಕೆ ಮೂಲಸೌಕರ್ಯ ಕಲ್ಪಿಸಲು ಒತ್ತಾಯ

ಪದವಿಪೂರ್ವ ವಿದ್ಯಾರ್ಥಿಗಳ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ವಸತಿ ನಿಯಲಕ್ಕೆ ಅಗತ್ಯ ಸೌಕರ್ಯ ಕಲ್ಪಿಸಬೇಕು, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅಗತ್ಯ ಶೈಕ್ಷಣಿಕ ಅನುಕೂಲತೆ ಮಾಡಿಕೊಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ಪರಿಶಿಷ್ಟ ಜಾತಿ ಪದವಿ ಪೂರ್ವ ಬಾಲಕರ ಸರ್ಕಾರಿ ವಸತಿ ನಿಲಯದ ವಿದ್ಯಾರ್ಥಿಗಳು ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.ಈಗಿರುವ ವಸತಿ ನಿಲಯದ 15 ಕೊಠಡಿಗಳಲ್ಲಿ 300 ವಿದ್ಯಾರ್ಥಿಗಳು ವಾಸವಿದ್ದಾರೆ. ಆಹಾರ ಸಮಸ್ಯೆ ಇದೆ. ಪುಸ್ತಕ ವಿತರಣೆ ಮಾಡುತ್ತಿಲ್ಲ. ವಿದ್ಯಾ­ರ್ಥಿ­ಗಳಿಗೆ ಬರಬೇಕಾದ ಶಿಷ್ಯವೇತನ ಸಮರ್ಪಕ ರೀತಿ ಕಲ್ಪಿಸಿಲ್ಲ.  ಆಟದ ಸಾಮಗ್ರಿ ಒದಗಿಸಿಲ್ಲ. ಅನಾರೋಗ್ಯಕರ ವಾತಾವರಣ, ಶೌಚಾಲಯ ಸಮಸ್ಯೆ ಇದೆ. ಕೆಲಸಗಾರರ ತೊಂದರೆ ಕೊಡುತ್ತಾರೆ. ಹಾಸಿಗೆ, ಹೊದಿಕೆ, ಕಾಟ್‌ ಇನ್ನೂ ಕಲ್ಪಿಸಿಲ್ಲ. ವಾರ್ಡನ್ ಅವರು ಈ ಸಮಸ್ಯೆ ಪರಿಹಾರ ಕುರಿತು ಗಮನಹರಿಸಿಲ್ಲ ಎಂದು ದೂರಿದರು.ಜಿಲ್ಲಾಧಿಕಾರಿ ಭರವಸೆ: ವಿದ್ಯಾರ್ಥಿ­ಗಳಿಂದ ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ಅವರು ಮನವಿ ಸ್ವೀಕರಿಸಿದರು. ಮೂಲಸೌಕರ್ಯ ತುರ್ತು ಕಲ್ಪಿಸದೇ ಇರುವಲ್ಲಿ ನಿರ್ಲಕ್ಯ ತೋರಿದ ವಾರ್ಡನ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸ್ಥಳದಲ್ಲಿ ತರಾಟೆಗೆ ತೆಗೆದುಕೊಂಡರು.ಜಿಲ್ಲಾಧಿಕಾರಿಗಳೊಂದಿಗೆ ಇದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್ ನಾಗರಾಜ ಅವರು, ವಸತಿ ನಿಲಯದ ವಿದ್ಯಾರ್ಥಿಗಳ ಸಮಸ್ಯೆ ಅರ್ಥ ಮಾಡಿಕೊಂಡು ಸ್ಪಂದಿಸುವಲ್ಲಿ ಲೋಪ­ವಾ­ಗಿರುವುದರಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದಿದ್ದಾರೆ. ಮಕ್ಕಳ ಸಮಸ್ಯೆ ಅರ್ಥ ಮಾಡಿಕೊಂಡು ಬೇಗ ಸ್ಪಂದಿಸಿದ್ದರೆ ಇಲ್ಲಿಗೆ ಬರುತ್ತಿರಲಿಲ್ಲ. ವಸತಿ ನಿಲಯದಲ್ಲಿರುವ ಮಕ್ಕಳ ಬಗ್ಗೆ ಉಪೇಕ್ಷೆ ಬೇಡ. ನಿಮ್ಮ ಮಕ್ಕಳಂತೆಯೇ ನೋಡಿಕೊಳ್ಳಬೇಕು ಎಂದು ಸಂಬಂಧ­ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾರ ದಿವಸ ಸಂಜೆ ವಸತಿ ನಿಲಯಕ್ಕೆ ತಾವೇ ಖುದ್ದಾಗಿ ಬಂದು ಭೇಟಿ ನೀಡಿ ಪರಿಶೀಲನೆ ಮಾಡಿ ಸಮಸ್ಯೆ ಪರಿಹರಿಸುವುದಾಗಿ ಜಿಲ್ಲಾಧಿಕಾರಿ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದ ದಲಿತ ಮುಖಂಡ ಎಂ.ಆರ್ ಭೇರಿ, ಈರಣ್ಣ ಅವರಿಗೆ ಭರವಸೆ ನೀಡಿದರು.ಅಷ್ಟರೊಳಗೆ ತುರ್ತು ಏನು ಸೌಕರ್ಯ ಕಲ್ಪಿಸಬೇಕೋ ಅದನ್ನು ಕೂಡಲೇ ಮಾಡಬೇಕು ಎಂದು ವಾರ್ಡನ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿ­ದರು.ವಿದ್ಯಾರ್ಥಿಗಳ ಸಮಸ್ಯೆ  ಸ್ಪಂದಿಸಿ ಡಿಸಿ ಕಚೇರಿಗೆ ಬರುವುದನ್ನು ಸಹಿಸುವುದಿಲ್ಲ. ನಿಮ್ಮ ಕೆಲಸವೇನು? ಸಮಸ್ಯೆ ಪರಿಹಾರಕ್ಕೆ ಏನಾದರೂ ಅಡಚಣೆ ಇದ್ದರೆ ತಕ್ಷಣವೇ ಗಮನಕ್ಕೆ ತರಬೇಕು. ಅದು ಬಿಟ್ಟು ಉಪೇಕ್ಷೆ ಮಾಡಿದರೆ ಸಹಿಸುವುದಿಲ್ಲ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಪ್ರತಿಕ್ರಿಯಿಸಿ (+)