ಸೋಮವಾರ, ಜೂನ್ 14, 2021
24 °C

ಪದವಿ ಉಪನ್ಯಾಸಕರ ನೇಮಕಕ್ಕೂ ಪರೀಕ್ಷೆ

ಎ.ಎಂ. ಸುರೇಶ Updated:

ಅಕ್ಷರ ಗಾತ್ರ : | |

ಉಪನ್ಯಾಸಕರ ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕು ಎಂಬ ಉದ್ದೇಶದಿಂದ ನೇಮಕ ವಿಧಾನದಲ್ಲಿ ಬದಲಾವಣೆ ತರಲು  ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕರ ನೇಮಕಕ್ಕೆ ಹಾಲಿ ಇರುವ ಸಂದರ್ಶನ ಪದ್ಧತಿಯ ಬಗ್ಗೆ ಟೀಕೆ ಟಿಪ್ಪಣಿಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಂದರ್ಶನ ಬದಲು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಉಪನ್ಯಾಸಕರನ್ನು ನೇಮಕ ಮಾಡಲು ಸರ್ಕಾರ ಉತ್ಸುಕವಾಗಿದೆ.ಕಾಲೇಜು ಶಿಕ್ಷಣ ಇಲಾಖೆ ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಗೆ ಕೆಲ ತಿಂಗಳ ಹಿಂದೆ ಪ್ರಸ್ತಾವನೆ ಕಳುಹಿಸಿತ್ತು. ಉನ್ನತ ಶಿಕ್ಷಣ ಇಲಾಖೆ ಇದರ ರೂಪುರೇಷಗಳನ್ನು ಅಂತಿಮಗೊಳಿಸಿ ಕಾನೂನು ಇಲಾಖೆಯ ಒಪ್ಪಿಗೆಯನ್ನೂ ಪಡೆದುಕೊಂಡಿದೆ. ಲೋಕಸಭಾ ಚುನಾವಣೆ ನಂತರ ಇದಕ್ಕೆ ಅಂತಿಮ ರೂಪ ನೀಡಿ, ಉಪನ್ಯಾಸಕರ ನೇಮಕಾತಿಗೆ ಚಾಲನೆ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.ಇದಲ್ಲದೆ ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿ 18 ವಿಶ್ವವಿದ್ಯಾಲಯಗಳಿವೆ. ಸ್ನಾತಕೋತ್ತರ ಪದವಿ ಹಂತದಲ್ಲಿ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡುವಲ್ಲಿ ಏಕರೂಪತೆ ಇಲ್ಲ. ಒಂದೊಂದು ವಿಶ್ವವಿದ್ಯಾಲಯ ಗಳು, ಒಂದೊಂದು ರೀತಿಯ ಅಂಕಗಳನ್ನು ನೀಡುತ್ತಿವೆ. ಹೀಗಾಗಿ ಹೆಚ್ಚು ಅಂಕಗಳನ್ನು ನೀಡುವ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರರು ಉಪನ್ಯಾಸಕರಾಗಿ ಆಯ್ಕೆ ಆಗುತ್ತಾರೆ. ಕಡಿಮೆ ಅಂಕಗಳನ್ನು ನೀಡುವ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರರಿಗೆ ಸಂದರ್ಶನ ಪತ್ರವೂ ಬರುವುದಿಲ್ಲ ಎಂಬ ದೂರುಗಳು ನಿರುದ್ಯೋಗಿ ಸ್ನಾತಕೋತ್ತರ ಪದವೀಧರರಿಂದ ಕೇಳಿಬರುತ್ತಿವೆ.ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈಗಿರುವ ನೇಮಕಾತಿ ವಿಧಾನದಲ್ಲೇ ಬದಲಾವಣೆ ತರಲು ಸಿದ್ಧತೆ ನಡೆದಿದೆ.

ಹೊಸ ಪದ್ಧತಿ ಪ್ರಕಾರ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಹಾಕಿದ ಅರ್ಹ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಆ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಹಾಗೂ ರೋಸ್ಟರ್‌ ಆಧಾರದ ಮೇಲೆ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದು ವಿವರಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಬಹುಆಯ್ಕೆ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ನಾಲ್ಕು ಆಯ್ಕೆಗಳ ಪೈಕಿ ಸೂಕ್ತವಾದ ಉತ್ತರವನ್ನು ಗುರುತಿಸಬೇಕು. ಸ್ನಾತಕೋತ್ತರ ಪರೀಕ್ಷೆಯಲ್ಲಿ ರ್‌್ಯಾಂಕ್‌ಗಳಿಸಿದ್ದರೂ, ಅದು ಇಲ್ಲಿ ಗಣನೆಗೆ ಬರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸುವ ಅಂಕಗಳೇ ಆಯ್ಕೆಗೆ ಮಾನದಂಡವಾಗಲಿವೆ.ಉಪನ್ಯಾಸಕರ ಹುದ್ದೆಗಳಿಗೆ ವಿವಿ ಅನುದಾನ ಆಯೋಗ (ಯುಜಿಸಿ) ನಿಗದಿಪಡಿಸಿರುವ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಕಾಲೇಜು ಶಿಕ್ಷಣ ಇಲಾಖೆ ಈ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸಿದೆ. ಬಹುತೇಕ ಇದೇ ಅಂತಿಮವಾಗಲಿದೆ. ಇದಕ್ಕಾಗಿಯೇ ಪಠ್ಯಕ್ರಮ ರೂಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ತಜ್ಞರ ಅಧ್ಯಕ್ಷತೆಯಲ್ಲಿ ವಿಷಯವಾರು ಸಮಿತಿಗಳನ್ನು ರಚಿಸಲಾಗಿದೆ.ಸದ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 985 ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಇಲಾಖೆ ಉದ್ದೇಶಿಸಿದೆ. ಇದಲ್ಲದೆ ಹೊಸದಾಗಿ 2299 ಹುದ್ದೆಗಳನ್ನು ಸೃಜಿಸಲು ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅದಕ್ಕೆ ಒಪ್ಪಿಗೆ ದೊರೆತರೆ ಮುಂದಿನ ದಿನಗಳಲ್ಲಿ ಆ ಹುದ್ದೆಗಳನ್ನೂ ಭರ್ತಿ ಮಾಡಲಾಗುತ್ತದೆ.ರಾಜ್ಯ ಸರ್ಕಾರ ಹೊಸದಾಗಿ 50 ಪದವಿ ಕಾಲೇಜುಗಳನ್ನು  ಮಂಜೂರು ಮಾಡಿದೆ. ಈ ಪೈಕಿ ಮೂರು ಕಾಲೇಜುಗಳು ಪ್ರಸಕ್ತ ಸಾಲಿನಲ್ಲೇ ಶುರುವಾಗಿವೆ. ಉಳಿದ 47 ಕಾಲೇಜುಗಳು 2014–15ನೇ ಸಾಲಿನಲ್ಲಿ ಶುರುವಾಗಲಿವೆ. ಇಲ್ಲೂ ಸಹ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೊಸದಾಗಿ ಹುದ್ದೆಗಳನ್ನು ಸೃಜಿಸಬೇಕಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ಪದವೀಧರರಿಗೆ ಬೋಧಕ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ದೊರೆಯುವ ನಿರೀಕ್ಷೆ ಇದೆ.

ಪರೀಕ್ಷೆ ಹೇಗೆ? ಏನು?

*ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸುವ ಅಂಕಗಳೇ ಆಯ್ಕೆಗೆ ಮಾನದಂಡ

*ರೋಸ್ಟರ್‌ ಆಧಾರದ ಮೇಲೆ ಆಯ್ಕೆ ಪಟ್ಟಿ ನಿರ್ಧಾರ

*ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ), ರಾಜ್ಯಮಟ್ಟದ ಅರ್ಹತಾ ಪರೀಕ್ಷೆಯಲ್ಲಿ (ಎಸ್‌ಎಲ್‌ಇಟಿ) ಪಾಸಾಗಿರುವವರು, ಪಿಎಚ್‌ಡಿ ಪಡೆದವರು ಪರೀಕ್ಷೆಗೆ ಅರ್ಹರು

*300 ಅಂಕ ವಿಷಯಾಧಾರಿತ ಪ್ರಶ್ನೆಗಳು

*200 ಭಾಷೆ, ಸಾಮಾನ್ಯ ಜ್ಞಾನದ ಪರೀಕ್ಷೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.