ಭಾನುವಾರ, ನವೆಂಬರ್ 17, 2019
25 °C

ಪದವಿ ಓದಿ ನರ್ಸರಿಯಲ್ಲಿ ಯಶಸ್ಸು ಕಂಡರು

Published:
Updated:

ವ್ಯವಸಾಯ........ ನೀನ್ಸಾಯ, ನಿಮ್ಮಪ್ಪ ಸಾಯ, ಮನೆ ಮಂದಿಯೆಲ್ಲ ಸಾಯ... ಎನ್ನುವ ಆಡುಮಾತಿಗೆ ಅಪವಾದ ಎನ್ನುವಂತೆ ಪದವೀಧರನಾದರೂ ಖಾಸಗಿ ಸಂಸ್ಥೆಯ ನೌಕರಿಯನ್ನು ಬಿಟ್ಟು ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹೊಸದುರ್ಗ ತಾಲ್ಲೂಕಿನ ಬೀನಸಹಳ್ಳಿಯ ಜಗದೀಶ್ ಮಾದರಿ ಕೃಷಿಕ ಎನಿಸಿದ್ದಾರೆ.ಜಿಲ್ಲೆಯ ಹೊಳಲ್ಕೆರೆಯಲ್ಲಿ ಬಿ.ಕಾಂ. ಪದವಿ ಪಡೆದ ಜಗದೀಶ್‌ಗೆ ಚಿಕ್ಕಂದಿನಿಂದಲೂ ಕೃಷಿಯ ಬಗ್ಗೆ ಆಸಕ್ತಿ. ಭೂತಾಯಿಯ ಸೇವೆ ಮಾಡಬೇಕು ಎನ್ನುವ ಅಭಿಲಾಷೆ ಹೊಂದಿದ್ದ ಆವರು ಪದವಿಯ ನಂತರ ಮಾಡಿದ್ದು, ತೋಟಗಾರಿಕೆಯಲ್ಲಿ ಡಿಪ್ಲೊಮಾ. ಇದಾದ ನಂತರ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿ ಸುಮಾರು 10 ವರ್ಷ ಕಾಲ ದುಡಿದ ಜಗದೀಶ್ ಉದ್ಯೋಗಕ್ಕೆ ತಿಲಾಂಜಲಿ ಇತ್ತು ಮರಳಿದ್ದು ಸ್ವಗ್ರಾಮ ಬೀಸನಹಳ್ಳಿಗೆ.ತರಕಾರಿ ಬೆಳೆಯಲು...

ಊರಿಗೆ ಬಂದ ದಿನದಿಂದ ಪಿತ್ರಾರ್ಜಿತವಾಗಿ ಬಂದ 4.5 ಎಕರೆ ಜಮೀನಿನಲ್ಲಿ ತರಕಾರಿ ಬೆಳೆಯಲು ಪ್ರಾರಂಭಿಸಿದರು. ಸುಮಾರು 5 ವರ್ಷ ಕಾಲ ಟೊಮೆಟೊ, ಬದನೆ, ದಪ್ಪ ಮೆಣಸಿನಕಾಯಿ, ಕೋಸು ಇತ್ಯಾದಿ ತರಕಾರಿಗಳನ್ನು ಬೆಳೆದ ಜಗದೀಶ್ ತಾಲ್ಲೂಕಿನ ರೈತರು ತರಕಾರಿ ಬೆಳೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದನ್ನು ಮನಗಂಡರು. ಜತೆಗೆ, ಸೂಕ್ತ ಮಾಹಿತಿ ಇಲ್ಲದೇ ರೈತರು ಬೆಳೆ ಬೆಳೆದರು ನಷ್ಟ ಅನುಭವಿಸುವುದನ್ನು ಕಂಡುಕೊಂಡರು.ತಮ್ಮ 15 ವರ್ಷಗಳ ಅನುಭವ ಇತರ ರೈತರೊಂದಿಗೆ ಹಂಚಿಕೊಳ್ಳಬೇಕು ಹಾಗೂ  ಅವರಿಗೆ ಗುಣಮಟ್ಟದ ತರಕಾರಿ ಬೆಳೆಯ ಸಸಿಗಳನ್ನು ಪೂರೈಸಬೇಕು ಎನ್ನುವ ಆಶಯದೊಂದಿಗೆ ಗ್ರಾಮಕ್ಕೆ ಹೊಂದಿಕೊಂಡಿರುವ ಮಾವಿನಕಟ್ಟೆ ಗೇಟ್ ಸಮೀಪದ ಸ್ವಂತ ಜಮೀನಿನಲ್ಲಿ 2007ರಲ್ಲಿ ನರ್ಸರಿ ಪ್ರಾರಂಭಿಸಿದರು.ಕೃಷಿಯಲ್ಲಿ ಪತಿಹೊಂದಿರುವ ಆಸಕ್ತಿಗೆ ಸಂಪೂರ್ಣವಾಗಿ ಹೆಗಲು ಜೋಡಿಸಿದ ಪತ್ನಿ ಪ್ರೇಮಾ ನರ್ಸರಿ ಆರಂಭವಾದಂದಿನಿಂದಲೂ ಪತಿ ಜಗದೀಶ್ ಜತೆಗೆ ನರ್ಸರಿ ಕೆಲಸದಲ್ಲಿ ತೊಡಗಿಕೊಂಡರು. ಇದೀಗ ನರ್ಸರಿಯ ಬಹುತೇಕ ಉಸ್ತುವಾರಿ ಪ್ರೇಮಾವರದ್ದೇ.ವಿವಿಧ ತರಕಾರಿ ಸಸಿಗಳನ್ನು ರೈತರಿಗೆ ಪೂರೈಸುವ ಜಗದೀಶ್ ಹಣ ಪಡೆದು ಸುಮ್ಮನಾಗುವುದಿಲ್ಲ. ಬೆಳೆಗೆ ಏನಾದರೂ ರೋಗ ತಗುಲಿದರೆ, ಮತ್ತಿತರ ಸಮಸ್ಯೆ ಎದುರಾದರೆ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಅಗತ್ಯ ಸಲಹೆಗಳನ್ನು ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ನರ್ಸರಿಯ ಉಸ್ತುವಾರಿಯನ್ನು ವಹಿಸಿಕೊಳ್ಳುವುದು ಪತ್ನಿ ಪ್ರೇಮಾ.ಜಗದೀಶ್ ಹಾಗೂ ಅವರ ಪತ್ನಿ ಕೃಷಿಯನ್ನೇ ಸಂಪೂರ್ಣವಾಗಿ ಅಪ್ಪಿಕೊಂಡಿದ್ದು ದುಡಿಮೆಯ ಜತೆಗೆ, ರೈತರಿಗೆ ಗುಣಮಟ್ಟದ ತರಕಾರಿ ಸಸಿಗಳನ್ನು ಪೂರೈಸುತ್ತಾ ಹೊಸದುರ್ಗ ತಾಲ್ಲೂಕಲ್ಲದೆ ಅಕ್ಕಪಕ್ಕದ ತಾಲ್ಲೂಕು ಹಾಗೂ ಜಿಲ್ಲೆಗಳ ರೈತರಿಗೆ ಸಸಿಗಳನ್ನು ಪೂರೈಸುತ್ತಿದ್ದಾರೆ.ದಾಳಿಂಬೆ ಸಸಿ ಕೊಡುತ್ತಾರೆ...

ನರ್ಸರಿಯಲ್ಲಿ ಟೊಮೆಟೊ, ಬದನೆ, ಕ್ಯಾಪ್ಸಿಕಾಂ (ದಪ್ಪ ಮೆಣಸಿನಕಾಯಿ), ಕೋಸು, ಮೆಣಸಿನಕಾಯಿ ಇತ್ಯಾದಿ ತರಕಾರಿ ಸಸಿಗಳ ಜತೆಗೆ ಅಡಿಕೆ, ತೆಂಗಿನ ಸಸಿಗಳನ್ನು ವೈಜ್ಞಾನಿಕವಾಗಿ ಬೆಳೆಸಿ ಅಗ್ಗದ ದರದಲ್ಲಿ ರೈತರಿಗೆ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೇವಾ ಶುಲ್ಕ ಪಡೆದು ರೈತರಿಗೆ ದಾಳಿಂಬೆ ಸಸಿಗಳನ್ನು ಬೆಳಸಿಕೊಡುವ ಕಾಯಕದಲ್ಲಿಯೂ ತೊಡಗಿಕೊಂಡಿದ್ದಾರೆ.ಕೇವಲ ನರ್ಸರಿಗೆ ಸೀಮಿತವಾಗದೇ ತೆಂಗು, ಬಾಳೆ, ಅಡಕೆ ಹಾಗೂ ದಾಳಿಂಬೆ ಕೃಷಿಯಲ್ಲಿಯೂ ತೊಡಗಿಕೊಂಡಿರುವ ಜಗದೀಶ್, ಸುಮಾರು 5 ತಿಂಗಳ ಹಿಂದೆ 1.5 ಎಕರೆ ಜಮೀನಿನಲ್ಲಿ 450 ದಾಳಿಂಬೆ ಸಸಿಗಳನ್ನು ಸ್ವಂತವಾಗಿ ನಾಟಿ ಮಾಡಿ ಸಾವಯವ ಪದ್ಧತಿಯಲ್ಲಿ ಬೆಳೆಸುತ್ತಿದ್ದಾರೆ. ಅದರ ಜತೆಗೆ, ಶ್ರೀಗಂಧದ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಪ್ರಾಯೋಗಿಕವಾಗಿ ಕೈಗೊಂಡಿರುವ ಸಾವಯವ ದಾಳಿಂಬೆ ಕೃಷಿ ಬಗ್ಗೆ ಹೆಮ್ಮೆ ಪಡುವ ಜಗದೀಶ್ ಜನರಿಗೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಕೊಡಬೇಕು ಎನ್ನುವುದು ನನ್ನ ಧ್ಯೇಯ ಎನ್ನುತ್ತಾರೆ.ನರ್ಸರಿ ಹಾಗೂ ತಮ್ಮ ಕೃಷಿ ಚಟುವಟಿಕೆಗಳಿಗಾಗಿ 15ಕ್ಕೂ ಹೆಚ್ಚು ಮಂದಿ ಸ್ಥಳೀಯರಿಗೆ ಉದ್ಯೋಗ ನೀಡಿರುವ ಜಗದೀಶ್, ಆದರ್ಶ ಕೃಷಿಕರಾಗಿದ್ದಾರೆ. ತಮ್ಮ ಅನುಭವಗಳನ್ನು ಇತರ ರೈತರೊಂದಿಗೆ ಹಂಚಿಕೊಳ್ಳುವುದರ ಜತೆಗೆ ಕೃಷಿಯನ್ನೇ ಉದ್ಯೋಗವನ್ನಾಗಿಸಿಕೊಂಡಿದ್ದಾರೆ.ವೈಜ್ಞಾನಿಕವಾಗಿ ಹಾಗೂ ಪ್ರಾಮಾಣಿಕವಾಗಿ ಕೃಷಿಯಲ್ಲಿ ತೊಡಗಿಕೊಂಡರೆ ಯಾವುದೇ ಕಾರಣಕ್ಕೂ ಬೆಳೆ ನಷ್ಟವಾಗುವುದಿಲ್ಲ. ರೈತರು ಕೃಷಿ ಸಲಹೆಗಾರರ ಮಾರ್ಗದರ್ಶನ ಪಡೆದುಕೊಂಡರೆ ಉತ್ತಮ ಬೆಳೆ ಪಡೆಯುವುದರ ಜತೆಗೆ ಆರ್ಥಿಕವಾಗಿಯೂ  ಅಭಿವೃದ್ಧಿ  ಕಾಣಬಹುದು ಎನ್ನುತ್ತಾರೆ ಜಗದೀಶ್.

ಬಿ.ಕಾಂ. ಪದವೀಧರನಾದರೂ ಸರ್ಕಾರಿ ಕೆಲಸ ಅಥವಾ ಖಾಸಗಿ ಉದ್ಯೋಗದ ವ್ಯಾಮೋಹವಿಲ್ಲದೆ ಆಸಕ್ತಿಯಿಂದ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಜಗದೀಶ್ ಮಾದರಿ ರೈತನಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

 

ಪ್ರತಿಕ್ರಿಯಿಸಿ (+)