ಗುರುವಾರ , ಮೇ 13, 2021
19 °C

ಪದವಿ ಶಿಕ್ಷಣದ ಕನಸಿಗೆ ರೆಕ್ಕೆ

ಎಸ್. ಸಂಪತ್ Updated:

ಅಕ್ಷರ ಗಾತ್ರ : | |

ಯಾರಾದರೂ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಪ್ರಾರಂಭ ಮಾಡಿದರೆ ಸಾಕು ಅವರಿಗೆ ಉನ್ನತ ಶಿಕ್ಷಣ ಎಂಬುದು ಗಗನ ಕುಸುಮವಾಗಿ ಬಿಡುತ್ತದೆ ಎಂಬ ಮಾತುಗಳಿವೆ.

 

ಚಿಕ್ಕಂದಿನಿಂದ ಕಂಡ ಪದವಿ, ಸ್ನಾತಕೋತ್ತರ ಪದವಿಯ ಕನಸುಗಳಿಗಂತೂ ಇಲ್ಲಿ `ಬ್ರೇಕ್~ ಬಿದ್ದುಬಿಡುತ್ತದೆ. ತನ್ನ ಜತೆಯಲ್ಲಿಯೇ ವ್ಯಾಸಂಗ ಮಾಡಿದವರು, ತನಗಿಂತಲೂ ಚಿಕ್ಕವರು ಉನ್ನತ ಶಿಕ್ಷಣ ಪೂರ್ಣಗೊಳಿಸಿ ಜ್ಞಾನಾರ್ಜನೆ ಮಾಡಿಕೊಳ್ಳುತ್ತಿದ್ದರೆ ಪ್ರಾಥಮಿಕ ಶಾಲಾ ಶಿಕ್ಷಕರು ಕೈಕೈ ಹಿಸುಕಿಕೊಂಡು ಅಲ್ಪ ತೃಪ್ತಿಗೆ ನಿಟ್ಟುಸಿರು ಬಿಡುವಂತ ಸ್ಥಿತಿ ಇದೆ.ಪ್ರೌಢಶಾಲಾ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರದ್ದು ಇದಕ್ಕಿಂತ ಭಿನ್ನವಾದ ಸ್ಥಿತಿಯೇನೂ ಅಲ್ಲ. ಪದವಿ ಪೂರ್ಣಗೊಳಿಸಿ ಬಿ.ಎಡ್ ಪದವಿ ಪಡೆದು ಪ್ರೌಢಶಾಲಾ ಶಿಕ್ಷಕರಾಗಿ ಸರ್ಕಾರಿ ಸೇವೆಗೆ ಸೇರ್ಪಡೆಯಾದರೆ ಇವರ ಸ್ನಾತಕೋತ್ತರ ಶಿಕ್ಷಣಕ್ಕೆ ಮೂಗುದಾರ ಬಿಗಿದಂತೆಯೇ.ಇನ್ನು ಸ್ನಾತಕೋತ್ತರ ಪದವಿ ಪಡೆದು  ಸರ್ಕಾರಿ ಅಥವಾ ಅನುದಾನಿತ ಪಿ.ಯು ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇರ್ಪಡೆಯಾದರೆ ಅವರು ಸಂಶೋಧನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನೂರೆಂಟು ಸಮಸ್ಯೆಗಳು ಎದುರಾಗುತ್ತವೆ.ಆದರೆ ಸರ್ಕಾರಿ ಅಥವಾ ಅನುದಾನಿತ ಪದವಿ ಕಾಲೇಜುಗಳಲ್ಲಿ ಅಥವಾ ವಿಶ್ವವಿದ್ಯಾಲಯಗಳ ಪಿ.ಜಿ ಕೇಂದ್ರಗಳಲ್ಲಿ ಸಹಾಯಕ ಪ್ರಾಧ್ಯಾಪಕ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಉನ್ನತ ವ್ಯಾಸಂಗ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಯುಜಿಸಿ ಸಾಕಷ್ಟು ಅವಕಾಶ ಕಲ್ಪಿಸಿದೆ.ದೇಶದಾದ್ಯಂತ ಯುಜಿಸಿ `ಫ್ಯಾಕಲ್ಟಿ ಇಂಪ್ರೂವ್‌ಮೆಂಟ್ ಪ್ರೋಗ್ರಾಮ್~ (ಎಫ್‌ಐಪಿ) ಅನ್ನು ಜಾರಿಗೊಳಿಸಿ, ಆಸಕ್ತರಿಗೆ ಎರಡು ವರ್ಷಗಳ ಕಾಲ ವೇತನ ಸಹಿತ ರಜೆ ನೀಡುತ್ತಿದೆ. ಅಲ್ಲದೆ ಸಂಶೋಧನೆಗೆ ಪ್ರೋತ್ಸಾಹಿಸಲು ಫೆಲೋಶಿಪ್‌ಗಳನ್ನು ನೀಡಿ ಉತ್ತೇಜಿಸುತ್ತಿದೆ. ಇಂತಹ ಸೌಲಭ್ಯ ನಮಗಿಲ್ಲ ಎಂಬುದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಅಳಲು.ಪುಟಾಣಿಗಳೊಡನೇ ಜೀವನ

ದ್ವಿತೀಯ ಪಿ.ಯು.ಸಿ ವ್ಯಾಸಂಗದ ನಂತರ ಡಿ.ಎಡ್/ಟಿ.ಸಿ.ಎಚ್ ಮಾಡಿ ಸರ್ಕಾರಿ ಅಥವಾ ಅನುದಾನಿತ ಶಾಲೆಯಲ್ಲಿ ಶಿಕ್ಷಕರಾದವರಿಗೆ ನಿತ್ಯ ಬೆಳಿಗ್ಗೆಯಿಂದ ಸಂಜೆಯವರೆಗೆ ಸಣ್ಣ ಮಕ್ಕಳಿಗೆ ಅಕ್ಷರ ಕಲಿಸುವ ಕಾಯಕ.ಜೊತೆಗೆ ಅವರ ಮಾನಸಿಕ, ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೂ ಸಹಕಾರಿಯಾಗಬೇಕಾದ ಜವಾಬ್ದಾರಿಯೂ  ಇದೆ. ಈ ಜವಾಬ್ದಾರಿಗಳ ನಡುವೆ ಉನ್ನತ ಶಿಕ್ಷಣ ಮಾಡುವುದು ಕಷ್ಟವಾದ್ದರಿಂದ  ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗದ ಕನಸನ್ನೇ ಹಲವಾರು ಶಿಕ್ಷಕರು ಚಿವುಟಿ ಹಾಕಿದ್ದಾರೆ.ಕೆಲವರು ವಿವಿಧ ವಿ.ವಿಗಳಿಂದ ದೂರ ಶಿಕ್ಷಣದ ಮೂಲಕ ಉನ್ನತ ಶಿಕ್ಷಣ ವ್ಯಾಸಂಗ ಮಾಡಿದ್ದಾರಾದರೂ, ಇತ್ತ ವ್ಯಾಸಂಗಕ್ಕೂ ಅತ್ತ ವೃತ್ತಿಗೂ ಸರಿಯಾದ ನ್ಯಾಯ ಒದಗಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಎಂಬಂತಹ ಆರೋಪ ಇದೆ.ಯುಜಿಸಿ ವೇತನ ಶ್ರೇಣಿ ಪಡೆಯುತ್ತಿರುವ ಪ್ರಾಧ್ಯಾಪಕ ವರ್ಗಕ್ಕೆ ಹಲವಾರು ಬಗೆಯ ಅವಕಾಶಗಳನ್ನು ಕಲ್ಪಿಸಿರುವ ಸರ್ಕಾರ, ಭವಿಷ್ಯದ ಪ್ರಜೆಗಳಿಗೆ ಭದ್ರ ಬುನಾದಿ ಹಾಕುವ ಪ್ರಾಥಮಿಕ ಶಾಲಾ ಶಿಕ್ಷಕರ ಉನ್ನತ ಶಿಕ್ಷಣದ ಕನಸಿಗೇಕೆ ಪ್ರೋತ್ಸಾಹ ನೀಡುತ್ತಿಲ್ಲ ಎಂಬ ಅಳಲು ಸಹಜ.ಎಚ್ಚೆತ್ತುಕೊಂಡ ಸರ್ಕಾರ

ಪ್ರಾಥಮಿಕ ಶಾಲಾ ಶಿಕ್ಷಕರ ಈ ರೀತಿಯ ಅಳಲು ಅದು ಹೇಗೋ ಸರ್ಕಾರದ ಕಿವಿಗೆ ಮುಟ್ಟಿದೆ. ಯುಜಿಸಿ ಅನುಸರಿಸುತ್ತಿರುವ ಎಫ್‌ಐಪಿ ಕಾರ್ಯಕ್ರಮದ ಮಾದರಿಯಲ್ಲಿಯೇ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಜುಲೈ ಅಂತ್ಯದಲ್ಲಿ ಆದೇಶವೊಂದನ್ನು ಹೊರಡಿಸಿದೆ.ಈ ಆದೇಶ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ, ಉನ್ನತ ವ್ಯಾಸಂಗದ ಮಹೋನ್ನತ ಕನಸುಗಳನ್ನು ಕಟ್ಟಿಕೊಂಡಿರುವ ಶಿಕ್ಷಕರ ಕಂಗಳಲ್ಲಿ ಇದೀಗ ಹೊಸ ಆಶಾಕಿರಣ ಮೂಡಿಸಿದೆ.ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪದವಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿರುವ ಸರ್ಕಾರ ಮೂರು ವರ್ಷಗಳ ಕಾಲ ವೇತನ ಸಹಿತ ನಿಯೋಜಿಸಲು ನಿರ್ಧರಿಸಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ (ಪ್ರಾಥಮಿಕ ಶಿಕ್ಷಣ) ದೇವು ಪ್ರಕಾಶ್ ಅವರು ಆದೇಶವನ್ನೂ ಹೊರಡಿಸಿದ್ದಾರೆ. ಇದರ ಫಲವಾಗಿ ಈಗಾಗಲೇ ನೂರಾರು ಪ್ರಾಥಮಿಕ ಶಾಲಾ ಶಿಕ್ಷಕರು ಪದವಿ ವ್ಯಾಸಂಗಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ.ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ವಿಶೇಷವಾಗಿ ವಿಜ್ಞಾನ, ಗಣಿತ, ಆಂಗ್ಲ ಭಾಷಾ ಶಿಕ್ಷಕರ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಬಿ.ಎ ಮತ್ತು ಬಿ.ಎಸ್ಸಿ ವ್ಯಾಸಂಗಕ್ಕೆ ವೇತನ ಸಹಿತವಾಗಿ ನಿಯೋಜಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ.

 ಸರ್ಕಾರದ ಈ ಸೌಲಭ್ಯವನ್ನು ಪಡೆದುಕೊಳ್ಳುವವರಿಗೆ ಕೆಲವೊಂದು ಷರತ್ತುಗಳನ್ನೂ ಸಹ ಸರ್ಕಾರ ವಿಧಿಸಿದೆ.`ಈ ಸೌಕರ್ಯದಡಿ ಪದವಿ ಪಡೆಯುವ ಶಿಕ್ಷಕರು ನಂತರ ಬಿ.ಎಡ್ ಕೋರ್ಸ್ ವ್ಯಾಸಂಗ ಮಾಡಿ ಪ್ರೌಢಶಾಲೆಗೆ ಬಡ್ತಿ ಪಡೆಯಬಹುದು. ಅಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದರೆ ಪಿ.ಯು ಕಾಲೇಜಿಗೂ ಬಡ್ತಿ ಪಡೆಯಬಹುದು. ಜ್ಞಾನಾರ್ಜನೆಯ ಜತೆಗೆ ವೃತ್ತಿಯಲ್ಲಿ ಬೆಳವಣಿಗೆ ಹೊಂದಲು ಸರ್ಕಾರ ಕಲ್ಪಿಸಿಕೊಟ್ಟಿರುವ ಅವಕಾಶ ನೆರವಾಗುತ್ತದೆ~ ಎಂದು ಪ್ರಾಥಮಿಕ ಶಾಲಾ ಶಿಕ್ಷಕರು ತಿಳಿಸುತ್ತಾರೆ.

 ಕನಸುಗಳಿಗೆ ರೆಕ್ಕೆ

ಬಿ.ಎ ಪದವಿ ಪಡೆದಿದ್ದ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಪ್ರತಿ ವರ್ಷ ಕೆಲವೇ ಕೆಲವು ಶಿಕ್ಷಕರಿಗೆ ಬಿ.ಎಡ್ ವ್ಯಾಸಂಗ ಮಾಡಲು ಸರ್ಕಾರ ಅನುಮತಿ ನೀಡುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಬಿ.ಎ ಮತ್ತು ಬಿ.ಎಸ್ಸಿ ಪದವಿ ವ್ಯಾಸಂಗಕ್ಕೆ ಮೂರು ವರ್ಷ ವೇತನ ಸಹಿತ ನಿಯೋಜಿಸಲು ಸರ್ಕಾರ ಕ್ರಮ ಕೈಗೊಂಡಿದೆ.ಇದರಿಂದ ಉನ್ನತ ಶಿಕ್ಷಣ ಮಾಡಬಯಸುವ ಶಿಕ್ಷಕರ ಕನಸುಗಳಿಗೆ ರೆಕ್ಕೆ ಪುಕ್ಕ ಕೊಟ್ಟಂತಾಗಿದೆ. ಈ ಸೌಲಭ್ಯವನ್ನು ಸರಿಯಾಗಿ ಬಳಸಿಕೊಂಡರೆ ಶಿಕ್ಷಕರ ಜ್ಞಾನಾರ್ಜನೆ ಆಗುವುದರ ಜತೆಗೆ ಶಿಕ್ಷಣ ಇಲಾಖೆಯ ಪ್ರಗತಿಯೂ ಆಗುತ್ತದೆ ಎಂದು ರಾಮನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಮಾದೇಗೌಡ ಪ್ರತಿಕ್ರಿಯಿಸುತ್ತಾರೆ.ಪ್ರಸಕ್ತ ವರ್ಷ ರಾಮನಗರ ಜಿಲ್ಲೆಯಿಂದ 24 ಶಿಕ್ಷಕರು ಪದವಿ ವ್ಯಾಸಂಗದ ಅವಕಾಶ ಪಡೆದಿದ್ದಾರೆ. ಇದೇ ರೀತಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟಾರೆ ನೂರಾರು ಶಿಕ್ಷಕರಿಗೆ ಅನುಕೂಲವಾಗಿದೆ ಎನ್ನುತ್ತಾರೆ ಅವರು.ಶಿಕ್ಷಕರ ಉನ್ನತ ಶಿಕ್ಷಣಕ್ಕೆ 10 ಷರತ್ತುಗಳು

ಶಿಕ್ಷಕರು ಕಾಯಂ ಪೂರ್ವ ಸೇವಾವಧಿ ಮುಗಿಸಿ ಕನಿಷ್ಠ 5 ವರ್ಷಗಳ ಸೇವೆ ಸಲ್ಲಿಸಿದ್ದಲ್ಲಿ ಹಾಗೂ 45 ವರ್ಷಗಳ ವಯೋಮಿತಿ ಒಳಗೆ ಇದ್ದಲ್ಲಿ ಮಾತ್ರ ವ್ಯಾಸಂಗಕ್ಕೆ ನಿಯೋಜಿಸಬೇಕು.ನಿಯೋಜನೆಯು ಒಟ್ಟಾರೆ ವೃಂದ ಬಲದ ಶೇ 5ರಷ್ಟನ್ನು ಮೀರಬಾರದು.ವಿಜ್ಞಾನ ಶಿಕ್ಷಕರಾಗಿದ್ದಲ್ಲಿ ಬಿ.ಎಸ್ಸಿ (ಪಿಸಿಎಂಬಿ/ಸಿಬಿಜಡ್) ವ್ಯಾಸಂಗಕ್ಕೆ ನಿಯೋಜಿಸಬೇಕು.ಬಿ.ಎ ವ್ಯಾಸಂಗ ಮಾಡುವ ಶಿಕ್ಷಕರು ಆಂಗ್ಲ (ಐಚ್ಛಿಕ) ವಿಷಯವನ್ನು ಒಳಗೊಂಡ ಸಂಯೋಜನೆಯನ್ನು ಮಾತ್ರ ತೆಗೆದುಕೊಳ್ಳಬೇಕು. ಪಿ.ಯು.ಸಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ ಅಥವಾ ಪ್ರಥಮ ಭಾಷೆಯಾಗಿ ಆಂಗ್ಲ ಭಾಷೆಯನ್ನು ಓದಿದ ಅಥವಾ ದ್ವಿತೀಯ ಭಾಷೆಯಲ್ಲಿ ಶೇ 60ರಷ್ಟು ಅಂಕಗಳಿಸಿರುವವರಿಗೆ ಮಾತ್ರ ಬಿ.ಎ (ಐಚ್ಛಿಕ ಇಂಗ್ಲಿಷ್) ವ್ಯಾಸಂಗ ಮಾಡಲು ಅವಕಾಶ.ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಿ.ಎ ಆಂಗ್ಲ ವ್ಯಾಸಂಗ ಮಾಡುವ ಶಿಕ್ಷಕರ ಅಂಕಪಟ್ಟಿಗಳನ್ನು ಪರಿಶೀಲಿಸಿ ನಂತರ ಶಿಕ್ಷಕರನ್ನು ವ್ಯಾಸಂಗಕ್ಕೆ ಸೇರಿಕೊಳ್ಳಲು ಬಿಡುಗಡೆ ಮಾಡಬೇಕು. ಬಿ.ಎ ವ್ಯಾಸಂಗ ಮಾಡವ ಶಿಕ್ಷಕರಿಂದ ಆಂಗ್ಲ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಒಳಗೊಂಡ ಸಂಯೋಜನೆಯ ಕೋರ್ಸ್ ಮಾಡುವುದಾಗಿ ರೂ 20ರ ಮೌಲ್ಯದ ಬಾಂಡ್ ಪೇಪರ್‌ನಲ್ಲಿ ಒಪ್ಪಿಗೆ ಪತ್ರ ಪಡೆದುಕೊಳ್ಳಬೇಕು.ಈಗಾಗಲೇ ಪದವಿ ಪಡೆದಿರುವವರು ಇನ್ನೊಮ್ಮೆ ಪದವಿ ಪಡೆಯಲು ಅವಕಾಶ ಇಲ್ಲ.ಶಿಕ್ಷಕರು ಪದವಿ ಪೂರೈಸಿ ನಂತರ ಕನಿಷ್ಠ 10 ವರ್ಷ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವುದಾಗಿ ರೂ 10 ಮೌಲ್ಯದ ಬಾಂಡ್ ಪೇಪರ್‌ನಲ್ಲಿ ಸಮ್ಮತಿ ಸೂಚಿಸಿ ಒಪ್ಪಿಗೆ ನೀಡಿರುವ ಪತ್ರ ನೀಡಬೇಕು.ವ್ಯಾಸಂಗ ಪೂರೈಸದಿದ್ದಲ್ಲಿ ವ್ಯಾಸಂಗದ ಅವಧಿಯ ವೇತನ ಭತ್ಯೆಗಳನ್ನು ಸಂಪೂರ್ಣವಾಗಿ ವಸೂಲು ಮಾಡುವ ಬಗ್ಗೆ ನಮೂನೆ 19ನ್ನು ಶಿಕ್ಷಕರಿಂದ ಪಡೆದು ಸೇವಾ ಪುಸ್ತಕದಲ್ಲಿ ಕಡ್ಡಾಯವಾಗಿ ಲಗತ್ತಿಸಬೇಕು.ನಿಗದಿತ ಅವಧಿಯಲ್ಲಿ ವ್ಯಾಸಂಗವನ್ನು ಪೂರ್ಣಗೊಳಿಸದಿದ್ದಲ್ಲಿ ಒಂದು ವರ್ಷದ ವಿಸ್ತರಣಾವಧಿಯನ್ನು ನೌಕರರ ಹಕ್ಕಿನಲ್ಲಿರುವ ರಜೆಯೊಂದಿಗೆ ಪೂರೈಸಲು ಅವಕಾಶಗಳನ್ನು ಕಲ್ಪಿಸಲಾಗುವುದು.ನಿಯೋಜನೆಗೊಂಡ ಶಿಕ್ಷಕರು ಜಿಲ್ಲೆಯ ಒಳಗೆ ವ್ಯಾಸಂಗ ಮಾಡಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.