ಪದವಿ ಹಂತ-ನ್ಯಾನೊ ಅಧ್ಯಯನ ಸಲ್ಲ

ಮಂಗಳವಾರ, ಮೇ 21, 2019
24 °C

ಪದವಿ ಹಂತ-ನ್ಯಾನೊ ಅಧ್ಯಯನ ಸಲ್ಲ

Published:
Updated:

ಮಂಗಳೂರು: ಐಟಿ, ಬಿಟಿ ಮತ್ತು ನ್ಯಾನೊ ಎಂಬ ಮೂರು ಅಲೆಯ ಅಧ್ಯಯನ ಇಡೀ ಶಿಕ್ಷಣ ಕ್ರಮವನ್ನೇ ಬುಡಮೇಲು ಮಾಡಿಬಿಟ್ಟಿದೆ. ಈಗಾಗಲೇ ಐಟಿ, ಬಿಟಿಯಿಂದ ಮೂಲ ವಿಜ್ಞಾನದ ಅಧ್ಯಯನಕ್ಕೆ ಭಾರಿ ತೊಡಕಾಗಿದ್ದು, ಪದವಿ ಹಂತದಲ್ಲಿ ನ್ಯಾನೊ ಅಧ್ಯಯನ ಆರಂಭವಾದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿಯ (ನ್ಯಾಕ್) ನಿರ್ದೇಶಕ ಪ್ರೊ.ಎಚ್.ಎ.ರಂಗನಾಥ ಎಚ್ಚರಿಸಿದ್ದಾರೆ.ಮಂಗಳೂರು ವಿಶ್ವವಿದ್ಯಾಲಯದ 31ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸೋಮವಾರ ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಉಪನ್ಯಾಸ ನೀಡಿದ ಅವರು, ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಅಥವಾ ಘಟಕ ಕಾಲೇಜುಗಳಲ್ಲಿನ ಪದವಿ ಹಂತದಲ್ಲಿ ವಿದ್ಯಾರ್ಥಿಗಳಿಗೆ ಮೂಲ ವಿಜ್ಞಾನ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅವರ ಆಸಕ್ತಿ ನೋಡಿಕೊಂಡು ಉನ್ನತ ವ್ಯಾಸಂಗದಲ್ಲಿ ಅವರು ಹೊಸ ಅಲೆಯ ವಿಜ್ಞಾನದ ವ್ಯಾಸಂಗ ಮಾಡಬಹುದು ಎಂದು ಕಿವಿಮಾತು ಹೇಳಿದರು.ಈ ಮೊದಲು ವಿಶ್ವವಿದ್ಯಾಲಯ ಎಂದರೆ ಸಮಗ್ರ ಅಧ್ಯಯನದ ಕೇಂದ್ರವಾಗಿತ್ತು. ಆದರೆ ಬರಬರುತ್ತಾ ವೈದ್ಯಕೀಯ ವಿಜ್ಞಾನ ವಿಭಾಗ, ತಾಂತ್ರಿಕ ಶಿಕ್ಷಣ ವಿಭಾಗ ಪ್ರತ್ಯೇಕಗೊಂಡವು. ಇದು ಒಂದು ದೇಹದಂತಿದ್ದ ವಿಶ್ವವಿದ್ಯಾಲಯದ ಅಂಗಛೇದನವಲ್ಲದೆ ಮತ್ತೇನೂ ಅಲ್ಲ!

ವೈದ್ಯವಿಜ್ಞಾನ ವಿವಿ, ತಾಂತ್ರಿಕ ವಿವಿಗಳು ಇಂದು ಶ್ರೀಮಂತವಾಗಿದ್ದು, ಇತರೆ ಸಾಂಪ್ರದಾಯಿಕ ವಿವಿಗಳು ಆರ್ಥಿಕ ಬಿಕ್ಕಟ್ಟು, ಉಪನ್ಯಾಸಕರ ಕೊರತೆಯಂತಹ ಸಂಕಷ್ಟ ಎದುರಿಸುತ್ತಿವೆ. ಇದೆಲ್ಲದರ ನೇರ ಹೊಡೆತ ಬೀಳುವುದು ವಿದ್ಯಾರ್ಥಿಗಳಿಗೇ. ಅವರ ಭವಿಷ್ಯಕ್ಕೆ ತೊಂದರೆಯಾಗದ ರೀತಿಯ ವಾತಾವರಣವನ್ನು ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಕಲ್ಪಿಸಬೇಕಿದೆ ಎಂದು ರಂಗನಾಥ ಗಮನ ಸೆಳೆದರು.`ನ್ಯಾಕ್~ ಮಾನ್ಯತೆ ಎಂಬುದು ವಿವಿ ಮತ್ತು ಕಾಲೇಜುಗಳ ಆರೋಗ್ಯದ ತಪಾಸಣೆ ಇದ್ದಂತೆ. ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಇಂತಹ ಮೌಲ್ಯಾಂಕನಕ್ಕೆ ಒಡ್ಡಿಕೊಳ್ಳುವುದು ಅಗತ್ಯ. `ನ್ಯಾಕ್~ ಮೌಲ್ಯಮಾಪನ ಈಗಾಗಲೇ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಅವರು ಹೇಳಿದರು.ದೇಶದಲ್ಲಿ ಇಂದು 500ಕ್ಕೂ ಅಧಿಕ  ವಿಶ್ವವಿದ್ಯಾಲಯಗಳು, 30 ಸಾವಿರಕ್ಕೂ ಅಧಿಕ ಕಾಲೇಜುಗಳಿವೆ. ಇನ್ನೂ 1700 ವಿವಿಗಳು, 35 ಸಾವಿರಕ್ಕೂ ಅಧಿಕ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆದಿವೆ. ಇದು ಸಾಧ್ಯವಾದೀತು ಕೂಡ. ಆದರೆ ಅದಕ್ಕೆ ತಕ್ಕಂತಹ ಮೂಲಸೌಕರ್ಯಗಳನ್ನು ಸಹ ಒದಗಿಸುವುದು ಸಾಧ್ಯವಿದೆಯೇ? ಅಗತ್ಯದ ಬೋಧಕ ಸಿಬ್ಬಂದಿ, ಕಟ್ಟಡ, ಇತರ ಸೌಕರ್ಯಗಳು ಇಲ್ಲದೆ ಕಾಲೇಜು/ವಿವಿ ಆರಂಭಿಸುವುದೆಂದರೆ ವಿದ್ಯಾರ್ಥಿಗಳಿಗೆ ಮಾಡುವಂತಹ ವಂಚನೆಯೇ ಆಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ ಮಾತನಾಡಿ, ಇಂದು ಪದವಿ ಶಿಕ್ಷಣ ಪಡೆದ ಶೇ. 10ರಷ್ಟು ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದ ಶೇ. 18ರಷ್ಟು ಮಂದಿ ಮಾತ್ರ ನೌಕರಿ ಮಾಡುವ ಅರ್ಹತೆ ಗಳಿಸಿರುತ್ತಾರೆ. ಇದು ನಮ್ಮ ಶಿಕ್ಷಣ ಗುಣಮಟ್ಟಕ್ಕೆ ಹಿಡಿದ ಕನ್ನಡಿ. ಜಾಗತಿಕ ಮಟ್ಟದಲ್ಲಿ ನಾವು ಸ್ಪರ್ಧಿಸಬೇಕಾದರೆ ಉತ್ತಮ ಬೋಧಕರ ಜತೆಗೆ ಇತರೆ ಮೂಲಸೌಕರ್ಯಗಳನ್ನೂ ಒದಗಿಸಿ ಶಿಕ್ಷಣ ಕ್ಷೇತ್ರವನ್ನು ಸುಧಾರಿಸುವ ಅಗತ್ಯವಿದೆ ಎಂದರು.ಕುಲಸಚಿವ ಪ್ರೊ. ಕೆ.ಚಿನ್ನಪ್ಪ ಗೌಡ, ಕುಲಸಚಿವ (ಮೌಲ್ಯಮಾಪನ) ಪ್ರೊ. ಪಿ.ಎಸ್.ಯಡಪಡಿತ್ತಾಯ, ಹಣಕಾಸು ಅಧಿಕಾರಿ ಪಿ.ಪಕೀರಪ್ಪ ಇದ್ದರು. ಬಳಿಕ ಚೆನ್ನೈಯ ರಂಜನಿ ಗುರುಪ್ರಸಾದ್ ಮತ್ತು ಬಳಗದವರು ಸಂಗೀತ ಕಛೇರಿ ನಡೆಸಿಕೊಟ್ಟರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry