`ಪದೇ ಪದೇ' ಮನಸಾಗಿದೆ

7

`ಪದೇ ಪದೇ' ಮನಸಾಗಿದೆ

Published:
Updated:

ತಮ್ಮ ಚಿತ್ರದ `ಮನಸಾಗಿದೆ..' ಹಾಡು ಜನಪ್ರಿಯವಾಗಿರುವ ವಿಚಾರವನ್ನು ತಿಳಿಸಲು `ಪದೇ ಪದೇ' ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು. ಸತೀಶ್ ಆರ್ಯನ್ ಸಂಗೀತ ನಿರ್ದೇಶಿಸಿರುವ `ಪದೇ ಪದೇ' ಚಿತ್ರದ `ಮನಸಾಗಿದೆ..' ಹಾಡನ್ನು ಯೂಟ್ಯೂಬ್‌ನಲ್ಲಿ ಹನ್ನೊಂದು ಲಕ್ಷ ಜನರು ವೀಕ್ಷಿಸಿದ್ದಾರಂತೆ. ಅದು ಅಪ್‌ಲೋಡ್ ಮಾಡಿದ ನಾಲ್ಕೇ ತಿಂಗಳಲ್ಲಿ. ಈ ವಿಚಾರವನ್ನು ಖುಷಿಯಿಂದ ಹೇಳಿಕೊಂಡ ಚಿತ್ರತಂಡ ಇದು ಕನ್ನಡ ಚಿತ್ರರಂಗದಲ್ಲೊಂದು ದಾಖಲೆಯೇ ಸರಿ ಎಂದಿತು.ನಿರ್ದೇಶಕ ನಾಗರಾಜ್ ಪೀಣ್ಯ ಅವರಿಗೆ ಹಾಡಿನ ಜನಪ್ರಿಯತೆ ಅಚ್ಚರಿ ತಂದಿದೆಯಂತೆ. `ಗುಜರಾತ್‌ನ ಭುಜ್‌ನಲ್ಲಿ ಚಿತ್ರದ ಒಂದು ಹಾಡನ್ನು ಚಿತ್ರೀಕರಿಸಲು ನಿರ್ಧರಿಸಲಾಗಿತ್ತು. ಮೊದಲು ಆ ಜಾಗವನ್ನು ನೋಡಲು ಹೋದಾಗ ಮರುಭೂಮಿಯಂತಿತ್ತು. ಆದರೆ ಚಿತ್ರೀಕರಣಕ್ಕಾಗಿ ತಂಡದೊಂದಿಗೆ ಹೋದಾಗ ಮಳೆ ಬಂದು ಹಸಿರಾಗಿತ್ತು.ಅದರಿಂದ ಪ್ಲಾನ್ ಬದಲಾಯಿಸಿ `ಮನಸಾಗಿದೆ' ಹಾಡನ್ನು ಚಿತ್ರೀಕರಿಸಲಾಯಿತು' ಎಂದು ಮಾಹಿತಿ ನೀಡಿದರು. ಪ್ರಸ್ತುತ ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಂಗಳೂರಿನಲ್ಲಿ ಚಿತ್ರೀಕರಣ  ಸಾಗಿದೆಯಂತೆ.ತರುಣ್ ಚಂದ್ರ ತಮ್ಮ `ಸ್ನೇಹಿತರು' ಚಿತ್ರ ಹಿಟ್ ಆದ ಸಂದರ್ಭದಲ್ಲಿ  `ಪದೇ ಪದೇ' ಚಿತ್ರದ ಹಾಡೂ ಹಿಟ್ ಆದ ವಿಚಾರ ಕೇಳಿ ಸಂತಸ ಇಮ್ಮಡಿಯಾಯಿತು ಎಂದರು. ಚಿತ್ರದಲ್ಲಿ ರಾಗ ಸಂಯೋಜಕನ ಪಾತ್ರ ನಿರ್ವಹಿಸುತ್ತಿರುವ ತರುಣ್ ಅದಕ್ಕಾಗಿ ಗಿಟಾರ್ ಕಲಿತರಂತೆ.

ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಅವರು ತಾವು ಕಡೆಯಲ್ಲಿ ರಾಗ ಸಂಯೋಜಿಸಿದ ಈ ಹಾಡು ಹಿಟ್ ಆಗಿದ್ದು ತುಂಬಾ ಸಂತೋಷ ನೀಡಿತು ಎಂದರು.ನಾಯಕಿ ಅಖಿಲಾ, ತಾವು ಇತ್ತೀಚೆಗೆ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಟಾಪ್ ಥ್ರೀಯಲ್ಲಿ ಒಬ್ಬರಾಗಿ ಆಯ್ಕೆಯಾದ ವಿಚಾರವನ್ನು ತಿಳಿಸಿದರು. ಅವರಿಗೆ ಚಿತ್ರದಲ್ಲಿ ಗಾಯಕಿಯಾಗಬೇಕೆಂಬ ಆಸೆ ಇರುವ ಹುಡುಗಿಯ ಪಾತ್ರವಂತೆ `ಮನಸಾಗಿದೆ..' ಹಾಡಿನಲ್ಲಿ ನಾಯಕ ತರುಣ್ ಚಂದ್ರ ಮತ್ತು ಮತ್ತೊಬ್ಬ ನಾಯಕಿ ಮೃದುಲಾ ಸಾಠೆ ನಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry