ಮಂಗಳವಾರ, ನವೆಂಬರ್ 19, 2019
29 °C

ಪದ್ಮನಾಭ ಅರ್ಜಿ ವಜಾ: ಕೆಜೆಪಿಗೆ ಬಿಎಸ್‌ವೈ ಅಧ್ಯಕ್ಷ

Published:
Updated:

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಅವರೇ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಧ್ಯಕ್ಷ ಎಂದು ಕೇಂದ್ರ ಚುನಾವಣಾ ಆಯೋಗ ನೀಡಿದ್ದ ಆದೇಶವನ್ನು ರದ್ದು ಮಾಡುವಂತೆ ಕೋರಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಗುರುವಾರ ವಜಾ ಮಾಡಿದೆ.`ಇದೇ ಅರ್ಜಿಯನ್ನು ಅಧೀನ ನ್ಯಾಯಾಲಯದಲ್ಲಿ ಸಲ್ಲಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯವಿದೆ' ಎಂದು ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರು ಹೇಳಿದರು.`ಕೆಜೆಪಿಯ ಅಧ್ಯಕ್ಷ ನಾನೇ' ಎಂದು ಪ್ರತಿಪಾದಿಸಿ ಪ್ರಸನ್ನಕುಮಾರ್ ಆಯೋಗಕ್ಕೆ ಪತ್ರ ಬರೆದಿದ್ದರು.ಇದಕ್ಕೆ ಸಂಬಂಧಿಸಿದಂತೆ, ಯಡಿಯೂರಪ್ಪ ಮತ್ತು ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ವಿ. ಧನಂಜಯ ಕುಮಾರ್ ಅವರಿಂದ ದಾಖಲೆಗಳನ್ನು ತರಿಸಿಕೊಂಡ ಆಯೋಗ, `ನಮ್ಮಲ್ಲಿರುವ ದಾಖಲೆಗಳ ಪ್ರಕಾರ ಯಡಿಯೂರಪ್ಪ ಅವರೇ ಪಕ್ಷದ ಅಧ್ಯಕ್ಷರು' ಎಂದು ಸ್ಪಷ್ಟನೆ ನೀಡಿತ್ತು.`ನಾನು (ಪ್ರಸನ್ನಕುಮಾರ್) ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಧನಂಜಯ ಕುಮಾರ್ ಹೇಳುತ್ತಿದ್ದಾರೆ. ಆದರೆ ನನ್ನ ಹೆಸರಿನಲ್ಲಿ ನಕಲಿ ರಾಜೀನಾಮೆ ಪತ್ರ ಸಿದ್ಧಪಡಿಸಲಾಗಿದೆ' ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಯಡಿಯೂರಪ್ಪ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ, ಕೆಜೆಪಿಯ ಕಾರ್ಯಕಾರಿ ವ್ಯವಸ್ಥಾಪಕ ಮಂಡಳಿ ಯಾವುದೇ ನಿರ್ಣಯ ಅಂಗೀಕರಿಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಪ್ರತಿಕ್ರಿಯಿಸಿ (+)