ಶನಿವಾರ, ಏಪ್ರಿಲ್ 17, 2021
31 °C

ಪದ್ಮರಾಜ ಆಯೋಗ: ತಡೆ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನ್ಯಾಯಮೂರ್ತಿ ಬಿ.ಪದ್ಮರಾಜ ಆಯೋಗವು ಭೂ ಹಗರಣಗಳ ತನಿಖೆಯನ್ನು ನಡೆಸದಂತೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಮೇ 27ರವರೆಗೆ ವಿಸ್ತರಿಸಿ ಆದೇಶಿಸಿದೆ.‘ಕರ್ನಾಟಕ ಲೋಕಾಯುಕ್ತ ಕಾಯ್ದೆ’ಯನ್ನು ಮೀರಿ ಮುಖ್ಯಮಂತ್ರಿ ವಿರುದ್ಧದ ಭೂ ಹಗರಣಗಳ ತನಿಖೆಯನ್ನು ಆಯೋಗಕ್ಕೆ ವಹಿಸಲಾಗಿದೆ ಎಂದು ದೂರಿ ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಅವರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಕೇಹರ್ ಮತ್ತು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.ಈ ಮಧ್ಯೆ, ಅರ್ಜಿಗೆ ಸಂಬಂಧಿಸಿದಂತೆ ಆಯೋಗವು ಆಕ್ಷೇಪಣಾ ಹೇಳಿಕೆ ಸಲ್ಲಿಸಿದ್ದು, ಆಯೋಗದ ಕಾರ್ಯವ್ಯಾಪ್ತಿಯನ್ನು ಸಮರ್ಥಿಸಿಕೊಂಡಿದೆ. ‘ಯಾವುದೇ ೂರ್ವಗ್ರಹ ಪೀಡಿತವಾಗಿ ಆಯೋಗ ತನಿಖೆ ನಡೆಸುತ್ತಿಲ್ಲ. ತನಿಖಾ ಆಯೋಗವನ್ನು ನೇಮಕ ಮಾಡಿರುವ ಆದೇಶದಿಂದ ಅರ್ಜಿದಾರರಿಗೆ ಯಾವುದೇ ರೀತಿಯ ತೊಂದರೆ ಇಲ್ಲದ ಕಾರಣ, ಅವರಿಗೆ ಇದನ್ನು ಪ್ರಶ್ನಿಸುವ ಹಕ್ಕು ಇಲ್ಲ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಲೋಕಾಯುಕ್ತ ಹಾಗೂ ಆಯೋಗದ ತನಿಖೆಯು ಸಂಪೂರ್ಣವಾಗಿ ವಿಭಿನ್ನವಾಗಿದ್ದು, ಅರ್ಜಿದಾರರು ಕೋರ್ಟ್ ಹಾದಿ ತಪ್ಪಿಸುತ್ತಿದ್ದಾರೆ. ಯಾವುದೇ ಹಗರಣದ ತನಿಖೆಯನ್ನು ಯಾವುದೇ ಇಲಾಖೆ ನಡೆಸುತ್ತಿರುವಾಗ ತನಿಖಾ ಆಯೋಗವನ್ನು ರಚನೆ ಮಾಡಬಾರದು ಎಂಬ ಕಾನೂನು ಎಲ್ಲಿಯೂ ಇಲ್ಲ.ತನಿಖಾ ಆಯೋಗ ರಚಿಸುವ ಪೂರ್ವದಲ್ಲಿ ಲೋಕಾಯುಕ್ತರ ಅನುಮತಿ ಪಡೆದುಕೊಳ್ಳಬೇಕು ಎನ್ನುವ ಅರ್ಜಿದಾರರ ವಾದದಲ್ಲಿ ಹುರುಳಿಲ್ಲ ಎನ್ನುವುದು ಆಯೋಗದ ವಾದ.‘ಯಾವುದೇ ಹಗರಣಗಳಲ್ಲಿ ರಾಜಕೀಯ ಪಕ್ಷಗಳು ಶಾಮೀಲಾಗಿದ್ದರೆ, ಅಂತಹ ಸಂದರ್ಭಗಳಲ್ಲಿ ತನಿಖಾ ಆಯೋಗದ ಬದ್ಧತೆಯನ್ನು ಪ್ರಶ್ನಿಸುವುದು ವಿಷಾದಕರವಾಗಿದೆ. ಇಂತಹ ದುರುದ್ದೇಶಪೂರಿತ ಕ್ರಮಕ್ಕೆ ಕಡಿವಾಣ ಹಾಕುವ ಅಗತ್ಯವಿದೆ.

ನಿವೃತ್ತ ನ್ಯಾಯಮೂರ್ತಿಗಳು ಕೂಡ ಇಂತಹ ಟೀಕೆಗಳಿಗೆ ಗುರಿಯಾಗುತ್ತಿರುವುದು ವಿಪರ್ಯಾಸ. ಹಾಲಿ ಸರ್ಕಾರ ಆಯೋಗವನ್ನು ನೇಮಕ ಮಾಡಿದೆ ಎಂಬ ಮಾತ್ರಕ್ಕೆ ಅದರ ಪರವಾಗಿಯೇ ತೀರ್ಪು ಹೊರಬರುತ್ತದೆ ಅಥವಾ ಸರ್ಕಾರ ಹೇಳಿದಂತೆ ಆಯೋಗ ಕೆಲಸ ಮಾಡುತ್ತದೆ ಎನ್ನುವುದು ನಿರ್ವಿವಾದ’ ಎಂದು ಆಯೋಗ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.