ಪ.ಪಂಗಡಕ್ಕೆ ಸೇರಿಸಲು ಕುಡುಬಿಯರ ಆಗ್ರಹ

7

ಪ.ಪಂಗಡಕ್ಕೆ ಸೇರಿಸಲು ಕುಡುಬಿಯರ ಆಗ್ರಹ

Published:
Updated:

ಉಡುಪಿ: ಗುಡ್ಡಗಾಡು ಸಂಸ್ಕೃತಿಯ ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಒಂದಾಗಿರುವ ಜಿಲ್ಲೆಯಲ್ಲಿನ ಕುಡುಬಿ ಜನಾಂಗ ಪರಿಶಿಷ್ಟ ಜಾತಿಯಲ್ಲಿದ್ದು ತದನಂತರ ಜಾತಿ ಪರಿಷ್ಕರಣೆ ಪಟ್ಟಿ ಸಂದರ್ಭದಲ್ಲಿ ಕೈತಪ್ಪಿ ಹೋಗಿದ್ದು ಈಗಲಾದರೂ ಅದನ್ನು ಸರಿಪಡಿಸಿ ಕುಡುಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಕುಡುಬಿ ಸಮಾಜೋದ್ಧಾರಕ ಸಂಘ ಇಲ್ಲಿ ಆಗ್ರಹಿಸಿದೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಘದ ಕಾರ್ಯದರ್ಶಿ ನಾರಾಯಣ ನಾಯ್ಕ, `ಅತ್ಯಂತ ಹಿಂದುಳಿದ ಸಮುದಾಯ ನಮ್ಮದು. ಗೋವಾದ ಮೂಲ ನಿವಾಸಿಗಳಾಗಿದ್ದ ನಮ್ಮ ಹಿರಿಯರು 16ನೇ ಶತಮಾನದಲ್ಲಿ ಪೋರ್ಚುಗೀಸರ ದಬ್ಬಾಳಿಕೆ, ಮತಾಂತರ ಭೀತಿಯಿಂದ ರಾಜ್ಯಕ್ಕೆ ವಲಸೆ ಬಂದಿದೆ~ ಎಂದರು.`ಏಳು ವರ್ಷಗಳ ಹಿಂದೆ ಧಾರವಾಡ ವಿಶ್ವವಿದ್ಯಾಲಯದಿಂದ ಸರ್ಕಾರವೇ ನೇಮಕ ಮಾಡಿದ ಸಮಿತಿಯೊಂದು ಕುಡುಬಿ ಜನಾಂಗವನ್ನು ಪರಿಶಿಷ್ಟ ಪಟ್ಟಿಗೆ ಸೇರಿಸಲು ಜನಾಂಗದ ಕುಲಶಾಸ್ತ್ರೀಯ ಅಧ್ಯಯನ ನಡೆಸಿತ್ತು. ಈ ಅಧ್ಯಯನದ ವರದಿಯನ್ನು  2010ರ ಮೇ ತಿಂಗಳಲಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ವರದಿಯ ಶಿಫಾರಸುಗಳನ್ನು ಸರ್ಕಾರ ಜಾರಿಗೆ ತರಬೇಕು~ ಎಂದು ಅವರು ಆಗ್ರಹಿಸಿದರು.`ಕುಡುಬಿ ಜನಾಂಗವು ಗ್ರಾಮ ಮಟ್ಟದಲ್ಲಿನ ಸಂಘಟಿತ ಸಮುದಾಯ (ಕೂಡುಕಟ್ಟು) ವಾಗಿದ್ದು ಸಾಮಾಜಿಕ ಜೀವನದ ಆಚಾರ ವಿಚಾರ, ಸಂಸ್ಕೃತಿ ಸಂಪ್ರದಾಯ, ಪದ್ಧತಿ, ಆಚರಣೆಗಳು ವಿಭಿನ್ನವಾಗಿದೆ. ಪ್ರತಿ ವರ್ಷ ನಡೆಯುವ 5 ದಿನಗಳ ಹೋಳಿ ಹಬ್ಬ ಜನಾಂಗದ ದೊಡ್ಡ ಹಬ್ಬ~ ಎಂದರು.`ಜಿಲ್ಲೆಯಲ್ಲಿ 44 ಕೂಡುಕಟ್ಟುಗಳಿವೆ. ಜಿಲ್ಲೆಯಲ್ಲಿ ಕುಡುಬಿಗಳ ಜನಸಂಖ್ಯೆ 30 ಸಾವಿರದಷ್ಟಿದ್ದರೂ ಈವರೆಗೂ  ಸರ್ಕಾರದಿಂದ ಸಮರ್ಪಕ ಸೌಲಭ್ಯ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಸಮಾವೇಶ ಹಮ್ಮಿಕೊಂಡು, ಒಕ್ಕೂಟ ರಚಿಸಲಾಗುತ್ತಿದೆ~ ಎಂದರು.`ಹೋಳಿ ವೇಷಧಾರಿಯ ವೇಷಭೂಷಣಕ್ಕೆ ಸುಮಾರು ರೂ.8-10 ಸಾವಿರದವರೆಗೆ ವೆಚ್ಚ ತಗಲುತ್ತಿದ್ದು ದುಡಿಮೆಯ ಹಣದಿಂದ ಇದನ್ನು ಭರಿಸುವುದು ಕಷ್ಟಕರ. ಹೋಳಿಯಂತಹ ವಿಶಿಷ್ಟ ಸಾಂಸ್ಕೃತಿಕ ಜನಪದ ಪರಂಪರೆಯ ಉಳಿವಿಗಾಗಿ ವಾದ್ಯ ಪರಿಕರಗಳು ಹಾಗೂ ಪೂರಕ ಸಾಮಗ್ರಿಖರೀದಿಗೆ ಸರ್ಕಾರದ ಸಹಾಯಧನ ಸಿಗುವಂತೆ ಮಾಡಬೇಕು, ಸರ್ಕಾರ ನೀಡುವ ಪ್ರಶಸ್ತಿಗಳಿಗೆ ಕುಡುಬಿ ಕಲಾವಿದರನ್ನು ಪರಿಗಣಿಸಬೇಕು~ ಎಂದು ಆಗ್ರಹಿಸಿದರು.`ಬಹುತೇಕ ಕುಡುಬಿಯರು ಕೃಷಿಕೂಲಿಕಾರರು, ಸಣ್ಣ ಬೇಸಾಯಗಾರರಾಗಿದ್ದು ಶಿಕ್ಷಣ ವಂಚಿತರು. ಕುಡುಬಿ ಜನಾಂಗದ ಸ್ವಯಂ ಉದ್ಯೋಗಕ್ಕಾಗಿ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಯೋಜನೆ ರೂಪಿಸಬೇಕು~ ಎಂದು ಅವರು ಒತ್ತಾಯಿಸಿದರು.ಸಂಘದ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಶಿಕ್ಷಣ ನಿಧಿ ಅಧ್ಯಕ್ಷ ಬಾಬಣ್ಣ ನಾಯ್ಕ ಹಾಗೂ ಚಂದ್ರ ನಾಯ್ಕ ಸುದ್ದಿಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry