ಪ.ಪಂಗೆ ಜೆಡಿಎಸ್ ಮುತ್ತಿಗೆ; ಅಧ್ಯಕ್ಷ, ಮುಖ್ಯಾಧಿಕಾರಿ ಮೇಲೆ ಹಲ್ಲೆ

7

ಪ.ಪಂಗೆ ಜೆಡಿಎಸ್ ಮುತ್ತಿಗೆ; ಅಧ್ಯಕ್ಷ, ಮುಖ್ಯಾಧಿಕಾರಿ ಮೇಲೆ ಹಲ್ಲೆ

Published:
Updated:

ಸೋಮವಾರಪೇಟೆ: ಮೀನು ಮತ್ತು ಮಾಂಸ ಮಾರುಕಟ್ಟೆಗೆ ಸೋಮವಾರ ಬೆಳಿಗ್ಗೆ ಸಾರ್ವಜನಿಕರು ದಿಢೀರಾಗಿ ಬೀಗ ಜಡಿದ ಪ್ರಕರಣ ರಾಜಕೀಯ ತಿರುವು ಪಡೆದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಎನ್.ಎಸ್.ಮೂರ್ತಿ ಮತ್ತು ಮುಖ್ಯಾಧಿಕಾರಿ ಕೆಂಚಪ್ಪರ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿ ಅಧ್ಯಕ್ಷರ ಕೊಠಡಿಯಲ್ಲಿದ್ದ ಕುರ್ಚಿ ಹೊರಗೆಸೆದ ಘಟನೆ ನಡೆದಿದೆ.ಇದರಿಂದಾಗಿ ಪಟ್ಟಣ ಪಂಚಾಯಿತಿ ಆವರಣ ಹಾಗೂ ಮೀನು ಮಾಂಸದ ಮಾರುಕಟ್ಟೆಯಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಯಿತು. ಸೋಮವಾರ ಬೆಳಿಗ್ಗೆ ಸಾರ್ವಜನಿಕರು ಮಾರುಕಟ್ಟೆಗೆ ಬೀಗ ಜಡಿದಿದ್ದರಿಂದ ವ್ಯಾಪಾರಕ್ಕಾಗಿ ತಂದ ಮೀನು ಮಾಂಸ ಕೊಳೆತು ನಷ್ಟವಾಗುತ್ತದೆ ಎಂದು ವ್ಯಾಪಾರಸ್ಥರು ಮಾಜಿ ಸಚಿವ ಬಿ.ಎ.ಜೀವಿಜಯ ಅವರಲ್ಲಿ ಹೇಳಿಕೊಂಡರು.ಆಗ ಜೆಡಿಎಸ್ ಕಾರ್ಯಕರ್ತರು ಪಟ್ಟಣ ಪಂಚಾಯಿತಿ ಕಚೇರಿಗೆ ಪ್ರವೇಶಿಸಿ ಅಧ್ಯಕ್ಷ ಮತ್ತು ಮುಖ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ಬಿ.ಎ.ಜೀವಿಜಯ ಅಧ್ಯಕ್ಷರನ್ನು ರಕ್ಷಿಸಲು ಮುಂದಾದರೂ ಕಾರ್ಯಕರ್ತರು ಆಕ್ರೋಶದಿಂದ ವರ್ತಿಸಿದ್ದರಿಂದ ಹೆಚ್ಚಿನ ಪ್ರಯೋಜನವಾಗದೇ ಮುಖ್ಯಾಧಿಕಾರಿ ಕೆಂಚಪ್ಪ ರನ್ನು ಎಳೆದಾಡಿದ ಪ್ರಸಂಗವೂ ನಡೆಯಿತು.ಘಟನೆ ನಡೆಯುವಾಗ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ.ಡಿಸಿಲ್ವಾ ಎಷ್ಟೇ ಮನವಿ ಮಾಡಿದರೂ ಕಾರ್ಯಕರ್ತರು ಸ್ಪಂದಿಸಲಿಲ್ಲ. ಮಾರುಕಟ್ಟೆಯ ಬೀಗ ತೆಗೆಯುವಂತೆ ಒತ್ತಾಯಿಸಿ ಮುಖ್ಯಾಧಿಕಾರಿ ಎಳೆದಾಡಲು ಶುರುಮಾಡಿದರು. ಪಟ್ಟಣ ಪಂಚಾಯಿತಿ ಕಚೇರಿಯ ಒಳಗೆ ಪ್ರವೇಶಿಸಿದ ಕೆಲವರು ರಾಜಸ್ವ ನಿರೀಕ್ಷಕ ರಂಜನ್ ಮೇಲೂ ಹಲ್ಲೆ ನಡೆಸಲು ಮುಂದಾದರು.ಬಳಿಕ ಮುಖ್ಯಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕರನ್ನು ಮೀನು ಮಾಂಸದ ಮಾರುಕಟ್ಟೆಗೆ ಕರೆದುಕೊಂಡು ಹೋಗಿ ಅವರಿಂದಲೇ ಮಳಿಗೆಗಳಿಗೆ ಹಾಕಿದ ಬೀಗವನ್ನು ತೆಗೆಸಲಾಯಿತು. ಮಳಿಗೆಯ ಒಳಗಿದ್ದ ಮೀನಿನ ಕೇಟ್ ಮತ್ತಿತರ ವಸ್ತುಗಳನ್ನು ಮುಖ್ಯಾಧಿಕಾರಿಯವರೇ ಜೋಡಿಸಿ ಸರಿಪಡಿಸಬೇಕೆಂದು ಒತ್ತಾಯ ಹಾಕಲಾಯಿತು.ಈ ಸಂದರ್ಭ ಜಿಲ್ಲಾ ಪಂಚಾಯಿತಿ ಹಾಲಿ ಅಧ್ಯಕ್ಷ ವಿ.ಎಂ.ವಿಜಯ ಮಧ್ಯಪ್ರವೇಶಿಸಿ ಮುಖ್ಯಾಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ‘ನಿಮಗೆ ಮಾರುಕಟ್ಟೆ ಮುಚ್ಚಿಸಲು ಅಧಿಕಾರ ಕೊಟ್ಟವರು ಯಾರು’ ಎಂದು ಪ್ರಶ್ನಿಸಿದರು. ಸರ್ಕಾರ ಇದರ ಬಗ್ಗೆ ಆದೇಶ ನೀಡಿದೆಯೇ ಎಂದು ಕೇಳಿದರು. ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರಿಂದ ಮಳಿಗೆಯನ್ನು ಮುಚ್ಚಿಸುವ ಪ್ರಸಂಗ ಬಂದಿದ್ದು ನನ್ನಿಂದ ತಪ್ಪಾಗಿದೆ ಎಂದು ಮುಖ್ಯಾಧಿಕಾರಿ ಕ್ಷಮೆ ಯಾಚಿಸಿದರು.ಈ ಪ್ರಸಂಗದಲ್ಲಿ ಹಲ್ಲೆಗೆ ಒಳಗಾದ ಮುಖ್ಯಾಧಿಕಾರಿ ಕೆಂಚಪ್ಪ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಳಿಕ ಬಿಜೆಪಿ ಕಾರ್ಯಕರ್ತರು ಮೀನು ಮಾಂಸದ ಮಾರುಕಟ್ಟೆಗೆ ದಾಳಿ ನಡೆಸಿ ಮತ್ತೆ ಮಳಿಗೆಗಳನ್ನು ಮುಚ್ಚಿಸಿದರು. ಡಿವೈಎಸ್ಪಿ ಜಯಪ್ರಕಾಶ್ ಪೊಲೀಸ್ ತುಕಡಿಯೊಂದಿಗೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಸ್ಥಳಕ್ಕೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ ನೀಡಿ ಈ ಘಟನೆಯನ್ನು ಖಂಡಿಸಿದರು. ಜಿಲ್ಲಾಧಿಕಾರಿ ಅಶ್ವತ್ಥನಾರಾಯಣ ಗೌಡ, ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry