ಪ.ಪಂ. ಜನಪ್ರತಿನಿಧಿಗಳ ಕೈಗಿಲ್ಲ `ಚುಕ್ಕಾಣಿ'

ಮಂಗಳವಾರ, ಜೂಲೈ 23, 2019
26 °C
ಮೀಸಲಾತಿ ಪ್ರಕಟಿಸುವ ಅವಕಾಶ ಕೋರಿದ ಚುನಾವಣಾ ಆಯೋಗ

ಪ.ಪಂ. ಜನಪ್ರತಿನಿಧಿಗಳ ಕೈಗಿಲ್ಲ `ಚುಕ್ಕಾಣಿ'

Published:
Updated:

ಮಡಿಕೇರಿ: ಆಡಳಿತದ ಚುಕ್ಕಾಣಿಯನ್ನು ವಶಕ್ಕೆ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಇದುವರೆಗೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಪ್ರಕಟಿಸಿಲ್ಲ. ಇದರ ಪರಿಣಾಮವಾಗಿ ಜಿಲ್ಲೆಯ ವಿರಾಜಪೇಟೆ, ಸೋಮವಾರಪೇಟೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.ಈ ನಡುವೆ ರಾಜ್ಯ ಚುನಾವಣಾ ಆಯೋಗವು `ಪಂಚಾಯಿತಿಗಳ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸುವ ಅಧಿಕಾರವನ್ನು ನನಗೆ ನೀಡಿ' ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ಕುತೂಹಲ ಮೂಡಿಸಿದೆ.ದಲಿತರಿಗೆ, ಮುಸ್ಲಿಮರಿಗೆ, ಹಿಂದುಳಿದ ವರ್ಗದವರಿಗೂ ಸಮಾನ ಅವಕಾಶ ದೊರಕಬೇಕೆನ್ನುವ ಸದುದ್ದೇಶದಿಂದ ಮೀಸಲಾತಿಯನ್ನು ಜಾರಿಗೆ ತರಲಾಯಿತು. ರೋಟೇಷನ್ ಪ್ರಕಾರ ಪ್ರತಿಯೊಂದು ವರ್ಗದ ಅಭ್ಯರ್ಥಿಗೆ ಅವಕಾಶ ಕಲ್ಪಿಸಬೇಕಾಗಿತ್ತು. ಇಷ್ಟು ವರ್ಷ ಮೀಸಲಾತಿ ನಿಗದಿಯನ್ನು ರಾಜ್ಯ ಸರ್ಕಾರ ಮಾಡುತ್ತಿತ್ತು.ಇತ್ತೀಚಿನ ವರ್ಷಗಳಲ್ಲಿ ಸರ್ಕಾರದಲ್ಲಿ ಇರುವ ಪಕ್ಷಗಳು ತಮಗೆ ಅನುಕೂಲವಾಗುವಂತೆ ಅಥವಾ ವಿರೋಧ ಪಕ್ಷದವರ ಪಾಲಾಗ ದಂತೆ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಲು ಪ್ರಯತ್ನಿಸುತ್ತಿವೆ. ಇದರಿಂದ ಮೀಸಲಾತಿ ಪಟ್ಟಿ ಪ್ರಕಟಿಸುವುದು ವಿಳಂಬವಾಗಿದೆ. ಅಲ್ಲದೇ, ಕೆಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲನ್ನು ಹತ್ತಿರುವ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ.ರೊಟೇಷನ್ ಪದ್ಧತಿಯನ್ನು ಮುರಿದು ತನಗೆ ಇಷ್ಟಬಂದಂತೆ ಸರ್ಕಾರಗಳು ಮೀಸಲಾತಿಯನ್ನು ನಿಗದಿಪಡಿಸುತ್ತ ಹೋದರೆ, ಮುಂದೊಂದು ದಿನ ಮೀಸಲಾತಿ ನಿಗದಿಪಡಿಸುವ ಅಧಿಕಾರ ಚುನಾವಣಾ ಆಯೋಗದ ಪಾಲಾದರೆ ಆಶ್ಚರ್ಯವಿಲ್ಲ.ಐದು ತಿಂಗಳಿನಿಂದ ಅಧಿಕಾರಿಗಳ ಆಡಳಿತ

ಸುಮಾರು ಐದು ತಿಂಗಳ ಹಿಂದೆಯೇ ಕೊಡಗು ಜಿಲ್ಲೆಯ ವಿರಾಜಪೇಟೆ, ಸೋಮವಾರಪೇಟೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿಯ ಆಡಳಿತ ಅವಧಿ ಪೂರ್ಣಗೊಂಡಿತ್ತು. ಇದಲ್ಲದೇ, ಮಡಿಕೇರಿ ನಗರಸಭೆಯ ಆಡಳಿತ ಅವಧಿಯು ಕಳೆದ ತಿಂಗಳು ಮುಗಿದಿದೆ. ಈ ಸ್ಥಳೀಯ ಸಂಸ್ಥೆಗಳ ಆಡಳಿತದ ಚುಕ್ಕಾಣಿ ಈಗ ಅಧಿಕಾರಿಗಳ ಕೈಯಲ್ಲಿದೆ.ಈ ಮೂರು ಪಟ್ಟಣ ಪಂಚಾಯಿತಿ ಸ್ಥಾನಗಳಿಗೆ ಕಳೆದ ಮಾರ್ಚ್‌ನಲ್ಲಿ ಚುನಾವಣೆ ನಡೆದು, ಸ್ಥಳೀಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯೂ ಮುಗಿದಿತ್ತು. ಇದಾದ ನಂತರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್ ಅಧಿಕಾರದ ಚುಕ್ಕಾಣೆ ಹಿಡಿಯಿತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲೂ ತಾನೇ ಆಡಳಿತದ ಚುಕ್ಕಾಣಿಯನ್ನು ಹಿಡಿಯಬೇಕೆನ್ನುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರವು ತನಗೆ ಪೂರಕವಾಗುವಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸಲು ತೊಡಗಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡು ಎರಡು ತಿಂಗಳು ಕಳೆಯುತ್ತ ಬಂದರೂ ಇದುವರೆಗೆ ಮೀಸಲಾತಿಯನ್ನು ಪ್ರಕಟಿಸಿಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಅಧಿಕಾರಿಗಳ ಕೈಗೆ ವಹಿಸಲಾಗಿದೆ. ಪ್ರಜಾಪ್ರಭುತ್ವದ ಮೂಲ ಆಶಯವಾದ `ಜನರಿಂದ ಜನರಿಗಾಗಿ ಜನರೇ ನಡೆಸುವ ಆಡಳಿತ' ಇಲ್ಲದಂತಾಗಿದೆ.ಜನಪ್ರತಿನಿಧಿಗಳ ಬಾಂಧವ್ಯ

ಜನರಿಂದ ಆಯ್ಕೆಯಾಗಿ ಬರುವ ಜನಪ್ರತಿನಿಧಿಗಳು ತನ್ನ ಕ್ಷೇತ್ರದ ಮತದಾರರ ಮುಲಾಜಿಗೆ ಬಿದ್ದಿರುತ್ತಾರೆ. ಅವರ ಬೇಕು- ಬೇಡಗಳಿಗೆ ತಕ್ಷಣ ಸ್ಪಂದಿಸುವ ಕೆಲಸವನ್ನು ಮಾಡುತ್ತಾರೆ. ಹಾಗಾಗಿ, ಜನಪ್ರತಿನಿಧಿಗಳ ಕೈಯಲ್ಲಿ ಆಡಳಿತ ಇದ್ದಾಗ ಆಗುವಷ್ಟು ಕೆಲಸಗಳು ಅಧಿಕಾರಿಗಳ ಆಡಳಿತದಲ್ಲಿ ಆಗುವುದಿಲ್ಲ ಎನ್ನಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry