ಬುಧವಾರ, ನವೆಂಬರ್ 13, 2019
23 °C

`ಪರಕೀಯರ ಆಯ್ಕೆಗೆ ಶೀಘ್ರ ಅಂತ್ಯ'

Published:
Updated:

ಹರಪನಹಳ್ಳಿ: ಕ್ಷೇತ್ರದಲ್ಲಿ ಪರಕೀಯರ ರಾಜಕಾರಣದ ಆಳ್ವಿಕೆಯನ್ನು ಅಂತ್ಯಹಾಡುವ ಮೂಲಕ ಮನೆಯ ಮಗನನ್ನೇ ವಿಧಾನಸಭೆಗೆ ಕಳುಹಿಸುವ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಕೆಜೆಪಿ ಪರವಾದ ವ್ಯಾಪಕ ಜನ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಪಕ್ಷದ ಅಭ್ಯರ್ಥಿ ಎನ್. ಕೊಟ್ರೇಶ್ ವಿಶ್ವಾಸ ವ್ಯಕ್ತಪಡಿಸಿದರು.ಚುನಾವಣೆ ಘೋಷಣೆಯಾದ ಬಳಿಕ ಈಗಾಗಲೇ ಕ್ಷೇತ್ರವ್ಯಾಪ್ತಿಯ 170ಕ್ಕೂ ಅಧಿಕ ಹಳ್ಳಿಗಳ ಮನೆ- ಮನೆಗೆ ತೆರಳಿ ಪ್ರಚಾರ ನಡೆಸಿದ್ದೇನೆ. ಕೆಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಡಳಿತ ಅವಧಿಯಲ್ಲಿ ಕ್ಷೇತ್ರದಲ್ಲಿ ಅನುಷ್ಠಾನವಾದ ಅಭಿವೃದ್ಧಿಪರ ಯೋಜನೆಗಳು ಹಾಗೂ ಬೀಜೋತ್ಪಾದನೆಯಲ್ಲಿ ತೊಡಗಿಸಿ ಕೊಂಡಿರುವ ತಮಗೆ ರೈತ ಸಮುದಾಯ ನೀಡುತ್ತಿರುವ ಅಪಾರ ಬೆಂಬಲ ಹಾಗೂ ಅದ್ಲ್ಲೆಲಕ್ಕಿಂತ ಹೆಚ್ಚಾಗಿ ಸ್ಥಳೀಯ ಪ್ರಬಲ ಅಭ್ಯರ್ಥಿಯಾಗಿರುವ ತಮ್ಮನ್ನು ಮತದಾರರ ಜಾತಿ ಹಾಗೂ ಪಕ್ಷಭೇದ ಮರೆತು ಆಶೀರ್ವಾದಿಸುವ ಮೂಲಕ ಕ್ಷೇತ್ರದಲ್ಲಿ ಪರಾಕೀಯರ ಪರಂಪರೆಯ ಆಡಳಿತಕ್ಕೆ ಇತಿಶ್ರೀ ಹಾಡಲಿದ್ದಾರೆ ಎಂದು ಸೋಮವಾರ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಈಗಾಗಲೇ ಪ್ರಚಾರ ಕಾರ್ಯವನ್ನು ಆರಂಭಿಸಲಾಗಿದೆ. ಯುವಸಮೂಹ ಸೇರಿದಂತೆ ಹಿರಿ- ಕಿರಿಯ ಎಲ್ಲಾ ವರ್ಗದ ಸಮುದಾಯ, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಕೆಜೆಪಿ ಪರವಾಗಿದ್ದಾರೆ. ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ಬಿಜೆಪಿಯ ಪರಿಶಿಷ್ಟ ವಿಭಾಗದ ರಾಜ್ಯಘಟಕದ ಕಾರ್ಯದರ್ಶಿ ಸ್ಥಾನಕ್ಕೆ ಈಚೆಗೆ ರಾಜೀನಾಮೆ ಸಲ್ಲಿಸಿದ್ದ ಡಾ.ರಮೇಶಕುಮಾರ್, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾಮಪತ್ರ ಹಿಂಪಡೆದ ವಕೀಲ ಮತ್ತಿಹಳ್ಳಿ ಕೊಟ್ರೇಶ್, ಜೆಡಿಎಸ್ ತೊರೆದ ಬಸವರಾಜ ಮತ್ತೂರು ಹಾಗೂ ಕಾಂಗ್ರೆಸ್ ತೊರೆದ ವಸಂತಕುಮಾರ್ ಕೊಂಡಜ್ಜಿ ಸೇರಿದಂತೆ ಅವರ ನೂರಾರು ಬೆಂಬಲಿಗರನ್ನು ಕೊಟ್ರೇಶ್ ಪಕ್ಷದ ಶಾಲೂ ಹೊದಿಸುವ ಮೂಲಕ ಬರಮಾಡಿಕೊಂಡರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಅರಸೀಕೆರೆ ತಿಮ್ಮಣ್ಣ, ನೀಲಗುಂದ ಮಡಿವಾಳಪ್ಪ, ಎಚ್.ಎಂ. ಜಗದೀಶ್, ಸಿದ್ದೇಶ್, ಬಸವರಾಜ, ವಾಮದೇವಯ್ಯ, ರಾಮನಗೌಡ, ವಿನಾಯಕ ಭಜಂತ್ರಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)