ಶನಿವಾರ, ಡಿಸೆಂಬರ್ 14, 2019
22 °C

ಪರದೆ ಆಯ್ಕೆಗೆ ಪರದಾಟ ಏಕೆ?

ಸುಧಾ ಹೆಗಡೆ Updated:

ಅಕ್ಷರ ಗಾತ್ರ : | |

ಪರದೆ ಆಯ್ಕೆಗೆ ಪರದಾಟ ಏಕೆ?

ಮನೆಯ ಕಿಟಕಿ, ಬಾಗಿಲುಗಳಿಗೆ ಪರದೆ ಜೋಡಿಸುವುದೆಂದರೆ ಕಣ್ಣಿಗೆ ಚುಚ್ಚುವ ಬೆಳಕನ್ನು ತಡೆಯಲು, ಚಳಿಗಾಳಿಯನ್ನು ನಿಯಂತ್ರಿಸಲು, ಏಕಾಂತಕ್ಕೆ ಎಂಬ ಅಭಿಪ್ರಾಯ ಹಿಂದೆ ಇತ್ತು. ಗಾಢ ವರ್ಣದ ದಪ್ಪನೆಯ ಒರಟು ಬಟ್ಟೆಯ ಪರದೆಗಳು ಅಥವಾ ನೈಲಾನ್ ಬಟ್ಟೆಯ ಮೇಲೆ ದೊಡ್ಡ ದೊಡ್ಡ ವಿನ್ಯಾಸವಿರುವ ಪರದೆಗಳನ್ನು ತಂದು ಸರಳಿಗೆ ತೂರಿಸಿಬಿಟ್ಟರೆ ಆಯಿತು.

 

ಉಳಿತಾಯದ ಧೋರಣೆ ಇರುವವರಂತೂ ಹಳೆಯ ನೈಲಾನ್ ಸೀರೆಗಳಿಗೆ ನೆರಿಗೆ ಹಿಡಿದು ಜೋಡಿಸಿ ಅತಿಥಿಗಳ ಮುಂದೆ ಜಾಣ್ಮೆ ಪ್ರದರ್ಶಿಸುವುದು ಹಿಂದೆ ಮಾತ್ರ ಅಲ್ಲ, ಈಗಲೂ ಇದೆ.ಆದರೆ, ಈಗ ಪರದೆಗಳೆಂದರೆ ಮನೆಯ ಅಂದ ಹೆಚ್ಚಿಸುವ ಪರಿಕರಗಳು. ಮನೆಯ ಒಳಾಂಗಣ ವಿನ್ಯಾಸ, ಗೋಡೆಗಳ ಬಣ್ಣ, ನೆಲಹಾಸುಗಳಿಗೆ ಹೊಂದಿಕೊಳ್ಳುವ, ಇಡೀ ಮನೆಯ ಅಂದ ಹೆಚ್ಚಿಸುವ ಹೊಸ ಶೈಲಿಯ ಪರದೆಗಳನ್ನು ಅಳವಡಿಸುವುದು ಈಗಿನ ಪ್ರವೃತ್ತಿ. ಜೊತೆಗೆ ಅವುಗಳನ್ನು ಸುಸ್ಥಿತಿಯಲ್ಲಿಡುವುದೂ ಅಷ್ಟೇ ಮುಖ್ಯ.ಮನೆಯಲ್ಲಿ ಎಲ್ಲಾ ಸದಸ್ಯರು ಒಟ್ಟಿಗೆ ಕೂತು, ಟೀವಿ ನೋಡುತ್ತ, ಹರಟೆ ಹೊಡೆಯುವ ಜಾಗವೆಂದರೆ ಹಜಾರ. ಅತಿಥಿಗಳು ಬಂದರೆ ಕೂರಿಸಿ ಮಾತನಾಡಿಸುವುದೂ ಇದೇ ಜಾಗದಲ್ಲಿ. ಹೀಗಾಗಿ ಇದರ ಅಂದ ಮನೆಯವರಿಗೆ, ಆಗಮಿಸುವ ಅತಿಥಿಗಳು ಮತ್ತು ಸ್ನೇಹಿತರ ಮನವನ್ನು ಮುದಗೊಳಿಸುವಂತಿರಬೇಕು. ಇದನ್ನು ಅಲಂಕರಿಸುವಾಗ ಹೆಚ್ಚಿನ ಲಕ್ಷ್ಯ ಅಗತ್ಯ.ಅವರವರ ಅಭಿರುಚಿಗೆ ತಕ್ಕಂತೆ ಸಾಮಾನ್ಯ, ಅನೌಪಚಾರಿಕ ಅಥವಾ ಆಧುನಿಕ ಶೈಲಿ, ಒಲವಿಗೆ ತಕ್ಕಂತೆ ಪರದೆಗಳನ್ನು ಅಳವಡಿಸಬಹುದು. ತೆಳುವಾದ ನೆಟ್‌ನಂತಹ ಪರದೆ ಜೋಡಿಸಿದರೆ ಹೆಚ್ಚಿನ ಬೆಳಕಿಗೆ ಅವಕಾಶವಿರುತ್ತದೆ. ದಪ್ಪನೆಯ ಡೆನಿಮ್ ಬಟ್ಟೆಯ ಪರದೆಗಳಾದರೆ ಬೆಳಕನ್ನು ನಿಯಂತ್ರಿಸುತ್ತದೆ. ದಟ್ಟ ವರ್ಣದ ವೆಲ್ವೆಟ್ ಬಟ್ಟೆ ಹೆಚ್ಚು ಸೊಗಸು.ರೇಷ್ಮೆ, ವಾಯಿಲ್, ಹತ್ತಿ... ಹೀಗೆ ಸಾಕಷ್ಟು ಆಯ್ಕೆಗಳಿವೆ. ಸಣ್ಣ ಚುಕ್ಕಿ ಇರುವ ಹಕೋಬ ಬಟ್ಟೆಯನ್ನು ಕೂಡಾ ಬಳಸಬಹುದು. ತೆಳುವಾದ ಪಾರದರ್ಶಕ ಪರದೆಗಳು, ಅದರಲ್ಲೂ ಗುಲಾಬಿ, ಲಿಂಬೆ, ಪಿಸ್ತಾ ಬಣ್ಣದವುಗಳು ಕಣ್ಣಿಗೆ ತಂಪು ತಂಪು ಎನಿಸುತ್ತವೆ.ಬಣ್ಣ ಆಯ್ಕೆ ಮಾಡುವಾಗಲೂ ಎಚ್ಚರಿಕೆ ವಹಿಸಬೇಕು. ಗೋಡೆಗೆ ಬಳಿದ ರಂಗಿಗೆ ಹೊಂದಿಕೊಳ್ಳುವಂತಿದ್ದರೆ ಚೆನ್ನ. ಪರದೆಯ ಬಣ್ಣ ಗೋಡೆಯ ಬಣ್ಣದ್ದೇ ಆಗಿರಲಿ. ಮೇಲಿರುವ ವಿನ್ಯಾಸ ಬೇರೆ ವರ್ಣದ್ದಾಗಿರಲಿ. ವಿನ್ಯಾಸವಿಲ್ಲದ ಬಟ್ಟೆ ಬಳಸುವಾಗ ಗೋಡೆಗೆ ವಿರುದ್ಧವಾದ ಬಣ್ಣದ್ದು ಬಳಸಬೇಡಿ.

 

ಇದರಿಂದ ಹಜಾರಕ್ಕೆ ಅಥವಾ ಕೊಠಡಿಗೆ ಆ ಪರದೆ ಸಂಬಂಧಿಸಿದಂತೆ ಕಾಣುವುದಿಲ್ಲ. ಬೇರೆಯೇ ಆಗಿ ಕಣ್ಣಿಗೆ ಹೊಡೆಯುತ್ತದೆ. ಜೊತೆಗೆ ಆ ಜಾಗದಲ್ಲಿ ಮಾಡಿಸಲಾದ ಪೀಠೋಪಕರಣ, ಕಿಟಕಿಯ ಚೌಕಟ್ಟಿಗೆ ಕೂಡಾ ಹೊಂದುವಂತಿದ್ದರೆ ಒಳಿತು.

ಊಟದ ಕೋಣೆಯಲ್ಲೂ ಇದೇ ನಿಯಮ ಬಳಸಬಹುದು.ಆದರೆ, ಪರದೆಗಳ ಮೇಲಿನ ವಿನ್ಯಾಸ ದೊಡ್ಡದಾಗಿದ್ದು ಮತ್ತು ಬಣ್ಣ ಹೆಚ್ಚು ಗಾಢವಾಗಿದ್ದರೆ ಚೆಂದ. ದೊಡ್ಡ ಹೂವಿನ ವಿನ್ಯಾಸದ ಪರದೆಗಳನ್ನು ಆಯ್ಕೆ ಮಾಡಿಕೊಳ್ಳಿ. ಪರದೆಗಳಿಗೆ ಕಸೂತಿ ಇಲ್ಲದಿದ್ದೆ ಒಳಿತು.ಮಲಗುವ ಕೊಠಡಿಯ ಬಾಗಿಲು ಮತ್ತು ಕಿಟಕಿಗಳಿಗೆ ಪರದೆ ಅಳವಡಿಸುವಾಗ ಗೋಪ್ಯತೆಗೆ ಹೆಚ್ಚು ಗಮನ ನೀಡಿ. ಕಿಟಕಿ ರಸ್ತೆಯ ಕಡೆ ಮುಖ ಮಾಡಿದ್ದರೆ ಪರದೆದಪ್ಪಬಟ್ಟೆಯದ್ದಾಗಿರಲಿ. ಇದು ಅತಿಯಾದ ಬೆಳಕಿಗೆ ಕೂಡಾ ತಡೆ ಒಡ್ಡುತ್ತದೆ. ರಾತ್ರಿ ಬೀದಿ ದೀಪಗಳು ಕಣ್ಣು ಕುಕ್ಕಿ, ನಿದ್ರಾಭಂಗವಾಗುವುದನ್ನು ತಡೆಯುತ್ತದೆ.

 

ಕೋಣೆ ದೊಡ್ಡದಾಗಿದ್ದರೆ ಗಾಢ ವರ್ಣದ ಪರದೆ ಬಳಸಿ. ಚಿಕ್ಕದಾಗಿದ್ದರೆ ಹೆಚ್ಚು ಉಜ್ವಲವಾದ ರಂಗಿನ ಬಟ್ಟೆಯದ್ದು ಇರಲಿ. ಇದರಿಂದ ಕೋಣೆ ವಿಸ್ತಾರವಾಗಿ ಕಾಣುತ್ತದೆ.

ಅಡುಗೆ ಕೋಣೆಯ ಕಿಟಕಿಗಳನ್ನು ಸಿಂಗರಿಸುವಾಗ ಅಂದಕ್ಕಿಂತ ಸುರಕ್ಷತೆಗೆ ಹೆಚ್ಚು ಲಕ್ಷ್ಯವಿರಲಿ.

 

ಪರದೆಯ ಬಟ್ಟೆಗಳಿಗೆ ಸುಲಭವಾಗಿ ಬೆಂಕಿ ತಗಲುವಂತಿರಬಾರದು. ನೈಲಾನ್ ಅಥವಾ ಕೃತಕ ವಸ್ತ್ರದ್ದು ಬೇಡವೇ ಬೇಡ. ಇದಕ್ಕೆಲ್ಲಾ ಹತ್ತಿ ಬಟ್ಟೆ ಉತ್ತಮವಾದದ್ದು. ಪರದೆಯ ಬಣ್ಣ ಅಡುಗೆ ಕಟ್ಟೆ ಮತ್ತು ಕಪಾಟುಗಳ ಬಣ್ಣಕ್ಕೆ ಹೊಂದುವಂತಿರಲಿ.ಸ್ನಾನದ ಕೋಣೆಗೆ ಸಾಮಾನ್ಯವಾಗಿ ನೀರಿನ ಧಾರೆ (ಷವರ್) ಪರದೆ ಬಳಸುವುದು ರೂಢಿ. ಇವು ಪಾಲಿಯೆಸ್ಟರ್, ವಿನೈಲ್ ಮೊದಲಾದ ಜಲ ನಿರೋಧಕ ಬಟ್ಟೆಗಳಲ್ಲಿ ಲಭ್ಯ. ಇವು ಸಸ್ತಾ ಕೂಡಾ.ಮಾರುಕಟ್ಟೆಯಲ್ಲಿ ಬಟ್ಟೆ ಖರೀದಿಸಿ ನಿಮಗೆ ಬೇಕಾದಂತೆ ಹೊಲಿಸಬಹುದು. ಇಲ್ಲ, ಸಿದ್ಧ ಪರದೆಯನ್ನು ಖರೀದಿಸಬಹುದು. ಆಯ್ಕೆ ನಿಮಗೆ ಬಿಟ್ಟಿದ್ದು. ಆದರೆ,  ಬಟ್ಟೆಯ ಗುಣಮಟ್ಟ, ವಿನ್ಯಾಸ, ಬಣ್ಣ, ಮೃದುತ್ವ, ದಪ್ಪ ಇವುಗಳ ಬಗ್ಗೆ ಗಮನ ನೀಡಿ.ಇನ್ನು ಪರದೆ ತಗಲಿಸುವ ಸರಳುಗಳನ್ನೂ ನಿಮ್ಮ ಅಭಿರುಚಿಗೆ, ಒಳಾಂಗಣ ಅಲಂಕಾರಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು. ಸಾಂಪ್ರದಾಯಕ ಶೈಲಿಯಲ್ಲಾದರೆ ಮರದ ಸರಳು ಬಳಸಬಹುದು. ಲೋಹದ ಸರಳುಗಳು ಆಧುನಿಕ ಮನೆಗೆ ಸೂಕ್ತ. ಕಬ್ಬಿಣ (ರಾಟ್ ಐಯರ್ನ್), ಹಿತ್ತಾಳೆ ಸರಳುಗಳೂ ಚೆಂದ ಕಾಣುತ್ತವೆ. ಪ್ಲಾಸ್ಟಿಕ್ ಕಳಪೆಯಾಗಿ ಕಾಣುವುದಲ್ಲದೇ ದಪ್ಪ ಪರದೆ ಹಾಕಿದಾಗ ಬಗ್ಗಿಬಿಡುತ್ತದೆ.  

                           

ಪ್ರತಿಕ್ರಿಯಿಸಿ (+)