ಬುಧವಾರ, ಜನವರಿ 22, 2020
28 °C

ಪರದೆ ಸರಿಯುವ ಮುನ್ನ...

ನಿರ್ವಹಣೆ : ಡಿ.ಎಂ.ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

ಒಳ್ಳೆಯ ಸಿನಿಮಾಗಳ ಹಬ್ಬ

ಚಲನಚಿತ್ರೋತ್ಸವದ ಉಪಯುಕ್ತತೆಯನ್ನು ಎರಡು ರೀತಿ ಗುರ್ತಿಸಬಹುದು. ಪ್ರಪಂಚದ ಬೇರೆ ಬೇರೆ ಕಡೆಗಳಲ್ಲಿ ಏನಾಗುತ್ತಿದೆ ಎನ್ನುವುದು ನಮಗೆ ಗೊತ್ತಾಗುತ್ತದೆ. ಪ್ರತಿ ದೇಶಕ್ಕೂ ಅದರದ್ದೇ ಆದ ಸಾಹಿತ್ಯವಿರುವಂತೆ, ಸಿನಿಮಾ ಸಹ ಇದೆ. ಸಾಮಾಜಿಕ ಮತ್ತಿತರ ವಿವಿಧ ಕ್ಷೇತ್ರಗಳ ಸಮಸ್ಯೆಗಳು ಇವೆ. ಆ ಸ್ಥಿತಿಗೆ ಅಲ್ಲಿನ ಸೃಜನಾತ್ಮಕ ಮನಸ್ಸು ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎನ್ನುವುದು ನಮಗೆ ಗೊತ್ತಾಗುತ್ತದೆ. ಎರಡನೆಯದು ನಮ್ಮ ಸಿನಿಮಾಗಳಿಗೆ ಅತ್ಯುತ್ತಮವಾದ ಮಾರುಕಟ್ಟೆ ಸೃಷ್ಟಿಸಿಕೊಳ್ಳಬಹುದು. ಆದರೆ ಬೆಂಗಳೂರು ಚಿತ್ರೋತ್ಸವ ಈ ದಿಸೆಯಲ್ಲಿ ಹೆಚ್ಚು ಆಲೋಚಿಸಿಲ್ಲ ಮತ್ತು ತೊಡಗಿಲ್ಲ.ಚಿತ್ರೋತ್ಸವದ ಕಾರಣಕ್ಕೆ ಅಂತರರಾಷ್ಟ್ರೀಯ ಮಟ್ಟದ ನಿರ್ಮಾಪಕರು ಇಲ್ಲಿಗೆ ಬರುತ್ತಾರೆ. ಬೇರೊಂದು ಸಿನಿಮೋತ್ಸವಕ್ಕೆ ಚಿತ್ರಗಳನ್ನು ಕೊಂಡೊಯ್ಯಲು ನೆರವಾಗುತ್ತದೆ. ಸಿನಿಮಾದ ಉದ್ದಿಮೆ ಬೆಳವಣಿಗೆಗೆ ಮೂಲವಾಗುತ್ತದೆ. ಆದರೆ ಅಷ್ಟು ವಿಸ್ತಾರ ಗ್ರಹಿಕೆ ಇನ್ನೂ ನಮಗೆ ಬಂದಿಲ್ಲ. ಸದ್ಯಕ್ಕೆ ಆಗದಿದ್ದರೂ ದೀರ್ಘಾವಧಿಯಲ್ಲಾದರೂ ಇದು ನಡೆಯಬೇಕು.ಬೇರೆ ಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಕಡಿಮೆ ಇದೆ. ಗೋವಾ ಚಿತ್ರೋತ್ಸವಗಳಲ್ಲಿ ‘ಭಾರತ್ ಸ್ಟೋರ್ಸ್’ ಮಾತ್ರ ಪ್ರದರ್ಶನವಾಯಿತು. ಇಲ್ಲಿ ನಮ್ಮ ಚಿತ್ರಗಳು ಪ್ರದರ್ಶನವಾಗುವುದರಿಂದ ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುವ ವಿವಿಧ ರೀತಿಯ ಚಿತ್ರೋತ್ಸವಗಳಿಗೆ ನಮ್ಮ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶವೂ ಒದಗುತ್ತದೆ. ಚಿತ್ರೋತ್ಸವಕ್ಕೆ ಪ್ರಸಿದ್ಧ ನಟ–ನಟಿಯರು (ತಾರೆಗಳು) ಬಂದಿಲ್ಲ ಅಂದರೆ ದೃಷ್ಟಿಕೋನವೇ ಬದಲಾಗುತ್ತದೆ. ಆದರೆ ಆ ಜನಪ್ರಿಯತೆ ಮಾರುಕಟ್ಟೆಗೆ ಮಾತ್ರ ಮುಖ್ಯವಾಗುತ್ತದೆ. ಚಿತ್ರೋತ್ಸವದಲ್ಲಿ ನಿರ್ದೇಶಕರು, ತಂತ್ರಜ್ಞರ ಪಾಲ್ಗೊಳ್ಳುವಿಗೆ ಮುಖ್ಯ. ವಿಚಾರ ಸಂಕಿರಣಗಳು, ಚರ್ಚೆಗಳು, ಸಂವಾದಗಳು ನಮ್ಮಲ್ಲಿ ಹೆಚ್ಚಿನ ಮಟ್ಟದಲ್ಲಿ ಆಗುತ್ತಿಲ್ಲ. ಆ ದಿಸೆಯಲ್ಲಿ ಯೋಚಿಸಬೇಕು. ನನ್ನ ಮಟ್ಟಿಗೆ ದೊಡ್ಡ ನಿರೀಕ್ಷೆ ಎಂದರೆ ಒಳ್ಳೆಯ ಸಿನಿಮಾಗಳನ್ನು ನೋಡುತ್ತೇನೆ ಅನ್ನುವುದು.

–ಗಿರೀಶ ಕಾಸರವಳ್ಳಿ, ಹಿರಿಯ ನಿರ್ದೇಶಕ

ಬುದ್ಧಿ–ಭಾವದ ವಿದ್ಯುದಾಲಿಂಗನ

2004ರಲ್ಲಿ ಒಂದು ಖಾಸಗೀ ಚಲನಚಿತ್ರೋತ್ಸವ. ಅಲ್ಲಿ ಮಜಿದ್ ಮಜೀದಿ ಅವರ ‘ಚಿಲ್ಡ್ರನ್ ಆಫ್ ಹೆವೆನ್’ ಚಿತ್ರ ನೋಡಿದ ತರುವಾಯ ನನ್ನ ಗುರಿ ಮತ್ತು ಆಲೋಚನೆಗಳು ಬದಲಾದವು. ರಂಗಭೂಮಿಯಿಂದ ಚಿತ್ರರಂಗದತ್ತ ಆಸ್ಥೆ ವಹಿಸಿದೆ.ನಾನು ನಿರ್ದೇಶಕನಾಗಲು ಈ ರೀತಿಯ ಚಿತ್ರೋತ್ಸವಗಳೂ ಒಂದು ಪ್ರೇರಕ. ಪುಟ್ಟಣ್ಣ ಕಣಗಾಲ್ ಮತ್ತಿತರ ಕನ್ನಡದ ಪ್ರತಿಭಾವಂತ ನಿರ್ದೇಶಕನ್ನು ಕಂಡಿದ್ದ ನನಗೆ, ಅಂತರರಾಷ್ಟ್ರೀಯ ಮಟ್ಟದ ನಿರ್ದೇಶಕರನ್ನು ಪರಿಚಯಿಸಿದ್ದು ಚಿತ್ರೋತ್ಸವಗಳೇ. ನನ್ನ ಸಿನಿಮಾ ಆಸಕ್ತಿ ಉದ್ದೀಪನಕ್ಕೆ ಕಾರಣವಾದ ಚಿತ್ರಗಳಲ್ಲೊಂದಾದ ‘ಓಲ್ಡ್ ಬಾಯ್’ನಂಥ ಕೊರಿಯನ್‌ ಸಿನಿಮಾ ನಾನು ಕಂಡಿದ್ದು ಇಂಥ ಕಾರ್ಯಕ್ರಮಗಳಲ್ಲಿ.

ಮಾನವ ಹಕ್ಕು, ನೀರು, ಪ್ರಾಣಿ ಮತ್ತಿತರ ಆಲೋಚನಾ ಕ್ರಮಗಳಡಿ ಪ್ರತ್ಯೇಕ ಚಿತ್ರೋತ್ಸವಗಳು ನಡೆಯುತ್ತವೆ. ಆದರೆ ಈ ಚಿತ್ರೋತ್ಸವ ಒಟ್ಟಾರೆಯಾಗಿ ನಡೆಯುತ್ತಿದೆ. ಸಹಜವಾಗಿ ನಾವು ನಮ್ಮ ಮಣ್ಣಿನ ಸತ್ವವನ್ನು ಹೀರಿಕೊಂಡು ಬೆಳೆದಿರುತ್ತೇವೆ. ಚಿತ್ರೋತ್ಸವಗಳು ನಮ್ಮ ಬುದ್ಧಿ–ಭಾವಗಳಿಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತವೆ.ಈ ವರ್ಷ ಕನ್ನಡದ ಮಟ್ಟಿಗೆ ಹೊಸ ಪ್ರಯೋಗದ ಪರ್ವ ಕಾಲ. ಟೋನಿ, ಲೂಸಿಯಾ, ಜಟ್ಟ, ದ್ಯಾವ್ರೆ... ಇತ್ಯಾದಿ ಚಿತ್ರಗಳು ಬಂದವು. ಈ ಪ್ರಯೋಗಾತ್ಮಕ ಚಿತ್ರಗಳ ಹುಟ್ಟಿಗೆ ಚಿತ್ರೋತ್ಸವಗಳೂ ಪ್ರಮುಖ ಕಾರಣ. ನಿರ್ದೇಶಕರಾಗುವ ಉತ್ಸಾಹದಲ್ಲಿರುವ ಯುವ ಸಮುದಾಯ ತಮ್ಮ ಆಲೋಚನೆಯಲ್ಲಿ ತೊಡಗಲು ಮತ್ತು ಪ್ರಯೋಗಾತ್ಮಕವಾಗಿರಲು ಈ ರೀತಿಯ ಸಮಾರಂಭಗಳು ಮೂಲವಾಗುತ್ತವೆ. ಪ್ರಸಕ್ತ ಚಿತ್ರೋತ್ಸವ ಯುವ ನಿರ್ದೇಶಕರಲ್ಲಿ ತಲ್ಲಣವನ್ನುಂಟು ಮಾಡಿ ಜಿಜ್ಞಾಸೆಗೆ ಹಚ್ಚುತ್ತದೆ ಎನ್ನುವುದು ನನ್ನ ನಿರೀಕ್ಷೆ.

–ಜಯತೀರ್ಥ, ನಿರ್ದೇಶಕಸಿನಿಮಾ ಆಸ್ಥೆ ರೂಪಿಸುವ ಕೆಲಸ

ಕಳೆದ ಬಾರಿ ನಾನು ಚಲನಚಿತ್ರ ಅಕಾಡೆಮಿ ಅಧ್ಯಕ್ಷೆಯಾಗಿದ್ದಾಗ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜನಸಾಮಾನ್ಯರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಎರಡು ತಿಂಗಳ ಮುನ್ನವೇ ಚಿತ್ರೋತ್ಸವದ ಬಗ್ಗೆ ಪ್ರಚಾರ ಕಾರ್ಯ ಕೈಗೊಂಡಿದ್ದೆವು. ಸದ್ಯದ ಸ್ಥಿತಿಯಲ್ಲಿ ಮನರಂಜನೆಗೆ ಸಿನಿಮಾ ಒಂದೇ ಮಾಧ್ಯಮವಲ್ಲ.ಆ ಕಾರಣಕ್ಕೆ ಸಿನಿಮಾ ಅಭಿರುಚಿಯನ್ನು ಜನರಲ್ಲಿ ಹೆಚ್ಚು ಬೆಳೆಸಬೇಕು. ಜನರಲ್ಲಿ ಸಿನಿಮಾ ಬಗ್ಗೆ ಆಸಕ್ತಿ ಹುಟ್ಟಿಸಬೇಕು. ಯುವಸಮುದಾಯವನ್ನು ಕೇವಲ ಚಿತ್ರಗಳನ್ನು ವೀಕ್ಷಿಸುವುದಕ್ಕಷ್ಟೇ ಸೀಮಿತಗೊಳಿಸದೆ, ರೀಡಿಂಗ್ ಮತ್ತು ಲರ್ನಿಂಗ್ ರೀತಿಯ ಆಸ್ಥೆಯನ್ನು ಉಂಟು ಮಾಡಬೇಕು, ಈ ಕಾರ್ಯ ಚಿತ್ರೋತ್ಸವಗಳಿಂದ ಆಗಬೇಕು.

–ತಾರಾ, ನಟಿಜನಸಾಮಾನ್ಯರ ಉತ್ಸವವಾಗಲಿ

ನಾವು ನೋಡದ ಅಂತರರಾಷ್ಟ್ರೀಯ ಸಿನಿಮಾಗಳು ಅಪಾರವಾಗಿವೆ. ಆಫ್ರಿಕಾ, ಇರಾನಿನ ಹಲವು ಅತ್ಯುತ್ತಮ ಸಿನಿಮಾಗಳನ್ನು ಇಂದಿಗೂ ನೋಡಿಲ್ಲ. ಸಿನಿಮಾ ವಿಚಾರದಲ್ಲಿ ನಮ್ಮದು ಸೀಮಿತ ದೃಷ್ಟಿಕೋನ. ಜಾಗತಿಕ ಸಿನಿಮಾಗಳ ವೀಕ್ಷಣೆಯಿಂದ ಜನರ ದೃಷ್ಟಿಕೋನ ಬದಲಾವಣೆಗೂ ಕಾರಣವಾಗುತ್ತದೆ.ಸಿನಿಮಾ  ಯಾವ ರೀತಿ ಬದಲಾವಣೆಗೆ ಮುನ್ನುಡಿಯಾಗುತ್ತದೆ ಎನ್ನುವ ಅರಿವಾಗುತ್ತದೆ. ಸಿನಿಮೋತ್ಸವ ನೆನಪಿನಲ್ಲಿ ಉಳಿಯುವಂತಾಗಬೇಕು ಎನ್ನುವುದಾರೆ ಜನಸಾಮಾನ್ಯರಿಗೆ ಹೆಚ್ಚು ಮುಟ್ಟಬೇಕು.

–ನೀನಾಸಂ ಸತೀಶ್, ನಟಸಂಕ್ರಮಣಕ್ಕೆ ಸುಸಂಧಿ

ನಾನು ಚಿತ್ರರಂಗಕ್ಕೆ ಬರುವ ಮುನ್ನ ಮ್ಯಾಕ್ಸ್ ಮುಲ್ಲರ್ ಫೌಂಡೇಶನ್ ಆಯೋಜಿಸಿದ್ದ ಚಿತ್ರೋತ್ಸವದಲ್ಲಿ ಜಮರ್ನ್‌ ಭಾಷೆಯ ಸಿನಿಮಾ ನೋಡಿದೆ. ಆ ಚಿತ್ರದಲ್ಲಿ ಒಬ್ಬ ಮಗಳು ಕಳೆದು ಹೋಗುತ್ತಾಳೆ... ಅವಳ ಹುಡುಕಾಟದ ಸುತ್ತ ನಡೆಯುವ ಕಥೆ ಅದು. ಚಿತ್ರ ನನಗೆ ಹೊಸ ರೀತಿಯ ಅನುಭವ ನೀಡಿತ್ತು. ಆ ರೀತಿಯ ಅನುಭವಗಳು ಬೇಕಾದಷ್ಟು ಆಗಿವೆ. ಸಂವಾದ ನಡೆಯುವುದರಿಂದ ಹೊಸ ಆಲೋಚನಾ ಕ್ರಮ ಬೆಳೆಯಲು ಸಾಧ್ಯವಾಗುತ್ತದೆ.

ಆನ್‌ಲೈನ್‌ನಲ್ಲಿ ಸಿಗದಿರುವ ಚಿತ್ರಗಳೂ ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವುದು ಉತ್ತಮ ಬೆಳವಣಿಗೆ. ಪ್ರೇಕ್ಷಕರು ಒಳ್ಳೆಯ ಸಿನಿಮಾಗಳನ್ನು ನೋಡುವ ಅಭ್ಯಾಸ ಬೆಳೆಸಿಕೊಂಡರೆ ಒಳ್ಳೆಯ ಸಿನಿಮಾಗಳನ್ನು ಮಾಡುವ ವ್ಯವಸ್ಥೆಯೂ ಸಾಧ್ಯವಾಗುತ್ತದೆ. ನಮ್ಮ ನೆಲದ ಮಟ್ಟಿಗೆ ಹೇಳುವುದಾದರೆ ಹೊಸ ಪ್ರತಿಭೆಗಳ ಬೆಳವಣಿಗೆ ಚೆನ್ನಾಗಿದೆ. ಆ ಪ್ರತಿಭೆಗಳು ಚಿತ್ರೋತ್ಸವದ ನೆಪದಲ್ಲಿ ಒಂದೆಡೆ ಸೇರುತ್ತಾರೆ. ಈ ಸಮ್ಮಿಲನ ಭವಿಷ್ಯದಲ್ಲಿ ಹೊಸ ಪರಿವರ್ತನೆ ಮತ್ತು ಅಭಿವ್ಯಕ್ತಿಗೆ ಮುನ್ನುಡಿಯಾಗಲಿದೆ. 

– ಕಿಶೋರ್‌, ನಟಮನುಷ್ಯ ಸಂಬಂಧಗಳ ಸಮ್ಮಿಲನ

ನಾನು ಕಳೆದ ವರ್ಷವೂ ಚಿತ್ರೋತ್ಸದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ. ಈ ವರ್ಷವೂ ಇದ್ದೇನೆ. ಮುಖ್ಯವಾಗಿ ನಾನು ಇಲ್ಲಿ ಗಮನಿಸುವುದು ಎಂದರೆ ಮನುಷ್ಯ ಮತ್ತು ಸಂಬಂಧಗಳು ಒಂದೆಡೆ ಬೆಸೆಯುವುದು. ಸಿನಿಮಾಗಳನ್ನು ನಾವು ಚಿತ್ರಮಂದಿರಗಳಲ್ಲಿ ದುಡ್ಡು ಕೊಟ್ಟು ನೋಡಿ ಹೋಗುತ್ತೇನೆ.ಆದರೆ ಇಲ್ಲಿ ಎಲ್ಲರೂ ಒಂದೆಡೆ ಕಲೆತು ವಿಚಾರ ವಿನಿಮಯಕ್ಕೆ ಕಾರಣವಾಗುತ್ತದೆ. ಒಂದು ಚಿತ್ರಕ್ಕೆ ಸಂಬಂಧಿಸಿದ ಪರಸ್ಪರ ಭಿನ್ನ–ವಿಭಿನ್ನ (ತಾಂತ್ರಿಕ, ಕಲೆ ಇತ್ಯಾದಿ ಎಲ್ಲ ವಿಚಾರದಲ್ಲೂ) ಮನೋಭಾವಗಳು ವಿನಿಮಯವಾಗುತ್ತವೆ, ಚರ್ಚೆಯಾಗುತ್ತವೆ.

– ಶಶಿಧರ ಅಡಪ, ಕಲಾನಿರ್ದೇಶಕ

ಹೊಸ ಹುಟ್ಟಿಗೆ ಪ್ರೇರಣೆ

ಸಿನಿಮೋತ್ಸವದಲ್ಲಿ ಚಿತ್ರರಂಗದವರು ಮತ್ತು ಬುದ್ಧಿಜೀವಿಗಳ ಜೊತೆಗೆ ಜನ ಸಾಮಾನ್ಯರೂ ಪಾಲ್ಗೊಳ್ಳಬೇಕು ಎನ್ನುವುದು ನನ್ನ ನಿರೀಕ್ಷೆ. ಚಿತ್ರೋತ್ಸವಗಳಿಂದ ಜಗತ್ತಿನ ವಿವಿಧ ಭಾಷೆಯ ನಿರ್ದೇಶಕರ ನಿರೂಪಣಾ ಶೈಲಿಯನ್ನು ನಾವು ತಿಳಿಯಲು ಸಾಧ್ಯವಾಗುತ್ತದೆ.ಚಿತ್ರೋತ್ಸವಗಳು ನಮ್ಮ ಮೇಲೆ ಪರಿಣಾಮಕಾರಿಯಾದ ಪ್ರಭಾವವನ್ನೇ ಬೀರಿವೆ. ಲೂಸಿಯಾ... ಮತ್ತಿತರ ಚಿತ್ರಗಳೂ ಹುಟ್ಟಿದ್ದು, ಗುರುಪ್ರಸಾದ್, ಪವನ್ ಕುಮಾರ್ ಅವರಂಥ ವಿಭಿನ್ನ ಯೋಚನೆಯ ನಿರ್ದೇಶಕರು ಹೊಸ ಪ್ರಯತ್ನ ಮಾಡಿದ್ದು ಜಾಗತಿಕ ಸಿನಿಮಾ ಪ್ರಭಾವಕ್ಕೆ ಸಿಲುಕಿಯೇ.ಚಿತ್ರಗಳ ತಾಂತ್ರಿಕತೆಗಿಂತ ನಾವು ನಿರೂಪಣೆಯನ್ನು ಅರಿತುಕೊಳ್ಳಬೇಕು. ನಮ್ಮ ಜನರು ತಾಂತ್ರಿಕತೆಗಿಂತ ಕಥೆಯ ಹಾದಿಯನ್ನು ಗ್ರಹಿಸುತ್ತಾರೆ. ಅದು ನಮ್ಮ ಚಿತ್ರರಂಗಕ್ಕೆ ಅಗತ್ಯ ಕೂಡ.

– ವಿ. ಮನೋಹರ್, ಸಂಗೀತ ನಿರ್ದೇಶಕ

ಪ್ರಾದೇಶಿಕತೆಯ ಸ್ಪರ್ಶ

ಬೆಂಗಳೂರಿನಲ್ಲಿ ಚಿತ್ರೋತ್ಸವ ನಡೆಯುವುದರಿಂದ ಪ್ರಾದೇಶಿಕ ಚಿತ್ರಗಳಿಗೆ ಅದರಲ್ಲೂ ಕೊಡಗು, ಕೊಂಕಣಿ, ತುಳುವಿನಂಥ ಸಾಮಾಜಿಕ ಉಪಭಾಷೆಯ ಚಿತ್ರಗಳಿಗೆ ಅವಕಾಶ ಸಿಗಬಹುದು.ಸೆಲೆಬ್ರಿಟಿಗಳನ್ನು ಕರೆಸಿ ಜನರೊಂದಿಗೆ ಸಂವಾದ ನಡೆಸಿದರೆ ಆಕರ್ಷಕವಾಗಿರುತ್ತದೆ. ಅವರನ್ನು ಭೇಟಿ ಮಾಡುವ ಉದ್ದೇಶದಿಂದ ಜನರು ಬರುತ್ತಾರೆ. ನನ್ನ ಅಭಿನಯದ ‘ಜಟ್ಟ’ ಸಿನಿಮಾ ಪ್ರದರ್ಶನವಾಗುತ್ತಿರುವುದು ಖುಷಿ ಕೊಟ್ಟಿದೆ.

– ಸುಕೃತಾ ವಾಗ್ಳೆ, ನಟಿ

 

ಸಂಸ್ಕೃತಿ ಸಂವಹನ

ಚಿತ್ರೋತ್ಸವಗಳು ವಿವಿಧ ಸಂಸ್ಕೃತಿಗಳ ಸಂವಹನಕ್ಕೆ ಸೇತುವೆಯಾಗುತ್ತವೆ. ಬೆಂಗಳೂರು ಚಿತ್ರೋತ್ಸವ ಎಲ್ಲ ಚಿತ್ರೋತ್ಸವಗಳು ಮುಗಿದ ನಂತರ ಬರುವುದರಿಂದ ಉತ್ತಮ ಚಿತ್ರಗಳ ಆಯ್ಕೆಗೆ ಅವಕಾಶವಾಗುತ್ತದೆ.ಜನಸಾಮಾನ್ಯರಿಗೆ ಚಿತ್ರೋತ್ಸವದ ಬಗ್ಗೆ ಅಭಿರುಚಿ ಬೆಳೆಸಲು ಸ್ವಲ್ಪ ದೀರ್ಘ ಅವಧಿ ಬೇಕಾಗುತ್ತದೆ.

– ಭಾವನಾ, ನಟಿ

 

 

ಅರಿವಿನ ಕಿಟಕಿ

ಈ ಚಿತ್ರೋತ್ಸವದಲ್ಲಿ ನನ್ನ ಗಮನ ಲ್ಯಾಟಿನ್ ಅಮೆರಿಕ ಸಿನಿಮಾಗಳ ಬಗ್ಗೆ. ಜಗತ್ತಿನ ವಿವಿಧ ದೇಶಗಳ ಚಿತ್ರರಂಗದಲ್ಲಿ ಈಗ ಪರಿಚಯಿಸಲಾಗುತ್ತಿರುವ ತಂತ್ರಜ್ಞಾನವನ್ನು ಗಮನಿಸಿ ನಮ್ಮಲ್ಲೂ ಅಳವಡಿಸಿಕೊಳ್ಳಲು ಚಿತ್ರೋತ್ಸವ ಪೂರಕ.ಜಾಗತೀಕರಣ ಸೃಷ್ಟಿಸಿದ ಬಿಕ್ಕಟ್ಟು ಹಾಗೂ ಬದಲಾದ ಜೀವನ ಶೈಲಿಗೆ ಬೇರೆ ದೇಶಗಳು ಹೇಗೆ ಸ್ಪಂದಿಸುತ್ತಿವೆ ಎನ್ನುವುದನ್ನು ಅರಿತುಕೊಳ್ಳಲು ನಾನು ಈ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವೆ

– ಜಿ.ಎಸ್‌. ಭಾಸ್ಕರ್, ಛಾಯಾಗ್ರಾಹಕ

ಅನುಭವ ಮಂಟಪ

ಪ್ರಾದೇಶಿಕ ಸಿನಿಮಾ ತಯಾರಕರಿಗೆ ಚಿತ್ರೋತ್ಸವಗಳು ಜಗತ್ತಿನ ಸಿನಿಮಾ ನೋಡುವ ಕಿಟಕಿಯಾಗುತ್ತವೆ. ಒಬ್ಬ ಸಿನಿಮಾ ತಯಾರಕ ಜಾಗತಿಕ ಸಿನಿಮಾ ರಂಗದೊಂದಿಗೆ ನಿರಂತರವಾಗಿ ಸಂಪರ್ಕವಿಟ್ಟುಕೊಂಡಿರಬೇಕು. ಚಿತ್ರೋತ್ಸವಗಳಿಂದ ಪ್ರಾದೇಶಿಕವಾಗಿ ನಡೆಯುತ್ತಿರುವ ಪ್ರಯೋಗಗಳ ಬಗ್ಗೆ ತಿಳಿಯಲು ಅಂತರರಾಷ್ಟ್ರೀಯ ಸಿನಿಮಾ ನಿರ್ಮಾತೃಗಳಿಗೆ ಅನುಕೂಲ.ಗೋವಾ, ಕೋಲ್ಕತ್ತಾ ಮತ್ತಿತರ ಚಿತ್ರೋತ್ಸವಗಳು ಪ್ರತಿ ವರುಷ ಅದೇ ದಿನದಂದು ಆರಂಭವಾಗುತ್ತವೆ. ಆದರೆ ಬೆಂಗಳೂರು ಚಿತ್ರೋತ್ಸವ ಆ ರೀತಿಯಾಗುತ್ತಿಲ್ಲ. ಕಳೆದ ವರುಷ ನವೆಂಬರ್‌–ಡಿಸೆಂಬರ್‌ನಲ್ಲಿ ನಡೆದಿತ್ತು.ಈ ಬಾರಿ ಡಿಸೆಂಬರ್ ಅಂತ್ಯಕ್ಕೆ ಬಂದಿದೆ. ನಿಗದಿತ ಕ್ಯಾಲೆಂಡರ್‌ ಇದ್ದರೆ ಅಂತರರಾಷ್ಟ್ರೀಯ ಪ್ರೇಕ್ಷಕರು, ಸಿನಿಮಾ ತಯಾರಕರು ಮತ್ತು ಗುಣಮಟ್ಟದ ಸಿನಿಮಾಗಳು ಚಿತ್ರೋತ್ಸವಕ್ಕೆ ಬರುವ ಸಂಖ್ಯೆ ಹೆಚ್ಚುತ್ತದೆ.ಹಳೆಯ, ಮಧ್ಯಮ ಮತ್ತು ಹೊಸ ತಲೆಮಾರಿನ ಸಿನಿಮಾಸಕ್ತರು ಒಂದೆಡೆ ಬೆರೆತು ಅನುಭವ ಹಂಚಿಕೊಳ್ಳಲು ಚಿತ್ರೋತ್ಸವ ವೇದಿಕೆಯಾಗಲಿ. ಕೊಡು–ಕೊಳ್ಳುವಿಕೆ ಸ್ಥಳೀಯವಾಗಿ ನಡೆಯಬೇಕಾದದ್ದು ಅಗತ್ಯ.

– ಬಿ. ಸುರೇಶ್, ನಿರ್ದೇಶಕ–ನಿರ್ಮಾಪಕ

ಪ್ರತಿಕ್ರಿಯಿಸಿ (+)