ಬುಧವಾರ, ಏಪ್ರಿಲ್ 21, 2021
25 °C

ಪರಪ್ಪನ ಅಗ್ರಹಾರ ಕಾರಾಗೃಹದಿಂದ ಕೈದಿ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ನಗರದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ಪುಟ್ಟಸ್ವಾಮಿ (45) ಎಂಬ ಕೈದಿ ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ಗುರುವಾರ ಸಂಜೆ ನಡೆದಿದೆ.ಮೈಸೂರು ರಸ್ತೆಯ ಕಸ್ತೂರಬಾ ನಗರದ ಪುಟ್ಟಸ್ವಾಮಿ ಪತ್ನಿಯನ್ನೇ ಕೊಲೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮೂರನೇ ತ್ವರಿತ ನ್ಯಾಯಾಲಯ ಆತನಿಗೆ 2004ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಕಾರಾಗೃಹ ಆವರಣದಲ್ಲಿನ ಉದ್ಯಾನದ ನಿರ್ವಹಣೆಯ ಕೆಲಸ ಮಾಡುತ್ತಿದ್ದ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪತ್ನಿಯ ಕೊಲೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಮಹದೇವಪುರ ಸಮೀಪದ ಅಬ್ಬಯ್ಯರೆಡ್ಡಿ ಲೇಔಟ್‌ನಲ್ಲಿ ನಡೆದಿದೆ.

ಅಬ್ಬಯ್ಯರೆಡ್ಡಿ ಲೇಔಟ್ ನಿವಾಸಿ ಗಂಗಲಕ್ಷ್ಮಿ (28) ಕೊಲೆಯಾದವರು. ಅವರ ಪತಿ ಆರೋಪಿ ಮುನಿಚೌಡಪ್ಪ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಲಾರಿ ಚಾಲಕನಾದ ಮುನಿಚೌಡಪ್ಪ ಪತ್ನಿಯ ಜತೆ ಆಗಾಗ್ಗೆ ಜಗಳವಾಡುತ್ತಿದ್ದ. ಅಂತೆಯೇ ಆತ ನಾಲ್ಕೈದು ದಿನಗಳ ಹಿಂದೆ ಪತ್ನಿಯ ಜತೆ ಜಗಳವಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಮನೆಯಲ್ಲೇ ಬಿಟ್ಟು ಬಾಗಿಲಿಗೆ ಬೀಗ ಹಾಕಿಕೊಂಡು ಮಗುವಿನೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಮನೆಯ ಒಳ ಭಾಗದಿಂದ ಕೆಟ್ಟ ವಾಸನೆ ಬರುತ್ತಿದ್ದದ್ದನ್ನು ಗಮನಿಸಿದ ಸ್ಥಳೀಯರು ಆ ಬಗ್ಗೆ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಹೋಗಿ ಅವರ ಮನೆಯ ಬಾಗಿಲು ಮುರಿದು ನೋಡಿದಾಗ ಗಂಗಲಕ್ಷ್ಮಿ ಕೊಲೆಯಾಗಿರುವುದು ಗೊತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ. ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದುಬಾರಿ ಬಡ್ಡಿ ವಸೂಲಿ- ಬಂಧನ: ನಗರದ ಸಿಟಿ ಮಾರುಕಟ್ಟೆಯಲ್ಲಿ ಹಣ್ಣು, ಹೂವು, ತರಕಾರಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ಸಾಲ ನೀಡಿ ದುಬಾರಿ ಬಡ್ಡಿ ವಸೂಲಿ ಮಾಡುತ್ತಿದ್ದ ನಾಲ್ಕು ಮಂದಿಯನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು 1.13 ಲಕ್ಷ ನಗದು ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಆಂಜನೇಯಮೂರ್ತಿ (47), ಬ್ರಹ್ಮೇಂದ್ರ (33), ಕೃಷ್ಣಮೂರ್ತಿ (20) ಮತ್ತು ಮನ್ಸೂರ್ ಖಾನ್ (30) ಬಂಧಿತರು. ಆರೋಪಿಗಳು ಬೆಳಿಗ್ಗೆಯೇ ಸಿಟಿ ಮಾರುಕಟ್ಟೆಗೆ ಬಂದು ಸಣ್ಣಪುಟ್ಟ ವ್ಯಾಪಾರಿಗಳಿಗೆ ಸಾವಿರ ರೂಪಾಯಿಗೆ 100 ರೂಪಾಯಿ ಬಡ್ಡಿ ಹಿಡಿದುಕೊಂಡು 900 ರೂಪಾಯಿ ಸಾಲ ನೀಡುತ್ತಿದ್ದರು. ಸಂಜೆ ಬಂದು ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದರು. ಅಂತೆಯೇ ಐದು ಸಾವಿರ ರೂಪಾಯಿ ಸಾಲ ನೀಡಿ ವಾರಕ್ಕೆ ಒಂದು ಸಾವಿರ ರೂಪಾಯಿ ಬಡ್ಡಿ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.ಬೆಂಕಿ ಆಕಸ್ಮಿಕ- ಸಾವು:  ಮಹಿಳೆಯೊಬ್ಬರಿಗೆ ಅಡುಗೆ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸಾವನ್ನಪ್ಪಿದ ಘಟನೆ ಕೆ.ಆರ್.ಪುರದ ಪ್ರಿಯದರ್ಶಿನಿ ಲೇಔಟ್‌ನಲ್ಲಿ ನಡೆದಿದೆ.ಖಾಸಗಿ ಕಂಪೆನಿ ಉದ್ಯೋಗಿ ಚಂದ್ರ ಎಂಬುವರ ಪತ್ನಿ ಗೀತಾ (26) ಮೃತಪಟ್ಟವರು. ಮಾ.4ರಂದು ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡು ತೀವ್ರ ಸುಟ್ಟ ಗಾಯಗಳಾಗಿದ್ದವು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶುಕ್ರವಾರ ಬೆಳಿಗ್ಗೆ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.ಸಾಯುವ ಮುನ್ನ ಹೇಳಿಕೆ ನೀಡಿರುವ ಗೀತಾ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ವಿಷಯ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಲಾರಿ ಡಿಕ್ಕಿ- ಸಾವು: ಲಾರಿ ಡಿಕ್ಕಿ ಹೊಡೆದು  ಪಾದಚಾರಿ ಸಾವನ್ನಪ್ಪಿದ ಘಟನೆ ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ದೇವಸ್ಥಾನದ ಬಳಿ ಶುಕ್ರವಾರ ನಡೆದಿದೆ.ಆಂಧ್ರಪ್ರದೇಶದ ಅನಂತಪುರ ಮೂಲದ ಯರ್ರಿಸ್ವಾಮಿ (28) ಮೃತಪಟ್ಟವರು. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಬೆಳಿಗ್ಗೆ ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆಯಿತು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು. ನಂತರ ಲಾರಿ  ಪಿಎಸ್‌ಬಿಎಸ್ ಶಾಲೆ ಕಾಂಪೌಂಡ್‌ಗೂ ಗುದ್ದಿ, ಗೋಡೆ ಕುಸಿದಿದೆ. ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಮೈಕೊಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.