ಪರಭಾಷಾ ವ್ಯಾಮೋಹ ಬೇಡ
ಕೆಜಿಎಫ್: ಕರ್ನಾಟಕದಲ್ಲಿ ವಾಸಿಸುವ ಅನ್ಯಭಾಷಿಕರು ಕನ್ನಡಿಗರ ಭಾವನೆಗಳನ್ನು ಕೆಣಕದೆ, ಕನ್ನಡಿಗರಾಗಿ ಬಾಳುವುದನ್ನು ಕಲಿಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ನಾರಾಯಣಗೌಡ ಹೇಳಿದರು.
ರಾಬರ್ಟ್ಸನ್ಪೇಟೆಯಲ್ಲಿ ಮಂಗಳವಾರ ನಡೆದ ಗಡಿಗಾಡ ಕನ್ನಡ ಜಾಗೃತಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಒಕ್ಕೂಟದ ವ್ಯವಸ್ಥೆಗೆ ಬದ್ಧವಾಗಿರುವ ದೇಶದ ಜನ ಎಲ್ಲಿ ಬೇಕಾದರೆ ವಾಸಿಸುವ ಹಕ್ಕಿದೆ. ಆದರೆ ಆ ಹಕ್ಕು ಮೂಲ ನಿವಾಸಿಗಳ, ಆ ರಾಜ್ಯದ ಭಾಷಿಕರ ಹಕ್ಕನ್ನು ಕಸಿದುಕೊಳ್ಳುವ ಹಕ್ಕಾಗಬಾರದು ಎಂದರು.
ಕರ್ನಾಟಕದಲ್ಲಿರುವ ಎಲ್ಲಾ ಭಾಷಿಕರ ಮೇಲೆ ಸಂಘಟನೆ ದ್ವೇಷ ಸಾಧಿಸುವುದಿಲ್ಲ. ಬೇರೆ ಭಾಷೆ ಹೆಚ್ಚಾಗಿರುವ ಪ್ರದೇಶದಲ್ಲಿ ಪರಭಾಷಾ ವ್ಯಾಮೋಹ ಉಂಟಾಗಿ ಅಭಿವೃದ್ಧಿ ಕುಂಠಿತವಾಗುವುದು ಬೇಡ. ಮುಂದಿನ ಚುನಾವಣೆಯಲ್ಲಿ ನಾಡು ನುಡಿಗೆ ಶ್ರಮಿಸುವವರಿಗೆ ಮಾತ್ರ ಮತ ನೀಡಬೇಕು. ಇದರಿಂದಾಗಿ ರಾಜ್ಯ ಸರ್ಕಾರ ಕೂಡ ಹೆಚ್ಚಿನ ನೆರವನ್ನು ನೀಡಲು ಬಯಸುತ್ತದೆ ಎಂದರು.
ಕೋಲಾರ ಜಿಲ್ಲೆ ಸೇರಿದಂತೆ ನೆರೆಯ ಐದು ಜಿಲ್ಲೆಗಳಲ್ಲಿ ಶಾಶ್ಚತ ನೀರಾವರಿ ಒದಗಿಸಲು ನಡೆಯುವ ಹೋರಾಟಕ್ಕೆ ನಗರದ ಜನತೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.ಪ್ರಾಸ್ತಾವಿಕ ಭಾಷಣ ಮಾಡಿದ ಜಿಲ್ಲಾ ಘಟಕದ ಅಧ್ಯಕ್ಷ ರಾಜಗೋಪಾಲಗೌಡ, ಕನ್ನಡ ಮಾತನಾಡುವುದೇ ಅಸಾಧ್ಯ ಎಂಬ ಪರಿಸ್ಥಿತಿ ಇದ್ದ ಕೆಜಿಎಫ್ನಲ್ಲಿ ಇಂದು ಸಾಕಷ್ಟು ಸುಧಾರಣೆ ಆಗಿದೆ. ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸಿದರೆ ಸಂಘಟನೆ ಕಾರ್ಯರ್ತರು ತಿರುಗಿ ಬೀಳುವುದು ಖಂಡಿತ ಎಂದರು.
ಗೊಲ್ಲಹಳ್ಳಿ ಕನ್ನಡ ಸಂಘದ ಹೋರಾಟಗಾರ ಮದಿರಪ್ಪ ನಗರದ ಕನ್ನಡ ಸ್ಥಿತಿಗತಿಯ ಬಗ್ಗೆ ಮಾತನಾಡಿದರು. ನಂಜುಂಡಪ್ಪ ಸ್ವಾಗತಿದರು. ಅಪ್ಪಾಜಿಗೌಡ ನಿರೂಪಿಸಿದರು. ಮುಖಂಡರಾದ ಶ್ರೀನಿವಾಸ್, ಪಲ್ಲವಿ, ಚಿತ್ರಾ ರಮೇಶ್, ಕೃಷ್ಣೇಗೌಡ, ಸುಬ್ರಹ್ಮಣಿ, ತುಕಾರಾಂ ವೇದಿಕೆಯಲ್ಲಿದ್ದರು. ಈ ಮುನ್ನ ನಗರದಲ್ಲಿ ಕಾರ್ಯಕರ್ತರು ಬೃಹತ್ ಮೆರವಣಿಗೆ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.