ಪರಭಾಷೆ ಒಲ್ಲೆ, ಕನ್ನಡವೇ ಎಲ್ಲೆ...

7

ಪರಭಾಷೆ ಒಲ್ಲೆ, ಕನ್ನಡವೇ ಎಲ್ಲೆ...

Published:
Updated:
ಪರಭಾಷೆ ಒಲ್ಲೆ, ಕನ್ನಡವೇ ಎಲ್ಲೆ...

‘ನಾನು ಕ್ಯಾಮೆರಾ ಮುಂದೆ ಗೊಂಬೆಯಂತೆ ನಿಲ್ಲಲು ಬಯಸುವುದಿಲ್ಲ’

– ವೃತ್ತಿ ಬದುಕಿನ ಹಾದಿ ಹೀಗೆಯೇ ಸಾಗಬೇಕು ಎಂಬ ಹಾಕಿಕೊಂಡ ಸ್ವಯಂ ಕಟ್ಟುಪಾಡುಗಳನ್ನು ಮೀರುವುದಿಲ್ಲ ಎನ್ನುವುದು ನಟಿ ಶ್ರಾವ್ಯ ಮಾತಿನಲ್ಲಿ ಸ್ಪಷ್ಟವಾಗುತ್ತಿತ್ತು.ಅವರೀಗ ಪ್ರೀತಿಯ ರಾಯಭಾರಿ. ಪ್ರೇಮಿಗಳ ದಿನಾಚರಣೆಯಂದು ಯುವ ಮನಸುಗಳಿಗೆ ತಂಪೆರೆಯಲು ತುಡಿಯುತ್ತಿದ್ದಾರೆ. ‘ರೋಸ್‌’ ಚಿತ್ರದ ಮೂಲಕ ಮೊದಲ ಬಾರಿಗೆ ಪರಿಪೂರ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರಲ್ಲಿ ತಮ್ಮ ನಡೆಯ ಬಗ್ಗೆ ಖಚಿತತೆ ಮತ್ತು ಬದ್ಧತೆ ಇದೆ. ನಟಿ ಎಂದು ಕರೆಸಿಕೊಳ್ಳುವುದು ಕಷ್ಟವಲ್ಲ, ಒಳ್ಳೆಯ ನಟಿ ಎಂದು ಹೆಸರು ಮಾಡುವುದು ಕಷ್ಟ ಎಂಬ ಅಭಿಪ್ರಾಯ ಅವರದು. ಇದಕ್ಕಾಗಿಯೇ ಅಳೆದೂ ತೂಗಿ ಚಿತ್ರಗಳನ್ನು ಆಯ್ದುಕೊಳ್ಳುವ ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ. ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶ ಇರುವ ಕಥೆಗಳನ್ನು ಮಾತ್ರ ಅವರು ಒಪ್ಪಿಕೊಳ್ಳುತ್ತಿದ್ದಾರೆ.‘ಲೂಸ್‌ಗಳು’ ಚಿತ್ರದ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಶ್ರಾವ್ಯ, ಫೆಬ್ರುವರಿ 14ಕ್ಕೆ ತೆರೆಕಾಣುತ್ತಿರುವ ತಮ್ಮ ‘ರೋಸ್‌’ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದಾರೆ. ಸಂಪ್ರದಾಯಸ್ಥ ಕುಟುಂಬದ ಯುವತಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರಿಗೆ ತಾವೊಬ್ಬ ಉತ್ತಮ ನಟಿ ಎಂದು ಸಾಬೀತುಪಡಿಸಿಕೊಳ್ಳಲು ಈ ಚಿತ್ರ ಉತ್ತಮ ವೇದಿಕೆ ಒದಗಿಸಿದೆಯಂತೆ. ಚಿತ್ರಕಥೆ ಮತ್ತು ಸಂಗೀತ ಈ ಚಿತ್ರದ ಪ್ರಮುಖ ಅಂಶಗಳು ಎನ್ನುತ್ತಾರೆ ಅವರು. ಕಥೆಯ ಓಘಕ್ಕೆ ತಕ್ಕಂತೆ ಅವರ ಪಾತ್ರದ ಸ್ವರೂಪವೂ ಬದಲಾಗುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಅದು ಇನ್ನೊಂದು ರೀತಿ ಪ್ರಕಟಗೊಳ್ಳುತ್ತದೆ. ಹೀಗೆ ಪಾತ್ರದೊಳಗಿನ ವೈವಿಧ್ಯ ಅವರಿಗೆ ‘ಲೂಸುಗಳು’ ಬಳಿಕ ಒಂದು ವರ್ಷ ಅನೇಕ ಕಥೆಗಳನ್ನು ನಿರಾಕರಿಸಿ ಕೊನೆಗೆ ಈ ಚಿತ್ರವನ್ನು ಒಪ್ಪಿಕೊಂಡಿದ್ದರ ಬಗ್ಗೆ ಸಾರ್ಥಕಭಾವ ಮೂಡಿಸಿದೆ.‘ರೋಸ್‌’ನಲ್ಲಿ ನಾಯಕ ಮತ್ತು ನಾಯಕಿಯ ಪಾತ್ರಗಳಷ್ಟೇ ಪೋಷಕ ಪಾತ್ರಗಳೂ ಮುಖ್ಯ. ಕಥೆಯಲ್ಲಿನ ಗಟ್ಟಿತನ, ಅದಕ್ಕೆ ಪೂರಕವಾದ ಕಲಾವಿದರ ಬಳಗ ಎಲ್ಲವುಗಳಿಂದ ಚಿತ್ರ ಶ್ರೀಮಂತವಾಗಿದೆ ಎಂದು ಖುಷಿಯಿಂದ ಹೇಳಿಕೊಳ್ಳುವ ಶ್ರಾವ್ಯ, ‘ರೋಸ್‌’ ತಮ್ಮ ವೃತ್ತಿಬದುಕಿಗೆ ಬ್ರೇಕ್‌ ನೀಡುವ ಚಿತ್ರ ಎಂಬ ಭರವಸೆ ಹೊಂದಿದ್ದಾರೆ.ಅಭಿನಯದ ಜೊತೆಗೆ ಚಿತ್ರೀಕರಣದ ಸಂದರ್ಭವೂ ಅವರಿಗೆ ವಿಶಿಷ್ಟ ಅನುಭವ ನೀಡಿದೆ. ಮನಾಲಿಯಲ್ಲಿ ಕೇವಲ ಎರಡು ಗಂಟೆಯ ಚಿತ್ರೀಕರಣಕ್ಕಾಗಿ ನಾಲ್ಕು ಗಂಟೆ ಪ್ರಯಾಣ ಮಾಡುತ್ತಿದ್ದದ್ದು, ಅಲ್ಲಿನ ಚಳಿಯನ್ನು ಲೆಕ್ಕಿಸದೆ ಹಾಡುಗಳಿಗೆ ಹೆಜ್ಜೆ ಹಾಕಿದ್ದು ಅವರಿಗೆ ಮುದ ನೀಡಿದೆ.ಮುಂದಿನ ಚಿತ್ರ ಯಾವುದು? ಎಂದು ಕೇಳಿದರೆ ಅವರ ಉತ್ತರ ಗೊತ್ತಿಲ್ಲ! ಒಂದು ಚಿತ್ರ ಮುಗಿದ ಬಳಿಕವಷ್ಟೇ ಮತ್ತೊಂದು ಸಿನಿಮಾ ಬಗ್ಗೆ ಯೋಚಿಸುವುದು ಎಂಬ ನೀತಿಯನ್ನವರು ಅಳವಡಿಸಿಕೊಂಡಿದ್ದಾರೆ. ‘ಲೂಸುಗಳು’ ಚಿತ್ರದ ಬಳಿಕ ಸುಮಾರು ಒಂದು ವರ್ಷ ಯಾವ ಸಿನಿಮಾವನ್ನೂ ಒಪ್ಪಿಕೊಳ್ಳದ ಅವರು ‘ರೋಸ್‌’ ಮೂಲಕ ಜನರನ್ನು ಮೆಚ್ಚಿಸಿದ ಬಳಿಕವಷ್ಟೇ ಮತ್ತೆ ಬಣ್ಣಹಚ್ಚುವ ಯೋಚನೆ ಎಂದು ತೀರ್ಮಾನಿಸಿದ್ದಾರೆ.ತಮ್ಮ ಮೊದಲ ಚಿತ್ರ ಬಹುತಾರಾಗಣದ ‘ಲೂಸುಗಳು’ ಸೋಲಿಗೆ ನಿರ್ದೇಶಕರೇ ಕಾರಣವೆಂದು ಅವರು ದೂರುತ್ತಾರೆ. ಕಥೆ ಹೇಳುವುದೇ ಒಂದು, ಸಿನಿಮಾವಾಗಿ ಹೊರಬರುವುದೇ ಇನ್ನೊಂದು. ತಮ್ಮ ಸಿನಿಮಾ ಬಗ್ಗೆ ಹೆಚ್ಚು ಮಾತನಾಡಿಕೊಳ್ಳುವವರ ಸಮಸ್ಯೆಯೇ ಅದು ಎಂದು ಬೇಸರದಿಂದ ಅವರು ಹೇಳಿಕೊಳ್ಳುತ್ತಾರೆ. ಮೊದಲ ಚಿತ್ರದ ಕಹಿ ಅನುಭವ ಎದುರಿಗೆ ಇರುವುದರಿಂದ ಮತ್ತಷ್ಟು ಎಚ್ಚರಿಕೆಯ ಹೆಜ್ಜೆಗಳನ್ನಿಡಲು ನಿರ್ಧರಿಸಿದ್ದಾರೆ.

ನಟನೆ ಬಯಸದೆ, ಸುಮ್ಮನೆ ನಾಯಕನ ಜೊತೆ ಹಾಡಿ ಕುಣಿಯುವ ಚಿತ್ರಗಳೆಂದರೆ ಒಲ್ಲೆ ಎನ್ನುತ್ತಾರೆ ಅವರು. ಹಿಂದಿನ ಚಿತ್ರದಲ್ಲಿ ತಮ್ಮ ಅಭಿನಯದಲ್ಲಾದ ತಪ್ಪುಗಳನ್ನೂ ಅವರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಸಿನಿಮಾ ನೋಡಿದಾಗ ಪಾತ್ರದ ಧನಾತ್ಮಕ ಅಂಶಗಳು ಕಣ್ಣಿಗೆ ಬೀಳುವುದಿಲ್ಲ, ಬದಲಾಗಿ ಋಣಾತ್ಮಕ ಸಂಗತಿಗಳನ್ನು ಮಾತ್ರ ಗ್ರಹಿಸುತ್ತೇನೆ. ಆ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸುವುದು ತಮ್ಮ ಕರ್ತವ್ಯ ಕೂಡ ಎಂದು ಅವರು ಹೇಳಿಕೊಳ್ಳುತ್ತಾರೆ.‘ರೋಸ್‌’ ಚಿತ್ರಕ್ಕಾಗಿ ಕೇಶಶೈಲಿ, ಮೇಕಪ್‌ ಮುಂತಾದವುಗಳಲ್ಲಿ ಅವರು ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರಂತೆ. ಪಾತ್ರಕ್ಕಾಗಿ ತೂಕವನ್ನೂ ಇಳಿಸಿಕೊಂಡಿದ್ದಾರೆ. ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದೇನೆ ಎಂಬ ನಂಬಿಕೆ ಅವರದು. ಕನ್ನಡ ಮಾತ್ರವಲ್ಲ, ನೆರೆಭಾಷೆಯ ಚಿತ್ರಗಳಿಂದ ಆಫರ್‌ಗಳು ಬಂದರೂ ಅವುಗಳತ್ತ ಶ್ರಾವ್ಯ ಮನಸು ಮಾಡುತ್ತಿಲ್ಲ. ‘ನನ್ನ ವೃತ್ತಿ ಬದುಕು ಏನಿದ್ದರೂ ಕನ್ನಡದಲ್ಲಿಯೇ. ಪರಭಾಷಾ ಚಿತ್ರರಂಗದ ಬಗ್ಗೆ ಎಳ್ಳಷ್ಟೂ ಆಸಕ್ತಿಯಿಲ್ಲ’ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry