ಪರಮಶಿವಯ್ಯ ವರದಿ ಜಾರಿಗೆ ಎಚ್‌ಡಿಕೆ ಆಗ್ರಹ

7

ಪರಮಶಿವಯ್ಯ ವರದಿ ಜಾರಿಗೆ ಎಚ್‌ಡಿಕೆ ಆಗ್ರಹ

Published:
Updated:
ಪರಮಶಿವಯ್ಯ ವರದಿ ಜಾರಿಗೆ ಎಚ್‌ಡಿಕೆ ಆಗ್ರಹ

ಬೆಂಗಳೂರು: `ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಕರ್ನಾಟಕದ ಬರಪೀಡಿತ ಜಿಲ್ಲೆಗಳ ಶಾಶ್ವತ ಕುಡಿಯುವ ನೀರಿಗಾಗಿ ನೀರಾವರಿ ತಜ್ಞ ಪರಮಶಿವಯ್ಯ ವರದಿಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು~ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.ಅಸೀಮ ಅಕ್ಷರ ಸಂಸ್ಥೆಯು ನಗರದಲ್ಲಿ ಸೋಮವಾರ ಏರ್ಪಡಿಸಿದ್ದ `ಮತ್ತೆ ಬರ ಬೇಡ~ ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. `ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸರಾಸರಿ ಹೆಚ್ಚು ಮಳೆಯಾಗುತ್ತದೆ. ಈ ನೀರು ವ್ಯರ್ಥವಾಗಿ ಅರಬ್ಬಿ ಸಮುದ್ರ ಸೇರುತ್ತಿದೆ.

ಪರಿಸರಕ್ಕೆ ಹೆಚ್ಚಿನ ಹಾನಿಯಾಗದಂತೆ ಈ ನೀರನ್ನು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಭಾಗಗಳ ಕುಡಿಯುವ ನೀರಿಗೆ ಬಳಸಬಹುದು. ಈ ಯೋಜನೆಯನ್ನು ವಿರೋಧಿಸುವವರು ಮಾನವೀಯತೆ ದೃಷ್ಟಿಯಿಂದ ಯೋಜನೆ ಜಾರಿಗೆ ಸಹಕರಿಸಬೇಕು~ ಎಂದು ಅವರು ಹೇಳಿದರು.`ಯಾರೇ ಆದರೂ ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ನ್ಯಾಯಯುತವಾಗಿ ನದಿ ನೀರಿನ ಹಂಚಿಕೆ ಮಾಡಬೇಕು. ರಾಜ್ಯದಲ್ಲಿ ಅನುಷ್ಠಾನಕ್ಕೆ ಬರದೇ ಉಳಿದಿರುವ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಸಹಕಾರ ನೀಡಬೇಕು.

ಕಾವೇರಿ ನದಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಪಕ್ಷಪಾತ ಧೋರಣೆಯನ್ನು ಬಿಡಬೇಕು~ ಎಂದು ಅವರು ಒತ್ತಾಯಿಸಿದರು. `ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯಗಳಲ್ಲಿ ಈಗಾಗಲೇ ನೀರಿನ ಮಟ್ಟ ಕಡಿಮೆಯಾಗಿದೆ. ನಿರಂತರವಾಗಿ ತಮಿಳುನಾಡಿಗೆ ನೀರು ಬಿಡುತ್ತಿದ್ದರೆ ಮುಂದೆ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಲಿದೆ~ ಎಂದು ಅವರು ಹೇಳಿದರು.

`ನಿಲುವಿಗೆ ಸರ್ಕಾರ ಬದ್ಧವಾಗಿರಲಿ~: `ಕಾವೇರಿ ನದಿಯಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಸರ್ಕಾರ ತನ್ನ ಈ ನಿಲುವಿಗೆ ಬದ್ಧವಾಗಿರಬೇಕು. ಮುಂದೆ ಎಂತಹ ಸಂದರ್ಭ ಬಂದರೂ ರಾಜ್ಯ ತನ್ನ ನಿಲುವಿನಿಂದ ಹಿಂದೆ ಸರಿಯಬಾರದು~ ಎಂದು ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕಾವೇರಿ ನದಿ ನೀರಿನ ವಿಚಾರದಲ್ಲಿ ಕೇಂದ್ರದ ವರ್ತನೆ ಸರಿಯಿಲ್ಲ. ತಮಿಳುನಾಡಿನ ಪರವಾದ ತನ್ನ ನಿಲುವನ್ನು ಕೇಂದ್ರ ಬದಲಿಸಿಕೊಳ್ಳಬೇಕು. ಕಾವೇರಿ ನದಿ ಪ್ರಾಧಿಕಾರದ ನಿರ್ಧಾರದಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ. ಸುಪ್ರೀಂಕೋರ್ಟ್ ಕೂಡ ತನ್ನ ಆದೇಶವನ್ನು ಮರುಪರಿಶೀಲಿಸಬೇಕು~ ಎಂದು ಅವರು ಹೇಳಿದರು.`ಕಾವೇರಿ ವಿಚಾರದಲ್ಲಿ ಕೇಂದ್ರದ ನಿಲುವನ್ನು ವಿರೋಧಿಸಿ ಜೆಡಿಎಸ್ ಪಕ್ಷದ ಸಂಸದರು ಮತ್ತು ಶಾಸಕರು ರಾಜೀನಾಮೆ ನೀಡುವ ಬಗ್ಗೆ ದೇವೇಗೌಡರು ದೆಹಲಿಯಿಂದ ಬಂದ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು~ ಎಂದರು.`ಬೆಳಗಾವಿಯ `ಸುವರ್ಣಸೌಧ~ ಉದ್ಘಾಟನೆಯ ಬಗ್ಗೆ ಮಹಾರಾಷ್ಟ್ರ ವಿನಾಕಾರಣ ತಗಾದೆ ತೆಗೆಯುವುದು ಸರಿಯಲ್ಲ. ಸುವರ್ಣಸೌಧದ ಉದ್ಘಾಟನೆಗೆ ತೆರಳದಂತೆ ರಾಷ್ಟ್ರಪತಿಗಳ ಮೇಲೆ ಒತ್ತಡವಿದೆ ಎಂಬ ಮಾಹಿತಿ ಇದೆ. ಆದರೆ, ರಾಷ್ಟ್ರಪತಿಗಳು ಈ ಒತ್ತಡಗಳಿಗೆ ಮಣಿಯದೇ ಉದ್ಘಾಟನೆಗೆ ದಿನಾಂಕ ನಿಗಧಿಗೊಳಿಸಬೇಕು~ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry