ಶುಕ್ರವಾರ, ಜೂನ್ 18, 2021
28 °C

ಪರಮಶಿವಯ್ಯ ವರದಿ ಜಾರಿಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನೀರಿನ ಸಮಸ್ಯೆ ನಿವಾ­ರಣೆಗೆಂದೇ ಪ್ರಥಮ ಹಂತದ ರೂಪ­ದಲ್ಲಿ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅವರ ವರದಿ ಪರಿಶೀಲಿಸಿ, ಅನುಷ್ಠಾನಕ್ಕೆ ಕ್ರಮ ಕೈ­ಗೊಳ್ಳ­ಲಾಗುವುದು ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಹೇಳಿದರು.ನಗರದ ಹೊರವಲಯದ ಬಿಜಿಎಸ್‌ ವರ್ಲ್ಡ್‌ ಶಾಲೆ ಆವರಣದಲ್ಲಿ ಸೋಮ­ವಾರ ಆಯೋಜಿಸಲಾಗಿದ್ದ ಕಾರ್ಯ­ಕ್ರಮ­ದಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಯಾವುದೇ ರೀತಿಯ ನದಿಮೂಲ ಮತ್ತು ಜಲಮೂಲವಿಲ್ಲದ ಬಯಲು­ಸೀಮೆ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಅದನ್ನು ಪರಿಹರಿಸಲು ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರಕ್ಕೆ ಪ್ರತಿಯೊಬ್ಬರ ಸಹಕಾರ ಮತ್ತು ಬೆಂಬಲ ಬೇಕು ಎಂದು ಮನವಿ ಮಾಡಿದರು.ಎತ್ತಿನಹೊಳೆ ಯೋಜನೆಯನ್ನು ₨ 12 ಸಾವಿರ ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಪರಮಶಿವಯ್ಯ ವರದಿಯ ಅಧ್ಯಯನ ಮತ್ತು ಪರಿಶೀಲನೆಗಾಗಿಯೇ ₨ 50 ಕೋಟಿ   ಮೀಸಲಿಡಲಾಗಿದೆ. ರಾಸಾ­ಯನಿಕ ಅಂಶ ಮಿಶ್ರಿತ ನೀರನ್ನು ಸೇವಿಸಿ ಜನರು ಅಂಗವೈಕಲ್ಯಕ್ಕೆ ತುತ್ತಾಗುತ್ತಿ­ರುವುದನ್ನು ತಡೆಯುವ ನಿಟ್ಟಿನಲ್ಲಿ ಮೊದಲು ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದರು.ಎತ್ತಿನಹೊಳೆ ಯೋಜನೆಯಿಂದ ಲಭ್ಯ­ವಾಗುವ ನೀರಿನಿಂದ ಚಿಕ್ಕಬಳ್ಳಾಪುರ 198 ಮತ್ತು ಕೋಲಾರದ 139 ಕೆರೆಗಳು ಭರ್ತಿಯಾಗುವುದಲ್ಲದೇ ಇತರ ಜಿಲ್ಲೆಗಳಲ್ಲಿನ ಕೆರೆಗಳನ್ನು ಸಹ ತುಂಬಲಿವೆ. ನಂತರದ ದಿನಗಳಲ್ಲಿ ಕ್ರಮೇಣ ಅಂತರ್ಜಲವನ್ನು ವೃದ್ಧಿಗೊಳಿ­ಸು­ವುದರ ಜೊತೆಜೊತೆಗೆ ಕುಡಿಯುವ ನೀರನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಯೋಜನೆಗೆ ಸಂಬಂಧಿಸಿದಂತೆ ಯಾರೂ ಸಹ ಆತಂಕ ಮತ್ತು ಗೊಂದಲ ಪಡಬೇಕಿಲ್ಲ ಎಂದು ತಿಳಿಸಿದರು.ಜಲಸಂಪನ್ಮೂಲ ಸಚಿವ ಎಂ.ಬಿ.­ಪಾಟೀಲ ಮಾತನಾಡಿ, ಯೋಜನೆಗೆ ಸಂಬಂಧಿಸಿದಂತೆ ಕೆಲವರು ಅನಗತ್ಯ ಅಪಪ್ರಚಾರ ಮಾಡುತ್ತಿದ್ದು, ವಿನಾ­ಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ಯೋಜನೆ ವಿರೋಧಿಸುವವರು ಕೇಳುವ ಪ್ರಶ್ನೆ ಮತ್ತು ಸಂಶಯಗಳಿಗೆ ನಮ್ಮ ಬಳಿ ದಾಖಲೆ ಸಹಿತ ಉತ್ತರಗಳಿದ್ದು, ಅದರ ವಿವರಣೆ ನೀಡಲು ಸಿದ್ಧರಿದ್ದೇವೆ. ಅನಗತ್ಯ ಗೊಂದಲ ಸೃಷ್ಟಿಸಿ ಉತ್ತಮ ಕಾರ್ಯಕ್ರಮಕ್ಕೆ ಅಡ್ಡಿಪಡಿಸಬಾರದು ಎಂದರು.ಆದಿಚುಂಚನಗಿರಿ ಮಠದ ನಿರ್ಮಲಾ­ನಂದನಾಥ ಸ್ವಾಮೀಜಿ ಮಾತನಾಡಿ, ಮುಂದಿನ ಎರಡು ವರ್ಷದೊಳಗೆ ಬಯಲು ಸೀಮೆ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಹರಿದು ಬರುವ ವಿಶ್ವಾಸವಿದ್ದು, ಆಗಲೂ ಸಹ ಬೃಹತ್‌ ಕಾರ್ಯಕ್ರಮವೊಂದನ್ನು ಆಯೋಜಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ­ರನ್ನು ಆಹ್ವಾನಿಸಲಾಗುವುದು ಎಂದರು.ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ, ಕೆ.ಎಚ್‌.ಮುನಿಯಪ್ಪ, ವಿಧಾನಸಭಾ ಉಪಾಧ್ಯಕ್ಷ ಎನ್‌.ಎಚ್‌.­ಶಿವಶಂಕರ ರೆಡ್ಡಿ, ಶಾಸಕ ಡಾ.ಕೆ.­ಸುಧಾಕರ್‌ ಮಾತನಾಡಿದರು. ಶಾಸಕ­ರಾದ ಎಸ್‌.ಎನ್‌.ಸುಬ್ಬಾರೆಡ್ಡಿ, ಎಂ.ರಾಜಣ್ಣ, ಎಂ.ಕೃಷ್ಣಾರೆಡ್ಡಿ, ಕೆ.ಆರ್‌.­ರಮೇಶ್‌ಕುಮಾರ್‌, ವಿಧಾನ ಪರಿಷತ್‌ ಸದಸ್ಯರಾದ ನಸೀರ್‌ ಅಹಮದ್‌, ವೈ.ಎ.ನಾರಾಯಣಸ್ವಾಮಿ, ಡಿ.ಎಸ್‌.­ವೀರಯ್ಯ ಮುಂತಾದವರು ಕಾರ್ಯಕ್ರಮ­ದಲ್ಲಿ ಭಾಗವಹಿಸಿದ್ದರು.ನೀರು ಕೊಟ್ಟೇ ಸಾಯಬೇಕು: ಮೊಯಿಲಿ

ಚಿಕ್ಕಬಳ್ಳಾಪುರ:  ಅಧಿಕಾರವಿರಲಿ ಅಥವಾ ಇರದಿರಲಿ, ನೀರಿಲ್ಲದೇ ಪರಿತಪಿಸುತ್ತಿರುವ ಬಯಲು ಸೀಮೆ ಜನರಿಗೆ ನೀರು ಕೊಟ್ಟೇ ಸಾಯಬೇಕೆಂದು ಚಿಂತಿಸುತ್ತಿದ್ದೆ. ಒಟ್ಟಿನಲ್ಲಿ ಹರಸಾಹಸಪಟ್ಟು ಬಯಲು ಸೀಮೆ ಜಿಲ್ಲೆಗಳಿಗೆ ನೀರು ಹರಿಸಲು ಸಾಧ್ಯವಾಯಿತು ಎಂಬ ಸಮಾಧಾನ ನನ್ನಲ್ಲಿದೆ ಎಂದು ಕೇಂದ್ರ ಸಚಿವ ವೀರಪ್ಪ ಮೊಯಿಲಿ ತಿಳಿಸಿದರು.

ನೀರು ಕೊಡದೇ ಸಾಯುತ್ತೇನೆ ಎಂಬ ಭಯ ನನ್ನಲ್ಲಿತ್ತು. ಆದರೆ ಮಾತು ನೀಡಿದಂತೆ ಎತ್ತಿನ­ಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇನ್ನು ಎರಡೇ ವರ್ಷಗಳಲ್ಲಿ ಜಿಲ್ಲೆಗಳಲ್ಲಿ ಯೋಜನೆ ನೀರು ಹರಿದು ಬರಲಿದೆ ಎಂದು ತಿಳಿಸಿದರು.ಎತ್ತಿನಹೊಳೆ ಯೋಜನೆ ಸಾಧಕ–ಬಾಧಕಗಳನ್ನು ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ (ಡಬ್ಲ್ಯೂಆರ್‌ಡಿಒ) ಪರಿಶೀಲಿಸಿದ್ದು, ಯೋಜನೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ. ಬಹು­ತೇಕ ನೀರಾವರಿ ಯೋಜನೆಗಳಿಗೆ ಇದೇ ಸಂಸ್ಥೆಯು ಹಸಿರು ನಿಶಾನೆ ತೋರಿದ್ದು, ಈ ಸಂಸ್ಥೆಯ ಕಾರ್ಯನಿರ್ವಹಣೆ ಬಗ್ಗೆಯೇ ಹಲವು ಮಂದಿ ಸಂಶಯ ವ್ಯಕ್ತಪಡಿಸಿರುವುದು ಸರಿಯಲ್ಲ. ಎಲ್ಲ ಹಂತಗಳಲ್ಲೂ ಪರಿಶೀಲನೆ ನಡೆಸಿಯೇ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಹೊರತು ಇದು ಅವಸರದಿಂದ ಮಾಡಿಲ್ಲ ಎಂಬುದನ್ನು ಯೋಜನೆ ವಿರೋಧಿಸುವವರು ತಿಳಿದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.