ಪರಮಶಿವಯ್ಯ ವರದಿ ಜಾರಿಗೆ ಹೋರಾಟದ ಸಿದ್ಧತೆ

7

ಪರಮಶಿವಯ್ಯ ವರದಿ ಜಾರಿಗೆ ಹೋರಾಟದ ಸಿದ್ಧತೆ

Published:
Updated:

ತುಮಕೂರು: ಬಯಲುಸೀಮೆಯ ಎಂಟು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಪರಮಶಿವಯ್ಯ ವರದಿ ಮೂಲೆಗುಂಪು ಮಾಡುವ ಹುನ್ನಾರದಿಂದಲೇ ಕಾಂಗ್ರೆಸ್, ಬಿಜೆಪಿ ಸೇರಿಕೊಂಡು ಎತ್ತಿನಹೊಳೆ ಯೋಜನೆ ಜಾರಿ ಮಾತುಗಳನ್ನಾಡುತಿವೆ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಈಚೆಗೆ ಇಲ್ಲಿ ಕಿಡಿಕಾರಿದರು.ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಸಂಪೂರ್ಣವಾಗಿ ಅವಾಸ್ತವಿಕ. ಈ ಯೋಜನೆ ಜಾರಿ ಮಾಡಿದರೆ ಏತ ನೀರಾವರಿ ಮೂಲಕ ಚಿಕ್ಕಬಳ್ಳಾಪುರ, ಬೆಂಗಳೂರಿಗೆ ಕುಡಿಯುವ ನೀರು ಕೊಡುವ ಪ್ರಸ್ತಾವವಿದೆ. ನೀರು ಮೇಲೆತ್ತಲು 400 ಮೆ.ವಾಟ್ ವಿದ್ಯುತ್ ಬೇಕು. ತಿಂಗಳಿಗೆ ರೂ. 20 ಕೋಟಿ ವಿದ್ಯುತ್‌ಬಿಲ್ ಬರಲಿದೆ. ಇಷ್ಟು ಹಣ ಕಟ್ಟುವುದು ಯಾರು? ವಿದ್ಯುತ್‌ಅನ್ನು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದರು.ಎತ್ತಿನಹೊಳೆಯಿಂದ 7ರಿಂದ 28 ಟಿಎಂಸಿ ನೀರು ತರಬಹುದು ಎನ್ನುತ್ತಾರೆ. ಆದರೆ ವಾಸ್ತವ ಯಾರಿಗೂ ಗೊತ್ತಿಲ್ಲ. ಯೋಜನೆ ಈಗ ಬಹುತೇಕ ರಾಜಕೀಕರಣಗೊಂಡಿದೆ. ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಪ್ರಬಲವಾಗಿದ್ದು, ಪಕ್ಷ ಎದುರು ಹಾಕಿಕೊಳ್ಳುವ ಆಸೆ ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿಗೆ ಇಲ್ಲ. ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ತಮ್ಮ ಸಂಸದ ಸ್ಥಾನ ಉಳಿಸಿಕೊಳ್ಳುವ ಆಸೆ ಹಾಗೂ ಕರಾವಳಿ ಜಿಲ್ಲೆಗಳ ಜನರನ್ನು ಎದುರು ಹಾಕಿಕೊಳ್ಳಬಾರದು ಎಂಬ ಎರಡು ಉದ್ದೇಶದಿಂದ ಪರಮಶಿವಯ್ಯ ವರದಿ ಮೂಲೆಗೆ ತಳ್ಳಲು ಎತ್ತಿನಹೊಳೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.ಪರಮಶಿವಯ್ಯ ವರದಿ ಜಾರಿ ಸಂಬಂಧ ಬಿಜೆಪಿ, ಕಾಂಗ್ರೆಸ್ ರಾಜಕಾರಣ ಮಾಡುತ್ತಿವೆ. ಜೆಡಿಎಸ್‌ಗೆ ಸ್ಪಷ್ಟ ನಿಲುವೇ ಇಲ್ಲ. ಈ ಹಿಂದೆ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈಗ ಅದೇ ಪಕ್ಷದ ಕಾರ್ಯಕರ್ತರು ಯೋಜನೆ ಬೇಕೆಂದು ಪಟ್ಟುಹಿಡಿದಿದ್ದು, ಆ ಪಕ್ಷ ಅಸ್ಪಷ್ಟ ನಿಲುವು ತಾಳಿದೆ ಎಂದು ವ್ಯಂಗ್ಯವಾಡಿದರು.ಸರ್ಕಾರ ಪರಮಶಿವಯ್ಯ ವರದಿಯನ್ನು ಪೂರ್ಣವಾಗಿ ಜಾರಿ ಮಾಡಬೇಕು. ಪಶ್ವಿಮಾಭಿಮುಖವಾಗಿ ಹರಿಯುವ ಮಳೆ ನೀರಿನಿಂದ 180 ಟಿಎಂಸಿ ನೀರು, ಕೃಷ್ಣ ಕಣಿವೆಯ 50 ಟಿಎಂಸಿ ನೀರು ಸೇರಿದಂತೆ ಒಟ್ಟು 240 ಟಿಎಂಸಿ ನೀರನ್ನು ಗಾರ್ಲೆಂಡ್ ಕೆನಾಲ್ ಮೂಲಕವೇ ತರಬೇಕು ಎಂದು ಆಗ್ರಹಿಸಿದರು.20ಕ್ಕೆ ಸಭೆ:
ನೀರಾವರಿ ಹೋರಾಟವನ್ನು ಕೆಲವೇ ರಾಜಕಾರಣಿಗಳ ಕಪಿಮುಷ್ಟಿಯಿಂದ ಬಿಡಿಸಿ ಜನರ ಹೋರಾಟವಾಗಿ ರೂಪಿಸಲು ಬಯಲುಸೀಮೆ 8 ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಯ ಸಂಘ ಸಂಸ್ಥೆಗಳ ಮುಖಂಡರ ಸಭೆಯನ್ನು ಫೆ. 20ರಂದು ಬೆಂಗಳೂರಿನಲ್ಲಿ ಕರೆಯಲಾಗಿದೆ. ನೀರಾವರಿ ಹೋರಾಟವನ್ನು ಜನರ ಹೋರಾಟವಾಗಿ ರೂಪಿಸುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.ಈ 8 ಜಿಲ್ಲೆಗಳ ಶಾಸಕರು, ಸಂಸದರನ್ನು ಸಭೆಗೆ ಆಹ್ವಾನಿಸುವುದಿಲ್ಲ. ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಸಂಘ ಸಂಸ್ಥೆಗಳ ಮುಖಂಡರನ್ನು ಮಾತ್ರವೇ ಆಹ್ವಾನಿಸಲಾಗುವುದು ಎಂದರು.

`ದಿಕ್ಕು ತಪ್ಪಿಸುವ ಹೋರಾಟ~

ತುಮಕೂರು: `ಸಂಸದ ಜಿ.ಎಸ್.ಬಸವರಾಜ್ ರಾಜಕಾರಣ ಎಂಥದೆಂದು ಎಲ್ಲರಿಗೂ ಗೊತ್ತಿದೆ~ ಎಂದು ಸಿಪಿಎಂ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ವಾಗ್ದಾಳಿ ನಡೆಸಿದರು.`ಎತ್ತಿನಹೊಳೆ ಯೋಜನೆಗೆ ಸ್ವಾಗತ ಎನ್ನುತ್ತಾ ಕೊಳವೆ ಮೂಲಕ ನೀರು ತೆಗೆದುಕೊಂಡು ಹೋಗಲು ವಿರೋಧ ಎನ್ನುತ್ತಾರೆ. ಯೋಜನೆ ಕುರಿತು ದ್ವಂದ್ವ ನಿಲುವು. ನೀರಾವರಿ ತಜ್ಞ ಪರಮಶಿವಯ್ಯ ಅವರನ್ನು ಕಾರಿನಲ್ಲಿ ವಿಧಾನಸೌಧ ಸುತ್ತಿಸುತ್ತಾ ಅವರನ್ನೂ ಕೂಡ ದಿಕ್ಕು ತಪ್ಪಿಸುತ್ತಿದ್ದಾರೆ~ ಎಂದು ದೂರಿದರು.`ಎತ್ತಿನ ಹೊಳೆ ಯೋಜನೆ ಕುರಿತು ಬಸವರಾಜ್ ಅವರ ವಾದ ಸಮರ್ಥವಾಗಿಲ್ಲ. ಹೋರಾಟ ಪಕ್ಷಾತೀತ ಎಂದು ಹೇಳುವ ಅವರು ಇಷ್ಟು ವರ್ಷದಲ್ಲಿ ನೀರಾವರಿ ಹೋರಾಟಕ್ಕೆ ಯಾರನ್ನಾದರೂ ಆಹ್ವಾನ ಮಾಡಿದ್ದಾರಾ~ ಎಂದು ಪ್ರಶ್ನಿಸಿದರು.`ಕೃಷ್ಣ ಕಣಿವೆಯಿಂದ ಬಯಲು ಸೀಮೆ ಜಿಲ್ಲೆಗಳಿಗೆ ಅನ್ಯಾಯವಾಗಿದೆ. ಈ ಜಿಲ್ಲೆಗಳಿಂದ 500 ಟಿಎಂಸಿ ನೀರು ಕೃಷ್ಣ ಕಣಿವೆಗೆ ಪ್ರತಿ ವರ್ಷ ಹರಿದು ಹೋಗುತ್ತಿದೆ. ಅದರಲ್ಲಿ 5 ಟಿಎಂಸಿಯಷ್ಟೂ ನೀರನ್ನು ಈ ಜಿಲ್ಲೆಗಳಿಗೆ ಕೊಟ್ಟಿಲ್ಲ. ಬಿಜೆಪಿ ಬರುವ ಮುನ್ನ ಕಾಂಗ್ರೆಸ್ ಪಕ್ಷದಲ್ಲಿ ಎರಡು ದಶಕ ಕಾಲ ರಾಜಕಾರಣ ಮಾಡಿರುವ ಅವರು ಮನಸ್ಸು ಮಾಡಿದ್ದರೆ ಈ ಜಿಲ್ಲೆಗಳಿಗೆ ನೀರು ಹರಿಸಬಹುದಿತ್ತು. ಕೃಷ್ಣ ಕಣಿವೆ ನೀರಿನ ಕುರಿತು 2002ರ ವರೆಗೂ ಬಸವರಾಜ್ ಮೌನವಹಿಸಲು ಏನು ಕಾರಣ. ಅವರ ರಾಜಕಾರಣ ಎಂಥದ್ದೆಂದು ಗೊತ್ತಿದೆ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry