ಶುಕ್ರವಾರ, ಡಿಸೆಂಬರ್ 6, 2019
24 °C

ಪರಮಾತ್ಮ ಆಡಿಸಿದಂತೆ...

Published:
Updated:
ಪರಮಾತ್ಮ ಆಡಿಸಿದಂತೆ...

ನಿರ್ದೇಶಕ ಯೋಗರಾಜ್ ಭಟ್ ‘ಪಂಚರಂಗಿ’ ಮೂಲಕ ಪ್ರೇಕ್ಷಕರಿಗೆ ಕಚಗುಳಿ ಇಟ್ಟ ಬಳಿಕ ‘ಪರಮಾತ್ಮ’ನನ್ನು ನಿರ್ದೇಶಿಸಲು ಹೊರಟಿದ್ದಾರೆ. ಅಂದರೆ, ಪುನೀತ್ ನಾಯಕರಾಗಿರುವ ಅವರ ಹೊಸ ಸಿನಿಮಾ ‘ಪರಮಾತ್ಮ’ ಎಂಬ ಹೆಸರನ್ನು ಹೊತ್ತು ಸಿದ್ಧವಾಗಲಿದೆ.ಪುನೀತ್ ಹಾಗೂ ಯೋಗರಾಜ್ ಜೋಡಿಯ ಸಿನಿಮಾ ಒಂದು ನಿರ್ಮಾಣವಾಗಲಿದೆ ಎಂಬುದು ವರ್ಷಕ್ಕೂ ಹಿಂದೆಯೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆಯನ್ನು, ಸುದ್ದಿಯನ್ನು ಹುಟ್ಟು ಹಾಕಿತ್ತು. ಅದಕ್ಕಾಗಿ ಯೋಗರಾಜ್ ಭಟ್ಟರು ‘ಲಗೋರಿ’ ಎಂಬ ಕಥೆಯನ್ನು ಬರೆದುಕೊಂಡು ಎಲ್ಲ ತಯಾರಿಯನ್ನೂ ಮಾಡಿಕೊಂಡಿದ್ದರು. ಆದರೆ, ರಾಕ್‌ಲೈನ್ ವೆಂಕಟೇಶ್ ನಿರ್ಮಿಸಬೇಕಿದ್ದ ಈ ಸಿನಿಮಾ ಕಡೇ ಗಳಿಗೆಯಲ್ಲಿ ರದ್ದಾಯಿತು. ಈಗ ಆ ಜೋಡಿಯ ಸಿನಿಮಾಕ್ಕೆ ಗಳಿಗೆ ಕೂಡಿ ಬಂದಿದೆ. ‘ಪರಮಾತ್ಮ’ ಫೆಬ್ರುವರಿಯಲ್ಲಿ ಆರಂಭವಾಗಿ ಜುಲೈ, ಆಗಸ್ಟ್‌ನಲ್ಲಿ ಸಿನಿಭಕ್ತರ ಮುಂದೆ ಅವತರಿಸಲಿದ್ದಾನೆ.ತಮಿಳಿನ ‘ನಾಡೋಡಿಗಳ್’ ರೀಮೇಕ್ ಚಿತ್ರದಲ್ಲಿ ಪುನೀತ್ ನಟಿಸುತ್ತಿದ್ದಾರೆ. ಅದು ಮುಗಿಯುತ್ತಿದ್ದಂತೆ ಈ ‘ಪರಮಾತ್ಮ’ನ ಕೆಲಸ ಆರಂಭವಾಗಲಿದೆ. ‘ಪುನೀತ್ ಹಾಗೂ ನನ್ನ ಜೋಡಿಯ ಈ ಸಿನಿಮಾ ಜನರ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಇದು ದೊಡ್ಡ ಕಾಂಬಿನೇಶನ್. ಸಹಜವಾಗಿಯೇ ನಿರೀಕ್ಷೆಗಳು ಹೆಚ್ಚಾಗಿವೆ.ವಿಶಿಷ್ಟ ಮನರಂಜನೆ ಕೊಡಬೇಕು. ಮತ್ತೆ ಮತ್ತೆ ನೆನಪಾಗುವಂಥ ದೃಶ್ಯಗಳನ್ನು ಕೊಡಬೇಕು ಎಂಬ ಉದ್ದೇಶ ನನ್ನದು. ಬೆಳ್ಳಿತೆರೆಯ ಮೇಲೆ ಒಂದು ಜಾದೂ ಸೃಷ್ಟಿ ಮಾಡಬೇಕು. ಹೊಸದಾದ ಭಾವನೆ, ಎಮೋಷನ್ ಕೊಡಬೇಕು ಎಂದುಕೊಂಡಿದ್ದೇನೆ’ ಎನ್ನುವ ಭಟ್ಟರು ಸಿನಿಮಾದ ಕಥೆ, ವಸ್ತು ಇತ್ಯಾದಿಗಳ ಬಗ್ಗೆ ಏನನ್ನಾದರೂ ಹೇಳಲು ಬಿಡುವಿಲ್ಲದಷ್ಟು ‘ಪರಮಾತ್ಮ’ನಲ್ಲಿ ಲೀನವಾಗಿದ್ದಾರೆ!‘ಮುಂಗಾರು ಮಳೆ’ಯಲ್ಲಿ ಮಳೆಯನ್ನು, ‘ಗಾಳಿಪಟ’ದಲ್ಲಿ ‘ಪ್ರಕೃತಿ’ಯನ್ನು, ‘ಮನಸಾರೆ’ಯಲ್ಲಿ ಬಯಲುಸೀಮೆಯನ್ನು, ‘ಪಂಚರಂಗಿ’ಯಲ್ಲಿ ‘ಕರಾವಳಿ’ಯನ್ನು ಹಿನ್ನೆಲೆ ಹಾಗೂ ಪಾತ್ರಗಳನ್ನಾಗಿ ಬಳಸಿಕೊಂಡಿದ್ದ ಭಟ್ಟರು ‘ಪರಮಾತ್ಮ’ನಲ್ಲಿ ಬೇರೆಯದೇ ಆದ ಹಿನ್ನೆಲೆಯನ್ನು ಇಟ್ಟುಕೊಂಡು ಕಥೆ ಹೆಣೆಯುತ್ತಿದ್ದಾರೆ. ನಾಡಿನ ಮಣ್ಣಿನ ಕಂಪನ್ನು ಅದರಲ್ಲಿ ತೋರುವ ಹವಣಿಕೆ ಅವರದು. ಅಂದಹಾಗೆ ಪುನೀತ್‌ಗೆ ನಾಯಕಿಯ ಹುಡುಕಾಟ ನಡೆದಿದೆ. ಅಪ್ಪಟ ಹೊಸ ಸುಂದರಿಯೊಬ್ಬಳು ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾಳೆ!ಹರಿಕೃಷ್ಣ ಸಂಗೀತ ನೀಡಲಿರುವ ‘ಪರಮಾತ್ಮ’ನ ಹಾಡುಗಳು ಅದರ ವಿಶೇಷ. ತಮ್ಮ ಹಾಗೂ ಜಯಂತ ಕಾಯ್ಕಿಣಿಯವರ ಹಾಡುಗಳು ಹೊಸದೊಂದು ಮಾಧುರ್ಯವನ್ನು ಸೃಷ್ಟಿಸುತ್ತವೆ ಎಂಬುದರಲ್ಲಿ ಭಟ್ಟರಿಗೆ ಹೆಚ್ಚಿನ ನಂಬಿಕೆ. ಅವರ ನಿರ್ದೇಶನದ ‘ಪಂಚರಂಗಿ’, ಹಾಗೂ ಅವರು ಸೂರಿ ನಿರ್ದೇಶನದ ‘ಜಾಕಿ’ಗೆ ಬರೆದ ಹಾಡುಗಳಿಂದ ಪ್ರೇಕ್ಷಕರು ಬದಲಾಗಿದ್ದಾರೆ, ತಮ್ಮಿಂದ ಬೇರೆಯದನ್ನು ನಿರೀಕ್ಷೆ ಮಾಡುತ್ತಾರೆ, ಅಂಥವರ ಸಂಖ್ಯೆ ಹೆಚ್ಚಾಗಿದೆ ಎಂಬುದು ಅವರಿಗೆ ಅರಿವಿದೆ. ಆ ದಿಕ್ಕಿನಲ್ಲಿ ಹಾಡುಗಳು ತಯಾರಾಗುತ್ತಿವೆ. ಸಂತೋಷ್ ರೈ ಪಾತಾಜೆ ಸಿನಿಮಾಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ. ನಿರ್ಮಾಪಕ, ವಿತರಕ ಜಯಣ್ಣರೊಂದಿಗೆ ಭಟ್ಟರೂ ಸಿನಿಮಾದ ಸಹನಿರ್ಮಾಪಕರು.

ಪ್ರತಿಕ್ರಿಯಿಸಿ (+)