ಬುಧವಾರ, ನವೆಂಬರ್ 20, 2019
20 °C

ಪರಮಾತ್ಮ ಆಡಿಸಿದಂತೆ...

Published:
Updated:

`ಒಂದು ತುತ್ತು ಅನ್ನ ತಿಂದ್ಕೊಬಿಡ್ತೇನೆ. ಆಮೇಲೆ ಮಾತನಾಡಬಹುದು~.

ಅನ್ನದ ಮಾತನಾಡಿದ್ದು ನಿರ್ದೇಶಕ ಯೋಗರಾಜ ಭಟ್. ಅದಕ್ಕೆ ಮೊದಲಷ್ಟೇ ಅವರು ಸಾವಿನ ಮಾತನಾಡಿದ್ದರು. ಅವರ ಹಿರಿಯ ಗೆಳೆಯ ಪ್ರಭು- ಪ್ರಭಣ್ಣ- ತೀರಿಹೋಗಿ ಕೆಲವೇ ಗಂಟೆಗಳಾಗಿದ್ದವು. ತೀರ್ಥಹಳ್ಳಿ ಪರಿಸರದಿಂದ ಶೂಟಿಂಗ್ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ `ಪರಮಾತ್ಮ~ ಚಿತ್ರತಂಡದ ತಂತ್ರಜ್ಞರ ಬಳಗದಲ್ಲಿ ಪ್ರಭು ಅವರೂ ಒಬ್ಬರಾಗಿದ್ದರು. ದಾರಿಯಲ್ಲಿ ಅಪಘಾತ. ಪ್ರಭು ಅವರ ಭೌತಿಕ ಅಸ್ತಿತ್ವ ಇದ್ದಕ್ಕಿದ್ದಂತೆ ಅಳಿಸಿಹೋಗಿ ಅವರು ನೆನಪಿಗೆ ಸಂದುಬಿಟ್ಟಿದ್ದರು. ಈ ಸಾವಿನ ವಿಷಾದ ಯೋಗರಾಜ ಭಟ್ಟರ ಮಾತುಗಳಲ್ಲಿ ಇಣುಕುತ್ತಿತ್ತು. `ತುಂಬಾ ಬೇಜಾರಾಯ್ತು~ ಎಂದರು. ಮಾತಿನ ನಡುವೆಯೇ ಅವರಿಗೆ ಹಸಿವೆಯ ನೆನಪಾಯ್ತು. ತಟ್ಟೆಯಲ್ಲಿನ ಅನ್ನ ಇನ್ನೂ ಕಾವು ಕಳೆದುಕೊಂಡಿರಲಿಲ್ಲ.ಊಟವಾಯಿತು. ಯೋಗರಾಜ ಭಟ್ಟರ `ಪರಮಾತ್ಮ~ನ ಈವರೆಗಿನ ಹಾದಿ ಬಿಚ್ಚಿಕೊಂಡಿತು. ಯೋಗರಾಜ ಭಟ್ಟರ ಕನಸು, ನನಸು, ಕನವರಿಕೆಗಳ `ಪರಮಾತ್ಮ~ ಚಿತ್ರದ ಬಗೆಗಿನ ಈವರೆಗಿನ ಅನುಭವವನ್ನು ಅವರ ಮಾತುಗಳಲ್ಲೇ ಹೇಳುವುದಾದರೆ:

ಈವರೆಗೆ ಶೇ.60ರಷ್ಟು ಚಿತ್ರೀಕರಣ ಮುಗಿದಿರಬಹುದು. ಬೆಂಗಳೂರು, ಶಿರಾಡಿ ಘಾಟಿ, ಸಕಲೇಶಪುರ, ತೀರ್ಥಹಳ್ಳಿ ಹಾಗೂ ಆಗುಂಬೆಯ ಸುತ್ತಮುತ್ತಲ ಹತ್ತಾರು ಪ್ರದೇಶ- ಹೀಗೆ `ಪರಮಾತ್ಮ~ ಬಳಗ ಊರೂರು ಸುತ್ತಿಬಂದಿದೆ. ಸುತ್ತುವುದಿನ್ನೂ ಸಾಕಷ್ಟಿದೆ.ಸಿನಿಮಾದಲ್ಲಿ ಲಾಮಾಗಳಿಗೆ ಸಂಬಂಧಿಸಿದ ಒಂದು ಪ್ರಸಂಗವಿದೆ. ಇದರ ಚಿತ್ರೀಕರಣಕ್ಕಾಗಿ ಚೀನಾಕ್ಕೆ ಹಾರುವುದೋ, ಇಲ್ಲವೇ ಸೆಟ್ ಹಾಕಿ ಇಲ್ಲಿಯೇ ಚಿತ್ರೀಕರಿಸುವುದೋ ಎನ್ನುವುದಿನ್ನೂ ತೀರ್ಮಾನವಾಗಿಲ್ಲ. ಈವರೆಗೆ ಚಿತ್ರೀಕರಣ ಸುಗಮವಾಗಿ ಸಾಗಿದೆ. ಸಿನಿಮಾದ ಕ್ಲಿಷ್ಟಕರ ದೃಶ್ಯಗಳನ್ನು ಇನ್ನುಮುಂದೆ ಸಂಯೋಜಿಸಬೇಕಿದೆ.`ಪರಮಾತ್ಮ~ ಎನ್ನುವುದು ಪರಿಶುದ್ಧ ಆತ್ಮದ ಮಾಲೀಕನೊಬ್ಬನ ಕಥನ. ನನ್ನ ಹಿಂದಿನ ಚಿತ್ರಗಳಂತೆ ಈ ಚಿತ್ರದ ಕಥೆಯನ್ನೂ ಹೇಳಲಿಕ್ಕಾಗದು. ಇಷ್ಟಂತೂ ನಿಜ, ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರನ್ನು ನೋಡೋದೇ ಒಂದು ಮಜಾ. ಇಂಥ ಪಾತ್ರವನ್ನು ಅವರು ಈ ಮೊದಲು ನಿರ್ವಹಿಸಿಲ್ಲ. ಪುನೀತ್‌ರ ತಾರಾ ವರ್ಚಸ್ಸು, ರಾಜಕುಮಾರ್ ಮಗ ಎನ್ನುವ ಕಾರಣದಿಂದಾಗಿ ಕೂಡಿಕೊಂಡಿರುವ ವರ್ಚಸ್ಸು- ಈ ಎಲ್ಲ ಭಾರಗಳನ್ನು ನಿಭಾಯಿಸುವಂತೆ ಅವರು ತುಂಬಾ ಚೆನ್ನಾಗಿ ನಟಿಸಿದ್ದಾರೆ.`ಪಂಚರಂಗಿ~ ಸಿನಿಮಾದ ಸಂದರ್ಭದಲ್ಲಿ `ಇದು ಗೆದ್ದೇ ಗೆಲ್ಲುತ್ತೆ~ ಎನ್ನುವ ಆತ್ಮವಿಶ್ವಾಸವಿತ್ತು. ಈ ಚಿತ್ರ ಬಹುದೊಡ್ಡ ಗೆಲುವು ಕಾಣುತ್ತೆ ಎಂದು ನನ್ನ ಒಳಮನಸ್ಸು ಹೇಳುತ್ತಿದೆ. (ದೊಡ್ಡ ದೊಡ್ಡ ತಲೆಗಳೆಲ್ಲ ಸೇರಿರುವ ಚಿತ್ರವಿದು). ಕನ್ನಡಕ್ಕೆ ತುಂಬಾ ಹೊಸತು ಎನ್ನಿಸುವಂತಹ ಚಿತ್ರವಿದು. ತುಂಬಾ ವಿಶಿಷ್ಟವಾದ ಚಿತ್ರವಿದು. ಇಲ್ಲೊಂದು ನದಿ ಇರುತ್ತೆ, ಅದರಲ್ಲಿ ನಾವು ನಡೆಯಬಹುದು.ನೋಡುಗರನ್ನು ಬೇರೆ ಭಾವದಾರಿಗಳಲ್ಲಿ ಕೊಂಡೊಯ್ಯುವ ಶಕ್ತಿ ಈ ಸಿನಿಮಾಕ್ಕೆ ಇರಲಿದೆ ಅನ್ನಿಸುತ್ತದೆ. ಲೊಕೇಶನ್ ಸೇರಿದಂತೆ ಇಡೀ ಚಿತ್ರತಂಡ ಕೂಡಿಬಂದಿದ್ದರಿಂದ ತಂತಾನೇ ಆಗುತ್ತಿರುವ ಚಿತ್ರವಿದು. ಇಡೀ ಚಿತ್ರಕ್ಕೆ ನೋಡಿಸಿಕೊಳ್ಳುವ ಒಂದು ಅದ್ಭುತ ಗುಣ ಇರಲಿದೆ.ನನ್ನ ಮಟ್ಟಿಗೆ `ಪರಮಾತ್ಮ~ ಬಹುದೊಡ್ಡ ಪ್ರಯೋಗ. `ಮುಂಗಾರು ಮಳೆ~ಯಿಂದ ನನ್ನ ಈವರೆಗಿನ ಸಿನಿಮಾಗಳಲ್ಲಿ ಕಥೆಗೆ ಯಾವಾಗಲೂ ಹಿಂದಿನ ಆಸನ. ಆ ಸಿನಿಮಾಗಳ ಕಥೆ ಕೇಳಿದರೆ ಸ್ಪಷ್ಟವಾಗಿ ಹೇಳಲಿಕ್ಕೆ ಸಾಧ್ಯವಿಲ್ಲ. ಹಲವು ಸಂಗತಿಗಳು ಸೇರಿಕೊಂಡು ಒಂದು ದೃಶ್ಯ ಅನುಭವವನ್ನು ಕಟ್ಟಿಕೊಡುವ ಪ್ರಯತ್ನಗಳವು. ಈ ತಂತ್ರ `ಪರಮಾತ್ಮ~ದಲ್ಲಿ ತಾರಕಸ್ಥಾನದಲ್ಲಿದೆ ಅನ್ನಿಸುತ್ತಿದೆ.ಚಿತ್ರದಲ್ಲಿ ಐದು ಹಾಡುಗಳಿವೆ. ಆರನೆಯದೊಂದು ಗೀತೆ ಸೇರಿಕೊಳ್ಳಬಹುದು ಅನ್ನಿಸ್ತಿದೆ. ಈ ಹಾಡುಗಳೆಲ್ಲ ಎಷ್ಟು ಚೆನ್ನಾಗಿವೆಯೆಂದರೆ `ಆಡಿಯೊ ರಿಲೀಸ್~ಗೆ ಸ್ವತಃ ನಾನೇ ಕಾಯುತ್ತಿದ್ದೇನೆ.ಜುಲೈ ಕೊನೆಯ ವೇಳೆಗೆ ಚಿತ್ರೀಕರಣ ಮುಗಿಯಬಹುದು ಅಂದ್ಕೊಡಿದ್ದೇನೆ. ಎಲ್ಲವೂ ಪರಮಾತ್ಮನಿಗೆ ಬಿಟ್ಟದ್ದು.

*

ಭಟ್ಟರು ಮಾತು ಮುಗಿಸಿದರು. ಅಂದಹಾಗೆ, `ಪರಮಾತ್ಮ~ ಬಳಗ ಮತ್ತೊಂದು ಸುತ್ತಿನ ತಿರುಗಾಟಕ್ಕಾಗಿ ಸಿದ್ಧಗೊಳ್ಳುತ್ತಿದೆ. ಮೈಸೂರು, ಬೆಂಗಳೂರು- ಹೀಗೆ ಶೂಟಿಂಗ್ ಮುಂದುವರಿಯಲಿದೆ.

ಪುನೀತ್ ರಾಜ್ ಕುಮಾರ್
ಪ್ರತಿಕ್ರಿಯಿಸಿ (+)