ಬುಧವಾರ, ಜೂನ್ 23, 2021
28 °C
ದಲಿತ ವಿರೋಧಿ ಆರೋಪ ಸುಳ್ಳು: ಸಿ.ಎಂ

ಪರಮೇಶ್ವರ ಅಸಮಾಧಾನಕ್ಕೆ ಮಾಹಿತಿ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹಿಂದಿನ ಸರ್ಕಾರಗಳಿಗಿಂತ ಹೆಚ್ಚಿನ ಹಣವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದ್ದೇನೆ. ಆದರೆ, ಈ ಬಗ್ಗೆ ಮಾಹಿತಿ ತಿಳಿದುಕೊಳ್ಳದ ಡಾ.ಜಿ. ಪರಮೇಶ್ವರ ಅವರು ಅಸಮಾಧಾನ ಹೊರಹಾಕಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಪಿರಿಯಾಪಟ್ಟಣದ ಹೊರ­ವಲ­ಯದ ಹೆಲಿಪ್ಯಾಡ್‌ನಲ್ಲಿ ಗುರು­ವಾರ ಸುದ್ದಿ­­ಗಾರರೊಂದಿಗೆ ಮಾತ­ನಾಡಿದ ಅವರು, ‘ಪರಿಶಿಷ್ಟ ಜಾತಿ ಮತ್ತು ಪರಿ­ಶಿಷ್ಟ ಪಂಗಡಗಳಿಗೆ ಹೆಚ್ಚಿನ ಅನುದಾನ ನೀಡಿಲ್ಲ ಹಾಗೂ ನಾನು ದಲಿತ ವಿರೋಧಿ ಎಂಬ ಆರೋಪ ಸುಳ್ಳು. ಬಜೆಟ್‌ನಲ್ಲಿ ಎಷ್ಟು ಹಣವನ್ನು ಮೀಸಲಿಟ್ಟಿದ್ದೇನೆ ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳದೆ ಅವರು ಮಾತನಾಡಿದ್ದಾರೆ ಅಷ್ಟೆ’ ಎಂದರು.‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿಗಮಗಳಿಗೆ ಮೀಸಲಿಟ್ಟ ಹಣವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಜನರಿಗೆ ಮುಟ್ಟಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳ­ಲಾಗುವುದು. ಈ ಹಿಂದಿನ ಸರ್ಕಾರ­ಗಳು ಈ ರೀತಿಯ ಕಠಿಣ ನಿರ್ಧಾರ­ಗಳನ್ನು ತೆಗೆದುಕೊಂಡಿರಲಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.‘ನಾನು ದಲಿತ ವಿರೋಧಿಯೇ ಎಂಬುದನ್ನು ದಲಿತ ಸಚಿವರು, ಶಾಸಕರನ್ನೇ ಕೇಳಿ’ ಎಂದರು.ಮಹದೇವಪ್ಪ ಸಮರ್ಥನೆ: ಪಕ್ಕದಲ್ಲೇ ಇದ್ದ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಮಾತ­ನಾಡಿ, ‘ಪರಿಶಿಷ್ಟ ಜಾತಿ, ಪಂಗಡಗಳಿಗೆ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅನ್ಯಾಯ ಮಾಡಿಲ್ಲ. ಸುಮಾರು ₨ 15 ಸಾವಿರ ಕೋಟಿ ಹಣವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದ್ದಾರೆ. ಈ ಅನುದಾನ ಕಳೆದ ವರ್ಷಕ್ಕಿಂತ ದುಪ್ಪಟ್ಟಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡರು.ಪರಿಣಾಮ ಬೀರದು: ಬಿಜೆಪಿ­ಯೊಂದಿಗೆ ಬಿಎಸ್‌ಆರ್‌ ಕಾಂಗ್ರೆಸ್ ವಿಲೀನ ಆಗುವುದರಿಂದ ಚುನಾವಣೆ­ಯಲ್ಲಿ ಕಾಂಗ್ರೆಸ್‌ ಮೇಲೆ ಪರಿಣಾಮ ಬೀರಲಿ­ದೆಯೇ ಎಂಬ ಪ್ರಶ್ನೆಗೆ ‘ಮಾಜಿ ಮುಖ್ಯ­ಮಂತ್ರಿ ಯಡಿಯೂರಪ್ಪ ಜೈಲುವಾಸ ಅನುಭ­ವಿ­ಸಿದ್ದಾರೆ. ಗಣಿ ಲೂಟಿ ಮಾಡಿದ ಜನಾರ್ದನ ರೆಡ್ಡಿ ಜೈಲಿನಲ್ಲಿ ಇದ್ದಾರೆ. ಅಂತಹವರ ಜೊತೆ ಶ್ರೀರಾಮುಲು ಗುರುತಿಸಿಕೊಂಡಿದ್ದಾರೆ. ಬಿಜೆಪಿ­­ಯೊಂದಿಗೆ ಬಿಎಸ್‌ಆರ್‌ ಕಾಂಗ್ರೆಸ್‌ ವಿಲೀನ ಕಾಂಗ್ರೆಸ್‌ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು’ ಎಂದು ಸಿದ್ದರಾಮಯ್ಯ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.