ಸೋಮವಾರ, ನವೆಂಬರ್ 18, 2019
25 °C

ಪರಮೇಶ್ವರ ಸಂಕಟ

Published:
Updated:

ತುಮಕೂರು:  ಪಕ್ಷದಲ್ಲಿ ಟಿಕೆಟ್ ಹಂಚಿಕೆಯ ಗೊಂದಲ, ಸಂಕಟದ ಜೊತೆಯಲ್ಲಿಯೇ ಮತ ಕೇಳುವ ಸಂಕಟವೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಅವರನ್ನು ಕಾಡತೊಡಗಿದೆ.ಟಿಕೆಟ್ ಹಂಚಿಕೆ ಪಟ್ಟಿ ಪೂರ್ಣಗೊಳಿಸಲು ದೆಹಲಿ, ಬೆಂಗಳೂರು ನಡುವೆ ಎಡೆಬಿಡದೆ ಓಡಾಡುತ್ತಿರುವ ಕೆಪಿಸಿಸಿ ಅಧ್ಯಕ್ಷರು ತಮ್ಮ ಕ್ಷೇತ್ರ ಕೊರಟಗೆರೆಯತ್ತಲೂ ದೃಷ್ಟಿ ಹರಿಸುತ್ತಿದ್ದಾರೆ. ಭಾನುವಾರ ರಾತ್ರಿ ದೆಹಲಿಯಿಂದ ಹಿಂದಿರುಗಿದ ನಂತರ ಸೋಮವಾರ, ಮಂಗಳವಾರ ಕೊರಟಗೆರೆಯಲ್ಲಿ ಬೀಡು ಬಿಟ್ಟಿದ್ದರು.ಕೆಪಿಸಿಸಿ ಅಧ್ಯಕ್ಷರಾಗಿರುವ ಕಾರಣ ಅವರ ಗೆಲುವು ಕೂಡ ಮುಖ್ಯವಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಹಣಾಹಣಿ ಸಾಧ್ಯತೆಯ ಕಾರಣ ಪರಮೇಶ್ವರ್ ಕ್ಷೇತ್ರ ಕಡೆಗಣಿಸುವಂತಿಲ್ಲ. ಒಂದು ಕಡೆ ರಾಜ್ಯದ ಎಲ್ಲೆಡೆ ಸುತ್ತಬೇಕು, ಇನ್ನೊಂದು ಕಡೆ ಕ್ಷೇತ್ರದಲ್ಲಿ ಒಂದು ಸಣ್ಣ ಹೆಜ್ಜೆ ತಪ್ಪಿದ್ದರೂ ಫಲಿತಾಂಶದಲ್ಲಿ ಏರುಪೇರಾಗುವ ಸಾಧ್ಯತೆ ಇರುವ ಕಾರಣ ಟಿಕೆಟ್ ಹಂಚಿಕೆ ಗೊಂದಲದಲ್ಲೂ ಕ್ಷೇತ್ರದಲ್ಲಿ ಬೀಡುಬಿಟ್ಟರು.ಕ್ಷೇತ್ರದ ಹೊಳವನಹಳ್ಳಿ, ಬೀಡಿಪುರ, ತೊಗರೀಘಟ್ಟ, ತೀತಾ, ನರಾಸಪುರ, ಬೈಚಾಪುರ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಈ ನಡುವೆ ಕೊರಟಗೆರೆ ಪಟ್ಟಣದಲ್ಲಿ ಕಾರ್ಯಕರ್ತರ ಸಮಾವೇಶ ಕೂಡ ನಡೆಸಿದ್ದಾರೆ. ಮಾಜಿ ಸಚಿವ ಸಿ. ವೀರಣ್ಣ ಬೆಂಬಲ ಪ್ರಕಟಿಸಿದ್ದಾರೆ. ಪರಮೇಶ್ವರ್ ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದು ಎಂಬ ಕಾರಣಕ್ಕಾಗಿ ಅಸಮಾಧಾನದ ನಡುವೆಯೇ ಪರಮೇಶ್ವರ್ ಪರ ಕ್ಷೇತ್ರದಲ್ಲಿ ಸಣ್ಣ ಒಲವು ವ್ಯಕ್ತವಾಗುತ್ತಿರುವುದು ಅವರಿಗೆ ಸ್ವಲ್ಪ ಉಸಿರಾಡುವಂತಾಗಿದೆ.ಮತಯಾಚನೆ ವೇಳೆ ಇದೊಂದು ಸಲ ಅವಕಾಶ ಕೊಡಿ ಎಂದು ಅವರು ಮತದಾರರನ್ನು ಬೇಡುತ್ತಿದ್ದಾರೆ. ಒಂದು ಕಡೆ ಪರಮೇಶ್ವರ್ ಮತದಾರರ ಬಳಿ ಮತ ಬೇಡುತ್ತಿದ್ದರೆ, ಇನ್ನೊಂದು ಕಡೆ ಟಿಕೆಟ್ ಆಕಾಂಕ್ಷಿಗಳ ಗುಂಪು ಟಿಕೆಟ್‌ಗಾಗಿ ಪರಮೇಶ್ವರ್ ಅವರನ್ನು ಯಾಚಿಸುವುದು ಮಂಗಳವಾರ ಕ್ಷೇತ್ರದಲ್ಲಿ ಕಂಡು ಬಂತು. ಪರಮೇಶ್ವರ್ ಪರವಾಗಿ ಅವರ ಅಣ್ಣ ಶಿವಪ್ರಸಾದ್ ಕಣದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)