ಪರರ ಏಳಿಗೆಗೆ ಶ್ರಮಿಸುವ ವಿರಳ ಜೀವಿಗಳು

7

ಪರರ ಏಳಿಗೆಗೆ ಶ್ರಮಿಸುವ ವಿರಳ ಜೀವಿಗಳು

Published:
Updated:

ರಾಬಿನ್ ಚೌರಾಸಿಯಾ

ಯುವತಿ ಹಿಜಡಾಗಳ ಪರವಾಗಿ ಧ್ವನಿ ಎತ್ತಿದ್ದೇ ತಪ್ಪಾಗಿ ಹೋಯಿತು. ಆಕೆಯ ಮೇಲೆ ಒಂದು ಕಣ್ಣು ಇಟ್ಟಿದ್ದ ವಾಯುಪಡೆ ಅಧಿಕಾರಿಗಳು ಇಲ್ಲ ಸಲ್ಲದ ಆರೋಪ ಹೋರಿಸಿ ಸೇನೆಯಿಂದ ವಜಾಗೊಳಿಸಿದರು. ಅಮೆರಿಕ ವಾಯುಪಡೆಯಿಂದ ವಜಾಗೊಂಡು ಮುಂಬೈಗೆ ಬಂದ ಆ ಯುವತಿ ಎರಡೇ ವರ್ಷದಲ್ಲಿ ‘ಕ್ರಾಂತಿ’ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಕಟ್ಟುವ ಮೂಲಕ ಮುಂಬೈ ಮನೆ ಮಾತಾದರು. ಅವರೇ ರಾಬಿನ್ ಚೌರಾಸಿಯ.ಭಾರತೀಯ ಮೂಲದ ರಾಬಿನ್ ಹುಟ್ಟಿ ಬೆಳೆದದ್ದು ಅಮೆರಿಕದಲ್ಲಿ. ಮಹಿಳಾ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಾಬಿನ್ ಮನೋವಿಶ್ಲೇಷಕಿಯೂ ಹೌದು. ಪದವಿ ಪಡೆದ ಬಳಿಕ ಅಮೆರಿಕ ವಾಯುಪಡೆಯಲ್ಲಿ ಕೆಲಸಕ್ಕೆ ಸೇರಿದರು.  ಸೇನೆಯಲ್ಲಿದ್ದುಕೊಂಡೇ ಹಿಜಡಾಗಳು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಕ್ಕೆ ಧುಮುಕಿದರು. ಇದರಿಂದಾಗಿ ರಾಬಿನ್ ಹಿರಿಯ ಅಧಿಕಾರಿಗಳ ವಿರೋಧ ಕಟ್ಟಿಕೊಂಡು ಅಮೆರಿಕ ಬಿಡಬೇಕಾಯಿತು.ಭಾರತಕ್ಕೆ ಮರಳಿದ ರಾಬಿನ್ ಮುಂಬೈ ಸೇರಿದರು. ಎರಡು ವರ್ಷಗಳ ಕಾಲ ಮುಂಬೈನ ಕೊಳೆಗೇರಿ ಮತ್ತು ರೆಡ್‌ಲೈಟ್ ಏರಿಯಾಗಳನ್ನು ಸುತ್ತಿದರು. ಆಗ ಅವರ ಕಣ್ಣಿಗೆ ಬಿದ್ದಿದ್ದು ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳು ಮತ್ತು ಸ್ವತಃ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯರು. ಇವರಿಗೆ ಶಿಕ್ಷಣ ಮತ್ತು ಪುನರ್ವಸತಿ ಕೊಡುವ ಸಲುವಾಗಿ ‘ಕ್ರಾಂತಿ’ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು 2011ರಲ್ಲಿ ಆರಂಭಿಸಿದರು. ಕೇವಲ ಆರು ಮಕ್ಕಳಿಂದ ಪ್ರಾರಂಭಗೊಂಡ ಈ ಸಂಸ್ಥೆಯಲ್ಲಿ ಇಂದು 100ಕ್ಕೂ ಹೆಚ್ಚು ಮಕ್ಕಳು ಆಶ್ರಯ ಪಡೆದಿದ್ದಾರೆ.ಈ ಮಕ್ಕಳೊಂದಿಗೆ ಬದುಕುತ್ತಿರುವ ರಾಬಿನ್ ನಿತ್ಯವು ಮುಂಬೈ ಸುತ್ತುತ್ತಾ, ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳನ್ನು ಸಂಸ್ಥೆಗೆ ಕರೆತರುವ ಕಾಯಕದಲ್ಲಿ ನಿರತರಾಗಿದ್ದಾರೆ. ಅವರಿಗೆ ಶಿಕ್ಷಣ ನೀಡಿ ಸಮಾಜದಲ್ಲಿ  ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಗುರಿ ಹೊಂದಿದ್ದಾರೆ. ರಾಬಿನ್ ಅವರ ಸೇವೆಯನ್ನು ಗೌರವಿಸಿ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ಸನ್ಮಾನಿಸಿವೆ.

ಇವರ ವೆಬ್ ವಿಳಾಸ: www.kranti-india.org

ಜಿ. ಕಿಶನ್ ಚೌಹಾಣ್

ತ ಐಟಿ ಪದವೀಧರ. ಖಾಸಗಿ  ಕಂಪೆನಿಯಲ್ಲಿ ಕೆಲಸ, ಕೈ ತುಂಬಾ ಸಂಬಳ. ನಿತ್ಯವು ಸ್ಥಳೀಯ ರೈಲಿನಲ್ಲಿ ದಾರವಿ ಕೊಳೆಗೇರಿಯನ್ನು ನೋಡುತ್ತ ಕಚೇರಿಗೆ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಕೆಲಸಕ್ಕೆ ರಾಜೀನಾಮೆ ನೀಡಿದ ಆ ಯುವಕ ಅದೇ ಕೊಳೆಗೇರಿಯಲ್ಲಿ ಪುಟ್ಟದೊಂದು ಮನೆ ಮಾಡಿ ವಾಸ ಮಾಡುತ್ತಾನೆ. ಹೀಗೆ ಎರಡು ವರ್ಷಗಳ ಹಿಂದೆ ಬಂದು ನೆಲೆಸಿದ್ದ ಆ ಯುವಕ ಇಂದು  ದಾರವಿ ಕೊಳೆಗೇರಿಯಲ್ಲಿ ಚಿರಪರಿಚಿತ. ಅವರೇ ಗೌರಾಂಗ್ ಕಿಶನ್ ಚೌಹಾಣ್. ಇಲ್ಲಿನ ಬಡ ಮಕ್ಕಳಿಗೆ ಸಮುದಾಯ ಶಿಕ್ಷಣ ನೀಡುವ ಮತ್ತು ಉದ್ಯೋಗ ಕೊಡಿಸುವ ಕೆಲಸದಲ್ಲಿ ಚೌಹಾಣ್ ನಿರತರಾಗಿದ್ದಾರೆ. ‘ಲೆಹರ್’ ಎಂಬ ಸ್ವಯಂ ಸೇವಾ ಸಂಸ್ಥೆ ಕಟ್ಟಿರುವ ಚೌಹಾಣ್  ಆ  ಮೂಲಕ  ಬಡವರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ರೈಲಿನಲ್ಲಿ ಕಚೇರಿಗೆ ಹೋಗುವಾಗ ಸ್ಲಂ ಜನರ ಬದುಕನ್ನು ಕಣ್ಣಾರೆ ಕಂಡು ಮರುಗುತ್ತಿದ್ದರು. ಚಿಂದಿ ಹಾಯುವ ಮಕ್ಕಳು, ಕೆಲಸವಿಲ್ಲದೆ ಸುತ್ತುತ್ತಿರುವ ಯುವ ಸಮುದಾಯಕ್ಕೆ ಏನಾದರೂ ಒಳಿತು ಮಾಡಬೇಕೆಂಬ ಗುರಿಯೊಂದಿಗೆ ‘ಲೆಹರ್’ ಸಂಸ್ಥೆ ಕಟ್ಟಿದ್ದಾರೆ.

ಇದರ ಮುಖಾಂತರ ಇಂದು ಸಾವಿರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ವೃತ್ತಿಪರ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ನಿರುದ್ಯೋಗಿ ಯುವಕ/ ಯುವತಿಯರಿಗೆ ಉದ್ಯೋಗ ಮತ್ತು  ಸ್ವ–ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ. ಚೌಹಾಣ್ ಅವರ ಸೇವೆಗೆ ವಿಶ್ವಸಂಸ್ಥೆಯು 2012ನೇ ಸಾಲಿನ ‘ಅಂತರರಾಷ್ಟ್ರೀಯ ಯುವ ನಾಯಕ’ ಪ್ರಶಸ್ತಿ ನೀಡಿ ಗೌರವಿಸಿದೆ.

ಇವರ ವೆಬ್ ವಿಳಾಸ: www.Leher.org

ಸುನಿಲ್ ಖಂದಬಹಳೆ

ನ್ನ ಹೆಸರಿನ ಸ್ಪೆಲ್ಲಿಂಗ್‌ ಸರಿಯಾಗಿ ಹೇಳಲಿಕ್ಕೆ ಬಾರದ ಯುವಕನೊಬ್ಬ  22 ಭಾಷೆಗಳಲ್ಲಿ ವೆಬ್‌ ನಿಘಂಟು ರಚಿಸಿದ ಕಥೆ ಇದು. ಈಗಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ಸಮಸ್ಯೆ ಇರುವಂತೆ, ಮರಾಠಿ ಮಾತ್ರವೇ ಗೊತ್ತಿದ್ದ ಸುನಿಲ್ ಖಂದಬಹಳೆಗೂ ಇಂಗ್ಲಿಷ್ ಸಮಸ್ಯೆ ಇತ್ತು. ಮಹಾರಾಷ್ಟ್ರದ ನಾಸಿಕ್‌ನ ರೈತ ಕುಟುಂಬದಲ್ಲಿ ಜನಿಸಿದ ಸುನಿಲ್ ಹತ್ತನೇ ತರಗತಿವರೆಗೂ ಮರಾಠಿ ಮಾಧ್ಯಮದಲ್ಲೇ ಓದಿದವರು.

ಮನೆಯವರ ಆಸೆಯಂತೆ ಸುನಿಲ್ ಇಷ್ಟವಿಲ್ಲದೇ ಡಿಪ್ಲೊಮಾಗೆ ಸೇರಬೇಕಾಯಿತು. ಇತ್ತ ಕಾಲೇಜಿಗೆ ದಾಖಲಾಗುತ್ತಿದ್ದಂತೆ ಅತ್ತ ಅಪ್ಪ, ಮಗ ಎಂಜಿನಿಯರ್ ಆಗುತ್ತಾನೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದರು. ಇಂಗ್ಲಿಷಿನಲ್ಲೇ ಪಾಠ ಹೇಳುತ್ತಿದ್ದರಿಂದ  ಪಾಠದ ತಳ ಬುಡವೇ  ಅರ್ಥವಾಗುತ್ತಿರಲಿಲ್ಲ!   ಹೇಗೊ ಕಷ್ಟಪಟ್ಟು ಒಂದು ವರ್ಷ ಕಾಲೇಜು ಮೆಟ್ಟಿಲು ಹತ್ತಿ ಇಳಿದಿದ್ದೇ ಸುನಿಲ್ ಪಾಲಿಗೆ ಒಂದು ಸಾಹಸ. ಹಾಗಾಗಿ ಮೊದಲ ವರ್ಷದ ಫಲಿತಾಂಶ ನಪಾಸು!

ನನಗೆ ಡಿಪ್ಲೊಮಾ ಪಾಸು ಮಾಡಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದ ಸುನಿಲ್ ಪ್ರಾಂಶುಪಾಲರ ಬಳಿ  ‘ನನಗೆ ಇಂಗ್ಲಿಷ್ ಭಾಷಾ ಸಮಸ್ಯೆ ಇರುವುದರಿಂದ ಈ ಕೋರ್ಸ್ ಮುಂದುವರೆಸಲು ಸಾಧ್ಯವಿಲ್ಲ, ನನ್ನನ್ನು ಕಲಾ ವಿಭಾಗಕ್ಕೆ ವರ್ಗಾಯಿಸಿ ಎಂದು  ಮನವಿ ಮಾಡಿದರು. ‘ಅಯ್ಯೋ ದಡ್ಡ, ಇಂಗ್ಲಿಷ್ ಭಾಷೆ ಸಮಸ್ಯೆ ಅಲ್ಲವೇ ಅಲ್ಲ, ನೀನು ನಿಘಂಟು ಬಳಸಿ ನೋಡು, ಇಂಗ್ಲಿಷ್ ಎಷ್ಟು ಸುಲಭ ಅಂತ ಗೊತ್ತಾಗುತ್ತೆ’ ಎಂದು ಸಲಹೆ ನೀಡಿದರು.ಅಲ್ಲಿಯವರೆಗೂ ನಿಘಂಟು ಎಂಬ ಪದವನ್ನೇ ಕೇಳಿರದ ಸುನಿಲ್ ಮರಾಠಿ ಮತ್ತು ಇಂಗ್ಲಿಷ್ ನಿಘಂಟು (ತಂತ್ರಜ್ಞಾನ ಮತ್ತು ಸಾಮಾನ್ಯ)ತರಿಸಿಕೊಂಡು ಓದಿನಲ್ಲಿ ಮಗ್ನರಾದರು.  ಹೀಗೆ ಅಧ್ಯಯನ ಶೀಲರಾದ ಸುನಿಲ್ ಮತ್ತೆ ಹಿಂತಿರುಗಿ ನೋಡಲಿಲ್ಲ!  ಎಂಜಿನಿಯರಿಂಗ್ ಮತ್ತು  ಎಂಬಿಎ ಪದವಿಯನ್ನು ಇಂಗ್ಲಿಷ್ ಭಯವಿಲ್ಲದೇ ಪೂರೈಸಿದರು.ಸುಮಾರು 150 ದೇಶಗಳಲ್ಲಿ ಸುನಿಲ್ ರಚಿಸಿದ ವೆಬ್ ನಿಘಂಟು ಬಳಕೆಯಾಗುತ್ತಿದೆ. ಇದನ್ನು ಮೊಬೈಲ್ ಮತ್ತು ವೆಬ್ ಬಳಕೆದಾರರು ಹೆಚ್ಚಾಗಿ ಬಳಸುತ್ತಿದ್ದಾರೆ. ಸುನಿಲ್ ಸಾಧನೆಗೆ ಭಾರತ ಸರ್ಕಾರ ‘ಯುವ ಸಾಧಕ’ ಎಂಬ ಬಿರುದು ನೀಡಿ ಪುರಸ್ಕರಿಸಿದೆ.

ಇವರ ವೆಬ್ ವಿಳಾಸ: www.khandbahale.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry