ಶನಿವಾರ, ಮಾರ್ಚ್ 6, 2021
18 °C

ಪರರ ಏಳಿಗೆಯಲ್ಲೇ ಸಂತೋಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರರ ಏಳಿಗೆಯಲ್ಲೇ ಸಂತೋಷ

ಮುಖ್ಯ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನನಗೆ ಇಡೀ ಜಿಲ್ಲೆಯೊಂದಿಗೆ ಅನ್ಯೋನ್ಯ ಸಂಬಂಧವಿದೆ. ಎಂ.ಎಚ್.ಎಸ್.ಸಿ ಶಿಕ್ಷಣವನ್ನು ಅತ್ಯುನ್ನತ ಶ್ರೇಣಿಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ಕರ್ನಾಟಕ ಲೋಕಸೇವಾ ಆಯೋಗದಿಂದ 1983ರಲ್ಲಿ ಕರೆಯಲಾಗಿದ್ದ ಕ್ಲಾಸ್-2 ಹುದ್ದೆಯಲ್ಲಿ ಮೆರಿಟ್ ಆಧಾರದ ಮೇಲೆ ಕೆಲಸಕ್ಕೆ ಸೇರಿದೆ.

ಗುಲ್ಬರ್ಗ ಜಿಲ್ಲೆಯ ಸೇಡಂ, ಜೇವರ್ಗಿ, ಗುಲ್ಬರ್ಗ ಗ್ರಾಮಾಂತರ ಪ್ರದೇಶದಲ್ಲಿ ಸಿಡಿಪಿಒ ಮತ್ತು ಕಾರ್ಯಕ್ರಮ ಅಧಿಕಾರಿಯಾಗಿ ಕೆಲಸ ಮಾಡಿರುವ ನಾನು, ಬೀದರ್‌ನಲ್ಲೂ ಕೆಲ ತಿಂಗಳು ಸೇವೆ ಸಲ್ಲಿಸಿದ್ದೇನೆ. ರೆಫ್ಟ್‌ಕಾಸ್ ಫಾರ್ಮಾಸಿಟಿಕಲ್ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಗುಲ್ಬರ್ಗದ ಭೀಮಸೇನ ಕಲಂದಾನಿಯವರನ್ನು ಮದುವೆಯಾದ ನಂತರ ಅತ್ತೆ, ಮಾವ ನನ್ನನ್ನು ತುಂಬಾ ಚೆನ್ನಾಗಿಯೇ ನೋಡಿಕೊಂಡರು. ಹೀಗಾಗಿ ಗುಲ್ಬರ್ಗ ನನಗೆ ಗಂಡನ ಮನೆಯ ಜೊತೆಗೆ ತವರುಮನೆಯೂ ಆಗಿದೆ.

ಧಾರವಾಡದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ನನ್ನ ತಂದೆ ಭೀಮರಾವ ಗಾಯಿ ಅವರು ರಾಯಚೂರಿನಲ್ಲಿ ಸೇವೆಯಿಂದ ನಿವೃತ್ತರಾದವರು. ಮೂರು ಮಕ್ಕಳಿರುವ ನನಗೆ ಕಚೇರಿಯ ಯಾವ ಕೆಲಸಕ್ಕೂ ತೊಂದರೆಯಾಗದಂತೆ ಪತಿ, ಅತ್ತೆ-ಮಾವ ಮಕ್ಕಳ ಆರೈಕೆ ಮಾಡಿದರು. ಇದರಿಂದಾಗಿಯೇ ಅನೇಕ ನಿರ್ಗತಿಕರ ಸೇವೆ ಮಾಡುವ ಭಾಗ್ಯ ನನಗೆ ದೊರೆಯಿತು.

ಸಮಯ ಸಿಕ್ಕಾಗಲೆಲ್ಲ ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತೇನೆ. ಮಕ್ಕಳ ಶಾಲಾ ವಾರ್ಷಿಕೋತ್ಸವಗಳಲ್ಲಿ ಪಾಲ್ಗೊಳ್ಳುವ ಮೂಲಕ ಅವರ ಆಟ, ಪಾಠ, ಉಡುಗೆ, ತೊಡುಗೆ ಕಂಡು ಸಂತೃಪ್ತಿ ಪಡುತ್ತೇನೆ. ರಜಾ ದಿನಗಳಲ್ಲಿ ಕುಟುಂಬ ಸಮೇತ  ಪ್ರವಾಸಕ್ಕೆ ಹೋಗುತ್ತೇವೆ.

ನನ್ನ ಬಿಡುವಿಲ್ಲದ, ಒತ್ತಡದ ಕಚೇರಿ ಕೆಲಸವನ್ನು ತುಂಬಾ ಚೆನ್ನಾಗಿಯೇ ಅರ್ಥಮಾಡಿಕೊಂಡಿರುವ ನನ್ನ ಪತಿ, ತಮ್ಮ ಸೇವಾ ನಿವೃತ್ತಿಯ ನಂತರವೂ ನನಗೆ ಸಹಕಾರ ಮುಂದುವರಿಸಿದ್ದಾರೆ. ಮನೆಯಲ್ಲಿ ಕಾಯಿಲೆಯಿಂದ ಬಳಲುತ್ತಿರುವ ಅತ್ತೆಯ ಆರೈಕೆ ಮಾಡಿ ಕಚೇರಿಗೆ ತೆರಳುವುದು ನನ್ನ ದಿನಚರಿಯಾಗಿದ್ದು, ಅತ್ತೆಯ ಸೇವೆಯಲ್ಲಿಯೇ ದೇವರನ್ನು ಕಾಣುತ್ತಿದ್ದೇನೆ.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ತುಂಬಾ ಶ್ರದ್ಧೆಯಿಂದ ಭಾಗವಹಿಸುವುದು, ಹಬ್ಬದ ದಿನದಂದು ರುಚಿಕಟ್ಟಾದ ಅಡುಗೆ ಮಾಡುವುದು, ಎಲ್ಲರೂ ಒಟ್ಟಾಗಿ ಸೇರುವುದೆಂದರೆ ನನಗೆ ಎಲ್ಲಿಲ್ಲದ ಖುಷಿ. ಬಿಡುವಿನ ವೇಳೆಯಲ್ಲಿ ಭಗವದ್ಗೀತೆ, ರಾಮಾಯಣ ಹಾಗೂ ಇನ್ನಿತರ ಧಾರ್ಮಿಕ ಗ್ರಂಥಗಳನ್ನು ಓದುವ ಹವ್ಯಾಸ ಇಟ್ಟುಕೊಂಡಿದ್ದೇನೆ. ನನ್ನ ವೈವಾಹಿಕ ಜೀವನದ 25 ವಸಂತಗಳನ್ನು ಪೂರೈಸಿದಾಗ ಕುಟುಂಬದವರು, ಸಂಬಂಧಿಕರು ಹಾಗೂ ಹಿತೈಷಿಗಳು ಸೇರಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸಿದ್ದನ್ನು ಎಂದಿಗೂ ಮರೆಯಲಾರೆ.

ಕೆಲಸ ಮಾಡಿದ ತೃಪ್ತಿ...

ಮಹಿಳಾ ಸ್ವ ಸಹಾಯ ಸಂಘ, ಸಾಂತ್ವನ ಕೇಂದ್ರ, ಮಹಿಳಾ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಅವಕಾಶ ಕಲ್ಪಿಸಿದ್ದೇವೆ. 2003-04ನೇ ಸಾಲಿನಲ್ಲಿ ಚಿಂಚೋಳಿ ತಾಲ್ಲೂಕಿನ ಕೊಂಚಾವರಂನಲ್ಲಿ ಮಕ್ಕಳ ಮಾರಾಟ ಪ್ರಕರಣ ನಡೆದ ಸಂದರ್ಭದಲ್ಲಿ ಮಧ್ಯರಾತ್ರಿ ಐದು ಮಕ್ಕಳು ದೊರಕಿದವು. ಅವುಗಳನ್ನು `ನಂದಗೋಕುಲ~ದಲ್ಲಿ ಸೇರಿಸಿದೆವು. ಆ ಮಕ್ಕಳಿಗೀಗ 8-9 ವರ್ಷ. ಜಿಲ್ಲೆಯಲ್ಲಿ ಈಗ 6,500 ಸ್ತ್ರೀ ಶಕ್ತಿ ಸಂಘಗಳಿವೆ. ಅವುಗಳಿಂದ 40 ಕೋಟಿ ರೂಪಾಯಿ ಸಂಗ್ರಹವಾಗಿದೆ. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ `ಸ್ತ್ರೀ ಶಕ್ತಿ ಮಾರುಕಟ್ಟೆ ಭವನ~ಗಳು ಆರಂಭವಾಗಿವೆ.

ಮಹಿಳೆಯರು ಉತ್ಪಾದಿಸಿದ ವಸ್ತುಗಳನ್ನು ಮಾರಾಟ ಮಾಡಲಿಕ್ಕಾಗಿ `ಮಹಿಳಾ ಬಜಾರ್~ ಆರಂಭಿಸಲಾಗಿದ್ದು, ಪ್ರತಿ ವರ್ಷ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ನಡೆಸಲಾಗುತ್ತಿದೆ. ಅನಾಥ ಮಕ್ಕಳಿಗೆ ಆಶ್ರಯ ನೀಡುವ `ಅಮೂಲ್ಯ ಶಿಶು ಗೃಹ~ ಸ್ಥಾಪಿಸಿ ಸುಮಾರು 40- 45 ಮಕ್ಕಳನ್ನು ದತ್ತು ನೀಡಲಾಗಿದೆ. 2009ರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಇರುವ ನನಗೆ, ಸಾಕಷ್ಟು ಮಹಿಳೆಯರು, ಮಕ್ಕಳು, ವೃದ್ಧರು, ಅಂಗವಿಕಲರಿಗೆ ಕೈಲಾದ ಸೇವೆ ಮಾಡಲು ಸಾಧ್ಯವಾಗಿದೆ.

(ಆಡಳಿತ ಸೂತ್ರ ಹಿಡಿದ ಯಶಸ್ವಿ ಮಹಿಳೆಯರ ಮನದಾಳದ ಮಾತುಗಳಿಗೆ ಈ ಅಂಕಣ ಭೂಮಿಕೆಯಾಗಿದೆ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.