ಸೋಮವಾರ, ಮೇ 23, 2022
21 °C

ಪರವಾನಗಿ ಇಲ್ಲದೇ ಮರ ಸಾಗಣೆ: ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರಾಜಪೇಟೆ: ನಕಲಿ ಪರವಾನಗಿ ಬಳಸಿ ಕೊಡಗಿನಿಂದ ಕುಟ್ಟದ ಚೆಕ್‌ಪೋಸ್ಟ್ ಮೂಲಕ 17ಲಕ್ಷ ಮೌಲ್ಯದ ಬೀಟೆ, ಹಲಸು ಹಾಗೂ ಹೆಬ್ಬಲಸು ಮರಗಳನ್ನು ಅಕ್ರಮವಾಗಿ ಕೇರಳಕ್ಕೆ ಸಾಗಿಸಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು, ಅರಣ್ಯ ಇಲಾಖೆಯ ನಾಲ್ಕು ಸಿಬ್ಬಂದಿ ಸೇರಿದಂತೆ 11ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಮೂರು ತಿಂಗಳ ಅವಧಿಯಲ್ಲಿ ಈ ಅಕ್ರಮ ನಡೆದಿದ್ದು, ಮೂರು ದಿನದ ಹಿಂದೆ ಬೆಳಕಿಗೆ ಬಂದಿದೆ. ದಕ್ಷಿಣ ಕೊಡಗಿನ ಮರ ವ್ಯಾಪಾರಿ ನೋಬನ್ ಹಾಗೂ ಗೋಣಿಕೊಪ್ಪಲಿನ ಇತರ 4ಮಂದಿ ಸೇರಿ ಈ ಕೃತ್ಯ ನಡೆಸಿದ್ದಾರೆ.ಇವರೊಂದಿಗೆ ಅರಣ್ಯ ಇಲಾಖೆಯ ಗಾರ್ಡ್‌ಗಳಾದ ತಿತಿಮತಿಯ ಮರದ ಡಿಪೋದ ಗಾರ್ಡ್ ನಾಚಪ್ಪ, ಕುಟ್ಟ ಚೆಕ್‌ಪೋಸ್ಟ್‌ನ ಗಾರ್ಡ್ ಪೊನ್ನಪ್ಪ ಹಾಗೂ ಫಾರೆಸ್ಟರ್‌ಗಳಾದ ಕಂದನ್, ತಿಮ್ಮಯ್ಯ ಭಾಗಿಯಾಗಿದ್ದಾರೆ.ವಿಭಾಗ ಅರಣ್ಯ ಅಧಿಕಾರಿಯ ದೂರಿನ ಪ್ರಕಾರ, ಅಕ್ರಮ ಸಾಗಾಣಿಕೆಯಲ್ಲಿ ಪ್ರಮುಖನಾದ ನೋಬನ್ ಗೋಣಿಕೊಪ್ಪಲಿನಲ್ಲಿ ಮರದ ಮಿಲ್‌ನ್ನು 11ತಿಂಗಳ ಗುತ್ತಿಗೆ ಆಧಾರದ ಮೇಲೆ ಬಾಡಿಗೆಗೆ ಪಡೆದಿದ್ದು, ಇನ್ನು ನಾಲ್ವರು ಮರ ವ್ಯಾಪಾರ ಸಂಸ್ಥೆಯ ಮಾಲೀಕರುಗಳನ್ನು ಸೇರಿಸಿಕೊಂಡು ಅಕ್ರಮ ಚಟುವಟಿಕೆ ನಡೆಸಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ.ಪೊನ್ನಂಪೇಟೆ ಪೊಲೀಸರು ನೋಬನ್ ಸೇರಿದಂತೆ 5ಮಂದಿಯ ತಂಡ, ಇವರಿಗೆ ಸೇರಿದ ಲಾರಿಯ ಚಾಲಕರುಗಳಾದ ಫೈಜಲ್ ಹಾಗೂ ದಾವುದ್ ಇಲಾಖೆ ಸಿಬ್ಬಂದಿ ಸೇರಿ 11ಮಂದಿಯನ್ನು ಆರೋಪಿಗಳಾಗಿ ಪ್ರಕರಣದಲ್ಲಿ ನಮೂದಿಸಲಾಗಿದೆ. 11ಮಂದಿ ಇಲಾಖೆಯಿಂದ ಆರು ಪರವಾನಗಿಗಳನ್ನು ತ್ದ್ದಿದುಪಡಿ ಮಾಡಿ ಮರದ ಪ್ರಮಾಣವನ್ನು ಅಧಿಕಗೊಳಿಸಿ ಕೇರಳದ ವಿವಿಧ ಮಿಲ್‌ಗಳಿಗೆ ಸಾಗಿಸಿದ್ದಾರೆ. ಈಚೆಗೆ ಪ್ರಕರಣ ಇಲಾಖೆಯ ಗಮನಕ್ಕೆ ಬಂದು ತನಿಖೆ ನಡೆಸುತ್ತಿರುವುಗಾಲೇ ಎಲ್ಲರೂ ತಲೆಮರೆಸಿಕೊಂಡಿರುವುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಪೊನ್ನಂಪೇಟೆಯ ವಲಯ ಅರಣ್ಯ ಅಧಿಕಾರಿ ಈ ಅಕ್ರಮ ಪ್ರಕರಣದಲ್ಲಿ ಭಾಗಿಯಾದ ಶಂಕೆ ಇದ್ದು, ಇಲಾಖೆಯ ಉನ್ನತ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿ ಕೆಲವು ದಾಖಲೆ ವಶಪಡಿಸಿಕೊಂಡಿದ್ದಾರಲ್ಲದೇ, ಮನೆಯನ್ನು ಸ್ವಾಧೀನಕ್ಕೆ ತೆಗೆದುಕೊಂಡು ಮನೆಗೆ ಬೀಗ ಜಡಿದಿದ್ದಾರೆ. ಈ ಅಧಿಕಾರಿಗೆ ಇದೇ ಸಮಯದಲ್ಲಿ ಶಿರಸಿಗೆ ವರ್ಗಾವಣೆ ಆಗಿದ್ದು ಹಾಜರಾತಿ ನೀಡಲು ಶಿರಸಿಗೆ ತೆರಳಿದ್ದಾರೆ.ಇಲಾಖೆಯ ಈಗಿನ ಅಂದಾಜು ಪ್ರಕಾರ ರೂ 17ಲಕ್ಷ. ಅಕ್ರಮವಾಗಿ ರೂ ಒಂದು ಕೋಟಿಗೂ ಮಿಕ್ಕಿ ಮರವನ್ನು ಕೇರಳಕ್ಕೆ ಸಾಗಿಸಲಾಗಿದೆ. ಅರಣ್ಯ ಇಲಾಖೆಯ ನಾಲ್ಕು ಮಂದಿ ಸಿಬ್ಬಂದಿಗಳು ಪರವಾನಗಿ ತಿದ್ದುಪಡಿ ಮಾಡಿ ಕುಟ್ಟ ಚೆಕ್‌ಪೋಸ್ಟ್ ಮಾರ್ಗವಾಗಿ ಲಾರಿ ತೆರಳಲು ಮರ ವ್ಯಾಪಾರಿಗಳಿಗೆ ಸಹಕರಿಸಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಲಾರಿಯನ್ನು ವಶಪಡಿಸಿಕೊಳ್ಳಲು ಶೋಧನೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.ಇಬ್ಬರ ಅಮಾನತು: ಈ ಪ್ರಕರಣ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಆರು ಪರವಾನಗಿಗಳನ್ನು ತಿದ್ದಿ ಇಲಾಖೆಯ ಮೊಹರು(ಸೀಲ್) ಮಾಡಿದ ದೂರಿನ ಮೇರೆಗೆ ವಿಭಾಗ ಅರಣ್ಯ ಅಧಿಕಾರಿ ಎಚ್.ಸಿ.ಕಾಂತರಾಜ್ ಅವರು ಕುಟ್ಟದ ಚೆಕ್‌ಪೋಸ್ಟ್ ಗಾರ್ಡ್ ಪೊನ್ನಪ್ಪ ಹಾಗೂ ತಿತಿಮತಿಯ ಗಾರ್ಡ್ ನಾಚಪ್ಪ ಎಂಬಿಬ್ಬರನ್ನು ಸೋಮವಾರ ಕರ್ತವ್ಯದಿಂದ ಅಮಾನತು ಮಾಡಿದ್ದಾರೆ. ಫಾರೆಸ್ಟ್‌ಗಳಾದ ತಿತಿಮತಿಯ  ಕಂದನ್‌ಗೆ ನಿವೃತ್ತಿಗೆ ಇನ್ನು ಒಂದು ತಿಂಗಳು ಬಾಕಿ ಇದ್ದು, ಈತ ಹಾಗೂ ಕುಟ್ಟದ ಚೆಕ್‌ಪೋಸ್ಟ್‌ನ ಫಾರೆಸ್ಟರ್ ತಿಮ್ಮಯ್ಯ ಅವರುಗಳನ್ನು ಅಮಾನತುಗೊಳಿಸಲು ಇಲಾಖೆಗೆ ಶಿಫಾರಸು ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.