ಪರಸ್ಪರ ಒಂದುಗೂಡಿಸುವ ಶಕ್ತಿ ಕ್ರೀಡೆಗಿದೆ

7

ಪರಸ್ಪರ ಒಂದುಗೂಡಿಸುವ ಶಕ್ತಿ ಕ್ರೀಡೆಗಿದೆ

Published:
Updated:

ತೀರ್ಥಹಳ್ಳಿ: ಹಣ ಮತ್ತು ರಕ್ತ ಒಂದುಕಡೆ ನಿಲ್ಲಬಾರದು. ಅದು ಹರಿಯುವಂತಾಗಬೇಕು. ದುಡ್ಡಿದ್ದವರು ಸಮಾಜದ ಒಳಿತಿಗೆ ವ್ಯಯಿಸಬೇಕು ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅಭಿಪ್ರಾಯಪಟ್ಟರು.ತೀರ್ಥಹಳ್ಳಿಯಲ್ಲಿ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಸ್ಮರಣಾರ್ಥ ಆಯೋಜಿಸಿದ್ದ ರಾಷ್ಟ್ರಮಟ್ಟದ ಕೊಕ್ಕೊ ಕ್ರೀಡಾ ಕೂಟದ ಸಮಾರೋಪದಲ್ಲಿ ಅವರು ಮಾತನಾಡಿದರು. 

ಕ್ರೀಡೆ ಮನಸ್ಸಿಗೆ ಆನಂದ ನೀಡುತ್ತದೆ. ಪರಸ್ಪರರನ್ನು ಒಂದು ಗೂಡಿಸುತ್ತದೆ. ಕ್ರೀಡೆಯಲ್ಲಿ ಪ್ರೀತಿಯಿಂದ ಪಾಲ್ಗೊಳ್ಳುವ ಕೆಲಸ ಆಗಬೇಕು ಎಂದರು.ಸಜ್ಜನಿಕೆಗೆ ಹೆಸರಾದ ತೀರ್ಥಹಳ್ಳಿಯಲ್ಲಿ ಕ್ರೀಡಾ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಮೂರು ದಿನಗಳಿಂದ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕ್ರೀಡೆಗೆ ಜಾತಿ, ಧರ್ಮ, ಭಾಷೆ, ದೇಶದ ಎಲ್ಲೆ ಇಲ್ಲ ಎಂದು ಶಾಸಕ ಕಿಮ್ಮನೆ ರತ್ನಾಕರ್ ಹೇಳಿದರು.ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ತೀರ್ಥಹಳ್ಳಿಯ ಕ್ರೀಡಾ ಇತಿಹಾಸದಲ್ಲಿ ಇದೊಂದು ದಾಖಲೆ. ತೀರ್ಥಹಳ್ಳಿಯ ನೆಲ ಅನೇಕ ಕ್ರೀಡಾಪಟುಗಳನ್ನು ನೀಡಿದೆ. ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಮಾತ್ರ ಅಲ್ಲ ಎಂಬುದನ್ನು ಈ ಕ್ರೀಡಾಕೂಟ ತೋರಿಸಿದೆ. ಇಲ್ಲಿನ ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸಿದೆ ಎಂದರು.ಜೆಡಿಎಸ್ ರಾಜ್ಯ ಮುಖಂಡ ಆರ್. ಮದನ್ ಮಾತನಾಡಿ, ಕಳೆದ 17 ವರ್ಷಗಳ ಹಿಂದೆ ರಾಷ್ಟ್ರಮಟ್ಟದ ಕೊಕ್ಕೊ ಪಂದ್ಯಾವಳಿ ರಾಜ್ಯದಲ್ಲಿ ನಡೆದಿತ್ತು. ಅಂಥ ಮಹತ್ವದ ಪಂದ್ಯ ತೀರ್ಥಹಳ್ಳಿಯಂಥ ಊರಲ್ಲಿ ಆಯೋಜನೆಗೊಂಡಿದೆ ಎಂಬುದು ಹೆಮ್ಮೆ ತರುವಂಥ ವಿಚಾರ ಎಂದರು.ಚಿತ್ರ ಸಾಹಿತಿ ಕವಿರಾಜ್ ಮಾತನಾಡಿ, ತೀರ್ಥಹಳ್ಳಿ ಎಂದು ಹೆಮ್ಮೆಪಡಲು ಹಲವಾರು ಕಾರಣಗಳಿವೆ. ಚಿಕ್ಕ ಊರಿನಲ್ಲಿ ದೊಡ್ಡ ಕ್ರೀಡಾಕೂಟ ಏರ್ಪಡಿಸುವ ಮೂಲಕ ಇಲ್ಲಿನ ಜನರ ಕ್ರೀಡಾಪ್ರೇಮವನ್ನು ಸಾಬೀತುಪಡಿಸಿದ್ದಾರೆ. ಬಂಗಾರಪ್ಪ ಅವರ ನೆನಪಲ್ಲಿ ಕ್ರೀಡಾಕೂಟ ಏರ್ಪಟ್ಟಿರುವುದು ಅರ್ಥಪೂರ್ಣವಾಗಿದೆ ಎಂದರು.ಅಂತಿಮ ಹಣಾಹಣಿಯಲ್ಲಿ ಪುರುಷರ ವಿಭಾಗದ ಮೊದಲ ಸ್ಥಾನವನ್ನು ನವದೆಹಲಿ ತಂಡ, ದ್ವಿತೀಯ ಸ್ಥಾನವನ್ನು ಕರ್ನಾಟಕ ಹಾಗೂ ತೃತೀಯ ಸ್ಥಾನವನ್ನು ಪಶ್ಚಿಮಬಂಗಾಳ ತಂಡ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಕೇರಳ ತಂಡ ಪ್ರಥಮ ಸ್ಥಾನ, ಕರ್ನಾಟಕ ದ್ವಿತೀಯ ಹಾಗೂ ಆಂಧ್ರ ತಂಡ ಮೂರನೇ ಸ್ಥಾನ ಪಡೆಯಿತು. ವಿಜೇತ ತಂಡಗಳಿಗೆ ನಗದು ಬಹುಮಾನ ನೀಡಲಾಯಿತು.ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬೆಟ್ಟಮಕ್ಕಿ ಕೃಷ್ಣಮೂರ್ತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕುಸುಮಾ ಮಂಜುನಾಥ್ ಪ್ರಾರ್ಥಿಸಿದರು. ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ನ ಪಿ.ಸಿ. ಸತೀಶ್‌ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry