ಮಂಗಳವಾರ, ಮೇ 24, 2022
30 °C

ಪರಸ್ಪರ ವರ್ಗಾವಣೆಗಾಗಿ ಸಂಪರ್ಕಿಸಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  ನಾನು ಮಂಡ್ಯ ಜಿಲ್ಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು ಬೆಳಗಾವಿ, ಚಿಕ್ಕೋಡಿ, ಧಾರವಾಡ ಜಿಲ್ಲೆಯಲ್ಲಿ ಇರುವವರು ಪರಸ್ಪರ ವರ್ಗಾವಣೆ ಬಯಸುವವರು 9916847798 ಸಂಪರ್ಕಿಸಿ.ಇಂತಹ ನೂರಾರು ಕೋರಿಕೆ ಪತ್ರಗಳನ್ನು ಜಗನ್ಮೋಹನ ಅರಮನೆ ಸಭಾಂಗಣದ ಗೋಡೆಗಳು, ಬಾಗಿಲುಗಳು, ಕಿಟಕಿಗಳ ಮೇಲೆ ಅಂಟಿಸಲಾಗಿತ್ತು.ಇದೇ ಸಭಾಂಗಣದಲ್ಲಿ ಗುರುವಾರ ಮತ್ತು ಶುಕ್ರವಾರ ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘವು ಏರ್ಪಡಿಸಿದ್ದ 8 ನೇ ಶೈಕ್ಷಣಿಕ ಮಹಾ ಸಮ್ಮೇಳನ ನಡೆಯಿತು. ಇದಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ 1 ಸಾವಿರಕ್ಕೂ ಹೆಚ್ಚು ಚಿತ್ರಕಲಾ ಶಿಕ್ಷಕ, ಶಿಕ್ಷಕರು ಆಗಮಿಸಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡ ಶಿಕ್ಷಕ ವೃಂದ ಪರಸ್ಪರ ವರ್ಗಾವಣೆಗಾಗಿ ಅಭ್ಯರ್ಥಿಗಳನ್ನು ಕೋರಿಕೆ ಪತ್ರಗಳ ಮೂಲಕ ಹುಡುಕಾಟ ನಡೆಸಿದ್ದು ಗಮನ ಸೆಳೆಯಿತು.ಸಮಾರೋಪ ಗೊಂದಲ: ಮಹಾ ಸಮ್ಮೇಳನದ ಸಮಾರೋಪ ಸಮಾರಂಭ ಗೊಂದಲದ ಗೂಡಾಗಿತ್ತು. ಸಮಾರೋಪ ಸಮಾರಂಭವನ್ನು  ಮಧ್ಯಾಹ್ನ 3 ಗಂಟೆಗೆ ನಿಗದಿ ಪಡಿಸಲಾಗಿತ್ತು. ಇದು ಶುರುವಾಗಿದ್ದೇ 4 ಗಂಟೆಗೆ. ಆಹ್ವಾನಿತರಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೊರತು ಪಡಿಸಿ ಉಳಿದ ಗಣ್ಯರು ಗೈರು ಹಾಜರಾಗಿದ್ದರು. 4.30 ಹೊತ್ತಿಗೆ ಹಿರಿಯ ಕಲಾವಿದ ನಾರಾಯಣ ಭಟ್ಟರು ರಚಿಸಿರುವ ‘ಕಲೆ ಎಂದರೇನು?’ ಪುಸ್ತಕವನ್ನು ಎಂ.ಕೆ.ಸೋಮಶೇಖರ್ ಬಿಡುಗಡೆ ಮಾಡಬೇಕಿತ್ತು. 

 

ಇಷ್ಟರಲ್ಲಿ ಸಿದ್ಧಾರ್ಥ ಲೇಔಟ್‌ನ ‘ಪ್ರಿನ್ಸಿಲಿ ಸ್ಟೇಟ್ ಮಾಂಟೆಸರಿ’ ಶಾಲೆಯ ಪೋಷಕರು ತಮ್ಮ ಮಕ್ಕಳೊಂದಿಗೆ ವೇದಿಕೆ ಏರಿ ಸಮಾರೋಪ ಸಮಾರಂಭಕ್ಕೆ ಅಡ್ಡಿ ಪಡಿಸಿದರು. ಇದರಿಂದ ಗೊಂದಲ ಉಂಟಾಯಿತು. ಈ ನಡುವೆ ಪೋಷಕರು ಮತ್ತು ಚಿತ್ರಕಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.ಕಾರಣವಿಷ್ಟೆ: ಸಭಾಂಗಣವನ್ನು ಒಂದೇ ದಿನ ಇಬ್ಬರಿಗೆ ಕೊಡಲಾಗಿತ್ತು. ಚಿತ್ರಕಲಾ ಶಿಕ್ಷಕರ ಪದಾಧಿಕಾರಿಗಳ ಪ್ರಕಾರ ‘ನಾವು ಎರಡು ದಿನಕ್ಕೆ ಸಭಾಂಗಣವನ್ನು ಕಾಯ್ದಿರಿಸಿದ್ದೆವು. ಸಾಯಂಕಾಲ ಶಾಲಾ ವಾರ್ಷಿಕೋತ್ಸವಕ್ಕೆ ಕೊಟ್ಟಿದ್ದು ನಮಗೆ ಗೊತ್ತಿರಲಿಲ್ಲ. ಇದರಿಂದ ಇಬ್ಬರಿಗೂ ತೊಂದರೆ ಆಗಿದೆ’ ಎಂದು ಹೇಳಿದರು. ‘ಸಭಾಂಗಣವನ್ನು ಮಧ್ಯಾಹ್ನಕ್ಕೆ 3.30ಕ್ಕೆ ಬಿಟ್ಟುಕೊಡುವುದಾಗಿ ಮೊದಲೇ ತಿಳಿಸಲಾಗಿತ್ತು’ ಎನ್ನುವ ಮಾತು ಕೇಳಿಬಂದಿತು.ಶಾಲಾ ವಾರ್ಷಿಕೋತ್ಸವ ಸಾಯಂಕಾಲ 4 ಗಂಟೆಗೆ ಆರಂಭವಾಗಬೇಕಿತ್ತು. ಪೋಷಕರು ಮಕ್ಕಳಿಗೆ ವಿವಿಧ ವೇಷಗಳನ್ನು ತೊಡಿಸಿಕೊಂಡು ಪ್ರದರ್ಶನವನ್ನು ವೀಕ್ಷಿಸಲು ಕಾತುರದಿಂದ ಆಗಮಿಸಿದ್ದರು. ಆದರೆ ಗೊಂದಲದಿಂದಾಗಿ ವಾರ್ಷಿಕೋತ್ಸವವನ್ನೇ ಮುಂದೂಡುವಂತಾಯಿತು. ಇಂತಹ ಗೊಂದಲದಿಂದ ಅತಿಥಿಗಳು ಮುಜುಗರಕ್ಕೆ ಒಳಗಾದರು.

ತರಾತುರಿಯಲ್ಲಿ ಸಮ್ಮೇಳನಾಧ್ಯಕ್ಷ ಜಿ.ಎಸ್.ಸೀತಾರಾಮಯ್ಯ ಭಾಷಣ ಮಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಮಹದೇವಯ್ಯ ಹಾಗೂ ವಿವಿಧ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.