ಮಂಗಳವಾರ, ಅಕ್ಟೋಬರ್ 15, 2019
29 °C

ಪರಾರಿಯಾಗಿದ್ದ ಕೈದಿ ವಶಕ್ಕೆ

Published:
Updated:

ಬೆಂಗಳೂರು: ವಿವೇಕನಗರ ಪೊಲೀಸರ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಎಡ್ವಿನ್ ಅಲಿಯಾಸ್ ಅಲೆಗ್ಸಾಂಡರ್ (23) ಎಂಬಾತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಲಕ್ಷ್ಮಣರಾವ್‌ನಗರದ ಎಡ್ವಿನ್‌ನನ್ನು ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಡುಗೋಡಿ ಪೊಲೀಸರು ಬಂಧಿಸಿ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು. ವಿವೇಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಡಕಾಯಿತಿ ಪ್ರಕರಣವೊಂದರಲ್ಲಿ ಎಡ್ವಿನ್ ಆರೋಪಿಯಾಗಿದ್ದ. ಈ ಹಿನ್ನೆಲೆಯಲ್ಲಿ ವಿವೇಕನಗರ ಪೊಲೀಸರು ಹತ್ತನೇ ಎಸಿಎಂಎಂ ನ್ಯಾಯಾಲಯದ ಅನುಮತಿ ಪಡೆದು ಹೆಚ್ಚಿನ ವಿಚಾರಣೆಗಾಗಿ ಆತನನ್ನು ವಶಕ್ಕೆ ತೆಗೆದುಕೊಂಡಿದ್ದರು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.ವಿವೇಕನಗರ ಎಸ್‌ಐ ನಟರಾಜ್, ಮುಖ್ಯ ಕಾನ್‌ಸ್ಟೇಬಲ್ ಹನುಮಂತಯ್ಯ ಮತ್ತು ಕಾನ್‌ಸ್ಟೇಬಲ್ ಗೋಪಾಲ್, ಗುರುವಾರ ರಾತ್ರಿ ಎಡ್ವಿನ್‌ನನ್ನು ಕಾರಾಗೃಹದಿಂದ ಆಟೊದಲ್ಲಿ ಠಾಣೆಗೆ ಕರೆ ತರುತ್ತಿದ್ದಾಗ ಹೊಸೂರು ರಸ್ತೆಯ ಅಯ್ಯಪ್ಪ ದೇವಸ್ಥಾನದ ಬಳಿ ಆಟೊದ ಗ್ಯಾಸ್ ಖಾಲಿಯಾಯಿತು.  ಸಿಬ್ಬಂದಿ ವಾಹನದಿಂದ ಕೆಳಗಿಳಿದು ಮತ್ತೊಂದು ಆಟೊಗೆ ಕಾಯುತ್ತಿದ್ದರು. ಈ ವೇಳೆ ಆತ ಸಿಬ್ಬಂದಿಯನ್ನು ತಳ್ಳಿ ತಪ್ಪಿಸಿಕೊಂಡು ಪರಾರಿಯಾಗಿದ್ದ. ಎಡ್ವಿನ್ ಹೆಣ್ಣೂರು ಬಂಡೆ ಪ್ರದೇಶದ ಬಳಿ ಇರುವ ಬಗ್ಗೆ ಸಿಬ್ಬಂದಿ ಮಾಹಿತಿ ಕಲೆ ಹಾಕಿ ಶುಕ್ರವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post Comments (+)