ಪರಾರಿಯ ಪೋರಿ

7

ಪರಾರಿಯ ಪೋರಿ

Published:
Updated:

ತಮಿಳಿನ `ಒತ್ತವೀಡು~ ತೆರೆಗೆ ಅಪ್ಪಳಿಸಿದಾಗ ನಟಿ ಜಾಹ್ನವಿ ಕಾಮತ್ ಕುರಿತು ಗಾಂಧಿನಗರ ಹುಬ್ಬೇರಿಸಿದ್ದುಂಟು. ಏಕೆಂದರೆ ಅಲ್ಲಿ ಸುದ್ದಿ ಮಾಡಿದ ಇವರು ಸಿನಿ ಪಯಣ ಆರಂಭಿಸಿದ್ದು ಇದೇ ಗಾಂಧಿನಗರದಿಂದ.

 

ಮಸಾಲೆ ಭರಿತ `ಚಿತ್ರಾನ್ನ~ ಕನ್ನಡದ ಅವರ ಮೊದಲ ಚಿತ್ರ. ಆದರೆ ಅದೇಕೋ ಚಿತ್ರ ತೆರೆ ಮೇಲೆ ಮೂಡಲಿಲ್ಲ. ಅಲ್ಲಿಂದ ಕನ್ನಡ ಚಿತ್ರಗಳ ಪಾಲಿಗೆ ಎಲೆಮರೆ ಕಾಯಿಯಾಗಿಯೇ ಉಳಿದರು ಈ ಕುಡ್ಲದ ಬೆಡಗಿ.ಇಷ್ಟಾದರೂ ಅವರ ಕ್ರಿಯಾಶೀಲತೆ ಮಾತ್ರ ಸದಾ ಜೀವಂತವಾಗಿತ್ತು. `ಒತ್ತವೀಡು~ ಸೇರಿದಂತೆ ಒಟ್ಟು ನಾಲ್ಕು ತಮಿಳು ಚಿತ್ರಗಳು ಅವರ ಪಾಲಿಗೆ ಒಲಿದು ಬಂದವು. `ಪುದಿಯ ಕಾವ್ಯಂ~, ಚೇರನ್ ನಾಯಕ ನಟನಾಗಿರುವ `ಅಪ್ಪವಿನ್ ಮೀಸೈ~ ಹಾಗೂ `ಕ್ರಿಸ್ಟೀನಾ~ ಚಿತ್ರಗಳಲ್ಲಿ ಅವರ ಅಭಿನಯ ಯಾನ ಮುಂದುವರಿದಿದೆ.ಈಗ ಮತ್ತೆ ಅವರನ್ನು ಕನ್ನಡಕ್ಕೆ ಕರೆತಂದಿರುವುದು ನಿರ್ದೇಶಕ ಕೆ.ಎಂ. ಚೈತನ್ಯ. `ಪರಾರಿ~ಯ ಘಾಟಿ ಪೋರಿಯಾಗಿ ಆಕೆ ಕಾಣಿಸಿಕೊಳ್ಳುತ್ತಿದ್ದಾರೆ. ಸ್ವಾರಸ್ಯದ ಸಂಗತಿ ಎಂದರೆ ಜಾಹ್ನವಿ ಅವರನ್ನು ಮೊದಲು ತೆರೆಗೆ ತಂದದ್ದೇ ಚೈತನ್ಯ. ಇವರ `ಮುಗಿಲು~ ಧಾರಾವಾಹಿಯಲ್ಲಿ ಬಾಲನಟಿಯಾಗಿ ಆಕೆ ಮಿಂಚಿದ್ದರು. ಚೈತನ್ಯ ಜಾಹ್ನವಿ ಅವರನ್ನು ಗುರುತಿಸಲು ಕಾರಣ ಅವರ ರಂಗದ ನಂಟು.ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ನಾಟಕದ ಗೀಳು ಹುಟ್ಟಿಕೊಂಡಿತು. ನಗರದ `ರಂಗಶಂಕರ~, ಮುಂಬೈನ `ಪೃಥ್ವಿ~ ಜಾಹ್ನವಿಯ ಪ್ರತಿಭೆಯನ್ನು ಗುರುತಿ ಸಿದವು. `ಗುಮ್ಮ ಬಂತು ಗುಮ್ಮ~, `ಫಸ್ಟ್ ಲೀಫ್~ ಹಾಗೂ `ಅಂತ್‌ಹೀನ್~ ಅವರ ಪ್ರಮುಖ ರಂಗ ಪ್ರಸ್ತುತಿಗಳು.ಬೆಳ್ಳಿತೆರೆಗೆ ಬರಬೇಕು ಎಂಬುದು ಎಳವೆಯಲ್ಲೇ ಕಂಡ ಕನಸಂತೆ. ಅವರ ತಾಯಿ `ಮುಂದೆ ನಟಿಯಾಗುವೆ~ ಎಂದು ನುಡಿದ ಭವಿಷ್ಯ ಈಗ ನಿಜವಾಗಿದೆ. ಅದಕ್ಕಾಗಿ ಅವರು ಸವೆಸಿದ ಹಾದಿಯೂ ದುರ್ಗಮವಾಗಿತ್ತಂತೆ.ಶಾಸ್ತ್ರೀಯ ನೃತ್ಯದಿಂದ ಹಿಡಿದು ಸಾಲ್ಸಾವರೆಗೆ ನೃತ್ಯದಲ್ಲಿ ಗಾಢವಾಗಿ ತೊಡಗಿಕೊಂಡರು. `ಕಳರಿಪಯಟ್ಟು~ ಸಮರ ಕಲೆ ಅಭ್ಯಾಸ ಮಾಡಿದರು. ಜತೆಗೆ ನಿರಂತರ ರಂಗ ಚಟುವಟಿಕೆ.`ಪರಾರಿ~ಯಲ್ಲಿ ಅವರದು ಘಟಾನುಘಟಿ ಹಳ್ಳಿ ಹುಡುಗಿಯ ಪಾತ್ರ. ಮಂಗಳೂರು ಬೆಂಗಳೂರಿನಂಥ ನಗರಗಳಲ್ಲೇ ಬೆಳೆದ ಜಾಹ್ನವಿಗೆ ಈ ಪಾತ್ರ ಹೊಸತಂತೆ. ತಮಿಳು ಚಿತ್ರಗಳಲ್ಲಿ ಗಂಭೀರ, ಬಬ್ಲೀ ಪಾತ್ರಗಳಲ್ಲೇ ನಟಿಸಿದ್ದ ಅವರಿಗೆ ಇಲ್ಲಿನ ಹಾಸ್ಯಪಾತ್ರ ನವ್ಯ ಪ್ರಯೋಗ.

 

ಇವರಂತೆಯೇ ರಂಗಭೂಮಿಯ ನಂಟು ಹೊಂದಿದ ಶೃಂಗ ಅವರ ಜೋಡಿಯಾಗಿ ಜಾಹ್ನವಿ ಕಾಣಿಸಿಕೊಳ್ಳುತ್ತಿದ್ದಾರೆ. ಶೃಂಗ ಜತೆ ಅಭಿನಯ ಅವರಿಗೆ ನೀರು ಕುಡಿದಷ್ಟೇ ಸಲೀಸಂತೆ. ಏಕೆಂದರೆ ಇಬ್ಬರೂ ನಾಟಕಗಳಿಗಾಗಿ ಒಟ್ಟಿಗೆ ದುಡಿದವರು. ಅಣ್ಣ- ತಂಗಿ, ಗೆಳೆಯ- ಗೆಳತಿ, ಅಂಕಲ್- ಆಂಟಿ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದವರು.`ಪರಾರಿ~ಯಂತಹ ಭಿನ್ನ ಅವಕಾಶವೊಂದನ್ನು ಅವರು ಬಹಳ ದಿನದಿಂದ ಅರಸುತ್ತಿದ್ದರು. ಏಕೆಂದರೆ ಒಂದೇ ಬಗೆಯ ಪಾತ್ರಗಳಿಂದ ಅವರು ಸದಾ ದೂರ. `ಹೊಸತನ್ನು ಅರಸುವ ನಟರಿಗೆ ಏಕತಾನತೆಯ ಪಾತ್ರಗಳಿಂದ ಲಾಭವಿಲ್ಲ~ ಎಂದು ತಮ್ಮ ಗುರು ಚೈತನ್ಯರಂತೆಯೇ ಕಡ್ಡಿ ಮುರಿದ ಹಾಗೆ ಹೇಳುತ್ತಾರೆ.ತೊದಲು ಕನ್ನಡದಲ್ಲಿ ಮುದ್ದಾಗಿ ಮಾತನಾಡುವ ಜಾಹ್ನವಿ ಅವರ ಮನೆಮಾತು ಕೊಂಕಣಿ. ಒಂದೇ ಭಾಷೆಯ ಚಿತ್ರಗಳ ಬಗ್ಗೆ ಅವರಿಗೆ ಅನಾಸಕ್ತಿ. ಒಳ್ಳೆಯ ಪಾತ್ರ ಒಳ್ಳೆಯ ಚಿತ್ರ ಇಷ್ಟಾದರೆ ಸಾಕು ಭಾಷೆ ಯಾವುದಾದರೂ ಸರಿ ಎನ್ನುವ ಪ್ರಮೇಯ ಅವರದು.

 

ಪುನೀತ್, ದಿಗಂತ್ ಜತೆ ಅಭಿನಯಿಸಬೇಕು, ಅಭಿಷೇಕ್ ಮಜೂಂದಾರ್ ಅವರೊಂದಿಗೆ ನಾಟಕಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ಅವರ ದೊಡ್ಡ ಕನಸು. ಭವಿಷ್ಯದ ಹೆಜ್ಜೆಗಳು ಎತ್ತ ಎಂದರೆ `ಸಿನಿಮಾ ಸಿನಿಮಾ~ ಎಂಬ ಒಂದೇ ಜಪ ಅವರಿಂದ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry