ಪರಿಟಾಲ ಹಂತಕ ಸೂರಿ ಗುಂಡಿಗೆ ಬಲಿ

7

ಪರಿಟಾಲ ಹಂತಕ ಸೂರಿ ಗುಂಡಿಗೆ ಬಲಿ

Published:
Updated:

ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಸಚಿವ ಹಾಗೂ ತೆಲುಗುದೇಶಂ ಪಕ್ಷದ (ಟಿಡಿಪಿ) ನಾಯಕ ಪರಿಟಾಲ ರವಿ ಅವರ ಹತ್ಯೆಯ ಪ್ರಮುಖ ಆರೋಪಿ ಮದ್ದೆಲಚೆರುವ ಸೂರ್ಯನಾರಾಯಣ ರೆಡ್ಡಿ ಅಲಿಯಾಸ್ ಸೂರಿ ಅವರನ್ನು ಸೋಮವಾರ ಸಂಜೆ ಇಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ.ಸೂರಿ ಅವರು ತಮ್ಮ ವಕೀಲರ ಮನೆಗೆ ತೆರಳಿ ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ಬಾಲನಗರ-ಸನಾತನಗರ ಪ್ರದೇಶದಲ್ಲಿ ಅವರ ಮೇಲೆ ಗುಂಡಿನ ಮಳೆಗರೆಯಲಾಯಿತು. ತೀವ್ರವಾಗಿ ಗಾಯಗೊಂಡ ಅವರಿಗೆ ಅಪೋಲೋ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಎರಡು ಗಂಟೆಯೊಳಗೆ ಮೃತಪಟ್ಟರು.ಯೂಸುಫ್‌ಗುಡಾ ವೈ ಜಂಕ್ಷನ್‌ನಲ್ಲಿ ಸ್ಕೋಡಾ ಫಾಬಿಯೊ ಕಾರಿನಲ್ಲಿ ಬರುತ್ತಿದ್ದ ಸೂರಿ ಮೇಲೆ ಅಪರಿಚಿತ ದುಷ್ಕರ್ಮಿಗಳು ಐದು ಸುತ್ತು ಗುಂಡು ಹಾರಿಸಿದರು. ಕಾರಿನಲ್ಲಿ ಅವರ ಆಪ್ತ ಸಹಾಯಕ ಭಾನುಕಿರಣ್ ಇದ್ದರು. ತೀರಾ ಹತ್ತಿರದಿಂದ ಗುಂಡು ಹಾರಿಸಲಾಗಿತ್ತು. ತೀವ್ರ ರಕ್ತಸ್ರಾವದಿಂದ ಪ್ರಜ್ಞಾಶೂನ್ಯರಾಗಿ ಬಿದ್ದ ಅವರನ್ನು ಅವರ ಕಾರು ಚಾಲಕ ಮಧುಸೂದನ್ ಅವರೇ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಆಸ್ಪತ್ರೆಗೆ ಭೇಟಿ ನೀಡಿದ್ದ ಹೈದರಾಬಾದ್ ಪೊಲೀಸ್ ಕಮಿಷನರ್ ಎ. ಕೆ. ಖಾನ್ ಹೇಳಿದರು.ಸೂರಿ ಅವರ ಜೀವಕ್ಕೆ ಅಪಾಯ ಇದ್ದೇ ಇತ್ತು. ಹೀಗಾಗಿ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಕಾನೂನು ಸಂಬಂಧಿತ ವಿಚಾರ ಮಾತನಾಡಲಿದ್ದಾಗ ಮಾತ್ರ ಇಲ್ಲಿಗೆ ಬರುತ್ತಿದ್ದರು. ಮನೆಯಿಂದ ಹೊರಡುವಾಗ ಸಾಮಾನ್ಯವಾಗಿ ಹಲವು ಅಂಗರಕ್ಷಕರನ್ನು ಅವರು ಇಟ್ಟುಕೊಳ್ಳುತ್ತಿದ್ದರು. ಆದರೆ ಇಂದು ಕೇವಲ ಒಬ್ಬರು ಗನ್‌ಮ್ಯಾನ್ ಮಾತ್ರ ಅವರ ಬಳಿ ಇದ್ದುದು ವಿಶೇಷವಾಗಿತ್ತು.ವಕೀಲರ ಬಳಿಗೆ ಸೂರಿ ಹೋಗುವುದು ತೀರಾ ಅಪರೂಪ, ಆದರೆ ಇಂದೇ ಅವರ ಮೇಲೆ ದಾಳಿ ನಡೆದಿದೆ ಎಂದು ಅವರ ಸಹೋದರ ಸುಧೀರ್ ರೆಡ್ಡಿ ಹೇಳಿದರು.

ಸೂರಿ ಅವರು 1997ರಲ್ಲಿ ಜ್ಯೂಬಿಲಿ ಹಿಲ್ಸ್‌ನಲ್ಲಿ ನಡೆದ ಬಾಂಬ್ ಸ್ಫೋಟದ ಆರೋಪಿಯೂ ಹೌದು. ಅಂದು 25 ಮಂದಿ ಸತ್ತಿದ್ದರು. ಕಳೆದ ವರ್ಷವಷ್ಟೇ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.ಪೆರಿಟಾಲ ರವಿ ಅವರನ್ನು 2005ರ ಜನವರಿ 24ರಂದು ಅನಂತಪುರದಲ್ಲಿ ಶಂಕಿತ ಸೂರಿ ಬೆಂಬಲಿಗರು ಗುಂಡಿಟ್ಟು ಕೊಂದಿದ್ದರು.

ರಾಂ ಗೋಪಾಲ್ ವರ್ಮಾ ನಿರ್ದೇಶನದ ‘ರಕ್ತಚರಿತ್ರ’ ಸಿನಿಮಾ ಈಚೆಗೆ ಬಿಡುಗಡೆಯಾಗುವ ಮೂಲಕ ರವಿ ಮತ್ತು ಸೂರಿ ಕುಟುಂಬದ ನಡುವಿನ ಕಲಹ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಈ ಎರಡು ಕುಟುಂಬಗಳ ಕಲಹ ಮೂರು ದಶಕಗಳಷ್ಟು ಹಳೆಯದು.

 

ಅನಂತಪುರ ಜಿಲ್ಲೆಯ ಮದ್ದೆಲಚೆರುವಿನಲ್ಲಿ ರೇಡಿಯೊ ಬಾಂಬ್ ಮೂಲಕ ಸೂರಿ ಕುಟುಂಬದ ಏಳು ಮಂದಿಯನ್ನು ಕೊಲ್ಲುವ ಮೂಲಕ ಈ ಎರಡು ಕುಟುಂಬಗಳ ನಡುವೆ ಹಗೆತನ ತೀವ್ರಗೊಂಡಿತ್ತು. ಈ ಹಗೆತನ ಎಷ್ಟು ಮಟ್ಟಿಗೆ ಬೆಳೆದಿತ್ತು ಎಂದರೆ ಹೆಂಗಸರು ಕೂಡ ವಿರೋಧಿ ಕುಟುಂಬದವರನ್ನು ಕೊಲ್ಲಲು ವರ್ಷಗಟ್ಟಲೆ ಕಾಯುತ್ತಿದ್ದರು ಎಂದು ಅನಂತಪುರ ಜಿಲ್ಲೆಯಲ್ಲಿ  ಸೇವೆ ಸಲ್ಲಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.ಬೆಂಗಳೂರಿನಲ್ಲಿ ರಕ್ತಚರಿತ್ರ ಚಿತ್ರವನ್ನು ಸೂರಿ ತಮ್ಮ 200 ಮಂದಿ ಬೆಂಬಲಿಗರೊಂದಿಗೆ ಸಿನಿಮಾ ಟಾಕೀಸ್‌ನಲ್ಲಿ ನೋಡಿದ್ದರು. ಅದಕ್ಕಾಗಿ ಅವರು ಇಡೀ ಮೂರು ಸಾಲುಗಳ ಟಿಕೆಟ್ ಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry