ಮಂಗಳವಾರ, ಮೇ 24, 2022
25 °C

ಪರಿಣಾಮಕಾರಿ ಟ್ರೇನ್ ಟು ಪಾಕಿಸ್ತಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ವಿಭಜನೆಯ ಸಂದರ್ಭದಲ್ಲಿ ಉಂಟಾದ ಕೊಲೆ, ದೊಂಬಿ, ಅತ್ಯಾಚಾರ, ಕಳ್ಳತನ, ಮತೀಯ ಗಲಭೆಗಳ ಚಿತ್ರಣವಿರುವ ಕೃತಿ, ಖುಷ್ವಂತ್ ಸಿಂಗ್ ಅವರ ‘ಟ್ರೈನ್ ಟು ಪಾಕಿಸ್ತಾನ್’. ಅಲ್ಲಿನ ಪಾತ್ರಗಳಿಗೆ ನೈಜವಾಗಿ ಮಾತಿನ ರೂಪಕೊಟ್ಟು ತುಂಬಾ ಉತ್ತಮವಾಗಿ ರೂಪಾಂತರಿಸಿದ ಚಿದಾನಂದ ಸಾಲಿಯವರ ನಾಟಕ ಇತ್ತೀಚೆಗೆ ರಾಯಚೂರಿನ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ, ತಾಯಣ್ಣ ಯರಗೇರಾ ಅವರ ನಿರ್ದೇಶನದಲ್ಲಿ, ಸಮುದಾಯ ತಂಡದವರಿಂದ ಪ್ರದರ್ಶನಗೊಂಡಿತು.ಖುಷ್‌ವಂತ್ ಅವರ ಬಹುಚರ್ಚಿತ ಕಾದಂಬರಿಯು ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ರಂಗರೂಪ ಪಡೆದು ಪ್ರದರ್ಶನಗೊಂಡಿದ್ದು ಮತ್ತು ಈ ಪ್ರಕ್ಷುಬ್ಧ ಕಾಲಮಾನಕ್ಕೆ ಇದರ ವಸ್ತು ಹೇಳಿ ಮಾಡಿಸಿದಂತೆ ಹೊಂದಿಕೆಯಾಗಿದ್ದುದು ಕಾಕತಾಳೀಯವಾಗಿರದೆ, ಈ ಕೃತಿಯ ಸಾರ್ವಕಾಲಿಕ ಶ್ರೇಷ್ಠತೆಗೆ ಹಿಡಿದ ಕನ್ನಡಿಯಾಗಿದೆ.ಅಲ್ಲಲ್ಲಿ ನಾಟಕದ ಕೆಲವು ಸನ್ನಿವೇಶದ ಸಂಭಾಷಣೆಗಳು ತುಂಬಾ ದೀರ್ಘವಾಗಿದ್ದವು. ನಮಾಜ್ ಮಾಡುವ ಸ್ಥಳ, ಜೈಲಿನ ಸನ್ನಿವೇಶಗಳು, ಆ ಕುರ್ಚಿ ಟೇಬಲ್‌ಗಳು ನಾಟಕದ ಕೊನೆಯವರೆಗೂ ಹಾಗೆಯೇ ಇದ್ದದ್ದು ರಸಾಭಾಸ ಉಂಟು ಮಾಡುವಂತಿತ್ತು. ಆದರೆ ಅಲ್ಲಿನ ಪಾತ್ರಧಾರಿಗಳ ಚಾಣಾಕ್ಷ ಅಭಿನಯ ಅವೆಲ್ಲವನ್ನು ಮರೆಸುವಂತಿತ್ತು.ಮುಸ್ಲಿಂ-ಸಿಖ್ಖರ ವೇಷಭೂಷಣ, ಅವರ ಪಾತ್ರಾಭಿನಯಗಳು, ಇಕ್ಬಾಲ್ ಎಂಬ ಕ್ರಾಂತಿಕಾರಿಯ ಪಾತ್ರ, ಮೀತ್‌ಸಿಂಗ್, ಜಗ್ಗು, ನೂರಾನ್, ಜಗ್ಗುವಿನ ತಾಯಿ ಮತ್ತು ಪೊಲೀಸ್ ಪೇದೆಗಳ ಪಾತ್ರಾಭಿನಯ ಯಥೋಚಿತವಾಗಿತ್ತು. ಪ್ರಸಾಧನ ಮತ್ತು ವಸ್ತ್ರವಿನ್ಯಾಸ ಗಮನ ಸೆಳೆಯುವಂತಿತ್ತು.

ಮುಸ್ಲಿಮರು ಹಳ್ಳಿಯನ್ನು ತೊರೆದು ಹೋಗುವಾಗಿನ ಚಿತ್ರಣ, ಅಲ್ಲಿನ ಸಿಖ್ ಬಾಂಧವರ ನೋವು ಹಾಗೂ ಆ ಸನ್ನಿವೇಶಕ್ಕೆ ತಕ್ಕಂತಹ ಹಾಡು ತುಂಬಾ ಚೆನ್ನಾಗಿತ್ತು. ಆದರೆ, ನಿರಾಶ್ರಿತರು ತಲೆ ಮೇಲೆ ಗಂಟುಮೂಟೆಗಳನ್ನು ಹೊತ್ತುಕೊಂಡು ನಡೆಯುತ್ತಿದ್ದರೆ ಆ ದೃಶ್ಯ ಇನ್ನೂ ಕಳೆಗಟ್ಟುತ್ತಿತ್ತೇನೊ? ಪೊಲೀಸ್ ಪೇದೆ ಮತ್ತು ಜಗ್ಗುವಿನ ಮಾತುಕತೆಯಲ್ಲಿ ನಗುವನ್ನು ಉದ್ದೀಪಿಸಿದರೆ, ನೂರಾನ್ ಮತ್ತು ಜಗ್ಗುವಿನ ತಾಯಿಯ ನಡುವಿನ ಒಂದು ಸನ್ನಿವೇಶ ಹೃದಯಸ್ಪರ್ಶಿಯಾಗಿತ್ತು.ಕೊನೆಯಲ್ಲಿ ಬರುವ ರೈಲಿನ ದೃಶ್ಯದಲ್ಲಿ, ಮುಗ್ಧರನ್ನು ಕೊಲ್ಲುವ ಸನ್ನಿವೇಶ ಅದ್ಭುತವಾಗಿ ಮೂಡಿಬಂತು. ಸಾಕಷ್ಟು ಸಂಯಮ, ಪರಿಶ್ರಮ ಬೇಡುವ ಕೊನೆಯ ದೃಶ್ಯವು ಪರಿಣಾಮಕಾರಿಯಾಗಿ ಮೂಡಿ ಬಂದಿದ್ದು ನಾಟಕದ ಸದುದ್ದೇಶವು ಪ್ರೇಕ್ಷಕರಲ್ಲಿ ಅಚ್ಚೊತ್ತುವಂತೆ ಮಾಡುವಲ್ಲಿ ನೆರವಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.