ಪರಿಣಾಮಕಾರಿ ನೃತ್ಯ ನಾಟಕ

7

ಪರಿಣಾಮಕಾರಿ ನೃತ್ಯ ನಾಟಕ

Published:
Updated:
ಪರಿಣಾಮಕಾರಿ ನೃತ್ಯ ನಾಟಕ

ಜಯದೇವನ ಶೃಂಗಾರ ಪ್ರಧಾನ ಪ್ರೇಮ-ಪ್ರಣಯ ಸಾಹಿತ್ಯವಾದ `ಗೀತ ಗೋವಿಂದ' ಆಧ್ಯಾತ್ಮಿಕ ಹಾಗೂ ಲೌಕಿಕ ನೆಲೆಗಟ್ಟಿನಲ್ಲಿ  ಮಹತ್ವಪೂರ್ಣವಾದುದು. ಆ ಅಷ್ಟಪದಿಗಳು ಸಂಗೀತಗಾರರಿಗೂ ನೃತ್ಯ ಕಲಾವಿದರಿಗೂ ಆತ್ಮೀಯವಾದುದು, ಆಪ್ಯಾಯಮಾನವಾದುದು. ಈಗಾಗಲೇ ಅಷ್ಟಪದಿಗಳು ವಿವಿಧ ಕಲಾ ಮಾಧ್ಯಮಗಳ ಮೂಲಕ ನಿರೂಪಿತವಾಗಿರುವುದು ಅವುಗಳ ಜನಪ್ರಿಯತೆ ಹಾಗೂ ಪ್ರಭಾವಶೀಲತೆಗಳ ದ್ಯೋತಕ. ನೃತ್ಯ ಕ್ಷೇತ್ರದಲ್ಲೂ ಅವುಗಳು ಏಕವ್ಯಕ್ತಿ ಪ್ರದರ್ಶನಗಳು ಮತ್ತು ಸಾಮೂಹಿಕ ನಿರೂಪಣೆಗಳ ಮೂಲಕ ಜನಮನಗಳನ್ನು ಸೆರೆಹಿಡಿಯುತ್ತಿವೆ.ಶ್ರಿ ವೆಂಕಟೇಶ ನಾಟ್ಯ ಮಂದಿರದ ರೂವಾರಿ ಹಾಗೂ ಹಿರಿಯ ನೃತ್ಯ-ಗುರು ರಾಧಾ ಶ್ರಿಧರ್ ಅವರು ಎಡಿಎ ರಂಗಮಂದಿರದಲ್ಲಿ ಆಯೋಜಿಸಿದ್ದ ವಾರ್ಷಿಕ ರಸ ಸಂಜೆ-2013  ಮಹೋತ್ಸವದ ಸಂದರ್ಭದಲ್ಲಿ ಅವರೇ ಸಂಯೋಜಿಸಿ, ನಿರ್ದೇಶಿಸಿದ್ದ `ಗೀತ ಗೋವಿಂದ' ನೃತ್ಯ ನಾಟಕವು ಅಷ್ಟಪದಿಗಳಿಗೆ ಹೊಸ ಬೆಳಕು ಚೆಲ್ಲಿತು. ಆಂಗಿಕ ಮತ್ತು ಮೂಕಾಭಿನಯಗಳ ಮೂಲಕ ಕಥಾನಕದ ಸಂವಹನೆಯಾಗಬೇಕಾದರೆ ಕಲಾವಿದರು ಕಲಾತ್ಮಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಉದ್ದೇಶಿತ ವಿಷಯವಸ್ತುವಿನ ಆಂತರ್ಯವನ್ನು ಅರಿತು ತನ್ನ ಅಭಿವ್ಯಕ್ತಿ ಮಾಧ್ಯಮದ ಮೂಲಕ ಅವರು ಸಂವಹಿಸುತ್ತಾರೆ. ಈ ನಿಟ್ಟಿನಲ್ಲಿ ಗೀತ ಗೋವಿಂದ ನೃತ್ಯ ನಾಟಕವು ಗೆದ್ದಿತು.ಗುರು ರಾಧಾ ಶ್ರಿಧರ್ ಅವರ ಶಿಷ್ಯೆಯರಾದ ಬಿಯಾಂಕ (ಶ್ರಿಕೃಷ್ಣನಾಗಿ), ಐಶ್ವರ್ಯ ನಿತ್ಯಾನಂದ (ರಾಧೆ), ಅಪರ್ಣಾ ಶಾಸ್ತ್ರಿ (ಸಖಿ), ದಿವ್ಯಾ, ದೀಪ್ತಿ, ಸುಪ್ರಿಯಾ, ರಶ್ಮಿ, ಸಿಂಧು, ನಿತಾಶಾ ಮತ್ತು ಸಿಂಧೂರ  (ಗೋಪಿಕೆಯರು) ಅವರು ದೈವಿಕ ಮತ್ತು ಅಮರ ಪ್ರೇಮಿ-ಜೋಡಿಗಳಾದ ರಾಧಾ-ಕೃಷ್ಣ ಕಥಾನಕವನ್ನು ಸಮೂಹ ನಿರೂಪಣೆಯಲ್ಲಿ  ಅನಾವರಣಗೊಳಿಸಿದರು. ರಾಸಲೀಲೆಯಲ್ಲಿ ಕೃಷ್ಣನು ಇತರೆ ಗೋಪಿಕೆಯರೊಡನೆ ಚೆಲ್ಲಾಟವಾಡುತ್ತಿರುವುದನ್ನು ಕಂಡು ಅವನ ಗಾಢಪ್ರೇಮಿಯಾದ ರಾಧೆಯು ಕೋಪಗೊಂಡು ಹೊರಟು ಹೋಗುತ್ತಾಳೆ. ಅವನೊಡನೆ ತಾನು ಕಳೆದ ರಸಮಯ ಕ್ಷಣಗಳು ಹಾಗೂ ಅವನ ರೂಪಲಾವಣ್ಯಗಳನ್ನು ನೆನೆನೆನೆದು ದುಃಖಿತಳಾಗುತ್ತಾಳೆ. ಮತ್ತೊಂದೆಡೆ ಕೃಷ್ಣನೂ ಸಹ ರಾಧೆಯ ವಿರಹದಿಂದ ಪರಿತಪಿಸುತ್ತಾನೆ.

ಸಾಂತ್ವನ ಹೇಳಲು ಬಂದ ಕೃಷ್ಣನನ್ನು ರಾಧೆಯು ಖಂಡಿತನಾಯಕಿಯಾಗಿ ತರಾಟೆಗೆ ತೆಗೆದುಕೊಂಡು ಅವನನ್ನು ಅಲ್ಲಿಂದ ಹೊರಟುಹೋಗುವಂತೆ ಹೇಳುತ್ತಾಳೆ. ಆ ಸಮಯದಲ್ಲಿ ರಾಧೆಯ ಸಖಿಯು ಪ್ರವೇಶಿಸಿ ರಾಧಾ-ಕೃಷ್ಣರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಾಳೆ. ಅವರಿಬ್ಬರನ್ನು ಕುಂಜಗೃಹದಲ್ಲಿ ರಾತ್ರಿ ಕಳೆಯುವಂತೆ ಕಳುಹಿಸುತ್ತಾಳೆ. ಸಂತುಷ್ಟಗೊಂಡ ರಾಧೆಯ ಇಚ್ಛೆಯಂತೆ ಕೃಷ್ಣನು ಅವಳನ್ನು ಸಿಂಗರಿಸುತ್ತಾನೆ. ಹೀಗೆ ಸುಖಾಂತ್ಯದ ಕಥೆ ಉತ್ಸಾಹದ ಕಲ್ಯಾಣಿ ತಿಲ್ಲಾನದೊಂದಿಗೆ ರಂಗೇರಿತು.ಪ್ರಸನ್ನಕುಮಾರ್ (ನಟುವಾಂಗ), ಸುಚೇತನ್ (ಗಾಯನ), ಮಧುಸೂದನ್ (ಪಿಟೀಲು), ವಿವೇಕ್ (ಕೊಳಲು) ಮತ್ತು ಚಂದ್ರಶೇಖರ್(ಮೃದಂಗ) ಅವರ ಉಪಯುಕ್ತ ಸಹಕಾರದೊಂದಿಗೆ ಲಲಿತ ಲವಂಗ (ವಸಂತ), ವಿಹರಿತಿವನೆ (ಕಾಮವರ್ಧಿನಿ), ಇತಸ್ತಥಾಂ (ಕಲ್ಯಾಣಿ), ಯಮುನಾ ತೀರೇ (ದರ್ಬಾರಿಕಾನಡಾ), ಇತಿ ಮಧುರಿಪು (ಚಕ್ರವಾಕ), ಪ್ರಸರತಿ (ರೇವತಿ) ಮುಂತಾದ ಸುಮಾರು ಹನ್ನೆರಡು ಅಷ್ಟಪದಿಗಳನ್ನು ಆಯ್ದುಕೊಂಡು ಮೇಲಿನ ವಿಷಯವಸ್ತುವನ್ನು ಸೊಗಸಾಗಿ ಮಂಡಿಸಲಾಯಿತು. ಗುರು ರಾಧಾ ಶ್ರಿಧರ್‌ಅವರ ಬತ್ತದ ಉತ್ಸಾಹ ಮತ್ತು ಪರಿಪಕ್ವವಾದ ಪರಿಣತಿ ಅವರ ನೃತ್ಯ ಸಂಯೋಜನೆಯಲ್ಲಿ ರಾರಾಜಿಸಿತು.ಉಲ್ಲಾಸಕರ ಅನುಭವ

ನುರಿತ ನರ್ತಕಿ- ಬೋಧಕಿ ದೀಪಾ ಭಟ್ ಅವರ ಭರತನಾಟ್ಯ ರಸಸಂಜೆಯಲ್ಲಿ ಗಮನ ಸೆಳೆಯಿತು.

ಸುಪರಿಚಿತ ದಂಡಾಯುಧಪಾಣಿ ಪಿಳ್ಳೈಅವರ ಸ್ವಾಮಿಯೈ ವರ ಚೊಲ್ಲಡಿ  ವರ್ಣ(ಪೂರ್ವಿಕಲ್ಯಾಣಿ)ದ ಆಶಯದಂತೆ ತನ್ನ ನಾಯಕ ಸುಬ್ರಹ್ಮಣ್ಯನೊಡನೆ ಪುನರ್ಮಿಲನವನ್ನು ಬಯಸುವ ವಿರಹೋತ್ಕಂಠಿತ ನಾಯಕಿಯ ಚಿತ್ರಣದಲ್ಲಿ ಅವರ ಪರಿಣತಿ ಪ್ರಶಂಸಾರ್ಹವಾಗಿತ್ತು. ನಾಯಕಿಯು ತನ್ನ ಸಖಿಯೊಡನೆ ನಾಯಕನ ಬಗೆಗೆ ಬಿನ್ನವಿಸಿಕೊಂಡು ಅವನನ್ನು ತನ್ನ ಬಳಿಗೆ ಬರುವಂತೆ ಕೇಳಿಕೊಳ್ಳುವ ಪರಿ ಇಷ್ಟವಾಯಿತು. ಅದರ ನೃತ್ತ, ನೃತ್ಯ ಮತ್ತು ಅಭಿನಯ ಭಾಗಗಳಲ್ಲಿ ದೀಪಾ ಪ್ರಕಾಶಿಸಿದರು.ತಂಜಾವೂರು ತ್ಯಾಗರಾಜ ಸ್ವಾಮಿಯನ್ನು ಕುರಿತಾದ ಮೋಹತೈ ಕಾಟ್ಟಿ (ಭೈರವಿ) ತಮಿಳು ಪದವನ್ನು ಅನುಸರಿಸಿ ಮಾಡಲಾದ ಪ್ರಭುವಿನ ಮುಖ ಸೌಂದರ್ಯದ ಬಣ್ಣನೆ ನರ್ತಕಿಯ ಅಭಿನಯ ಕೌಶಲ್ಯವನ್ನು ತೋರಿತು. ಸೂರ್‌ದಾಸರ ಶಾಂ ತೋರಿ ಮುರಳೀ (ಶಿವರಂಜಿನಿ) ಪದವನ್ನು ಬಳಸಿಕೊಂಡು ರಾಧೆಯು ಕೃಷ್ಣನೊಡನೆ ತಮ್ಮ ಪಾತ್ರಗಳನ್ನು ಅದಲು-ಬದಲು ಮಾಡಿಕೊಂಡು ಕ್ರೀಡಿಸುವಂತೆ ಕೇಳಿಕೊಳ್ಳುವ ಪ್ರಸಂಗವನ್ನು ಸುಭಗವಾಗಿ ನಿರ್ವಹಿಸಿದರು.ವೇಷಭೂಷಣಗಳು ಮತ್ತು ನವಿಲುಗರಿಯನ್ನೂ ಸಹ ವಿನಿಮಯಮಾಡಿಕೊಂಡು ಕನಿಷ್ಠ ಒಂದು ದಿನಕ್ಕಾದರೂ ತನ್ನ ಮುರಳಿಯನ್ನು ತನಗೆ ನೀಡಬೇಕೆಂದು ರಾಧೆಯು ಕೃಷ್ಣನನ್ನು ಕೇಳಿಕೊಳ್ಳುತ್ತಾಳೆ. ಇವಿಷ್ಟೂ ದೀಪಾ ಅವರ ಅಭಿನಂದನಾರ್ಹ ಅಭಿನಯದಲ್ಲಿ ಆಕರ್ಷಿಸಿತು. ಚುರುಕಾದ ಅಡುವುಗಳು ಮತ್ತು ತೀರ್ಮಾನಗಳ ಕೊನೆಯ ಹಂಸಾನಂದಿ ತಿಲ್ಲಾನ ಲಯ ಠೀವಿಯಿಂದ ಬೀಗಿತು. ನಾಗಶ್ರಿ(ನಟುವಾಂಗ), ವಸುಧಾ ಬಾಲಕೃಷ್ಣ(ಗಾಯನ) ಮತ್ತಿತರೆ ಸಂಗೀತ ಸಹಕಲಾವಿದರು ಸಕಾರಾತ್ಮಕವಾಗಿ ಸ್ಪಂದಿಸಿದರು.ಸಮಸೂತ್ರದ ಭರತನಾಟ್ಯ

ಪರಿಮಾಣ ಔಚಿತ್ಯ ಮತ್ತು ಪರಸ್ಪರಾನುರೂಪ ನೃತ್ಯ ರೇಖೆಗಳು, ವೈವಿಧ್ಯದ ಅಡುವು ಮಾದರಿಗಳು ಹಾಗೂ ಖಚಿತವಾಗಿದ್ದ ಅರ್ಧಮಂಡಲಿಗಳಿಂದ  ಕೂಡಿದ್ದ ಭರತನಾಟ್ಯವನ್ನು ರಾಧಾ ಶ್ರೀಧರ್ ಶಿಷ್ಯೆ ಜೆ.ಎನ್. ಸಿಂಧೂರ ಅವರು ಎಡಿಎ ರಂಗಮಂದಿರದಲ್ಲಿ ಪ್ರದರ್ಶಿಸಿದರು.

ಸಂಗೀತ ಮತ್ತು ನೃತ್ಯ ಎರಡೂ ಕ್ಷೇತ್ರಗಳಲ್ಲಿ ಆಗಾಗ್ಗೆ ನಿರೂಪಿಸಲಾಗುವ ಖಮಾಚ್ ರಾಗದ  ಬ್ರೋಚೆವರೆವರುರಾ ಕೀರ್ತನೆಯ ವಸ್ತುವನ್ನು ನಾಟಕೀಕರಿಸುವಲ್ಲಿ  ಅವರಿಗೆ ಸಂದ ಯಶಸ್ಸು ಅಪಾರ.

ಗಜೇಂದ್ರ ಮೋಕ್ಷವನ್ನು ತಮ್ಮ ನಟನಾ ಚಾತುರ್ಯದಿಂದ ಸಮರ್ಪಕವಾಗಿ ಪ್ರಸ್ತುತಪಡಿಸಿದರು. ಅಪೂರ್ವವಾದ ಮಲಯಮಾರುತ ರಾಗದ ಪೂಜಿಸು ಬಾ ಶಿವನ ಕನ್ನಡ ವರ್ಣದ ಆಯ್ಕೆ ಉಚಿತವೇ ಆಗಿತ್ತು. ಶಿವನ ಹಿರಿಮೆ ವಿವಿಧ ಕಥಾ ಪ್ರಸಂಗಗಳ ಮೂಲಕ ವರ್ಣಿತವಾಗಿರುವಂತಹುದು. ಅದರಂತಯೇ ಸಿಂಧೂರ ಅವರು ಕಾಮದಹನ, ಗಂಗಾವತರಣ, ಸಮುದ್ರ ಮಂಥನ ಮತ್ತು ಭಕ್ತ ಮಾರ್ಕಂಡೇಯ ಕಥಾ ಪ್ರಸಂಗಗಳನ್ನು ತಮ್ಮ ಅಭಿನಯ ನಿಪುಣತೆಯಿಂದ ವೇದಿಕೆಯ ಮೇಲೆ ಜೀವಂತಗೊಳಿಸಿದರು.

ಪುರಂದರದಾಸರ ಶರಣು ಶರಣು ಶರಣ್ಯ (ರಾಗಮಾಲಿಕೆ) ಪದದ ಮೂಲಕ ನರಸಿಂಹಸ್ವಾಮಿಯ ಗುಣಗಾನವನ್ನು ಮಾಡಲಾಯಿತು. ತಾಯೇ ಯಶೋದಾ ಮತ್ತು ಸಿಂಹೇಂದ್ರಮಧ್ಯಮ ತಿಲ್ಲಾನ ಅವರ ಪ್ರದರ್ಶನದ ಕಳೆಯನ್ನು ಹೆಚ್ಚಿಸಿತು. ಪುಲಿಕೇಶಿ (ನಟುವಾಂಗ), ಶ್ರಿವತ್ಸ (ಗಾಯನ), ಜಯರಾಂ (ಕೊಳಲು), ಮಧುಸೂದನ್ (ಪಿಟೀಲು) ಮತ್ತು ಚಂದ್ರಶೇಖರ್ (ಮೃದಂಗ) ಅವರ ಸಹಕಾರ ಪ್ರಭಾವ ಬೀರುವಂತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry