ಪರಿಶಿಷ್ಟರಿಗೆ ಬಡ್ತಿ ಮೀಸಲಾತಿ: ಬಿಜೆಪಿ, ಕಾಂಗ್ರೆಸ್‌ನಲ್ಲಿ ಒಡಕು

7

ಪರಿಶಿಷ್ಟರಿಗೆ ಬಡ್ತಿ ಮೀಸಲಾತಿ: ಬಿಜೆಪಿ, ಕಾಂಗ್ರೆಸ್‌ನಲ್ಲಿ ಒಡಕು

Published:
Updated:
ಪರಿಶಿಷ್ಟರಿಗೆ ಬಡ್ತಿ ಮೀಸಲಾತಿ: ಬಿಜೆಪಿ, ಕಾಂಗ್ರೆಸ್‌ನಲ್ಲಿ ಒಡಕು

ಲಖನೌ (ಪಿಟಿಐ): ಪರಿಶಿಷ್ಟ ಜಾತಿ/ಪಂಗಡದ (ಎಸ್‌ಸಿ/ಎಸ್‌ಟಿ) ನೌಕರರಿಗೆ ಸರ್ಕಾರಿ ನೌಕರಿಯಲ್ಲಿ ಬಡ್ತಿ ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಮಸೂದೆ ಬುಧವಾರ ಲೋಕಸಭೆಯಲ್ಲಿ ಚರ್ಚೆಯಾಗಿ, ಮತದಾನ ನಡೆಯಲಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಈಗ ಇಕ್ಕಟ್ಟಿನಲ್ಲಿ ಸಿಲುಕಿವೆ.ರಾಜ್ಯಸಭೆಯಲ್ಲಿ ಸೋಮವಾರ ಈ ಮಸೂದೆ ಚರ್ಚೆಗೆ ಬಂದಾಗ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಬಿಜೆಪಿ ಸರ್ವಾನುಮತದಿಂದ ಮಸೂದೆ ಬೆಂಬಲಿಸಿದ್ದವು.ಈ ಎರಡೂ ರಾಷ್ಟ್ರೀಯ ಪಕ್ಷಗಳ ಉತ್ತರ ಪ್ರದೇಶ ಘಟಕಗಳು ಮಸೂದೆ ವಿರುದ್ಧ ಈಗ ದನಿ ಎತ್ತಿವೆ.ಉತ್ತರ ಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ಲಕ್ಷ್ಮಿಕಾಂತ್ ಬಾಜಪೈ, ಬಡ್ತಿ ಮೀಸಲು ವಿರೋಧಿಸುವವರನ್ನು ಬಹಿರಂಗವಾಗಿ ಬೆಂಬಲಿಸಿದ್ದು, ಸಮಾಜದ ಇತರ ವರ್ಗಗಳಿಗೆ ಅನ್ಯಾಯ ಮಾಡಿ ಒಂದು ವರ್ಗಕ್ಕೆ ಲಾಭ ಮಾಡಿಕೊಡುವುದು ಸರಿಯಲ್ಲ ಎಂದು ಹೇಳಿದ್ದಾರೆ. `ವೈಯಕ್ತಿಕವಾಗಿ ನಾನು ಅಥವಾ ನನ್ನ ಪಕ್ಷ ಬಿಜೆಪಿ, ಎಸ್‌ಸಿ/ಎಸ್‌ಟಿ ಬಡ್ತಿ ಮೀಸಲಾತಿ ವಿರೋಧಿಸುತ್ತಿಲ್ಲ. ಆದರೆ, ಇನ್ನಿತರ ಜಾತಿಗಳಿಗೆ ಅನ್ಯಾಯವಾಗುವ ರೀತಿಯಲ್ಲಿ ಮೀಸಲು ನಿಗದಿಪಡಿಸುವುದು  ಸರಿಯಲ್ಲ' ಎಂದಿದ್ದಾರೆ.`ಪ್ರಾದೇಶಿಕ ಪಕ್ಷಗಳಾದ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಗಳು ರಾಜ್ಯದಲ್ಲಿ  (ಉತ್ತರ ಪ್ರದೇಶ) ಜಾತಿಯುದ್ಧ ಸೃಷ್ಟಿಸುತ್ತಿವೆ. 80ರ ದಶಕದ ಮಂಡಲ್ ಆಯೋಗದ ದಿನಗಳಿಗೆ ಮರಳುವಂತೆ ಮಾಡುತ್ತಿವೆ. ನೌಕರ ವರ್ಗದಲ್ಲಿ ಹೊಗೆಯಾಡುತ್ತಿರುವ ಅಸಮಾಧಾನವನ್ನು ನಾವು ಗಮನಿಸಿದ್ದೇವೆ. ಈ ವಿಚಾರವನ್ನು ಪಕ್ಷದ ವರಿಷ್ಠರಿಗೆ ತಲುಪಿಸಿದ್ದೇವೆ' ಎಂದೂ ಬಾಜಪೈ ಹೇಳಿದ್ದಾರೆ.

ಉತ್ತರ ಪ್ರದೇಶದ 18 ಲಕ್ಷ ಸರ್ಕಾರಿ ನೌಕರರು ಈ ಮಸೂದೆ ವಿರೋಧಿಸುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದು ತಮಗೆ ಹೊಡೆತ ನೀಡಲಿದೆ ಎಂದು ಈ ರಾಜ್ಯದ ಬಿಜೆಪಿ ನಾಯಕರು ಚಿಂತಿಸುತ್ತಿದ್ದಾರೆ.

ಬಡ್ತಿ ಮೀಸಲಾತಿ ಮಸೂದೆ ವಿರೋಧಿಸುತ್ತಿರುವ ಕೆಲವರು ಕೆಲ ದಿನಗಳ ಹಿಂದೆ ಬಿಜೆಪಿ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಸಹ ಧ್ವಂಸಗೊಳಿಸಿದ್ದರು.

ಕಾಂಗ್ರೆಸ್‌ನಲ್ಲೂ ತಳಮಳ:  ಬಡ್ತಿ ಮೀಸಲಾತಿ ಕುರಿತು ಕಾಂಗ್ರೆಸ್‌ನಲ್ಲೂ ತಳಮಳ ಆರಂಭವಾಗಿದೆ. ಪಕ್ಷದ ಸೂಚನೆಯಂತೆ ಮೀಸಲಾತಿಯನ್ನು ಬಹಿರಂಗವಾಗಿ ಬೆಂಬಲಿಸಿದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಹೆಜ್ಜೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ಆತಂಕ ಪಕ್ಷದಲ್ಲಿ ಮನೆ ಮಾಡಿದೆ.`ಬಿಎಸ್‌ಪಿ ನಾಯಕಿ ಮಾಯಾವತಿ ಅವರ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಈ ಮಸೂದೆ ಮಂಡಿಸಿದೆ. ಆದರೆ, ಅದರ ಲಾಭವನ್ನು ನಾವು ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೇ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಬೆಂಬಲ ಸಹ ಕಳೆದುಕೊಳ್ಳಬೇಕಾಗುತ್ತದೆ' ಎಂದು ಹೆಸರು ಹೇಳಲು ಇಚ್ಛಿಸದ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಈಗ ಬಿಜೆಪಿ ಮತ್ತು ಕಾಂಗ್ರೆಸ್‌ಗಳೆರಡೂ `ಇತ್ತ ಬೇತಾಳ, ಅತ್ತ ಪಾತಾಳ' ಎಂಬ ಸನ್ನಿವೇಶದಲ್ಲಿ ಸಿಕ್ಕಿಹಾಕಿಕೊಂಡಿವೆ.

ಪ್ರತಿಭಟನೆ ತೀವ್ರ (ಲಖನೌ ವರದಿ): ಎಸ್‌ಸಿ/ಎಸ್‌ಟಿ ಬಡ್ತಿ ಮೀಸಲಾತಿ ವಿರೋಧಿಸುತ್ತಿರುವ ಉತ್ತರ ಪ್ರದೇಶ ಸರ್ಕಾರಿ ನೌಕರರು ತಮ್ಮ ಹೋರಾಟ ತೀವ್ರಗೊಳಿಸಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಬಿಎಸ್‌ಪಿ ನಾಯಕರ ನಿವಾಸದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

`ಸರ್ವಜನ ಹಿತಾಯ್ ಸಂರಕ್ಷಣ ಸಮಿತಿ' ಅಡಿ ನೌಕರರು ನಡೆಸುತ್ತಿರುವ ಅನಿರ್ದಿಷ್ಟ ಮುಷ್ಕರ ಮಂಗಳವಾರ ಆರನೇ ದಿನಕ್ಕೆ ಕಾಲಿಟ್ಟಿದೆ.

ಈ ಮಸೂದೆ ದೇಶದ ಹಿತಾಸಕ್ತಿಗೆ ಅನುಗುಣವಾಗಿಲ್ಲ. 18 ಲಕ್ಷ ನೌಕರರು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೆ ಮುಷ್ಕರ ಮುಂದುವರಿಸುತ್ತೇವೆ ಎಂದು ಸಮಿತಿಯ ಅಧ್ಯಕ್ಷ ಶೈಲೇಂದ್ರ ದುಬೆ ಹೇಳಿದ್ದಾರೆ.

`ಜನರಲ್ಲಿ ಈ ಬಗ್ಗೆ ಆಕ್ರೋಶವಿದೆ. ಆದರೆ, ರಾಜಕೀಯ ಪಕ್ಷಗಳು ಅದನ್ನು ಗ್ರಹಿಸುವಲ್ಲಿ ವಿಫಲವಾಗುತ್ತಿವೆ' ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ. ಈ ಮಧ್ಯೆ ಮೀಸಲಾತಿ ಪರವಾಗಿ ಇರುವ ನೌಕರರು ಕಚೇರಿಗಳಲ್ಲಿ ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry