ಪರಿಶಿಷ್ಟರಿಗೆ 100ಹಾಸ್ಟೆಲ್: ಸಿಎಂ

7

ಪರಿಶಿಷ್ಟರಿಗೆ 100ಹಾಸ್ಟೆಲ್: ಸಿಎಂ

Published:
Updated:
ಪರಿಶಿಷ್ಟರಿಗೆ 100ಹಾಸ್ಟೆಲ್: ಸಿಎಂ

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಕಾಲೇಜು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ತಲಾ 50 ವಿದ್ಯಾರ್ಥಿ ನಿಲಯಗಳನ್ನು ಪ್ರಸಕ್ತ ವರ್ಷದಲ್ಲಿ ಆರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದರು. ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಗುರುವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 120ನೇ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ- ಪಂಗಡದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಅಂಬೇಡ್ಕರ್ ಅವರ 120ನೇ ಜಯಂತಿ ಸ್ಮರಣಾರ್ಥ ರಾಜ್ಯದಲ್ಲಿ 25 ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ಆರಂಭಿಸಲಾಗುವುದು’ ಎಂದು ಹೇಳಿದರು. ‘ಉನ್ನತ ವ್ಯಾಸಂಗಕ್ಕಾಗಿ ವಿದೇಶಗಳಿಗೆ ತೆರಳುವ ಪರಿಶಿಷ್ಟ ಜಾತಿ- ಪಂಗಡದ ಅಭ್ಯರ್ಥಿಗಳಿಗೆ ಸರ್ಕಾರದ ವತಿಯಿಂದ 10 ಲಕ್ಷ ರೂಪಾಯಿ ನೆರವು ನೀಡಲಾಗುವುದು. ಅಂಬೇಡ್ಕರ್ ಟ್ರಸ್ಟ್ ವತಿಯಿಂದ ಬೆಂಗಳೂರಿನಲ್ಲಿರುವ ಅಂಬೇಡ್ಕರ್ ಭವನವನ್ನು ಸ್ಮಾರಕದ ರೂಪದಲ್ಲಿ ಅಭಿವೃದ್ಧಿಪಡಿಸಲು 7 ಕೋಟಿ ರೂಪಾಯಿ ನೀಡಲಾಗುವುದು. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರೂ 20 ಕೋಟಿ ನೀಡಲಾಗುವುದು’ ಎಂದು ಹೇಳಿದರು.‘ಪ್ರಸಕ್ತ ಬಜೆಟ್‌ನಲ್ಲಿ ಪ್ರಕಟಿಸಿರುವ ಯೋಜನೆಗಳ ಅನುಷ್ಠಾನಕ್ಕೆ ಮಾಸಾಂತ್ಯದ ವೇಳೆಗೆ ಸರ್ಕಾರಿ ಆದೇಶ ಹೊರಡಿಸಲಾಗುವುದು. 2010-11ನೇ ಸಾಲಿನಲ್ಲಿ ಸರ್ಕಾರಕ್ಕೆ ಹೆಚ್ಚುವರಿಯಾಗಿ 3000 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಈ ಹಣವನ್ನು ಅಭಿವೃದ್ಧಿ ಯೋಜನೆಗಳಿಗೆ ವೆಚ್ಚ ಮಾಡಲಾಗುವುದು’ ಎಂದರು. ಸಚಿವ ಗೋವಿಂದ ಕಾರಜೋಳ ಮಾತನಾಡಿ, ‘ಅಂಬೇಡ್ಕರ್ ಜನಿಸದಿದ್ದರೆ ಹಿಂದುಳಿದ ಜಾತಿ ಜನರ ಅಭಿವೃದ್ಧಿಯಾಗುತ್ತಿರಲಿಲ್ಲ, ಸಂವಿಧಾನ ಕೂಡ ರಚನೆಯಾಗುತ್ತಿರಲಿಲ್ಲ.ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ಅವರ ಚಿಂತನೆ ಇಂದಿಗೂ ಪ್ರಸ್ತುತ. ಆದರೆ ಅವರ ಚಿಂತನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಕೆಲಸ ಆಗಿಲ್ಲ. ಹಾಗಾಗಿ ಅಸ್ಪೃಶ್ಯತೆ ಇಂದಿಗೂ ಆಚರಣೆಯಲ್ಲಿದೆ. ಎಲ್ಲರೂ ಶಿಕ್ಷಿತರಾದರೆ ಈ ಅನಿಷ್ಠ ಪದ್ದತಿಯನ್ನು ತೊಡೆದು ಹಾಕಬಹುದು’ ಎಂದರು. ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ‘ದಲಿತರ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೂಪಿಸಿರುವ ಯೋಜನೆಗಳನ್ನು ದಲಿತ ಸಮುದಾಯಕ್ಕೆ ಸೇರಿದ ಐಎಎಸ್ ಅಧಿಕಾರಿಗಳು ಸರಿಯಾಗಿ ಅರ್ಥೈಸಿಕೊಂಡು ಬಳಿಕ ಅವುಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಅಂಬೇಡ್ಕರ್ ಜಯಂತಿ ಆಡಂಬರದ ಆಚರಣೆಗೆ ಸೀಮಿತವಾಗುತ್ತದೆ’ ಎಂದು ಹೇಳಿದರು.ಇದೇ ಸಂದರ್ಭದಲ್ಲಿ 10 ಮಂದಿ ಗಣ್ಯರಿಗೆ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಗೆಯೇ ಇಬ್ಬರಿಗೆ ಡಾ. ಬಾಬು ಜಗಜೀವನರಾಂ ಪ್ರಶಸ್ತಿ ನೀಡಲಾಯಿತು.

ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ವೀರಯ್ಯ, ದಯಾನಂದರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವೆಂಕಟಯ್ಯ, ಆಯುಕ್ತ ಎನ್.ಮಂಜುನಾಥ ಪ್ರಸಾದ್ ಇತರರು ಉಪಸ್ಥಿತರಿದ್ದರು.ಯೋಜನೆಗಳ ಅನುಷ್ಠಾನಕ್ಕೆ ಆಗ್ರಹ

ಪ್ರಶಸ್ತಿ ಸ್ವೀಕರಿಸುವ ಮುನ್ನ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ‘ಸರ್ಕಾರ ಡಿಸೆಂಬರ್‌ನಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಶೇಷ ಘಟಕ ಯೋಜನೆಯ ಅನುದಾನ ಸಮರ್ಪಕವಾಗಿ ಅನುಷ್ಠಾನವಾಗದಿರುವುದು ಬಯಲಾಗಿದೆ. ಹಾಗಾಗಿ ಸಮಾಜ ಕಲ್ಯಾಣ ಇಲಾಖೆಯಡಿ ಏಕ ಗವಾಕ್ಷಿ ವ್ಯವಸ್ಥೆ ಮೂಲಕ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಫಲಾನುಭವಿಗಳ ಆಯ್ಕೆಗೆ ಶಾಸಕರ ನೇತೃತ್ವದ ಸಮಿತಿಯನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry