ಮಂಗಳವಾರ, ಜೂನ್ 22, 2021
29 °C

ಪರಿಶಿಷ್ಟರ ಅಭಿವೃದ್ಧಿ: ಬಳಕೆಯಾಗದ ಹಣ

ಪ್ರಜಾವಾಣಿ ವಾರ್ತೆ/ಭೀಮಸೇನ ಚಳಗೇರಿ Updated:

ಅಕ್ಷರ ಗಾತ್ರ : | |

ಕೊಪ್ಪಳ: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಾಗಿರಲಿ, ಎಸ್‌ಎಫ್‌ಸಿ ಅನುದಾನ ಅಥವಾ ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾದ ಹಣವಿರಲಿ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ 2011-12ನೇ ಸಾಲಿಗಾಗಿ ಮೀಸಲಾದ ಹಣ ಬಹುತೇಕ ಖರ್ಚೇ ಆಗಿಲ್ಲ.

ಅದರಲ್ಲೂ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ 2009-10, 2010-11ನೇ ಸಾಲಿನಲ್ಲಿ ಮೀಸಲಿಟ್ಟಿದ್ದ ಹಣ ಸಹ ಸಂಪೂರ್ಣ ಬಳಕೆಯಾಗಿಲ್ಲ.ಇನ್ನು, ಜಿಲ್ಲೆಯ ನಾಲ್ಕು ಸ್ಥಳೀಯ ಸಂಸ್ಥೆಗಳು ಎಸ್‌ಎಫ್‌ಸಿ ಮತ್ತು ಮುನಿಸಿಪಲ್ ನಿಧಿಯಡಿ ಅವಕಾಶವಿರುವ ಶೇ 22.75ರಷ್ಟು ಹಣವನ್ನು ಬಳಕೆ ಮಾಡುವಲ್ಲಿ ತೀರ ಕಳಪೆ ಸಾಧನೆ ಮಾಡಿರುವುದು ಸಹ ದಾಖಲೆಗಳಿಂದ ತಿಳಿದು ಬರುತ್ತದೆ.`ಪ್ರಜಾವಾಣಿ~ಗೆ ಲಭ್ಯವಾಗಿರುವ ದಾಖಲೆಗಳು ಪ್ರಕಾರ, ಕುಷ್ಟಗಿ ಪುರಸಭೆಯು ಪರಿಶಿಷ್ಟರ ಅಭಿವೃದ್ಧಿಗಾಗಿ ಎಸ್‌ಎಫ್‌ಸಿ ಮತ್ತು ಮುನಿಸಿಪಲ್ ನಿಧಿಯಲ್ಲಿ ಕೇವಲ ಶೇ 3ರಷ್ಟು ಅನುದಾನವನ್ನು ಬಳಕೆ ಮಾಡಿಕೊಂಡಿದೆ.2011-12ನೇ ಸಾಲಿನಲ್ಲಿ ಕುಷ್ಟಗಿ ಪುರಸಭೆಗೆ ಪರಿಶಿಷ್ಟರ ಅಭಿವೃದ್ಧಿಗಾಗಿ 72.37 ಲಕ್ಷ ರೂಪಾಯಿ ಅಭ್ಯವಿದ್ದರೆ ಖರ್ಚು ಮಾಡಿದ್ದು ಮಾತ್ರ 1.20 ಲಕ್ಷ ರೂಪಾಯಿ. ಕೊಪ್ಪಳ ನಗರಸಭೆ ಶೇ 35, ಗಂಗಾವತಿ ನಗರಸಭೆ ಶೇ 32 ಹಾಗೂ ಯಲಬುರ್ಗಾ ಪಟ್ಟಣ ಪಂಚಾಯಿತಿ ಶೇ 45ರಷ್ಟು ಹಣ ಬಳಕೆ ಮಾಡಿವೆ. ಜಿಲ್ಲೆಯ ಸರಾಸರಿ ಬಳಕೆ ಶೇ 30 ಮಾತ್ರ.ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ನೀಡುವುದು ಸೇರಿದಂತೆ ಪರಿಶಿಷ್ಟರನ್ನು ಆರ್ಥಿಕ, ಶೈಕ್ಷಣಿಕವಾಗಿ ಸಬಲರನ್ನಾಗಿ ಮಾಡುವ ಅವಕಾಶವನ್ನು ಈ ಸ್ಥಳೀಯ ಸಂಸ್ಥೆಗಳು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂಬುದು ಗೊತ್ತಾಗುತ್ತದೆ.ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ 2009-10ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಜನರ ಕಲ್ಯಾಣಕ್ಕಾಗಿ 30 ವಿವಿಧ ಕಾಮಗಾರಿಗಳು ಮಂಜೂರಾಗಿದ್ದವು. ಈ ಪೈಕಿ 7 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. 2010-11ನೇ ಸಾಲಿನಲ್ಲಿ ಮಂಜೂರಾಗಿದ್ದ 19 ಕಾಮಗಾರಿಗಳ ಪೈಕಿ 8, 2011-12ನೇ ಸಾಲಿನಲ್ಲಿ ಮಂಜೂರಾಗಿದ್ದ 7 ಕಾಮಗಾರಿಗಳ ಪೈಕಿ 4 ಕಾಮಗಾರಿಗಳು ಪೂರ್ಣಗೊಂಡಿವೆ.ಇನ್ನು, ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ 2009-10ನೇ ಸಾಲಿನಲ್ಲಿ ಮಂಜೂರಾಗಿದ್ದ 31.50 ಲಕ್ಷ ರೂಪಾಯಿ ವೆಚ್ಚದ 21 ಕಾಮಗಾರಿಗಳಲ್ಲಿ 6 ಪೂರ್ಣಗೊಂಡಿವೆ. 2010-11ನೇ ಸಾಲಿನಲ್ಲಿ 26.80 ಲಕ್ಷ ರೂಪಾಯಿ ವೆಚ್ಚದ 12 ಕಾಮಗಾರಿಗಳಲ್ಲಿ 6, 2011-12ನೇ ಸಾಲಿನಲ್ಲಿ 32.70 ಲಕ್ಷ ರೂಪಾಯಿ ವೆಚ್ಚದ 8 ಕಾಮಗಾರಿಗಳ ಪೈಕಿ 4 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ.2011-12ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಕಾಲೊನಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಸಾಧಿಸಿದ ಪ್ರಗತಿ ಶೇ 31 ಮಾತ್ರ. ಗಿರಿಜನ ಉಪಯೋಜನೆಯಡಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಪಂಗಡದ ಕಾಲೊನಿಗಳಿಗೆ ಮೂಲಸೌಕರ್ಯ ಒದಗಿಸಲು ಬಿಡುಗಡೆಯಾಗಿರುವ ಅನುದಾನದಲ್ಲಿ ಖರ್ಚು ಮಾಡಿದ್ದು ಶೇ 45ರಷ್ಟು ಮಾತ್ರ.ಅನುದಾನ ಬಳಕೆಯಾಗದೇ ಇರುವುದಕ್ಕೆ ಕಾರಣಗಳೂ ಹಲವಾರು. ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಶೇ 22.75ರ ಅನುದಾನದಡಿ ಪರಿಶಿಷ್ಟರಿಗೆ ಪಠ್ಯಪುಸ್ತಕ, ಕ್ರೀಡಾ ಸಾಮಗ್ರಿ ವಿತರಿಸಲು ಅವಕಾಶ ಇದೆ.ಆದರೆ, ಎಷ್ಟೇ ಬಾರಿ ಪ್ರಕಟಣೆ ನೀಡಿದರೂ ವಿದ್ಯಾರ್ಥಿಗಳು ಈ ಅನುದಾನ ಪಡೆಯಲು ಆಸಕ್ತಿ ವಹಿಸುತ್ತಿಲ್ಲ ಎಂದು ಕೊಪ್ಪಳ ನಗರಸಭೆಯ ಕೆಲ ಅಧಿಕಾರಿಗಳು, ಸದಸ್ಯರು ಹೇಳುತ್ತಾರೆ. ಇತರ ಇಲಾಖೆಗಳ ಅನುದಾನದ ಕಥೆಯೂ ಭಿನ್ನವಾಗಿಲ್ಲ ಎಂಬುದನ್ನು ಆಯಾ ಇಲಾಖೆಗಳ ಅಧಿಕಾರಿಗಳೂ ಒಪ್ಪತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.