`ಪರಿಶಿಷ್ಟರ ಅಭ್ಯುದಯಕ್ಕೆ ನಿರಾಸಕ್ತಿ'

7

`ಪರಿಶಿಷ್ಟರ ಅಭ್ಯುದಯಕ್ಕೆ ನಿರಾಸಕ್ತಿ'

Published:
Updated:
`ಪರಿಶಿಷ್ಟರ ಅಭ್ಯುದಯಕ್ಕೆ ನಿರಾಸಕ್ತಿ'

ಬಳ್ಳಾರಿ: ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿಯ ಜನರನ್ನು ರಾಜಕೀಯ ಪಕ್ಷಗಳು ಮತ ಬ್ಯಾಂಕ್ ಎಂದು ಪರಿಗಣಿಸಿವೆಯೇ ವಿನಾ, ಅವರ ಅಭ್ಯುದಯಕ್ಕೆ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸಿಲ್ಲ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ಸೂರ್ಯ ನಾರಾಯಣ ರೆಡ್ಡಿ ದೂರಿದರು.ನಗರದಲ್ಲಿ ಸೋಮವಾರ ಪಕ್ಷದ ವತಿಯಿಂದ ನಡೆದ ಪರಿಶಿಷ್ಟ ಜಾತಿ ಸಮುದಾಯಗಳ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಮುಖ ರಾಜಕೀಯ ಪಕ್ಷಗಳು ಪರಿಶಿಷ್ಟರಿಗೆ ಯಾವುದೇ ಕ್ಷೇತ್ರದಲ್ಲೂ ಸೂಕ್ತ ಸ್ಥಾನಮಾನ ನೀಡುತ್ತಿಲ್ಲ, ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರಿಗೆ ಆದ್ಯತೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.ಹರಿಜನ, ಕೊರಮ, ಕೊರಚ, ಭೋವಿ ಜನಾಂಗದವರನ್ನು ಮತ ಬ್ಯಾಂಕ್ ಆಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಆ ಸಮುದಾಯಗಳನ್ನು ರಾಜಕೀಯವಾಗಿ ಹತ್ತಿಕ್ಕಲಾಗುತ್ತಿದೆ. ಇದರಿಂದಾಗಿ ಈ ಸಮುದಾಯಗಳು ಅಭಿವೃದ್ಧಿ ಕಾಣದೆ ಹಿಂದುಳಿದಿವೆ ಎಂದು ಅವರು ತಿಳಿಸಿದರು.ಈ ಸಮುದಾಯದವರನ್ನು ಕೇವಲ ದುಡಿಮೆಗಾಗಿ ಸೀಮಿತಗೊಳಿಸಲಾಗಿದ್ದು, ಸಮಾನತೆಯ ಮಂತ್ರ ಜಪಿಸುವವರು ಅಭಿವೃದ್ಧಿಗೆ ಸ್ಪಂದಿಸಿಲ್ಲ. ಆದರೆ, ಜೆಡಿಎಸ್ ಪಕ್ಷವು ಪರಿಶಿಷ್ಟ ಜಾತಿಗೆ ಆದ್ಯತೆ ನೀಡುವ ಮೂಲಕ ಸ್ಪಂದಿಸಿದೆ ಎಂದು ಅವರು ಹೇಳಿದರು.

ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಮುನ್ನಾ ಭಾಯಿ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದ್ದು, ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಘೋಷಿಸಿದರು.ಜನಾರ್ದನರೆಡ್ಡಿ, ಶ್ರೀರಾಮುಲು, ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಲೂಟಿಕೋರರು ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಂಡ್ರಿಗಿ ನಾಗರಾಜ್ ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಜರಿದರು.ಕಾಂಗ್ರೆಸ್‌ನಲ್ಲಿ ಕಣ್ಣಿಗೇ ಬೀಳದ ಕೊಂಡಯ್ಯ, ಕೆಲಸವನ್ನೇ ಮಾಡಲು ಬಿಡದ ಅಲ್ಲಂ ವೀರಭದ್ರಪ್ಪ, ಯಾವಾಗಲೋ ಬಂದು ಹೋಗುವ ಅನಿಲ್ ಲಾಡ್ ಇದ್ದಾರೆ. ಬಿಜೆಪಿಯಲ್ಲಿ ರಾಮಲಿಂಗಪ್ಪ, ವಿನೋದ್ ಅವರಂತಹ ನಾಯಕರಿದ್ದು ಏನನ್ನೂ ಮಾಡಲಾಗುವುದಿಲ್ಲ. ಕೆಜೆಪಿಯಂತೂ ಇಲ್ಲವೇ ಇಲ್ಲ ಎಂದರು.ರೆಡ್ಡಿ ಸಹೋದರರು ಅಧಿಕಾರ ದುರುಪಯೋಗ ಮಾಡಿಕೊಂಡು ದಲಿತರನ್ನು ಜೈಲಿಗೆ ಕಳುಹಿಸಿದರು. ಇದೀಗ ಅವರೇ ಇಗ ಜೈಲು ವಾಸ ಅನುಭವಿಸುವಂತಾಗಿದೆ. ದಲಿತರಿಗೆ ಅಧಿಕಾರ ಬೇಕಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ದಲಿತರ ಏಳ್ಗೆ ಸಾಧ್ಯವಿಲ್ಲ ಎಂದು ತಿಳಿಸಿದರು.ಪಕ್ಷದ ಮುಖಂಡರಾದ ಮಾಯಪ್ಪ, ವಿಘ್ನೇಶ, ನರಸಿಂಹಬಾಬು, ಮಾರೆಪ್ಪ, ಹಂಪಮ್ಮ, ನಾಗರತ್ನಮ್ಮ, ಸಂತೋಷ್, ಶಿವಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry