ಬುಧವಾರ, ಮೇ 19, 2021
24 °C

ಪರಿಶಿಷ್ಟರ ಯೋಜನೆ ಅನುಷ್ಠಾನಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಪರಿಶಿಷ್ಟ ಜಾತಿಯವರ ಕಲ್ಯಾಣಕ್ಕಾಗಿ ರೂಪಿಸಿರುವ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅನುಷ್ಠಾನಗೊಳಿಸಬೇಕು ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯ   ಎಂ. ಶಿವಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ಸರ್ಕಾರವು ಸಂವಿಧಾನಬದ್ಧವಾಗಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇಂತಹ ಯೋಜನೆಗಳ ಅನುಷ್ಠಾನದಲ್ಲಿ ಲೋಪ ಎಸಗಬಾರದು. ಆಯೋಗವು ಅನುಷ್ಠಾನ ಕುರಿತು ಪರಿಶೀಲಿಸುತ್ತಿದೆ ಎಂದು ಅವರು ತಿಳಿಸಿದರು.ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಬಾಂಧವರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಕಳೆದ 5 ವರ್ಷಗಳಲ್ಲಿ 200 ಪ್ರಕರಣ ದಾಖಲಾಗಿವೆ. 79 ಪ್ರಕರಣಗಳು ವಿಲೇವಾರಿಯಾಗಿದ್ದು, 14 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 51 ಪ್ರಕರಣಗಳು ನ್ಯಾಯಾಲಯದಲ್ಲಿದ್ದು, 24 ಪ್ರಕರಣಗಳು ತನಿಖೆಯ ಹಂತದಲ್ಲಿವೆ.  155 ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ. ಮಾನಭಂಗ, ಕೊಲೆಯಂತಹ ಗಂಭೀರ ಪ್ರಕರಣಗಳಿಗೆ ದೂರು ದಾಖಲಾದ ಕೂಡಲೇ ಶೇ 50ರಷ್ಟು ಪ್ರಮಾಣದ ಪರಿಹಾರ ನೀಡಬೇಕು. ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಹೇಳಿದರು.ಹೋಟೆಲ್, ಕ್ಷೌರದಂಗಡಿ, ಸೇರಿದಂತೆ ಯಾವುದೇ ವಲಯದಲ್ಲೂ ತಾರತಮ್ಯ ಮಾಡಬಾರದು. ಅಸ್ಪೃಶ್ಯತೆಯಂತಹ ಹೀನ ಪದ್ಧತಿಯನ್ನು ಕಿತ್ತೆಸೆಯಬೇಕು. ಅಂತರ್ಜಾತಿ ವಿವಾಹ ಆದವರಿಗೆ ಪ್ರೋತ್ಸಾಹಧನ ನೀಡಬೇಕು. ಒಳಚರಂಡಿ ಸ್ವಚ್ಛತೆಗೆ ಸಫಾಯಿ ಕರ್ಮಚಾರಿಗಳನ್ನು ಬಳಸದೆ, ಕಡ್ಡಾಯವಾಗಿ ಯಂತ್ರಗಳ ಬಳಕೆ ಮಾಡಬೇಕು. ಸಾಮಾಜಿಕವಾಗಿ ಸಮಾನತೆಗೆ ಆದ್ಯತೆ ನೀಡದಿದ್ದಲ್ಲಿ ಆಯೋಗವು ಗಂಭೀರವಾಗಿ ಪರಿಗಣಿಸಲಿದೆ ಎಂದು ಸೂಚಿಸಿದರು.ಪರಿಶಿಷ್ಟರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ವಿದ್ಯಾರ್ಥಿ ನಿಲಯಗಳ ಉತ್ತಮ ನಿರ್ವಹಣೆ, ವಿಶೇಷ ತರಬೇತಿ, ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಕಲಿಕೆಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿ ನಿಲಯಗಳಿಗೆ ಕಡ್ಡಾಯವಾಗಿ ಕಾಯಂ  ಮೇಲ್ವಿಚಾರಕರು ಹಾಗೂ ಅಡಿಗೆಯವರನ್ನು ನೇಮಿಸಬೇಕು. ಪರಿಶಿಷ್ಟರ  ಕಾಲೋನಿಯಲ್ಲಿ ಮೂಲ ಸೌಕರ್ಯ ಒದಗಿಸಬೇಕು, ಎಂದು ಅವರು ತಿಳಿಸಿದರು.ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್  ಯೋಜನೆಗಳ ಅನುಷ್ಠಾನ, ತೊಡಕುಗಳ ಕುರಿತು  ವಿವರಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ,  ಜಿ.ಪಂ. ಸಿಇಓ ಮಂಜುನಾಥ ನಾಯಕ್, ಆಯೋಗದ ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕಿ ಶೀಲಾ ನಾರಾಯಣಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ರಾಜಪ್ಪ, ಅಪರ ಜಿಲ್ಲಾಧಿಕಾರಿ ವೆಂಕಟೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.