ಶುಕ್ರವಾರ, ಮೇ 27, 2022
21 °C

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಿಗೆ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರಿಶಿಷ್ಟ ಜಾತಿಗೆ ಸೇರಿದ ವಿವಿಧ ಸಮುದಾಯಗಳಿಗೆ ಸರ್ಕಾರ ಈಗ ನೀಡುತ್ತಿರುವ ಶೇಕಡ 15ರಷ್ಟು ಮೀಸಲಾತಿಯಲ್ಲಿ ಎಡಗೈ ಸಮುದಾಯಕ್ಕೆ ಶೇ 6ರಷ್ಟು, ಬಲಗೈ ಸಮುದಾಯಕ್ಕೆ ಶೇ 5ರಷ್ಟು, ಸ್ಪೃಶ್ಯರಿಗೆ ಶೇ 3ರಷ್ಟು ಹಾಗೂ ಇತರೆ ಸಮುದಾಯಕ್ಕೆ ಶೇ 1ರಷ್ಟು ಒಳಮೀಸಲಾತಿ ಕಲ್ಪಿಸಬೇಕು ಎಂದು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಶಿಫಾರಸು ಮಾಡಿದೆ.ರಾಜ್ಯದಲ್ಲಿನ ಪರಿಶಿಷ್ಟ ಜಾತಿಗಳ ಸ್ಥಿತಿ-ಗತಿ ಕುರಿತು ಅಧ್ಯಯನ ನಡೆಸಿರುವ ಆಯೋಗ, 200 ಪುಟಗಳ ವರದಿಯನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ               ಗುರುವಾರ ಸಲ್ಲಿಸಿತು.

`ನಾವು ನೀಡಿರುವ ವರದಿಯನ್ನು ಸರ್ಕಾರ ಕೂಲಂಕಷವಾಗಿ ಅಧ್ಯಯನ ಮಾಡಬೇಕು. ನಮ್ಮ ಶಿಫಾರಸುಗಳು ತೃಪ್ತಿ ತಂದರೆ, ಪರಿಶಿಷ್ಟ ಜಾತಿಯ ನಾಲ್ಕು ಪಂಗಡಗಳಿಗೆ ಒಳಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರ ಸಂಸತ್ತಿಗೆ ಶಿಫಾರಸು ಮಾಡಬೇಕು.ವರದಿಯಲ್ಲಿ ಶಿಫಾರಸು ಮಾಡಿರುವ ಪ್ರಮಾಣದ ಒಳಮೀಸಲಾತಿಯನ್ನು ರಾಜ್ಯ ಸರ್ಕಾರವೇ ಮುಂದಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ~ ಎಂದು ನ್ಯಾ. ಸದಾಶಿವ ಅವರು ವರದಿ ಸಲ್ಲಿಸಿದ ನಂತರ ವಿಧಾನ ಸೌಧದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿ 101 ಉಪ ಜಾತಿಗಳಿವೆ. ಹಿಂದೆ ಆಂಧ್ರಪ್ರದೇಶ ಸರ್ಕಾರ ಕೂಡ ವಿವಿಧ ಉಪಜಾತಿಗಳಿಗೆ ಇದೇ ಮಾದರಿಯ ಒಳಮೀಸಲಾತಿ ಜಾರಿ ಮಾಡಲು ಮುಂದಾಗಿತ್ತು. ಆದರೆ, ಅಂಥ ನಿರ್ಧಾರ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು ಎಂದು ವಿವರಿಸಿದರು.2005ರ ಸೆಪ್ಟೆಂಬರ್‌ನಲ್ಲಿ ಆಯೋಗ ತನ್ನ ಕೆಲಸ ಆರಂಭಿಸಿತ್ತು. ಎರಡು ವರ್ಷಗಳಲ್ಲಿ ಆಯೋಗದ ಕಾರ್ಯ ಪೂರ್ಣಗೊಳ್ಳಬೇಕಿತ್ತು. ವರದಿ ಸಲ್ಲಿಕೆಯಲ್ಲಿ ಆಗಿರುವ ವಿಳಂಬದ ಬಗ್ಗೆ ವಿವರಣೆ ನೀಡಲಾಗಿದೆ. ಆಯೋಗದ ವಿವಿಧ ಅಗತ್ಯಗಳಿಗಾಗಿ 12 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ವಿವರ ನೀಡಿದರು.ಆಯೋಗವು ಪರಿಶಿಷ್ಟ ಜಾತಿಗೆ ಸೇರಿದ 20.54 ಲಕ್ಷ ಕುಟುಂಬಗಳ 96.60 ಲಕ್ಷ ಜನರನ್ನು ಸಮೀಕ್ಷೆಗೆ ಒಳಪಡಿಸಿದೆ. ಇವರ ಪೈಕಿ ಆರು ಲಕ್ಷ ಮಂದಿ ತಮ್ಮ ಜಾತಿ ಯಾವುದು ಎಂಬುದನ್ನು ಸ್ಪಷ್ಟವಾಗಿ ನಮೂದಿಸಿಲ್ಲ. ಸಮೀಕ್ಷೆಗೆ ಒಳಪಟ್ಟವರ ಪೈಕಿ 1.58 ಲಕ್ಷ ಮಂದಿ ಉದ್ಯೋಗಸ್ಥರು. ಇವರಲ್ಲೂ 3,600 ಮಂದಿ ತಮ್ಮ ಜಾತಿ ಯಾವುದು ಎಂಬುದನ್ನು ಸ್ಪಷ್ಟವಾಗಿ ನಮೂದಿಸಿಲ್ಲ. ಜಾತಿಯನ್ನು ಸಾರ್ವಜನಿಕವಾಗಿ ಘೋಷಿಸಿಕೊಳ್ಳುವುದು ಅವಮಾನ ಎಂದು ಭಾವಿಸಿದ ಕಾರಣದಿಂದಲೂ ಅವರು ಹೀಗೆ ಮಾಡಿರಬಹುದು ಎಂದು ನ್ಯಾಯಮೂರ್ತಿಗಳು ತಿಳಿಸಿದರು.ಪರಿಶಿಷ್ಟ ಜಾತಿಗಳ ಪೈಕಿ ಎಡಗೈ ಸಮುದಾಯದ ಶೇ 33.47ರಷ್ಟು, ಬಲಗೈ ಸಮುದಾಯದ ಶೇ 32ರಷ್ಟು ಜನರಿದ್ದಾರೆ. ಬಲಗೈ ಸಮುದಾಯಕ್ಕೆ ಸೇರಿದವರು ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಇತರರಿಗಿಂತ ಮುಂದಿದ್ದಾರೆ ಎಂಬುದು ಆಯೋಗದ ಅಧ್ಯಯನದಿಂದ ತಿಳಿದುಬಂದಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಕಲ್ಪಿಸಿರುವ ಮೀಸಲಾತಿ ಸೌಲಭ್ಯ ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ ಎಂದು ಹೆಚ್ಚಿನವರು ಹೇಳಿದ್ದಾರೆ ಎಂದು ತಿಳಿಸಿದರು.ಈ ಸಮುದಾಯಗಳ ಅಭಿವೃದ್ಧಿಗೆ ಮೀಸಲಾತಿಯೊಂದೇ ಮಾರ್ಗವಲ್ಲ. ಏಕೆಂದರೆ, ಮೀಸಲಾತಿ ಸೌಲಭ್ಯಗಳು ನಿರ್ದಿಷ್ಟ ಗುಂಪಿಗೆ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ದೊರೆತಿವೆ. ಸಮುದಾಯದ ಸಶಕ್ತೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ಈಗಿರುವ ಯೋಜನೆಗಳ ಅನುಷ್ಠಾನ ಕುರಿತು ನಿಗಾ ಇಡಬೇಕು ಎಂದರು.ವರದಿ ಸ್ವೀಕರಿಸಿದ ಮುಖ್ಯಮಂತ್ರಿಗಳು, `ಇದರಲ್ಲಿರುವ ಅಂಶಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು~ ಎಂದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.