ಸೋಮವಾರ, ಅಕ್ಟೋಬರ್ 14, 2019
22 °C

ಪರಿಶೀಲನಾ ಸಮಿತಿಗೆಸೇರಿಸಿ

Published:
Updated:

ಗುಲ್ಬರ್ಗ: ಹಿಂದುಳಿದ ಪ್ರದೇಶದ ಅನುದಾನ ನಿಧಿ (ಬಿಆರ್‌ಜಿಎಫ್) ಯೋಜನೆಯಡಿ ಕ್ರಿಯಾಯೋಜನೆ ಪರಿಶೀಲಿಸಲು ರಚಿಸಲಾಗುವ ಜಿಲ್ಲಾ ಮಟ್ಟದ ಸಮಿತಿಯಲ್ಲಿ, ಜಿಲ್ಲಾ ಯೋಜನಾ ಸಮಿತಿ ಸದಸ್ಯ(ಡಿಸಿಪಿ)ರನ್ನೂ ಸೇರಿಸಬೇಕು ಎಂದು ಕೆಲವರು ಪಟ್ಟು ಹಿಡಿದ ವಿಚಿತ್ರ ಪ್ರಸಂಗ ಬುಧವಾರ ಇಲ್ಲಿ ನಡೆಯಿತು.ಡಿಸಿಪಿಯಲ್ಲಿರುವ ಚುನಾಯಿತ ಸದಸ್ಯರು ತಮ್ಮನ್ನು ಸೇರಿಸಿಕೊಳ್ಳುವಂತೆ ಒತ್ತಾಯಿಸಿದರೆ, ನಿಯಮಾವಳಿ ಪ್ರಕಾರ ಅದು ಸಾಧ್ಯವಿಲ್ಲ ಎಂದು ಸಿಇಒ ಎಂ.ಜಿ.ವಿಜಯಕುಮಾರ ಸ್ಪಷ್ಟಪಡಿಸಿದರು.ಬಿಜೆಪಿಯ ಗಣೇಶ ನಾಯಕ ಬೆಳಮಗಿ, ಕಾಂಗ್ರೆಸ್‌ನ ಭೀಮರೆಡ್ಡಿ ಪಾಟೀಲ ಹಾಗೂ ಪಕ್ಷೇತರ ಸದಸ್ಯೆ ಶೋಭಾ ಬಾಣಿ ಚರ್ಚೆ ಆರಂಭಿಸಿ, ಡಿಪಿಸಿ ಸದಸ್ಯರನ್ನು ಪರಿಶೀಲನಾ ಸಮಿತಿಯಿಂದ ದೂರ ಇಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

 

ಇದಕ್ಕೆ ಉತ್ತರಿಸಿದ ಸಿಇಒ ವಿಜಯಕುಮಾರ್ ಅವರು, “ಕೇಂದ್ರ ಸರ್ಕಾರದ ನಿಯಮಾವಳಿ ಅನುಸಾರ ಪರಿಶೀಲನಾ ಸಮಿತಿ ಸದಸ್ಯರು ಪಂಚಾಯತ್ ರಾಜ್ ಸಂಸ್ಥೆಗಳ ಹಾಗೂ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಆಗಿರಬೇಕು. ಹೀಗಾಗಿ ಡಿಪಿಸಿ ಸದಸ್ಯರನ್ನು ಸಮಿತಿಗೆ ನೇಮಕ ಮಾಡಲು ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.ಅಭಿವೃದ್ಧಿ ಕಾಮಗಾರಿ ಪರಿಶೀಲನೆಗೆ ಡಿಪಿಸಿ ರಚಿಸಿದ್ದ ಕೋರ್ ಕಮಿಟಿಯನ್ನು ಸರ್ಕಾರ ರದ್ದುಪಡಿಸಿದೆ. ಈಗ ಸೂಚಿಸಲಾದ ಪರಿಶೀಲನಾ ಸಮಿತಿಯನ್ನು ರಚಿಸಿದರೆ, ಸರ್ಕಾರದಿಂದ ಬಿಆರ್‌ಜಿಎಫ್ ಯೋಜನೆಯಡಿ ಬರುವ ಅನುದಾನವನ್ನು ಸುಲಭವಾಗಿ ಬಳಸಿಕೊಳ್ಳಬಹುದು; ಈ ಪ್ರಕ್ರಿಯೆ ವಿಳಂಬವಾದರೆ ಅನುದಾನ ಬರುವುದು ತಡವಾಗಲೂಬಹುದು ಎಂದು ವಿಜಯಕುಮಾರ್ ಸೂಚ್ಯವಾಗಿ ನುಡಿದರು.ಜಿಪಂ ಅಧ್ಯಕ್ಷ ಸೇರಿದಂತೆ ಈ ಸಮಿತಿಯಲ್ಲಿ ಗರಿಷ್ಠ ಹತ್ತು ಸದಸ್ಯರು ಇರಬಹುದು. ಇದರಲ್ಲಿ ಆ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಕೂಡ ಇರಬೇಕು ಎಂಬ ನಿಯಮಾವಳಿ ಇದೆ. ಈ ಪ್ರಕಾರವೇ ಸಮಿತಿ ರಚನೆಯಾಗಬೇಕು ಎಂದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಿವಪ್ರಭು ಪಾಟೀಲ ಮಾತನಾಡಿ, ಸರ್ಕಾರದ ನಿಯಮಾವಳಿ ಪ್ರಕಾರವೇ ಸಮಿತಿ ರಚನೆಯಾಗಲಿ. ಅದರ ಜತೆಗೆ ಡಿಪಿಸಿಯಲ್ಲಿರುವ ಚುನಾಯಿತ ಪ್ರತಿನಿಧಿಗಳು ವಿಶೇಷ ಆಹ್ವಾನಿತರಾಗಿ ಸಭೆಯಲ್ಲಿ ಪಾಲ್ಗೊಳ್ಳಲಿ ಎಂದು ಸೂಚಿಸಿದಾಗ, ಈ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಪಡೆಯುವುದಾಗಿ ಸಿಇಒ    ತಿಳಿಸಿದರು.ವಂತಿಗೆ: ಜಿಲ್ಲಾ ಯೋಜನಾ ಸಮಿತಿಗೆ ಎಲ್ಲ ಸ್ಥಳೀಯ ಸಂಸ್ಥೆಗಳು ಪ್ರತಿ ವರ್ಷ ನೀಡುವ ವಂತಿಗೆಯನ್ನು ಬಿ.ಆರ್.ಜಿ.ಎಫ್. ಅನುದಾನದಿಂದ ಕಡಿತಗೊಳಿಸಲು ಸಭೆ ತೀರ್ಮಾನಿಸಿತು. ಪ್ರತಿ ಗ್ರಾಮ ಪಂಚಾಯಿತಿ ರೂ. 5000, ತಾಪಂ ರೂ. 25000, ಜಿಪಂ ರೂ. 2 ಲಕ್ಷ, ಪಪಂ ರೂ. 7500, ಪುರಸಭೆ ರೂ. 25000, ನಗರಸಭೆ ರೂ. 1 ಲಕ್ಷ ಹಾಗೂ ಮಹಾನಗರ ಪಾಲಿಕೆ 2 ಲಕ್ಷ ರೂಪಾಯಿ ವಂತಿಗೆ ಕೊಡಬೇಕಿದೆ ಎಂದು ಮುಖ್ಯ ಯೋಜನಾಧಿಕಾರಿ ಬಸವರಾಜ ತಿಳಿಸಿದರು.ಜಿಲ್ಲೆಯ 12ನೇ ಪಂಚವಾರ್ಷಿಕ ಯೋಜನೆಗೆ (2012-17) ಸಂಬಂಧಿಸಿದಂತೆ ಅಭಿವೃದ್ಧಿ ಮುನ್ನೋಟವನ್ನು ಮೂರು ತಿಂಗಳಲ್ಲಿ ರೂಪಿಸಲು ತರಬೇತಿ, ಕಾರ್ಯಾಗಾರ, ಗ್ರಾಮಸಭೆ, ಪ್ರತಿ ತಾಲ್ಲೂಕಿಗೊಂದು ಮಾದರಿ ಗ್ರಾಮ ಪಂಚಾಯತಿಗಳ ಆಯ್ಕೆ, ಗ್ರಾಪಂ ಮಟ್ಟದಿಂದ ತಾಲ್ಲೂಕು,  ಜಿಲ್ಲಾ ಪಂಚಾಯಿತಿ ಮಟ್ಟದ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕ್ರಿಯಾಯೋಜನೆ ತಯಾರಿಕೆ ಮುಂತಾದ ಎಲ್ಲ ಪ್ರಕ್ರಿಯೆಗಳನ್ನು  ಕೈಗೊಳ್ಳಲಾಗುತ್ತಿದೆ. ಇದನ್ನು ಮಾರ್ಚ್ 31ರೊಳಗೆ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಸಲ್ಲಿಸಿ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ವಿವರಿಸಿದರು.ಜಿಲ್ಲಾ ಯೋಜನಾ ಸಮಿತಿ ಉಪಾಧ್ಯಕ್ಷ ಹಾಗೂ ಮೇಯರ್ ಅಶ್ಫಾಕ್ ಅಹ್ಮದ್ ಚುಲ್‌ಬುಲ್, ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ ಹಾಗೂ ಸಮಿತಿಯ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Post Comments (+)