ಪರಿಶೀಲನೆಗೆ ಬಂದು ದಂಗಾದ ಜಿಪಂ ಅಧ್ಯಕ್ಷೆ

7

ಪರಿಶೀಲನೆಗೆ ಬಂದು ದಂಗಾದ ಜಿಪಂ ಅಧ್ಯಕ್ಷೆ

Published:
Updated:

ಗಂಗಾವತಿ: ಗುಣಮಟ್ಟದ ಸೌಲಭ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳು ಸೋಮವಾರ ರಾತ್ರಿ ಧರಣಿ ನಡೆಸಿದ್ದರಿಂದ ವಸ್ತುಸ್ಥಿತಿ ಅರಿಯಲು ಸ್ವತಃ ಜಿ.ಪಂ. ಅಧ್ಯಕ್ಷೆ ಜ್ಯೋತಿ ಬಿಲ್ಗಾರ ಇಲ್ಲಿನ ಎಸ್‌ಸಿ-ಎಸ್‌ಟಿ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಸಾವಿರಾರು ಸಿರಿಂಜ್ ಕಂಡು ದಂಗಾದ ಘಟನೆ ಮಂಗಳವಾರ ನಡೆಯಿತು.ಆನೆಗೊಂದಿ ರಸ್ತೆಯ ಸಾಯಿನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯಕ್ಕೆ ಅಧ್ಯಕ್ಷೆ ಹಾಗೂ ಸಿದ್ದಾಪುರ, ಮರಳಿ ಕ್ಷೇತ್ರದ ಸದಸ್ಯರಾದ ಹೇಮಾವತಿ ಮತ್ತು ಪಿಲ್ಲಿ ಕೊಂಡಯ್ಯ ಭೇಟಿ ನೀಡಿದಾಗ ಈ ಪ್ರಸಂಗ ನಡೆಯಿತು.ಕಳಪೆ ಗುಣಮಟ್ಟದ ಆಹಾರ ನೀಡಿದ್ದಾರೆ ಎಂದು ಆರೋಪಿಸಿ ವಸತಿ ನಿಲಯದ ವಿದ್ಯಾರ್ಥಿಗಳು ಸೋಮವಾರ ಇಡೀ ರಾತ್ರಿ ತಾಲ್ಲೂಕು ಪಂಚಾಯಿತಿ ಮುಂದೆ ಧರಣಿ ಕುಳಿತ್ತಿದ್ದರು.ಈ ಹಿನ್ನೆಲೆಯಲ್ಲಿ ಅಧ್ಯಕ್ಷೆ ಪರಿಶೀಲನೆಗೆ ಭೇಟಿ ನೀಡಿದಾಗ ಅಪಾರ ಪ್ರಮಾಣದ ನಿರುಪಯುಕ್ತ ಸಿರಿಂಜ್‌ಗಳು ಕಂಡು ಬಂದವು.ಮೇಲಂತಸ್ತಿನ ಕಟ್ಟಡದ ವಿದ್ಯಾರ್ಥಿಗಳ ಕೋಣೆಯೊಂದರಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಪ್ರಮಾಣದ ಉಪಯೋಗಿಸಿದ ಸಿರಿಂಜ್ ಮತ್ತು ಹೆಪಟೈಟಸ್ ಬಿ ಲಸಿಕೆ ಸೇರಿದಂತೆ ವಿವಿಧ ಚುಚ್ಚುಮದ್ದಿನ ನೂರಾರು ಖಾಲಿ ಬಾಟಲಿಗಳು ಪತ್ತೆಯಾದವು.ಸ್ಥಳಕ್ಕೆ ಭೇಟಿ ನೀಡಿದ ಅಧ್ಯಕ್ಷೆ, ಸದಸ್ಯರು, ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಸರಿಯಾದ ಮಾಹಿತಿ ನೀಡಲು ವಸತಿ ನಿಲಯದ ಮೇಲ್ವಿಚಾರಕ ಶಿವಲಿಂಗಪ್ಪ ವಿಫಲಯತ್ನ ನಡೆಸಿದರು. ಮೇಲ್ವಿಚಾರಕನ ಅಸಮರ್ಪಕ ಹೇಳಿಕೆಗೆ ಅಧಿಕಾರಿಗಳು ಛೀಮಾರಿ ಹಾಕಿದರು.ತನಿಖೆ ಸೂಚನೆ: ‘ವಸತಿ ನಿಲಯದಲ್ಲಿ ನರ್ಸಿಂಗ್, ಅಥವಾ ಪ್ಯಾರಾ ಮೆಡಿಕಲ್ ಕೋರ್ಸ್ ಕಲಿಯುವ ಯಾವ ವಿದ್ಯಾರ್ಥಿಗಳೂ ಇಲ್ಲ. ಆದರೂ ಹೇಗೆ ಇಷ್ಟೊಂದು ಪ್ರಮಾಣದಲ್ಲಿ ಸಿರಿಂಜ್, ಚುಚ್ಚುಮದ್ದಿನ ಬಾಟಲಿ ಬಂದವು ಎಂಬ ಬಗ್ಗೆ ತನಿಖೆ ನಡೆಸುವುದಾಗಿ’ ಜಿ.ಪಂ. ಅಧ್ಯಕ್ಷ ಜ್ಯೋತಿ ತಿಳಿಸಿದರು.‘ಸ್ಥಳದಲ್ಲಿ ಕಂಡು ಬಂದಿರುವ ಸಿರಿಂಜ್‌ಗಳನ್ನು ಗಮನಿಸಿದರೆ ಕೆಲ ವಿದ್ಯಾರ್ಥಿಗಳು ಡ್ರಗ್ಸ್ ಗೀಳು ಅಂಟಿಸಿಕೊಂಡ ಸಂಶಯ ವ್ಯಕ್ತವಾಗಿದೆ. ದೊರೆತವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ  ವರದಿ ಪಡೆದ ಬಳಿಕ ಅಧಿಕಾರಿಗಳ ವಿರತುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದರು.ಈ ಸಂದರ್ಭದಲ್ಲಿ ತಾ.ಪಂ. ಇಒ ಬಿ. ಮಹಾದೇವಯ್ಯ, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ತಾಲ್ಲೂಕು ಅಧಿಕಾರಿ ಮಜೂರ ಹುಸೇನ, ಗ್ರಾಮೀಣ ಪಿಎಸ್‌ಐ ಆರ್.ಆರ್. ಪಾಟೀಲ, ಬಿಜೆಪಿ ಮುಖಂಡರಾದ ಬಿಲ್ಗಾರ ನಾಗರಾಜ, ಲಂಕೇಶ ಗುಳದಾಳ ಮತ್ತಿತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry