ಶುಕ್ರವಾರ, ನವೆಂಬರ್ 15, 2019
20 °C

ಪರಿಶುದ್ಧ ಯೋಜನೆ ಶೌಚಾಲಯ ನಿರ್ಮಾಣ

Published:
Updated:

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬಯಲು ಶೌಚವನ್ನು ನಿರ್ಮೂಲನೆ ಮಾಡಲು ಇನ್ಫೋಸಿಸ್ ಪ್ರತಿಷ್ಠಾನ ಅನುದಾನದಿಂದ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಆಶ್ರಯದಲ್ಲಿ `ಪರಿಶುದ್ಧ ಯೋಜನೆ~ಯು ಅಕ್ಟೋಬರ್ 2011ರಿಂದ ಕಾರ್ಯನಿರವಾಗಿದ್ದು, ಈ ಯೋಜನೆ ಅಡಿಯಲ್ಲಿ 10 ಸಾವಿರ ಶೌಚಾಲಯಗಳನ್ನು ನಿರ್ಮಿಸುವ ಗುರಿ  ಹೊಂದಲಾಗಿದ್ದು, ಪ್ರತಿ ಶೌಚಾಲಯಕ್ಕೆ 8 ಸಾವಿರ ರೂಪಾಯಿ ಸಹಾಯ ಧನ ನೀಡಲಾಗುತ್ತದೆ ಎಂದು ಪರಿಶುದ್ಧ ಯೋಜನೆ ವ್ಯವಸ್ಥಾಪಕ ವಾಸುದೇವರಾವ್ ದೇಶಪಾಂಡೆ ತಿಳಿಸಿದ್ದಾರೆ.ಹೈದರಾಬಾದ್ ಕರ್ನಾಟಕ ಭಾಗದಿಂದ ಮತ್ತು ವಿಜಾಪುರ ಜಿಲ್ಲೆಯಿಂದ ಈಗಾಗಲೇ 24 ಸಾವಿರ ಕುಟುಂಬಗಳು ಈ ಯೋಜನೆ ಅಡಿ ಹೆಸರು ನೋಂದಣಿ ಮಾಡಿದ್ದಾರೆ. ಬೀದರ್- 16,000, ಗುಲ್ಬರ್ಗ ಜಿಲ್ಲೆ- 2,500, ಯಾದಗಿರಿ ಜಿಲ್ಲೆ- 4,000, ರಾಯಚೂರು-500, ಕೊಪ್ಪಳ-500, ವಿಜಾಪುರ-500 ಅರ್ಜಿಗಳು ಬಂದಿವೆ. ಇದಲ್ಲದೇ ಜನರಿಗೆ ಗ್ರಾಮ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಲು ಸುಮಾರು 300ಕ್ಕೂ ಹೆಚ್ಚು ಗ್ರಾಮಗಳಲ್ಲಿ 1ಲಕ್ಷಕ್ಕಿಂತಲೂ ಹೆಚ್ಚು ಕುಟುಂಬಗಳಿಗೆ ಶೌಚಾಲಯದ ಕುರಿತು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.ಪರಿಶುದ್ಧ ಯೋಜನೆಯು ಭಾರತ ಸರ್ಕಾರ, ಕರ್ನಾಟಕ ರಾಜ್ಯ ಸರ್ಕಾರ ಹಾಗೂ ವಿವಿಧ ಸೇವಾ ಸಂಸ್ಥೆಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದೆ. ಯಾದಗಿರಿ ಜಿಲ್ಲೆಯ ಯಲ್ಹೇರಿ, ವಜ್ಜಲ್, ದೇವಾಪೂರ, ವಡಿಗೇರಾ, ಹೊನ್ನಿಗೇರಾ, ಬಲ್ಕಲ್, ಚಟ್ನಳ್ಳಿ ಗ್ರಾಮಗಳಲ್ಲಿ  200ಕ್ಕೂ ಹೆಚ್ಚು ಫಲಾನುಭವಿಗಳಿಗೆ ಅನುದಾನ ನೀಡಲಾಗಿದೆ. ಗುಲ್ಬರ್ಗ ಜಿಲ್ಲೆಯ ಗುಂಜಬಬಲಾದ, ಕೊಂಕನಹಳ್ಳಿ, ನೀಲಹಳ್ಳಿ ಗ್ರಾಮಗಳ 30 ಫಲಾನುಭವಿಗಳಿಗೆ ಹಾಗೂ ಬೀದರ್ ಜಿಲ್ಲೆಯ ಗಾದಗಿ, ಹಮಿಲಾಪೂರ, ಚಿಲ್ಲರ್ಗಿ, ಚಿಮ್ಮನಕೋಡ ಗ್ರಾಮಗಳಲ್ಲಿನ 35 ಫಲಾನುಭವಿಗಳಿಗೆ ಅನುದಾನ ವಿತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಈ ಯೋಜನೆ ಅಗಸ್ಟ್ 31ಕ್ಕೆ ಕೊನೆಯಾಗಲಿದ್ದು, ಯೋಜನೆಯ ಲಾಭ ಪಡೆಯಲು ಹೆಸರು ನೋಂದಾಯಿಸಿದ ಗ್ರಾಮಗಳ ಫಲಾನುಭವಿಗಳು ತೀವ್ರ ಗತಿಯಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ 97422-04624

ಪ್ರತಿಕ್ರಿಯಿಸಿ (+)