ಪರಿಶ್ರಮದ ಕೃಷಿಯಿಂದ ಬದುಕು ರೇಷ್ಮೆ!

7

ಪರಿಶ್ರಮದ ಕೃಷಿಯಿಂದ ಬದುಕು ರೇಷ್ಮೆ!

Published:
Updated:

ಕುಷ್ಟಗಿ: ಕಳೆದ ಮೂರು ದಿನಗಳಿಂದ ಪಟ್ಟಣದಲ್ಲಿ ನಡೆದ ತಾಲ್ಲೂಕು ಮಟ್ಟದ ‘ಕೃಷಿ ಮಹೋತ್ಸವ’ ಬುಧವಾರ ತೆರೆಕಂಡಿತು. ಪಶುಸಂಗೋಪನೆ ಮತ್ತು ರೇಷ್ಮೆ ಬೇಸಾಯ, ಸಾವಯವ ಕೃಷಿಗೆ ಸಂಬಂಧಿಸಿದ ಸಂವಾದ ಗೋಷ್ಠಿಯಲ್ಲಿ ಭಾಗವಹಿಸಿದ್ದ ರೈತರು ತಜ್ಞರೊಂದಿಗೆ ಚರ್ಚಿಸಿ ಸಂದೇಹಗಳನ್ನು ಪರಿಹರಿಸಿಕೊಂಡರು. ರೇಷ್ಮೆ ಇಲಾಖೆ ಯೋಜನೆಗಳು ಮತ್ತು ಬೇಸಾಯದಲ್ಲಿನ ತಾಂತ್ರಿಕ ಅಂಶಗಳನ್ನು ಕುರಿತು ರೇಷ್ಮೆ ಇಲಾಖೆಯ ಜಿಲ್ಲೆಯ ಸಹಾಯಕ ನಿರ್ದೇಶಕ ಪಿ.ವಿ.ಕರೂರಮಠ ಮಾತನಾಡಿ, ರೇಷ್ಮೆ ಕೃಷಿಯಲ್ಲಿ ರೈತರು ಪರಿಶ್ರಮ, ಶ್ರದ್ಧೆ ಮತ್ತು ವೈಜ್ಞಾನಿಕ ಪದ್ಧತಿ ಅನುಸರಿಸಿದರೆ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಚೀನಾ ದೇಶವನ್ನೂ ಸರಿಗಟ್ಟಬಹುದು ಎಂದರು.ಬೇಸಾಯ, ತಾಂತ್ರಿಕ ಪದ್ಧತಿ ಮತ್ತು ಸೌಲಭ್ಯಗಳ ವಿಷಯದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ಅವುಗಳನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಿ ಕೊಂಡವರ ಬದುಕು ಸಹ ರೇಷ್ಮೆಯಂತಾಗುತ್ತದೆ ಎಂದು ಹೇಳಿದರು. ರೇಷ್ಮೆ ಬೆಳೆಗಾರರು ಮತ್ತು ಹೊಸದಾಗಿ ಈ ಬೇಸಾಯಕ್ಕೆ ಮುಂದಾಗುವ ರೈತರನ್ನು ಪ್ರೋತ್ಸಾಹಿಸಲು ಸರ್ಕಾರ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಗೂಡು ಸ್ವಚ್ಛಮಾಡುವ ಯಂತ್ರಗಳೂ ಬಂದಿವೆ. ಹನಿ ನೀರಾವರಿ, ಹೆಚ್ಚು ನೀರು ಇದ್ದವರು ಟ್ರೆಂಚಿಂಗ್ ಪದ್ಧತಿಯನ್ನು ಅನಸರಿಸಬೇಕು. ಅದಕ್ಕಾಗಿ ಇಲಾಖೆ ಎಲ್ಲ ರೀತಿಯ ನೆರವು ನೀಡುತ್ತದೆ ಎಂದರು.ಬಸ್ ವ್ಯವಸ್ಥೆ: ರೇಷ್ಮೆಗೂಡುಗಳ ಮಾರಾಟಕ್ಕೆ ತೆರಳುವ ರೈತರಿಗೆ ಅನುಕೂಲ ಒದಗಿಸಿಕೊಡುವು ದಕ್ಕಾಗಿ ಸ್ಥಳೀಯ ಘಟಕದಿಂದ ಬೆಂಗಳೂರಿಗೆ ಹೋಗುವ ಬಸ್ ಅನ್ನು ರಾಮನಗರದವರೆಗೂ ವಿಸ್ತರಿಸುವ ನಿಟ್ಟಿನಲ್ಲಿ ಚರ್ಚಿಸುವುದಾಗಿ ಹೇಳಿದರು. ಒಣ ಬೇಸಾಯದಲ್ಲಿ ಸಾವಯವ ಕೃಷಿಯಲ್ಲಿ ನಿರತರಾಗಿರುವ ಗುಮಗೇರಿ ಗ್ರಾಮದ ಶರಣಗೌಡ ಮಾಲಿಪಾಟೀಲ ಅನುಭವ ಹಂಚಿಕೊಂಡರು. ವಿಸ್ತೀರ್ಣಾಧಿಕಾರಿ ಸಿ.ಜೆ.ಕೋಳೂರು ಮಾತನಾಡಿದರು.ಪಶುಸಂಗೋಪನಾ ಇಲಾಖೆ ಸಿಬ್ಬಂದಿ ಡಾ.ಸುನಿಲ್ ಬನ್ನಿಗೋಳ, ಪಶುಸಂಗೋಪನೆ, ಹೈನುಗಾರಿಕೆಯಲ್ಲಿ ತೊಡಗುವ ರೈತರಿಗೆ ಇಲಾಖೆ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಕೃಷಿಕ ಸಮಾಜದ ಅಧ್ಯಕ್ಷ ಚಂದಪ್ಪ ತಳವಾರ, ಶಾಮರಾವ ಕುಲಕರ್ಣಿ ಮತ್ತಿತರರು ವೇದಿಕೆ ಯಲ್ಲಿದ್ದರು. ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಸ್ವಾಮಿ ಕೃಷಿ ಮಹೋತ್ಸವ ಕುರಿತು ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry