ಪರಿಷತ್ತಿನಲ್ಲಿ ಕಾಂಗ್ರೆಸ್ ಸಭಾತ್ಯಾಗ

ಸೋಮವಾರ, ಜೂಲೈ 22, 2019
26 °C

ಪರಿಷತ್ತಿನಲ್ಲಿ ಕಾಂಗ್ರೆಸ್ ಸಭಾತ್ಯಾಗ

Published:
Updated:

ಬೆಂಗಳೂರು: ಶಾಸಕರ ಅನರ್ಹತೆ ರದ್ದುಗೊಳಿಸಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಸದನದಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಕೋರಿ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡದ ಸರ್ಕಾರದ ಕ್ರಮವನ್ನು ಪ್ರತಿಭಟಿಸಿ ಕಾಂಗ್ರೆಸ್ ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಸಭಾತ್ಯಾಗ ನಡೆಸಿತು.ಸಭಾನಾಯಕ ಡಾ.ವಿ.ಎಸ್. ಆಚಾರ್ಯ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ ನಂತರ ಸಭಾಪತಿ ಡಿ.ಎಚ್. ಶಂಕರಮೂರ್ತಿ ನಿಯಮ 59ರಡಿ ನೈತಿಕತೆ ಆಧಾರದಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಗೆ ಅವಕಾಶ ಇಲ್ಲ ಎಂದು ರೂಲಿಂಗ್ ನೀಡಿದರು. ಆನಂತರ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.ಇದಕ್ಕೂ ಮುನ್ನ ಪೂರ್ವಭಾವಿ ಚರ್ಚೆಗೆ ಮಾತ್ರ ಅವರು ಅವಕಾಶ ನೀಡಿದರು.`ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನೈತಿಕ ಆಧಾರದಲ್ಲಿ ಮುಖ್ಯಮಂತ್ರಿಗಳು ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ಹಕ್ಕಿಲ್ಲ. ಈ ಹಿನ್ನೆಲೆಯಲ್ಲಿ ನಿಯಮ 59 ರಡಿ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡಬೇಕು~ ಎಂದು ವಿರೋಧ ಪಕ್ಷದ ನಾಯಕಿ ಮೋಟಮ್ಮ ಕೋರಿದರು.`ಸುಪ್ರೀಂಕೋರ್ಟ್ ಶಾಸಕರ ಪರ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಅವರ ಸದಸ್ಯತ್ವ ರದ್ದಾದ ಕಳೆದ ಅಕ್ಟೋಬರ್ 10ರಿಂದ ಮೇ 13ರವರೆಗೆ ಸರ್ಕಾರ ಕಾನೂನು ಬಾಹಿರವಾಗಿ ಆಡಳಿತ ನಡೆಸಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ~ ಎಂದು ಅವರು ಟೀಕಿಸಿದರು. ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ, ಎಂ.ವಿ.ರಾಜಶೇಖರನ್, ವಿ.ಆರ್. ಸುದರ್ಶನ್ ಅವರೂ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಭಾನಾಯಕ ಡಾ.ವಿ.ಎಸ್. ಆಚಾರ್ಯ ಮಾತನಾಡಿ, `2ಜಿ ಸ್ಪೆಕ್ಟ್ರಂ ಹಗರಣ ಬೆಳಕಿಗೆ ಬಂದ 10 ತಿಂಗಳ ನಂತರವೂ ತಪ್ಪಿತಸ್ಥರ ವಿರುದ್ಧ ಏನೂ ಕ್ರಮ ಜರುಗಿಸದ ಪ್ರಧಾನಿ ಬಗ್ಗೆಯೂ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.ಹೀಗಾಗಿ, ನ್ಯಾಯಾಲಯದ ತೀರ್ಪನ್ನು ಯಾರೂ ತಮ್ಮ ಮೂಗಿನ ನೇರಕ್ಕೆ ತಿರುಚಿ ಮಾತನಾಡುವ ಅಗತ್ಯವಿಲ್ಲ. ಮುಖ್ಯಮಂತ್ರಿಗಳು ರಾಜೀನಾಮೆ ನೀಡುವ ಅಗತ್ಯವೂ ಇಲ್ಲ. ಈ ಹಿನ್ನೆಲೆಯಲ್ಲಿ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡಬಾರದು~ ಎಂದು ಸಭಾಪತಿಗಳನ್ನು ಒತ್ತಾಯಿಸಿದರು.

ಅಧಿವೇಶನದ ಉಳಿದ ದಿನಗಳ ಬಹಿಷ್ಕಾರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ  ಅವರ ರಾಜೀನಾಮೆಗೆ ಒತ್ತಾಯಿಸಿ ಈ ಸಲದ ಅಧಿವೇಶನದ ಉಳಿದ ದಿನಗಳನ್ನು ಬಹಿಷ್ಕರಿಸಲು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ನಿರ್ಧರಿಸಿದೆ.ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದು, ಈ ಸಲದ ಅಧಿವೇಶನವನ್ನು ಬಹಿಷ್ಕರಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಶಾಸಕರ ಅನರ್ಹತೆ ಕುರಿತ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮುಖ್ಯಮಂತ್ರಿ ಮತ್ತು ಸ್ಪೀಕರ್ ವಿರುದ್ಧ ಕಟುಟೀಕೆ ಮಾಡಿದೆ. ಹೀಗಾಗಿ ಇವರಿಬ್ಬರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಆಗ್ರಹಪಡಿಸಿದರು.ಮತ್ತೊಂದು ಪ್ರತಿಪಕ್ಷ ಜೆಡಿಎಸ್ ಪ್ರಾರಂಭದಲ್ಲೇ ಸದನ ಬಹಿಷ್ಕರಿಸುವುದಾಗಿ ಹೇಳಿತ್ತು. ಆದರೆ, ಕಾಂಗ್ರೆಸ್ ಮೊದಲ ದಿನ ಸದನಕ್ಕೆ ಹೋಗಿ, ಎರಡನೇ ದಿನದಿಂದ ಬಹಿಷ್ಕಾರದ ತೀರ್ಮಾನ ತೆಗೆದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry